ಸೋಮವಾರ, ಮೇ 23, 2022
28 °C

ದನಿ ಅಡಗಿಸುವ ಹುನ್ನಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದನಿ ಅಡಗಿಸುವ ಹುನ್ನಾರ

ಹರಿದ ಚಪ್ಪಲಿ, ಮುರಿದ ಕನ್ನಡಕ, ಮೈಮೇಲೆ ಮಾಸಿದ ಬಿಳಿಯಂಗಿ ಪಂಚೆ, ನೆರಿಗೆ ಗಟ್ಟಿದ ಮುಖ, ಸೋತ ನಡಿಗೆ, ತನಗೆ ಬರಬೇಕಾದ ವೃದ್ಧಾಪ್ಯ ವೇತನ ದೊರೆಯುವುದೇ ಎಂಬ ಪ್ರಶ್ನೆ. ಮುಖದಲ್ಲಿ ಹತಾಶೆಯ ಭಾವ. ಇದು ವಯೋವೃದ್ಧ ಸೋಮಯ್ಯನವರ ಸಣ್ಣ ಪರಿಚಯ.ಇವರು ಹೆಗ್ಗಡದೇವನ ಕೋಟೆಯ ಒಂದು ಹಳ್ಳಿಯವರು. ಹನ್ನೆರಡು ತಿಂಗಳ ಹಿಂದೆ (ಇದು ಒಂದೂವರೆ ವರ್ಷದ ಹಿಂದಿನ ಘಟನೆ) ತಮಗೆ ಬಂದ ವೃದ್ಧಾಪ್ಯ ವೇತನದ ಆರ್ಡರ್ ಕಾಪಿ ಹಿಡಿದು ಅಲೆಯುತ್ತಲೇ ಇದ್ದಾರೆ.ಕಚೇರಿಗೆ ಅಲೆದು ಸುಸ್ತಾದ ಇವರಿಗೆ ಆಶಾಕಿರಣವಾದದ್ದು `ಮಾಹಿತಿ  ಹಕ್ಕು ಕಾಯಿದೆ~. ಇವರು ಮಾಹಿತಿ ಹಕ್ಕು ಕಾಯ್ದೆ ಕುರಿತು ತಿಳುವಳಿಕೆ ನೀಡುವ ಕಾರ್ಯಕರ್ತರ ಸಲಹೆಯ ಮೇರೆಗೆ, ಕಾಯ್ದೆಯಡಿ ಸಂಬಂಧ ಪಟ್ಟ ಕಚೇರಿಗೆ ಒಂದು ಅರ್ಜಿ ಹಾಕಿದ್ದಾರೆ.ಅರ್ಜಿ ನೋಡಿದ ಅಧಿಕಾರಿ, `ಇದಕ್ಕೆ ಮಾಹಿತಿ ಹಕ್ಕು ಕಾಯ್ದೆ ಯಾಕೆ? ಎರಡು ದಿನ ಬಿಟ್ಟು ಬನ್ನಿ, ನಿಮ್ಮ ಹಣದ ವ್ಯವಸ್ಥೆ ಮಾಡುತ್ತೇವೆ~ ಎಂದಿದ್ದಾರೆ. ಹನ್ನೊಂದು ತಿಂಗಳಲ್ಲಿ ಬಾರದ ಹಣ ಎರಡು ದಿನದಲ್ಲಿ ಬರುವುದು ಪವಾಡವೇ ಸರಿ ಎಂದುಕೊಂಡು ಸೋಮಯ್ಯ ತಮ್ಮ ಕಣ್ಣನ್ನು ತಾವೇ ನಂಬದಾದರು. ಸರಿಯಾಗಿ ಎರಡೇ ದಿನಕ್ಕೆ ಅವರಿಗೆ ಬರಬೇಕಿದ್ದ ಬಾಕಿ  ರೂ. 4,400ರ ಚೆಕ್ ಅವರ ಕೈ ಸೇರಿತ್ತು.ಕೆಂಪಮ್ಮ ಕೋಂ ನಿಂಗಪ್ಪ (ಹೆಸರು ಬದಲಾಯಿಸಿದೆ) ತಮ್ಮ ಜಮೀನಿಗೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿ ಎರಡು ವರ್ಷಗಳೇ ಕಳೆದಿತ್ತು. ಪ್ರತಿ ಸಲ  ಬೆಸ್ಕಾಂನ ಕದ ತಟ್ಟಿದಾಗಲೂ ಹಾರಿಕೆಯ ಉತ್ತರವೇ ದೊರೆಯುತ್ತಿತ್ತು.ಇದರಿಂದ ಬೇಸತ್ತ ಇವರು, `ಎರಡು ವರ್ಷಗಳ ಹಿಂದೆ ಸಲ್ಲಿಸಿದ್ದ ತನ್ನ ಅರ್ಜಿಗೆ ತಮ್ಮ ಇಲಾಖೆ ಏನು ಕ್ರಮ ಕೈಗೊಂಡಿದೆ? ನನಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಇನ್ನೆಷ್ಟು ದಿನಗಳು ಬೇಕಾಗುತ್ತದೆ?~ ಎಂಬೆರಡು  ಪ್ರಶ್ನೆಗಳನ್ನು ಕೇಳಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರು. ಸಲ್ಲಿಸಿದ ಅರ್ಜಿಗೆ ಲಿಖಿತ ರೂಪದ ಉತ್ತರ ನೀಡುವ ಬದಲು 15 ದಿನಗಳಲ್ಲಿ ಅವರ ಜಮೀನಿಗೆ ಇಲಾಖೆಯ ಸಂಪರ್ಕ ಸಾಧನಗಳು ಬಂದವು. ಒಂದು ತಿಂಗಳಲ್ಲಿ ಸಂಪೂರ್ಣ ಸಂಪರ್ಕ ದೊರೆಯಿತು.ಇಂತಹ ಹಲವು ಉದಾಹರಣೆಗಳನ್ನು ಕೊಡಬಹುದು. ಕೆಲವು ದಿನಗಳ ಹಿಂದೆ ನಡೆಸಿದ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ತಾಲ್ಲೂಕು ವೈದ್ಯಾಧಿಕಾರಿಗಳೊಬ್ಬರು `ಮಾಹಿತಿ ಹಕ್ಕಿನಡಿ ವೈದ್ಯಾಧಿಕಾರಿಗಳ ಕಾರ್ಯ, ಜವಾಬ್ದಾರಿ ಕೇಳಿ ಬಂದ ಅರ್ಜಿಗೆ ಉತ್ತರಿಸಲು ಬಹಳ ಕಷ್ಟವಾಯಿತು. ಅದನ್ನು ಕಾಯ್ದೆಯಡಿ ಕೇಳಬಹುದೆಂದು ನನಗೆ ಆಗಲೇ ಅರ್ಥವಾದದ್ದು.ಆದರೆ ನನ್ನಲ್ಲಿ ಅದಕ್ಕೆ ಸಂಬಂಧಪಟ್ಟ ದಾಖಲೆಗಳು ಇರಲಿಲ್ಲ. ಆದರೆ ನಂತರದ ದಿನಗಳಲ್ಲಿ ಈ ಕಾರಣಕ್ಕಾಗಿಯೇ ಆಸ್ಪತ್ರೆಯ ಎಲ್ಲ ಸಿಬ್ಬಂದಿ ವರ್ಗದವರ ಕಾರ್ಯ, ಜವಾಬ್ದಾರಿಯ ಪಟ್ಟಿ ತಯಾರಿಸಲು ಸಾಧ್ಯವಾಯಿತು. ಈಗ ಈ ಕುರಿತು ಯಾರೇ ಕೇಳಿದರೂ ನನ್ನಲ್ಲಿ ಉತ್ತರವಿದೆ~ ಎಂದರು.ಹಾಗೆಯೇ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಬ್ಬರು `ಮಾಹಿತಿ ನನಗೆ ವರದಾನವಾಗಿದೆ. ಚುನಾಯಿತ ವ್ಯವಸ್ಥೆಯೊಂದಿಗೆ ಕಾರ್ಯ ನಿರ್ವಹಿಸಬೇಕಾದ್ದರಿಂದ ಕೆಲವೊಮ್ಮೆ ಒತ್ತಡಗಳು ಬರುತ್ತವೆ, ಸಹಜ. ಏನೇ ತೀರ್ಮಾನಗಳಾದರೂ, ಮೌಖಿಕ ಆದೇಶಗಳಾದರೂ, ಲಿಖಿತ ರೂಪದಲ್ಲಿ ದಾಖಲಿಸುತ್ತೇನೆ.

 

ಈ ದಾಖಲಾತಿಗಳು ಸರಿಯಾಗಿದ್ದರೆ ಈ ಕಾಯ್ದೆಯು ನಮ್ಮನ್ನು ಕಾಯುವಲ್ಲಿ ನೆರವಾಗುತ್ತದೆ~ ಎಂದು ಸಹೋದ್ಯೋಗಿಗಳಿಗೆ ಕಿವಿಮಾತು ತಿಳಿಸಿದರು. ಇಂದು ಸಾರ್ವಜನಿಕ ಸೇವಾ ವಲಯದಲ್ಲಿಯೂ ಕಾಯ್ದೆಯ ಕುರಿತು ಇಂಥ ಸಕಾರಾತ್ಮಕ ಅಭಿಪ್ರಾಯಗಳಿವೆ.ಮಾಹಿತಿ ಹಕ್ಕು ಕಾಯ್ದೆ ಜನಸಾಮಾನ್ಯರ ಕಾಯ್ದೆ. ದೇಶದ ಪ್ರಜೆಗಳ ಕಾಯ್ದೆ. ಈ ಕಾಯ್ದೆಯ ಸದ್ಬಳಕೆಯಿಂದಾಗಿಯೇ 2ಜಿ ಹಗರಣ, ಕಾಮನ್‌ವೆಲ್ತ್ ಕ್ರೀಡಾಕೂಟದ ಹಗರಣಗಳು ಬೆಳಕಿಗೆ ಬಂದಿರುವುದು. ಸಾಲು ಸಾಲು ನಾಯಕರು ಕೃಷ್ಣನ ಜನ್ಮ ಸ್ಥಾನದಲ್ಲಿ ನಿಲ್ಲಲು ಸಾಧ್ಯವಾದದ್ದು. ಕೆಲವರು ಅತ್ತ ಸಾಗುವ ದಾರಿಯಲ್ಲಿ ಕ್ಯೂ ನಿಂತಿರುವುದು. ಪ್ರಜಾಪ್ರಭುತ್ವ ಸರ್ಕಾರ ಹೊಂದಿರುವ ದೇಶಕ್ಕೆ ಪ್ರಜೆಗಳ ಯೋಗಕ್ಷೇಮ ಪ್ರಥಮ ಆದ್ಯತೆ.ಪ್ರಜೆಗಳಿಂದ ಅವರ ಹಕ್ಕುಗಳನ್ನು ಎತ್ತಿ ಹಿಡಿಯುವ, ಅವರ ಆದರಕ್ಕೆ ಒಳಗಾಗಿರುವ ಕಾಯ್ದೆಯನ್ನು ಜನಾಭಿಪ್ರಾಯವಿಲ್ಲದೆ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರವಿಂದು ಹೊರಟಿದೆ. ಈ ಕಾಯ್ದೆಯಿಂದಾಗಿಯೇ ತೆರೆಮರೆಯಲ್ಲಿ ನಡೆಯುತ್ತಿದ್ದ ಜನಪ್ರತಿನಿಧಿಗಳ ಹಾಗೂ ಆಡಳಿತಶಾಹಿಯ ಹಗರಣಗಳು ಒಂದೊಂದಾಗಿ ಹೊರಬರುತ್ತಿವೆ. ಜನತೆ ಈ ಕಾಯ್ದೆಯಿಂದ ಪ್ರಜಾಪ್ರಭುತ್ವದಲ್ಲಿ ತಮಗಿರುವ ಅಧಿಕಾರವನ್ನು ಮನಗಾಣುತ್ತಿದ್ದಾರೆ. ಇದರಿಂದ ಕಂಗೆಟ್ಟಿರುವ ಸರ್ಕಾರ ತಿದ್ದುಪಡಿ ತರುವ ಪ್ರಯತ್ನದಲ್ಲಿದೆ. ಅವುಗಳಲ್ಲಿ ಕೆಲವು ಈ ಕೆಳಕಂಡಂತಿವೆ:* `ಒಂದೇ ಅರ್ಜಿಯಲ್ಲಿ ಒಂದೇ ವಿಷಯದ ಮೇಲೆ 250 ಪದಗಳಿಗೆ ಮೀರದಂತೆ ಇರಬೇಕು~-  ಕರ್ನಾಟಕ ಸರ್ಕಾರ ಈಗಾಗಲೇ ಇದನ್ನು 150 ಪದಗಳಿಗೆ ಮೀರದಂತೆ ಎಂಬುದನ್ನು ಜಾರಿಗೆ ತಂದಾಗಿದೆ. ಇದು ಪ್ರಶ್ನಿಸುವ ಮನೋಭಾವವನ್ನು ಕುಂಠಿತಗೊಳಿಸುತ್ತದೆ.* `ಅರ್ಜಿ ಶುಲ್ಕವನ್ನು ರೂ.10ರಿಂದ ಹೆಚ್ಚಿಸಬೇಕು~- ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಪೋಸ್ಟಲ್ ಆರ್ಡರ್ ಅಥವಾ ಬ್ಯಾಂಕ್ ಡ್ರಾಫ್ಟ್ ಪಡೆಯುವುದಕ್ಕಾಗಿಯೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ. ಇದರಿಂದಾಗಿಯೇ ಜನ ಅರ್ಜಿ ಸಲ್ಲಿಸಲು ಮುಂದೆ ಬರುತ್ತಿಲ್ಲ. ಬಹುತೇಕ ಇಲಾಖೆಗಳು ರೂ 10 ಹಣವನ್ನು ನಗದಾಗಿ ಸ್ವೀಕರಿಸುವುದಿಲ್ಲ. ಆದಕಾರಣ, ಇದು ಹೆಚ್ಚಿನ ಸಮಯವನ್ನು ಬೇಡುವ ಪ್ರಕ್ರಿಯೆಯಾಗಿದೆ.

* `ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನು ಈ ಕಾಯ್ದೆಯಿಂದ ಹೊರಗಿಡಬೇಕು~- ಮುಖ್ಯ ನ್ಯಾಯಾಧೀಶರು ಸಾರ್ವಜನಿಕ ಸೇವಕರೇ. ಆದರೆ ಇಲ್ಲಿಯವರೆಗೆ ಇವರ ವಿದೇಶಿ ಪ್ರವಾಸ, ಆಸ್ತಿ ಪಾಸ್ತಿಯ ವಿವರಗಳು ಕಾಯ್ದೆಯ ವ್ಯಾಪ್ತಿಗೆ ಒಳಪಡಬೇಕು.ಇವರು ನ್ಯಾಯಸಮ್ಮತವಾಗಿದ್ದರೆ ಪಾರದರ್ಶಕ ಆಡಳಿತ ನೀಡಲು ಸಾಧ್ಯ. ಕರ್ನಾಟಕ ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಆಗುತ್ತಿರುವ ವಿಳಂಬಕ್ಕೆ ಭ್ರಷ್ಟಾಚಾರವೇ ಬಹುಮುಖ್ಯ ಕಾರಣವಾಗಿದೆ. ಆದಕಾರಣ, ಎಲ್ಲ ಸಾರ್ವಜನಿಕ ಸೇವಕರು ಈ ಕಾಯ್ದೆಯ ವ್ಯಾಪ್ತಿಗೆ ಬರಬೇಕು.* `ಕ್ಷುಲ್ಲಕ ಹಾಗೂ ಕಿರುಕುಳದ ಉದ್ದೇಶದ ಅರ್ಜಿಯನ್ನು ತಿರಸ್ಕರಿಸಬೇಕು~- ಅರ್ಜಿ ಕ್ಷುಲ್ಲಕ ಹಾಗೂ ಕಿರುಕುಳದ ಉದ್ದೆೀಶ ಹೊಂದಿದೆ ಎಂಬುದನ್ನು ನಿರ್ಧರಿಸುವವರು ಯಾರು? ತನ್ನ ಭ್ರಷ್ಟತೆಯನ್ನು ಪೋಷಿಸಲು ಅಧಿಕಾರಿಗೆ ಇದು ಸುಲಭ ಮಾರ್ಗವಾಗುತ್ತದೆ. ಆದರೆ ಸಾಮಾನ್ಯ ಅರ್ಜಿದಾರನಿಗೆ ಮುಖ್ಯವಾದ ವಿಚಾರ ಅಧಿಕಾರಿಗೆ ಕ್ಷುಲ್ಲಕ ಎನಿಸುವುದು ಹೇಗೆ? ಇದು ನಿರ್ಧಾರವಾಗಬೇಕು.* `ಕೇಂದ್ರ ಸಚಿವ ಸಂಪುಟದ ದಾಖಲೆಗಳನ್ನು ಕಾಯ್ದೆಯ ವಿನಾಯಿತಿ ಪಟ್ಟಿಯಲ್ಲಿ ಸೇರಿಸಬೇಕು~- ಇದು ಬಹುಶಃ  ಪ್ರಜ್ಞಾವಂತ ನಾಗರಿಕರು ಯೋಚಿಸಲೇಬೇಕಾದ ವಿಚಾರವಾಗಿದೆ. ಸಚಿವ ಸಂಪುಟದ ದಾಖಲೆಗಳಿಗೆ ಕಾಯ್ದೆಯಿಂದ ವಿನಾಯಿತಿ ನೀಡಿದ್ದರೆ 2ಜಿ ಹಗರಣದಲ್ಲಿರುವ ಪಾತ್ರಧಾರಿಗಳು ಬಯಲಿಗೆ ಬರುತ್ತಿರಲಿಲ್ಲ. ಸಿಬಿಐ ಅನ್ನು ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಬೇಕೆಂಬುದು ಇನ್ನೊಂದು ಅಂಶ. ಆಡಳಿತಾರೂಢ ಸರ್ಕಾರದ ಆದೇಶದಂತೆ ಕಾರ್ಯ ನಿರ್ವಹಿಸುವ ಈ ವ್ಯವಸ್ಥೆಯನ್ನು ಹೊರಗಿಟ್ಟರೆ ಮಾಹಿತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದಂತೆ.ಮಾಹಿತಿ ಹಕ್ಕು ಕಾಯಿದೆ ಜಾರಿಯಾದಂದಿನಿಂದ ದೇಶವ್ಯಾಪಿ ಸುಮಾರು 6.05 ಲಕ್ಷ ಅರ್ಜಿಗಳು ಮಾಹಿತಿ ಹಕ್ಕಿನಡಿ ಸಲ್ಲಿಕೆಯಾಗಿವೆ. ಇದರಲ್ಲಿ ಶೇ.90ರಷ್ಟು ಅರ್ಜಿಗಳಿಗೆ ಉತ್ತರಿಸಲಾಗಿದೆ.

 

ತಿರಸ್ಕೃತ ಅರ್ಜಿಗಳ ಪ್ರಮಾಣ 2007-08 ರಲ್ಲಿ ಶೇ 7.2 ಇದ್ದರೆ 2010-11 ರಲ್ಲಿ ಶೇ 5.2ಗೆ ಇಳಿದಿದೆ. ಇದರಿಂದಲೇ ಜನಸಾಮಾನ್ಯರಿಗೆ ಈ ಕಾಯ್ದೆಯ ಮಹತ್ವದ ಅರಿವಾಗಿರುವುದು ಗೋಚರವಾಗುತ್ತದೆ.

 

ಆಡಳಿತ ನಿಯಂತ್ರಣವನ್ನು ಪಾರದರ್ಶಕವಾಗಿಡಲು ಮತ್ತು ಚುರುಕಾಗಿಸಲು ಮಾಹಿತಿ ಹಕ್ಕು ಕಾಯ್ದೆ ಪ್ರಬಲ ಅಸ್ತ್ರವಾಗಿದೆ. ದೇಶವ್ಯಾಪಿ ಮಾಹಿತಿ ಕೋರಿ ಇದುವರೆಗೆ ಬಂದ 6.05 ಲಕ್ಷ ಅರ್ಜಿಗಳೇ ಜನರಿಗೆ ಉತ್ತಮ ಆಡಳಿತದ ಹಸಿವು ಹಾಗೂ ಮಾಹಿತಿಯ ಅವಶ್ಯಕತೆಯನ್ನು ಎತ್ತಿ ಹೇಳುತ್ತವೆ.

 

ಜನ ಸಾಮಾನ್ಯರ ಈ ಬೇಡಿಕೆಯಿಂದಾಗಿ ಆಡಳಿತ ವ್ಯವಸ್ಥೆ ಉತ್ತಮಗೊಂಡಿದೆಯೇ ವಿನಾ ಕಾಯ್ದೆಯ ದುರ್ಬಳಕೆಯಾಗಿರುವುದಿಲ್ಲ. ಅಲ್ಲದೆ, ಬಂದ ಅರ್ಜಿಗಳಲ್ಲಿ  ಶೇ.30 ರಷ್ಟು ಬಡತನ ರೇಖೆಗಿಂತ ಕೆಳಗಿನ ವರ್ಗದವರಿಂದ ಬಂದಿರುವುದು ಅಧ್ಯಯನದಿಂದ ತಿಳಿದುಬಂದಿದೆ. 2005 ರಿಂದ 2007 ರ ವರೆಗೆ ಸುಮಾರು 4 ಲಕ್ಷ ಅರ್ಜಿಗಳು ಗ್ರಾಮೀಣ ಭಾರತದಿಂದ ಬಂದಿವೆ. ಈ ಎಲ್ಲ ಅರ್ಜಿಗಳು ಅವರ ದೈನಂದಿನ ಬದುಕಿನ ಬವಣೆಗಳಿಗೆ ಬಂದಿರುವಂತಹವು ಎಂಬುದನ್ನು ವಿವರಿಸಬೇಕಿಲ್ಲ.

 

ದನಿಯಿರದ ಸಮುದಾಯದ ಧ್ವನಿಯಾಗಬೇಕಿದ್ದ ಪ್ರಬಲ ಮಾಹಿತಿ ಹಕ್ಕು ಕಾಯ್ದೆಯನ್ನು ಸರ್ಕಾರ ತಿದ್ದುಪಡಿ ಮಾಡಲು ಹೊರಟಿದೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಬಯಸಿದ ದೇಶವಾಸಿಗಳಿಗೆ ಕಾಯ್ದೆಯನ್ನು ತಿದ್ದುಪಡಿ ಮಾಡುವುದರ ಮೂಲಕ ದ್ರೋಹವೆಸಗಲು ಅಣಿಯಾಗುತ್ತಿದೆ.ಈಗಾಗಲೇ ಕರ್ನಾಟಕ ಸರ್ಕಾರ ಒಂದು ಅರ್ಜಿಯಲ್ಲಿ 150 ಪದಗಳಿಗೆ ಸೀಮಿತಗೊಳಿಸಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಈಗ ಕೇಂದ್ರ ಸರ್ಕಾರ ಇದರ ಕಾಲು ಬಾಲ ಕತ್ತರಿಸಿ ಅಂಗವಿಕಲವನ್ನಾಗಿ ಮಾಡಹೊರಟಿದೆ. ಇದು ತಿದ್ದುಪಡಿಯಾಗದೇ ಜನಸಾಮಾನ್ಯರ ಕಾಯ್ದೆಯಾಗಿಯೇ ಉಳಿಯಲು, ಪ್ರಜ್ಞಾವಂತ ಜನಸಮುದಾಯ ಎಚ್ಚೆತ್ತುಕೊಳ್ಳಬೇಕಿದೆ.

 

(ಲೇಖಕಿ: ಸಮುದಾಯ ಅಭಿವೃದ್ಧಿ ಕುರಿತ ಸಾಮಾಜಿಕ ಕಾರ್ಯಕರ್ತೆ, ತಂಡದ ಮುಖ್ಯಸ್ಥೆ, ಸಮುದಾಯ ಅಭಿವೃದ್ಧಿ ವಿಭಾಗ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್,    ಸರಗೂರು, ಮೈಸೂರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.