ಬುಧವಾರ, ಏಪ್ರಿಲ್ 21, 2021
25 °C

ದಕ್ಕೀತೇ ಈ ಮಹಿಳೆಗೊಂದು ಸೂರು...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಿಪ್ಪನ್‌ಪೇಟೆ: ಸ್ವಾತಂತ್ರ್ಯ ಸಂದ ಆಗಸ್ಟ್ 15 ಬಂತೆಂದರೆ ಎಲ್ಲಿಲ್ಲದ ಸಂಭ್ರಮ. ಸಾರ್ವಜನಿಕರಿಗೆ ಪ್ರಭಾತ್‌ಪೇರಿ ನೋಡುವ ತವಕ, ಶಾಲಾ ಮಕ್ಕಳಿಗೆ ಸಿಹಿ ಸಿಗುವ ಆಸೆ, ಜನ ಪ್ರತಿನಿಧಿಗಳಿಗೆ ಭರವಸೆಗಳನ್ನು ನೀಡುವ ಚಪಲ. -ಹೀಗೆ ಒಟ್ಟಾರೆ ಸಂಭ್ರಮಗಳೇ ಹೊರತು, ಗಾಂಧಿ ಕನಸಿನ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಸಮ್ಮತ ಹಕ್ಕು ಮಾತ್ರ ದಕ್ಕಿಲ್ಲ.

ಪ್ರಸ್ತುತ 25 ವರ್ಷಗಳಿಂದ ಇದೇ ಊರಿನಲ್ಲಿರುವ ಕೂಲಿ- ನಾಲಿ ಮಾಡಿ ಜೀವನ ಸಾಗಿಸುವ ಹಲವು ಕುಟುಂಬ ಇಂದಿಗೂ ಜೋಪಡಿ ವಾಸಿಗಳಾಗಿಯೇ ಇದ್ದಾರೆ. ಇಂತಹ ಜೋಪಡಿ ವಾಸಿ ಮಹಿಳೆ ಒಬ್ಬರು ಗ್ರಾಮದ ಪ್ರಮುಖರ ಒತ್ತಡಕ್ಕೆ ಮಣಿದು 2 ವರ್ಷದ ಹಿಂದೆ  ಗ್ರಾಮ ಪಂಚಾಯ್ತಿ ಸದಸ್ಯರಾದರು. ಗೆದ್ದ ನಂತರ ನಿವೇಶನವೇ ಆಗಲಿ, ಮನೆಯೇ ಆಗಲಿ ಪಂಚಾಯ್ತಿಯಿಂದ ಇದುವರೆಗೂ ದಕ್ಕಿಲ್ಲ.

ಜನಪ್ರತಿನಿಧಿಗಳ ಸ್ವಾರ್ಥದ ಮುಂದೆ ಈ ಸದಸ್ಯೆಯ ಅಹವಾಲು ಇಂದಿಗೂ ನಗಣ್ಯವಾಗಿದೆ. ಗುಜರಿ ವೃತ್ತಿಯಿಂದ ರಾಜಕೀಯಕ್ಕೆ ಇವರನ್ನು ಎಳೆ ತಂದ ಪ್ರಮುಖರು ಇದೀಗ ಮೌನಿಯಾಗಿದ್ದಾರೆ.

ಈ ಸದಸ್ಯೆಯ ಹೆಸರು ಗೌರಿ ಅಭಿಮಾನ್ (45) ಇವರ ಪತಿ ಮರಣ ಹೊಂದಿದ್ದು,  ಪುತ್ರ ಸುರೇಶ,  ಕುರುಡು ತಾಯಿ ಚಂದ್ರಮ್ಮನೊಂದಿಗೆ ಗಾಂಧಿ ನಗರದಲ್ಲಿ ಸ್ಮಶಾನದ ಪಕ್ಕದಲ್ಲಿ ಇರುವ ಸರ್ಕಾರಿ ಜಾಗದಲ್ಲಿ ಜೋಪಡಿ ವಾಸಿ. ಇಲ್ಲಿ ಕರೆಂಟು ಇಲ್ಲ,  ನಳದ ನೀರು ಇಲ್ಲ,  ಮನೆ ಹಕ್ಕು ಪತ್ರವು ಇಲ್ಲವೇ ಇಲ್ಲ. ಡೋಂಗ್ರಿ ಗಾರಾಶಿಯಾ (ಎಸ್‌ಟಿ) ಜನಾಂಗಕ್ಕೆ ಸೇರಿದ ಈ ಅನಕ್ಷರಸ್ಥೆ ಸದಸ್ಯೆ ತಮ್ಮ ಅಧಿಕಾರ ಅವಧಿಯಲ್ಲಿ ಬಡವರಿಗೆ 5 ಮನೆ, 5ನಳ ಹಾಗೂ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ರಸ್ತೆ ನಿರ್ಮಿಸಿದರೆ ಹೊರತು ಸ್ವಂತಕ್ಕಾಗಿ ಏನೂ ಮಾಡಿಕೊಂಡಿಲ್ಲ. ಹಾಲಿ ಇರುವ ಅರ್ಧ ಸಾದ ಇಟ್ಟಗೆಯ ಗೋಡೆಗೆ ಸುತ್ತಲೂ ಪ್ಲಾಸ್ಟಿಕ್ ಹೊದಿಕೆ, ಒಳಗೆ 2 ಪ್ಲಾಸ್ಟಿಕ್ ಕುರ್ಚಿ, ಪ್ಲಾಸ್ಟಿಕ್ ವಯರ್ ಹಗ್ಗದ ಮಂಚ, ಶೀಟ್ ಹಾಗೂ ಟಾರ್ಪಲ್ ಹೊದಿಕೆಯ ಸೂರು ಇವರ ಬಂಗಲೆ. ಪ್ರತಿ ವರ್ಷವೂ ಮಳೆಗಾಲದಲ್ಲಿ ಸೋರುವ ಮನೆ ದುರಸ್ತಿಗೆ ರೂ. 5 ಸಾವಿರ ಹೊಂದಿಸುವುದು ಸಾಮಾನ್ಯ.  ಶೌಚಾಲಯ ಹಾಗೂ ಬಚ್ಚಲೂ ಇಲ್ಲ ಸುತ್ತಲಿನ ಬಯಲೇ ಇವರಿಗೆ ಆಸರೆಯಾಗಿ ಸರ್ವತಂತ್ರ `ಸ್ವತಂತ್ರ~ರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.