ಗುರುವಾರ , ಏಪ್ರಿಲ್ 15, 2021
26 °C

ದಂಡಾವತಿ ಯೋಜನೆ ಪ್ರದೇಶ ಭೂಮಿ: ಪಹಣಿಯಲ್ಲಿ ಶೀಘ್ರ ಸರ್ಕಾರದ ಹೆಸರು: ಹಾಲಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: ದಂಡಾವತಿ ಯೋಜನೆಗೆ 6(1) ಅಧಿಸೂಚನೆ ಆಗಿದ್ದು, ಪ್ರಸ್ತುತ ವರ್ಷದಿಂದಲೇ ಯೋಜನೆ ಪ್ರದೇಶದ ಜಮೀನುಗಳ ಪಹಣಿಯಲ್ಲಿ ಸರ್ಕಾರದ ಹೆಸರನ್ನು ನಮೂದಿಸಲಾಗುವುದು ಎಂದು ಶಾಸಕ ಎಚ್. ಹಾಲಪ್ಪ ತಿಳಿಸಿದರು.

ತಾಲ್ಲೂಕಿನ ಆನವಟ್ಟಿ ಗ್ರಾಮದಲ್ಲಿ ಮಂಗಳವಾರ ಸಂತೆ ಮಾರುಕಟ್ಟೆ ಮಾರ್ಗದ ಪರಿಶಿಷ್ಟ ಜಾತಿ, ಪಂಗಡದ ಕಾಲೊನಿಯ ಕಾಂಕ್ರೀಟ್ ರಸ್ತೆ ಕಾಮಗಾರಿಯ ಶಂಕುಸ್ಥಾಪನೆ ಹಾಗೂ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ದಂಡಾವತಿ ಯೋಜನೆ ವಿರೋಧಿಸುವ ನೆಪದಲ್ಲಿ ಒಂದು ಭಾಗದ ರೈತರನ್ನು ರಾಜಕೀಯ ಕಾರಣಕ್ಕಾಗಿ ಎತ್ತಿ ಕಟ್ಟಲಾಗುತ್ತಿದೆ. ಆಡಳಿತಾತ್ಮಕ ದೃಷ್ಟಿಯಿಂದ ಇದೆಷ್ಟು ಸಮಂಜಸ ಎಂದರು.

ಇಂದು ಯೋಜನೆ ವಿರೋಧಿಸುತ್ತಿರುವವರೇ ಈ ಹಿಂದೆ ದಂಡಾವತಿ ಯೋಜನೆಗಾಗಿ ದೇವೇಗೌಡ ಅವರ 75ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಜನತಾದಳ (ಜಾ) ಪಕ್ಷದಿಂದಲೇ ಕಿರು ಹೊತ್ತಿಗೆ ಮಾಡಿ ಯೋಜನೆ ಜಾರಿಗೊಳಿಸಲು ಒತ್ತಾಯಿಸಿದ್ದರು. ಈ ಕೈಪಿಡಿಯಲ್ಲಿ ಎಸ್. ಬಂಗಾರಪ್ಪ ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಯೋಜನೆ ಜಾರಿಗೆ ಒತ್ತಾಸೆ ಪತ್ರವನ್ನು ಅಂದಿನ ಶಾಸಕ ದಿ.ವಿ.ಎಸ್. ಲಕ್ಷ್ಮೀಕಾಂತಪ್ಪ ಅವರಿಗೆ ಬರೆದಿದ್ದರು. ಅಪ್ಪನ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಮಧು ಬಂಗಾರಪ್ಪ ತಮ್ಮ ತಂದೆಯ ಆಸೆ ಈಡೇರಿಸಬೇಕು ಎಂಬ ಇಚ್ಚೆಯಿದ್ದರೆ ದಂಡಾವತಿ ಯೋಜನೆಗೆ ಬದ್ಧರಾಗಲಿ ಎಂದರು.

ಆನವಟ್ಟಿ ಸಂತೆ ಮಾರುಕಟ್ಟೆಗೆ ತಾವು ಭೇಟಿ ನೀಡಿರುವುದಕ್ಕೆ, 40 ವರ್ಷದಿಂದಲೂ ಭೇಟಿ ನೀಡದ ಮಧು ಬಂಗಾರಪ್ಪ ಅವರಿಗೆ ನಾಲ್ಕು ವರ್ಷದಿಂದ ಕಾಣದೇ ಇರುವ ನ್ಯೂನತೆ ಈಗ ಕಂಡಿದೆಯೇ ಎಂದಿರುವುದು ಅವರ ಮೌಢ್ಯಕ್ಕೆ ಸಾಕ್ಷಿ ಎಂದರು.  

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಹುಣವಳ್ಳಿ ಗಂಗಾಧರಪ್ಪ, ಸದಸ್ಯೆ ಗೀತಾ ಮಲ್ಲಿಕಾರ್ಜುನ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಮೀನಾಕ್ಷಮ್ಮ, ಸದಸ್ಯೆ ವಿಶಾಲಾ ದಯಾನಂದ ಗೌಡ, ಆನವಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಚನ್ನಮ್ಮ, ಉಪಾಧ್ಯಕ್ಷ ಹನುಮಂತಪ್ಪ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.