ಶನಿವಾರ, ಮೇ 28, 2022
26 °C
ನೈಸರ್ಗಿಕ ಅನಿಲ: ಮೊಯಿಲಿ ಸ್ಪಷ್ಟನುಡಿ

ದರ ಏರಿಕೆ ನಿರ್ಧಾರದಲ್ಲಿ ಬದಲಾವಣೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ನೈಸರ್ಗಿಕ ಅನಿಲ ದರವನ್ನು ಎರಡು ಪಟ್ಟು ಹೆಚ್ಚಿಸಿರುವ ಸರ್ಕಾರದ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯಿಲಿ ಸ್ಪಷ್ಟಪಡಿಸಿದ್ದಾರೆ.ರಿಲಯನ್ಸ್ ಇಂಡಸ್ಟ್ರೀಸ್‌ಗೆ ಸಂಬಂಧಿಸಿದ ಕೆಲವು ಅನಿಲ ಉತ್ಪನ್ನಗಳ ದರವನ್ನಾದರೂ ಈ ಮೊದಲಿನ ಮಟ್ಟದಲ್ಲೇ ಉಳಿಸಿಕೊಳ್ಳಬೇಕು ಎಂಬ ಕೇಂದ್ರ ಹಣಕಾಸು ಸಚಿವಾಲಯದ ಒತ್ತಾಯವನ್ನೂ ಸಚಿವ ಮೊಯಿಲಿ ಪರಿಗಣಿಸಿಲ್ಲ.ನೈಸರ್ಗಿಕ ಅನಿಲ ದರ ದುಪ್ಪಟ್ಟು ಏರಿಕೆಗೆ ಸಂಬಂಧಿಸಿದಂತೆ `ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ'(ಸಿಸಿಇಎ) ತೆಗೆದುಕೊಂಡಿರುವ ನಿರ್ಧಾರ ಕುರಿತು ಸರ್ಕಾರ ಮತ್ತೆ ಆಲೋಚಿಸುವ, ಪರಾಮರ್ಶೆ ನಡೆಸುವ ಯಾವುದೇ ಸಾಧ್ಯತೆ ಇಲ್ಲ.

ಈ ವಿಚಾರದಲ್ಲಿ ಅಸ್ಪಷ್ಟತೆಯಾಗಲೀ, ಗೊಂದಲವಾಗಲೀ ಇಲ್ಲ. ನಮ್ಮ ನಿಲುವು ಬಹಳ ಸ್ಪಷ್ಟವಿದೆ. ಮತ್ತೆ ಈ ಕುರಿತು ವ್ಯಾಖ್ಯಾನಿಸುವ ಅಗತ್ಯವೂ ಇಲ್ಲ ಎಂದು ಸಚಿವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಕೇಂದ್ರ ಸರ್ಕಾರ ನೈಸರ್ಗಿಕ ಅನಿಲ ದರ ಏರಿಕೆ ವಿಚಾರವನ್ನು ಜೂನ್ 27ರಂದು ಪ್ರಕಟಿಸಿತು. ಇದು, ಮುಕೇಶ್ ಅಂಬಾನಿ ಒಡೆತನದ `ರಿಲಯನ್ಸ್ ಇಂಡಸ್ಟ್ರೀಸ್ ಲಿ.' ಕಂಪೆನಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ದರದಲ್ಲಿ ಭಾರಿ ಏರಿಕೆ ಮಾಡಲಾಗಿದೆ ಎಂಬ ವಿವಾದಕ್ಕೂ ಎಡೆ ಮಾಡಿಕೊಟ್ಟಿದೆ.ಈ ಕುರಿತು ಎರಡು ಪತ್ರಿಕೆಗಳಲ್ಲಿನ ಸಂಪಾದಕೀಯಗಳತ್ತ ಗಮನ ಸೆಳೆದಿದ್ದ ಕೇಂದ್ರ ಹಣಕಾಸು ಸಚಿವಾಲಯ, ಜುಲೈ 4ರಂದು ಪೆಟ್ರೋಲಿಯಂ ಸಚಿವಾಲಯಕ್ಕೆ ಪತ್ರವನ್ನೂ ಬರೆದಿತ್ತು. ಸಂಪಾದಕೀಯದಲ್ಲಿನ ಸಲಹೆಗಳನ್ನು ಪರಿಗಣಿಸಬಹುದಾಗಿದೆ ಎಂದೂ ಹೇಳಿತ್ತು.`ಹಣಕಾಸು ಸಚಿವಾಲಯ ತನ್ನ ಪತ್ರದೊಂದಿಗೆ ಎರಡು ಪತ್ರಿಕೆಗಳ ಸಂಪಾದಕೀಯಗಳನ್ನು ಲಗತ್ತಿಸಿದ್ದುದು ನಿಜ. ಆದರೆ,  ಅವನ್ನು ಹಣಕಾಸು ಸಚಿವಾಲಯದ ವಸ್ತುನಿಷ್ಟ ಅಭಿಪ್ರಾಯ ಎಂದೋ, ತಕರಾರು ಎಂದೋ ಪರಿಗಣಿಸಲು ಸಾಧ್ಯವಿಲ್ಲ' ಎಂದು ಮೊಯಿಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.