ಸೋಮವಾರ, ಜನವರಿ 20, 2020
20 °C

ದತ್ತಿ ಕಾಯ್ದೆ ವ್ಯಾಪ್ತಿಗೆ ಮಠಗಳು: ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಕಾಯ್ದೆಯ ವ್ಯಾಪ್ತಿಗೆ ಮಠಗಳನ್ನು ತರಲು ಚಿಂತನೆ ನಡೆದಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಗುರುವಾರ ತಿಳಿಸಿದೆ.ಸೋಸಲೆ ಮಠಾಧೀಶ ವಿದ್ಯಾಮನೋಹರತೀರ್ಥ ಸ್ವಾಮೀಜಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ ಮತ್ತು ನ್ಯಾಯಮೂರ್ತಿ ಎಸ್‌.ಎನ್‌. ಸತ್ಯನಾರಾಯಣ ಅವರನ್ನೊಳಗೊಂಡ ವಿಭಾಗೀಯ ಪೀಠಕ್ಕೆ ಅಡ್ವೊಕೇಟ್‌ ಜನರಲ್‌ ಪ್ರೊ. ರವಿವರ್ಮ ಕುಮಾರ್‌ ಅವರು ಈ ವಿಷಯ ತಿಳಿಸಿದರು.ಕಾನೂನಿನ ಆಡಳಿತ ಇರುವ ನಾಡಿನಲ್ಲಿ ಯಾವ ಸಂಸ್ಥೆಯೂ ಕಾನೂನಿಗೆ ಮೀರಿದ್ದಲ್ಲ. ಧಾರ್ಮಿಕ ಸ್ವಾತಂತ್ರ್ಯದ ಅಡಿ ಮಠಗಳನ್ನು ಸ್ಥಾಪಿಸುವ ಹಕ್ಕು ಇದೆ. ಆದರೆ ಅಲ್ಲಿ ಹಣಕಾಸಿನ ಅವ್ಯವಹಾರ ನಡೆಸಲು ಯಾರಿಗೂ ಅಧಿಕಾರವಿಲ್ಲ. ಜನರಿಂದ ಬಂದ ಹಣಕ್ಕೆ ಮಠಾಧಿಪತಿಗಳು ಉತ್ತರದಾಯಿ ಆಗಿರಬೇಕು ಎಂದು ಅವರು ಪೀಠಕ್ಕೆ ವಿವರಿಸಿದರು.ಇದೇ ಮೇಲ್ಮನವಿಯ ವಿಚಾರಣೆ ವೇಳೆ ಈ ಹಿಂದೆ ನ್ಯಾಯಪೀಠ, ‘ಮಠಗಳ ಚಟುವಟಿಕೆ ನಿಯಂತ್ರಿಸಲು ಕಾನೂನು ಏಕಿಲ್ಲ? ಅವು ಕಾನೂನಿಗಿಂತ ಮೇಲಿವೆಯೇ?’ ಎಂದು ಸರ್ಕಾರವನ್ನು ಮೌಖಿಕವಾಗಿ ಪ್ರಶ್ನಿಸಿತ್ತು. ‘ಯಾವುದೇ ವ್ಯವಸ್ಥೆಗೆ ಪರಮಾಧಿಕಾರ ನೀಡಿದರೆ, ಅವು ಭ್ರಷ್ಟಗೊಳ್ಳುತ್ತವೆ’ ಎಂಬ ಆತಂಕವನ್ನೂ ವ್ಯಕ್ತಪಡಿಸಿತ್ತು.1997ರಲ್ಲಿ ಜಾರಿಗೆ ಬಂದ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಕಾಯ್ದೆಯ ವ್ಯಾಪ್ತಿಯಿಂದ ಮಠಗಳು ಮತ್ತು ಮಠಗಳಿಗೆ ಹೊಂದಿಕೊಂಡಿರುವ ದೇವಸ್ಥಾನಗಳನ್ನು ಹೊರಗಿಡಲಾಗಿದೆ.ಸೋಸಲೆ ಮಠದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಾಗ, ಅಲ್ಲಿಗೆ ಆಡಳಿತಾಧಿಕಾರಿ ನೇಮಕ ಮಾಡಿ ಸರ್ಕಾರ ಆದೇಶಿಸಿತು. ಇದನ್ನು ಪ್ರಶ್ನಿಸಿ ಸ್ವಾಮೀಜಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಇದರ ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಸರ್ಕಾರದ ಕ್ರಮ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಸ್ವಾಮೀಜಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.

ಪ್ರತಿಕ್ರಿಯಿಸಿ (+)