ಬುಧವಾರ, ಮೇ 12, 2021
18 °C

ದತ್ತಾಂಶ ಗಣಕೀಕರಣ ಅಂತಿಮ ಹಂತದಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಎಸ್‌ಐ ವ್ಯಾಪ್ತಿಗೊಳಪಡುವ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ದೇಶದ ಯಾವುದೇ ಭಾಗ ಅಥವಾ ಯಾವುದೇ ಸಮಯದಲ್ಲಿ ಸೂಕ್ತ ವೈದ್ಯಕೀಯ ಕಲ್ಪಿಸುವಂತಹ `ಪಂಚದೀಪ್~ ಕಾರ್ಯಕ್ರಮದಡಿ ದತ್ತಾಂಶವನ್ನು ಗಣಕೀಕರಣಗೊಳಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಇಎಸ್‌ಐಸಿ ಮಹಾನಿರ್ದೇಶಕ ಡಾ.ಸಿ.ಎಸ್. ಕೇದಾರ್ ಶನಿವಾರ ಇಲ್ಲಿ ಹೇಳಿದರು.ಅಖಿಲ ಭಾರತ ಇಎಸ್‌ಐಸಿ ಅಧಿಕಾರಿಗಳ ಸಂಘಟನೆ ಹಮ್ಮಿಕೊಂಡಿದ್ದ `ಇಎಸ್‌ಐಸಿ ಬೆಳವಣಿಗೆಗೆ ಪಾರದರ್ಶಕ ದೂರದರ್ಶಿತ್ವ~ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಕಹೀ ಬಿ ಕಬಿ ಭೀ~ ಎಂಬ ಘೋಷಣೆಯಡಿ ವಿಮಾ ವ್ಯಾಪ್ತಿಗೆ ಒಳಪಡುವ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ದೇಶದ ಯಾವುದೇ ಇಎಸ್‌ಐಸಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ~ ಎಂದು ಅವರು ಹೇಳಿದರು.`ಪಂಚದೀಪ್~ ಯೋಜನೆಯಡಿ ವಿಮಾ ವ್ಯಾಪ್ತಿಗೊಳಪಡುವ ಕಾರ್ಮಿಕರುಮತ್ತು ಅವರ ಕುಟುಂಬ ಸದಸ್ಯರ ಮಾಹಿತಿಯನ್ನು `ವಿಪ್ರೊ~ ಕಂಪೆನಿಯ ಮೂಲಕ ಗಣಕೀಕರಣಗೊಳಿಸಲಾಗುತ್ತಿದೆ. ಅರ್ಹ ಎಲ್ಲ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಲಾಗುತ್ತದೆ.ಈ ಗುರುತಿನ ಚೀಟಿ ಹೊಂದಿರುವ ಕಾರ್ಮಿಕರು ಮತ್ತು ಕುಟುಂಬ ಸದಸ್ಯರಿಗೆ ಯಾವುದೇ ರೀತಿಯಲ್ಲಿ ತಾರತಮ್ಯ ಮಾಡದೆ ಇಎಸ್‌ಐ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.ಸುಮಾರು 1.6 ಕೋಟಿ ಕಾರ್ಮಿಕರು ಹಾಗೂ 6.2 ಕೋಟಿ ಅವರ ಕುಟುಂಬ ಸದಸ್ಯರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಪ್ರಸ್ತುತ 160 ಇಎಸ್‌ಐ ಹಾಗೂ 1600 ಡಿಸ್ಪೆನ್ಸರಿಗಳಲ್ಲಿ ಈ ವೈದ್ಯಕೀಯ ಸೌಲಭ್ಯ ಪಡೆಯಬಹುದಾಗಿದೆ ಎಂದು ಹೇಳಿದರು.ಈ ವಿಶಿಷ್ಟ ಗುರುತಿನ ಚೀಟಿಯಿಂದ ಕಾರ್ಮಿಕ, ಅವರ ಕುಟುಂಬ ಸದಸ್ಯರ ಮಾಹಿತಿ, ವಿಮಾ ಮೊತ್ತ ಸೇರಿದಂತೆ ಇತರೆ ಎಲ್ಲ ಮಾಹಿತಿ ಲಭ್ಯವಾಗಲಿದೆ. ಒಂದು ವೇಳೆ ಕಾರ್ಮಿಕ ದೇಶದ ಯಾವುದೇ ಭಾಗದಲ್ಲಿ ಅಕಾಲಿಕ ಕಾಯಿಲೆಗೆ ತುತ್ತಾದರೂ ಅಲ್ಲಿಯೇ ಕಾರ್ಡ್ `ಸ್ವೈಪ್~ ಮಾಡಿ ಸ್ಥಳೀಯ ಇಎಸ್‌ಐ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ ಎಂದರು.ಆಧಾರ್‌ಗಿಂತ ದೊಡ್ಡ ಯೋಜನೆ: ಕೇಂದ್ರ ಸರ್ಕಾರ ಪ್ರಾರಂಭಿಸಿರುವ `ಆಧಾರ್~ ವಿಶಿಷ್ಟ ಗುರುತಿನ ಚೀಟಿ ಯೋಜನೆಗಿಂತ `ಪಂಚದೀಪ್~ನ ಯೋಜನೆ ದೊಡ್ಡದು. ಏಕೆಂದರೆ `ಆಧಾರ್~ನಲ್ಲಿ ಒಮ್ಮೆ ಮಾಹಿತಿ ಸಂಗ್ರಹಿಸುವ ಕೆಲಸ ಮುಗಿದಲ್ಲಿ ಪ್ರಕ್ರಿಯೆ ಮುಗಿದಂತೆ. ಆದರೆ `ಪಂಚದೀಪ್~ನಲ್ಲಿ ಕಾರ್ಮಿಕ ಚಿಕಿತ್ಸೆ ಪಡೆದಾಗಲೆಲ್ಲಾ ಮಾಹಿತಿಯನ್ನು `ಅಪ್‌ಡೇಟ್ ಮಾಡಬೇಕಾಗುತ್ತದೆ.ಇದೊಂದು ನಿರಂತರ ಪ್ರಕ್ರಿಯೆ ಯಾ ಗಿರುವುದರಿಂದ `ಆಧಾರ್~ಗಿಂತ ದೊಡ್ಡ ಯೋಜನೆ ಎನ್ನಬಹುದು ಎಂದರು.ವಿಮಾ ಸೌಲಭ್ಯ ಹೊಂದಿರುವ ಕಾರ್ಮಿಕರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಕಲ್ಪಿಸುವಲ್ಲಿ ಕರ್ನಾಟಕ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಮೊದಲು ಕಡೆಗಣಿಸಲ್ಪಟ್ಟಿದ್ದ ಇಎಸ್‌ಐ ಆಸ್ಪತ್ರೆಗಳಿಗೆ ಇದೀಗ ಸರ್ಕಾರ ಕೂಡ ಅಗತ್ಯ ನೆರವು ನೀಡುತ್ತಿದೆ ಎಂದರು.ಕಳೆದ ಮೂರು ವರ್ಷಗಳಿಂದ ಇಎಸ್‌ಐ ಆಸ್ಪತ್ರೆಗಳಲ್ಲಿ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆದಿರಲಿಲ್ಲ. ಇದೀಗ ಪ್ರಥಮ ದರ್ಜೆ ಸಹಾಯಕರ ನೇಮಕಾತಿ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುತ್ತಿದೆ. 2012ರ ಮಾರ್ಚ್ 15ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಕೇದಾರ್ ತಿಳಿಸಿದರು.ವಿಮಾ ವ್ಯಾಪ್ತಿಗೊಳಪಟ್ಟ 90 ಲಕ್ಷ ಮಂದಿ ಕಾರ್ಮಿಕರಿಗೆ ಈಗಾಗಲೇ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಇದು ನಿರಂತರ ಪ್ರಕ್ರಿಯೆ ಎಂದು ಹೇಳಿದರು.ಇಎಸ್‌ಐಸಿ ಸದಸ್ಯರಾದ ಚಂದ್ರಕಾಂತ್ ಬಿ. ಖೈರೆ, ರಾಮ್‌ಕಿಶೋರ್ ತ್ರಿಪಾಠಿ, ಚಂದ್ರಪ್ರಕಾಶ್ ಸಿಂಗ್ ಮತ್ತಿತರರು ವಿಚಾರಸಂಕಿರಣದಲ್ಲಿ ಭಾಗವಹಿಸಿದ್ದರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.