ಶನಿವಾರ, ಮೇ 28, 2022
31 °C

ದಕ್ಷಿಣ ಕಾಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಾ ಪ್ರೇಮಿಗಳಿಗೆ ಶಿಲ್ಪಕಾಶಿ... ಭಕ್ತರಿಗೆ ದಕ್ಷಿಣ ಕಾಶಿ...! ಇದು ಬಾಗಲಕೋಟೆ ಜಿಲ್ಲೆಯ ಹಿರಿಮೆ. ಶಿಲ್ಪಕಲಾ ವೈಭವದಿಂದಾಗಿ ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವ ಜಿಲ್ಲೆಯಲ್ಲಿ ಅನೇಕ ದೇವಾಲಯಗಳು  ಹಾಗೂ ಸುಕ್ಷೇತ್ರಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.ಬಾದಾಮಿಯ ಗುಹಾಂತರ ದೇವಾಲಯ ಹಾಗೂ ಪಟ್ಟದಕಲ್ಲಿನ ಶಿಲೆಯಲ್ಲಿ ಅರಳಿದ ಕಲಾ ವೈಭವ ವಿಶ್ವ ಪ್ರಸಿದ್ಧ. ಗಡಿ ಭಾಗದಲ್ಲಿರುವ ಆಲಮಟ್ಟಿ ಅಣೆಕಟ್ಟೆ, ರಾಕ್ ಗಾರ್ಡನ್, ಲವಕುಶ ಗಾರ್ಡನ್ ಹಾಗೂ ಸಂಗೀತ ಕಾರಂಜಿಗಳು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮೆರುಗು ತಂದಿವೆ.ಹಿಂದೂ ದೇವಸ್ಥಾನಗಳ ವಾಸ್ತು ಶೈಲಿಯ ಪ್ರಯೋಗಶಾಲೆ ಎಂದು ಕರೆಯಲ್ಪಡುವ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲಿನಲ್ಲಿ 156 ದೇವಾಲಯಗಳು ಹಾಗೂ 8 ಗುಹಾಲಯಗಳಿವೆ. ಶಿಲ್ಪ ಕಲೆಯ ವಿವಿಧ ಮಗ್ಗಲುಗಳನ್ನು ಪರಿಚಯಿಸುವ ಇಷ್ಟೊಂದು ದೇವಾಲಯಗಳು ಒಂದೆಡೆ ಕಾಣಸಿಗುವುದು ದೇಶದಲ್ಲಿಯೇ ಅಪರೂಪ. ಬೆಂಗಳೂರಿನಿಂದ 510 ಕಿ.ಮೀ. ಹಾಗೂ ಹುಬ್ಬಳ್ಳಿಯಿಂದ ಕೇವಲ 150 ಕಿ.ಮೀ. ದೂರದಲ್ಲಿರುವ ಬಾಗಲಕೋಟೆ ವಿದೇಶಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಲ್ಲಿ ಒಂದು. ನವೆಂಬರ್‌ನಿಂದ ಫೆಬ್ರುವರಿವರೆಗೆ ಜಿಲ್ಲೆಯ ಪ್ರವಾಸಕ್ಕೆ ಸೂಕ್ತ ಸಮಯ.ಬಾದಾಮಿಚಾಲುಕ್ಯರ 1ನೇ ಪುಲಿಕೇಶಿ (ಕ್ರಿ.ಶ. 543-566) ಬಾದಾಮಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ನಡೆಸಿ ಸಾಮ್ರಾಜ್ಯವನ್ನು ವಿಸ್ತರಿಸಿದನು.ಅನೇಕ ಶಾಸನಗಳಲ್ಲಿ ಇದನ್ನು ‘ವಾತಾಪಿ’ ಎಂದೂ ಕರೆಯಲಾಗಿದೆ. ಚಾಲುಕ್ಯರ ಕಾಲದಲ್ಲಿ ಶೈವ, ವೈಷ್ಣವ, ಬೌದ್ಧ ಮತ್ತು ಜೈನ ಧರ್ಮಗಳಿಗೆ ಪ್ರೋತ್ಸಾಹ ನೀಡಲಾಗಿತ್ತು. ಈ ಕಾಲಘಟ್ಟದಲ್ಲಿಯೇ ಈ ನಾಲ್ಕು ಧರ್ಮಗಳ ಅನುಸಾರ ಜಗತ್ಪ್ರಸಿದ್ಧ ದೇವಾಲಯ ಹಾಗೂ ಗುಹಾಲಯಗಳು ನಿರ್ಮಾಣವಾದವು.ಬಾದಾಮಿಯ ಶೈವ ಗುಹಾಲಯದಲ್ಲಿ ಅರ್ಧನಾರೀಶ್ವರ, ವಾತಾಪಿ ಗಣಪ, ಕಾರ್ತಿಕೇಯ, ಹದಿನೆಂಟು ಕೈಗಳ ನಟರಾಜನ ಅಪೂರ್ವ ಶಿಲ್ಪಗಳು, ವೈಷ್ಣವ ಗುಹಾಲಯದಲ್ಲಿ ವಿರಾಟರೂಪ ವಾಮನ- ತ್ರಿವಿಕ್ರಮ ಶಿಲ್ಪವಿದೆ. ಜೈನ ಗುಹಾಲಯದ ಮುಖ ಮಂಟಪದಲ್ಲಿ ಪಾರ್ಶ್ವನಾಥ ಹಾಗೂ ಬಾಹುಬಲಿ ಶಿಲ್ಪಗಳು ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದವು. ಇವಲ್ಲದೇ ಭೂತನಾಥ ದೇವಾಲಯ, ಅಗಸ್ತ್ಯತೀರ್ಥ ಹೊಂಡಗಳು ಕಣ್ಮನ ಸೆಳೆಯುತ್ತವೆ.

ಐಹೊಳೆಗಜ ಪೃಷ್ಠಾಕಾರದ ತಳ ವಿನ್ಯಾಸ ಹೊಂದಿರುವ ದುರ್ಗಾ ದೇವಸ್ಥಾನ, ಚಪ್ಪರದ ದೇವಸ್ಥಾನ, ಲಾಡಖಾನ್ ದೇವಸ್ಥಾನ, ಹುಚ್ಚಿಮಲ್ಲಿ ದೇವಸ್ಥಾನ, ಸೂರ್ಯನಾರಾಯಣ ದೇವಸ್ಥಾನ, ಜ್ಯೋತಿರ್ಲಿಂಗ ದೇವಸ್ಥಾನಗಳ ಸಮುಚ್ಛಯ, ಮಲ್ಲಿಕಾರ್ಜುನ ದೇವಸ್ಥಾನ, ಮೇಗುಟಿ ಜಿನಾಲಯ, ಮೀನ ಬಸದಿ, ಗಳಗನಾಥ ದೇವಸ್ಥಾನಗಳ ಸಮೂಹ ಇಲ್ಲಿವೆ.

ಪಟ್ಟದಕಲ್ಲುಹೆಸರೇ ಸೂಚಿಸುವಂತೆ ಚಾಲುಕ್ಯ ಅರಸರು ಪಟ್ಟಾಭಿಷಿಕ್ತರಾಗುವ ಸ್ಥಳ ಇದು ಎಂಬ ಪ್ರತೀತಿ ಇದೆ. ವಿರುಪಾಕ್ಷ, ಮಲ್ಲಿಕಾರ್ಜುನ, ಜಂಬುಲಿಂಗ, ಕಾಡಸಿದ್ದೇಶ್ವರ, ಸಂಗಮೇಶ್ವರ, ಪಾಪನಾಥ ಹಾಗೂ ಕಾಶಿ ವಿಶ್ವನಾಥ ದೇವಸ್ಥಾನಗಳ ಸಮುಚ್ಚಯವಿದು. ಶಿವಲಿಂಗಗಳ ಕೂಟವಾಗಿರುವ ಈ ಸ್ಥಳವನ್ನು ಮಹಾಕೂಟ ಎಂದು ಕರೆಯಲಾಗುತ್ತದೆ. ಧಾರ್ಮಿಕ ಮಹತ್ವ ಹೊಂದಿರುವ ಇದು ಭಕ್ತರ ಪಾಲಿಗೆ ದಕ್ಷಿಣಕಾಶಿಯಾಗಿದೆ. ಕಾಶಿ ತೀರ್ಥ ಹಾಗೂ ಶಿವ ಪುಷ್ಕರಣಿ ಎಂಬ ಹೆಸರಿನ ಎರಡು ಪುಷ್ಕರಣಿಗಳಿದ್ದು, ಇಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ.ಶಿವಯೋಗ ಮಂದಿರ

ವೀರಶೈವ ವಟು-ಸಾಧಕರ ಗುರುಕುಲವಾಗಿರುವ ಶಿವಯೋಗ ಮಂದಿರವು ಮಠಾಧೀಶರನ್ನು ರೂಪಿಸುವ ವಿಶ್ವ ವಿದ್ಯಾಲಯ ಎಂದೇ ಹೆಸರಾಗಿದೆ. ಹಾನಗಲ್ ಕುಮಾರಸ್ವಾಮಿಗಳು 1909ರಲ್ಲಿ ಇದನ್ನು ಸ್ಥಾಪಿಸಿದರು.ಇಲ್ಲಿ ವಟುಗಳಿಗೆ ಯೋಗ, ಶಿವಯೋಗ, ಧರ್ಮ, ತತ್ವಜ್ಞಾನ, ಸಾಹಿತ್ಯ, ಸಂಗೀತ, ಸಂಸ್ಕೃತ ಕಲಿಸುವ ವ್ಯವಸ್ಥೆ ಇದೆ.

ಬನಶಂಕರಿಬಾದಾಮಿಯಿಂದ ಐದು ಕಿ.ಮೀ. ದೂರದಲ್ಲಿರುವ ಬನಶಂಕರಿ (ಶಾಖಾಂಬರಿ)ಯು ನಾಡಿನ ಪ್ರಮುಖ ಶಕ್ತಿಪೀಠಗಳಲ್ಲಿ ಒಂದು. 16ನೇ ಶತಮಾನದಲ್ಲಿ ಈ ದೇವಸ್ಥಾನ ಸ್ಥಾಪನೆಗೊಂಡಿತು. ಪ್ರತಿ ವರ್ಷ ಬನದ ಹುಣ್ಣಿಮೆ ಸಮಯದಲ್ಲಿ ಒಂದು ತಿಂಗಳು ಜಾತ್ರೆ ನಡೆಯುತ್ತದೆ. ದೇಶದ ವಿವಿಧ ಭಾಗಗಳ ಲಕ್ಷಾಂತರ ಜನರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಕೂಡಲಸಂಗಮಸಾಮಾಜಿಕ ಪರಿವರ್ತನೆಯ ಹರಿಕಾರ ಬಸವಣ್ಣನವರು ಐಕ್ಯರಾದ ಸ್ಥಳ ಇದು. ಕೃಷ್ಣೆ- ಮಲಪ್ರಭೆಯ ಸಂಗಮ ಸ್ಥಳದಲ್ಲಿ ಬಸವಣ್ಣನವರ ಐಕ್ಯಮಂಟಪವಿದೆ. ಕಲ್ಯಾಣಿ ಕಲಚೂರಿಗಳಿಂದ 11ನೇ ಶತಮಾನದಲ್ಲಿ ನಿರ್ಮಾಣವಾದ ಸಂಗಮೇಶ್ವರ ದೇವಸ್ಥಾನ ಇಲ್ಲಿನ ಪ್ರಮುಖ ಆಕರ್ಷಣೆ. ಜಾತವೇದ ಮುನಿಗಳ ಗದ್ದುಗೆಯೂ ಇಲ್ಲಿದೆ.ಕೃಷ್ಣೆ ಹಿನ್ನೀರಿನಿಂದ ಮುಳುಗಡೆಯಾಗಲಿದ್ದ ಕೂಡಲ ಸಂಗಮವನ್ನು ರಾಜ್ಯ ಸರ್ಕಾರ ಸಂರಕ್ಷಿಸಿ ಹೊಸರೂಪ ನೀಡಿದೆ. ಗೋಲಗುಮ್ಮಟದ ದುಪ್ಪಟ್ಟು ವಿಸ್ತಾರ ಹೊಂದಿರುವ ವೃತ್ತಾಕಾರದ ಭವ್ಯ ಸಭಾಭವನವನ್ನು ಇಲ್ಲಿ ನಿರ್ಮಿಸಲಾಗಿದೆ. ಈ ಗುಮ್ಮಟ ಏಷ್ಯಾದಲ್ಲಿಯೇ ಅತಿದೊಡ್ಡ ಗುಮ್ಮಟ ಎಂಬ ಖ್ಯಾತಿ ಹೊಂದಿದೆ. ಶರಣ ಸಾಹಿತ್ಯ ಭಂಡಾರ ಮತ್ತು ಸಂಶೋಧನಾ ಕೇಂದ್ರ ಹಾಗೂ ದಾಸೋಹ ಭವನ ಕೂಡಲ ಸಂಗಮದ ಆಕರ್ಷಣೆಗಳಾಗಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.