ಶುಕ್ರವಾರ, ಮೇ 14, 2021
29 °C

ದರ್ಶನ್ ಜಾಮೀನು ಅರ್ಜಿ ವಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು(ಪಿಟಿಐ): ಪತ್ನಿಯನ್ನು ಪೀಡಿಸಿದ ಆರೋಪದ ಮೇಲೆ ಬಂಧಿತರಾದ ಚಿತ್ರನಟ ದರ್ಶನ್ ಅವರ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಬಿ.ಆರ್.ಬೂದಿಹಾಳ್ ಅವರು ಮಂಗಳವಾರ ವಜಾ ಮಾಡಿದ್ದಾರೆ. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಸೆ.9ರಂದು ತಮ್ಮ ಮೇಲೆ ಹಲ್ಲೆ ಮಾಡಿದ್ದ ದರ್ಶನ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣ ಅವರನ್ನು ಪೋಲಿಸರು ಬಂಧಿಸಿದ್ದರು. ನಂತರ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು. ಕಳೆದ ವಾರ ಮ್ಯಾಜಿಸ್ಟ್ರೇಟ್ ಕೋರ್ಟ್, ದರ್ಶನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.ದರ್ಶನ್ ಪತ್ನಿ ನೀಡಿರುವ ದೂರನ್ನು ಹಿಂದಕ್ಕೆ ಪಡೆದು, ಜೊತೆಯಾಗಿ ಬಾಳಲು ಇಚ್ಛಿಸಿದ್ದಾರೆ. ಆದ್ದರಿಂದ ದರ್ಶನ್ ಅವರಿಗೆ ಜಾಮೀನು ನೀಡಬೇಕೆಂದು ದರ್ಶನ್ ಪರ ವಕೀಲ ಎಸ್.ಕೆ.ವೆಂಕಟರೆಡ್ಡಿ ಅವರು ಸೋಮವಾರ ವಾದ ಮಂಡಿಸಿದ್ದರು. ದರ್ಶನ್ ಪತ್ನಿಯ ದೂರಿನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪವಿಲ್ಲ, ಹೀಗಾಗಿ ಅವರಿಗೆ ಜಾಮೀನು ನೀಡಬೇಕೆಂದು ವಾದಿಸಿದ್ದರು. ಇದನ್ನು ಆಕ್ಷೇಪಿಸಿ ಸರ್ಕಾರಿ ವಕೀಲ ಎಸ್.ಸಿ.ಅಗಸಿ ಮಣಿ ಅವರು, ಇದು ವರದಕ್ಷಿಣೆ ಕಿರುಕುಳದ ಪ್ರಕರಣವಲ್ಲ ಎಂದು ಸ್ಪಷ್ಟೀಕರಿಸಿ, ಆರೋಪಿಗೆ ಜಾಮೀನು ನೀಡುವುದರಿಂದ ಸಾಕ್ಷಿಗಳ ಮೇಲೆ ಒತ್ತಡ ತರುವ ಸಾಧ್ಯತೆ ಇದೆ, ಕಾರಣ ಜಾಮೀನು ನೀಡಬಾರದೆಂದು ಆಗ್ರಹಿಸಿದರು. ಇಬ್ಬರ ವಾದಗಳನ್ನು ಆಲಿಸಿದ್ದ ನ್ಯಾಯಧೀಶರು ಮಂಗಳವಾರಕ್ಕೆ ತೀರ್ಪನ್ನು ಕಾದಿರಿಸಿದ್ದರು.ಇದಕ್ಕೂ ಮೊದಲು ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಮ್ಯಾಜೀಸ್ಟ್ರೇಟ್ ಕೋರ್ಟ್ ಮುಂದೆ ಹಾಜರಾಗಿ ತಾವು ನೀಡಿರುವ ದೂರನ್ನು ಹಿಂತೆಗೆದುಕೊಳ್ಳುವುದಾಗಿ ತಿಳಿಸಿದರು. ಆದರೆ ಕೋರ್ಟ್ ಇದನ್ನು ಮಾನ್ಯ ಮಾಡಲಿಲ್ಲ.  ಪ್ರಕರಣ ದಾಖಲಾಗಿರುವ ಐಪಿಸಿ ಸಕ್ಷನ್ 307ರ ಪ್ರಕಾರ ದರ್ಶನ್‌ಗೆ ಜಾಮೀನು ನೀಡಲು ಆಗುವುದಿಲ್ಲವೆಂದು ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ವಜಾಗೊಳಿಸಿದರು.ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ನಟ ದರ್ಶನ್ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಉಬ್ಬಸರೋಗ ಮತ್ತು ಕಾಮಾಲೆ  ರೋಗದಿಂದ ಬಳಲುತ್ತಿರುವ  ಅವರು  ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.