ಮಂಗಳವಾರ, ಆಗಸ್ಟ್ 11, 2020
27 °C

ದಂಪತಿ ಬೆಸೆಯಲು ಕಾನೂನಿನಿಂದ ಸಾಧ್ಯವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಂಪತಿ ಬೆಸೆಯಲು ಕಾನೂನಿನಿಂದ ಸಾಧ್ಯವಿಲ್ಲ

ಬೆಂಗಳೂರು: `ಗಂಡ ಹೆಂಡತಿ ಪರಸ್ಪರ ಪ್ರೀತಿಸುವಂತೆ ಯಾವುದೇ ಕಾನೂನನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ನನಗೆ ಕಾನೂನಿನಲ್ಲಿ ನಂಬಿಕೆಯಿಲ್ಲ~ ಎಂದು  ಕಾನೂನು ಆಯೋಗ ಅಧ್ಯಕ್ಷ ವಿ. ಎಸ್. ಮಳಿಮಠ್ ಅಭಿಪ್ರಾಯಪಟ್ಟರು.ರಾಜ್ಯ ಮಹಿಳಾ ಆಯೋಗವು ಸುಮಂಗಲಿ ಸೇವಾ ಆಶ್ರಮದ ಸಹಯೋಗದಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ `ಕೌಟುಂಬಿಕ ದೌರ್ಜನ್ಯ- ಮಹಿಳೆಯರ ಮತ್ತು ಮಹನೀಯರ ಸಮಸ್ಯೆಗಳು~ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.`ಕೌಟುಂಬಿಕ ಮಟ್ಟದಲ್ಲಿ ಸಂಬಂಧಗಳನ್ನು ಬೆಸೆಯಲು ಕಾನೂನಿನಿಂದ ಸಾಧ್ಯವಿಲ್ಲ. ಸಂಸ್ಕೃತಿ, ಸಂಪ್ರದಾಯಗಳು ಮಾತ್ರ ಸಂಬಂಧಗಳನ್ನು ಉಳಿಸಬಲ್ಲದು. ಈ ವಿಚಾರದ ಬಗ್ಗೆ ಕಾನೂನು ರಚಿಸುವ ನನಗೆ ಸ್ಪಷ್ಟ ಅರಿವಿದೆ~ ಎಂದ ಅವರು, `ಭಾರತೀಯ ಸಂಸ್ಕೃತಿಯಲ್ಲಿ ಗಂಡ ಹೆಂಡತಿ ಪರಸ್ಪರ ಕರ್ತವ್ಯವನ್ನು ಹಂಚಿಕೊಂಡು ಬದುಕಬೇಕು.ಆದರೆ ಪಾಶ್ಚಿಮಾತ್ಯ ಸಂಸ್ಕೃತಿಯ ಹಕ್ಕು ಪ್ರತಿಪಾದನೆಯ ಫಲವಾಗಿ ಪ್ರಸ್ತುತ ದಿನಗಳಲ್ಲಿ ದೇಶದಲ್ಲಿ ಕೌಟುಂಬಿಕ ಕಲಹಗಳು ಹೆಚ್ಚುತ್ತಿವೆ. ಇದಕ್ಕೆ ಯಾವುದೇ ಕಾನೂನಿನ ಚೌಕಟ್ಟನ್ನು ಒದಗಿಸಲು ಸಾಧ್ಯವಿಲ್ಲ~ ಎಂದು ಪ್ರತಿಪಾದಿಸಿದರು.`ಈಗಿನ ಪೀಳಿಗೆ ತೀವ್ರವಾಗಿ ಪ್ರೀತಿಸುವ ಗುಣವನ್ನು ಕಳೆದುಕೊಂಡಿದೆ. ಪ್ರೀತಿಯಿದ್ದ ಮೇಲೆ ಕೌಟುಂಬಿಕ ದೌರ್ಜನ್ಯ ಎನ್ನುವ ಪ್ರಶ್ನೆಯೇ ಬಾರದು. ಗಂಡ ಹೆಂಡತಿ ಪರಸ್ಪರ ಪ್ರೀತಿಸಲು ಕಲಿಯಿರಿ. ಎಲ್ಲ ತಪ್ಪುಗಳನ್ನು ಪ್ರೀತಿಯ ದೃಷ್ಟಿಕೋನದಿಂದಲೇ ವಿಮರ್ಶಿಸಿದರೆ ದೌರ್ಜನ್ಯ , ದಬ್ಬಾಳಿಕೆ ಮಾಯವಾಗಿ ಸಾಮರಸ್ಯ ಇರುತ್ತದೆ. ವೇಗವಾಗಿ ಬೆಳೆಯುತ್ತಿರುವ ಪ್ರಪಂಚಕ್ಕೆ ತೆರೆದುಕೊಂಡಿರುವುದರಿಂದ ಯಾವುದೇ ಸಮಸ್ಯೆ ಬಂದರೂ ಗಂಡ-ಹೆಂಡತಿಯರಿಬ್ಬಲ್ಲೂ ತಾಳ್ಮೆ, ಸಹನೆ ಮತ್ತು  ಪ್ರೀತಿಯಿರಲಿ~ ಎಂದು ಸಲಹೆ ನೀಡಿದರು.ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿ, `ಕುಟುಂಬದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇದರೊಂದಿಗೆ ಕಾನೂನುಗಳನ್ನು ದುರ್ಬಳಕೆ ಮಾಡಿಕೊಂಡು ಪುರುಷರನ್ನು ವಂಚಿಸುವ ಪ್ರಕರಣಗಳು ಹೆಚ್ಚಾಗಿದೆ. ಈ ಎರಡು ವಿಚಾರಗಳ ಬಗ್ಗೆ ಸೂಕ್ತ ಪರಿಹಾರ ಹುಡುಕುವ ಅಗತ್ಯವಿದೆ~ ಎಂದು ತಿಳಿಸಿದರು.ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ವಿ. ಎಸ್. ಕುಬೇರ್, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ. ಮಂಜುಳಾ, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.