ಸೋಮವಾರ, ಆಗಸ್ಟ್ 3, 2020
27 °C

ದಲಿತರ ಜಾಗೃತ ಸಮಾವೇಶದಲ್ಲಿ ಜಯಣ್ಣ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಲಿತರ ಜಾಗೃತ ಸಮಾವೇಶದಲ್ಲಿ ಜಯಣ್ಣ ವಿಷಾದ

ಭದ್ರಾವತಿ: ಸ್ವಾತಂತ್ರ್ಯ ಬಂದು ಆರು ದಶಕ ಕಳೆದರೂ ಸಮಾನತೆ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಚಿತ್ರದುರ್ಗದ ಎಂ. ಜಯಣ್ಣ ವಿಷಾದ ವ್ಯಕ್ತಪಡಿಸಿದರು.



ಇಲ್ಲಿನ ವೀರಶೈವ ಸಭಾ ಭವನದಲ್ಲಿ ಮಂಗಳವಾರ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ದಲಿತರ ಜಾಗೃತ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ಸಂವಿಧಾನದಲ್ಲಿ ಈ ಕುರಿತು ಸ್ಪಷ್ಟ ನಿರ್ದೇಶನ ಇದ್ದರೂ ಸಹ ನಮ್ಮನ್ನಾಳುವ ಮಂದಿ ಇದನ್ನು ತರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ದೂರಿದ ಅವರು, ಇದಕ್ಕಾಗಿ ಅನೇಕ ಮಹಾನ್ ಸಮಾಜ ಸುಧಾರಕರು ನಿರಂತರ ಹೋರಾಟ ನಡೆಸಿದ್ದಾರೆ ಎಂದರು.



ಇಲ್ಲಿಯ ತನಕ ಈ ವಿಚಾರದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಹಲವರ ಕೊಡುಗೆ ಇದೆ. ಆದರೆ ಇವೆಲ್ಲವನ್ನು ನೆನೆಯುವ ನಾವು ಸಂವಿಧಾನದತ್ತವಾಗಿ ದೊರೆತ ಲಾಭವನ್ನು ಬಳಸಿಕೊಳ್ಳಲು ವಿಫಲರಾಗಿದ್ದೇವೆ. ಇದನ್ನು ಪಡೆಯಲು ಮುಂದಾಗಿ ಎಂದು ಕರೆ ನೀಡಿದರು.



ಅಂಬೇಡ್ಕರ್ ಶಕ್ತಿ: ದಲಿತ, ಹಿಂದುಳಿದ ಜನರ ಬದುಕಿಗೆ ಅಂಬೇಡ್ಕರ್ ಒಬ್ಬ ಮಹಾನ್ ಶಕ್ತಿಯಾಗಿದ್ಧಾರೆ. ಇವರ ಆದರ್ಶಯುತ ವಿಚಾರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.

ಪ್ರತಿ ಸಮಾಜ, ಸಮುದಾಯದಲ್ಲಿ ಭಿನ್ನಾಭಿಪ್ರಾಯ ಸಹಜ ಪ್ರಕ್ರಿಯೆ, ಇದನ್ನು ಬದಿಗಿಟ್ಟು ಒಗ್ಗಟ್ಟಾಗಿ ಒಂದು ತತ್ವ, ಆದರ್ಶ ಸಿದ್ಧಾಂತಕ್ಕೆ ಹೋರಾಟ ಮಾಡುವುದು ಪ್ರತಿ ವ್ಯಕ್ತಿಯ ಕರ್ತವ್ಯ ಇದನ್ನು ಬೆಳೆಸಿಕೊಳ್ಳಿ ಎಂದು ಮನವಿ ಮಾಡಿದರು.



ಭ್ರಷ್ಟ ಸರ್ಕಾರ: ರಾಜ್ಯದ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ವ್ಯವಸ್ಥೆಯನ್ನು ನಿರ್ಮಿಸಿರುವ ಸರ್ಕಾರ. ಇದರ ವಿರುದ್ಧ ದಲಿತ ಸಂಘರ್ಷ ಸಮಿತಿ ನಿರಂತರ ಹೋರಾಟ ನಡೆಸಿದೆ. ಮುಂದೂ ಸಹ ಪ್ರತಿಭಟನೆ ನಡೆಸಲಿದೆ ಎಂದು ರಾಜ್ಯ ಸಂಚಾಲಕ ಸತ್ಯ ಎಚ್ಚರಿಕೆ ನೀಡಿದರು.



ಹೋಮ, ಯಜ್ಞ, ಯಾಗಾದಿಗಳಿಂದ ಬಡವರ ಸಮಸ್ಯೆ ಬಗೆಹರಿಯುವುದಿಲ್ಲ ಎಂಬ ಸಾಮಾನ್ಯ ಜ್ಞಾನ ಅಧಿಕಾರ ಗದ್ದುಗೆ ಏರಿದ ಜನರು ಅರಿಯಬೇಕು. ಕೋಮುವಾದ ಪರಿಕಲ್ಪನೆ ಮೇಲೆ ಸರ್ಕಾರ ನಡೆಸಿದರೆ ಬಡವರ ಆಹಾರ ಪದ್ಧತಿ ಕಿತ್ತುಕೊಂಡಂತೆ. ಇದಕ್ಕೆ ನಮ್ಮ ವಿರೋಧವಿದೆ ಎಂದು ಮಾರ್ಮಿಕವಾಗಿ ನುಡಿದರು.



ಜಿಲ್ಲಾ ಸಂಘಟನಾ ಸಂಚಾಲಕ ಚಿನ್ನಯ್ಯ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಅಧ್ಯಕ್ಷ ಹಾಲಪ್ಪ, ವೇದಿಕೆಯಲ್ಲಿ ವಿವಿಧ ವಿಭಾಗದ ಮುಖಂಡರಾದ ರಾಜ್‌ಕುಮಾರ್, ಆಲೂರು ಲಿಂಗರಾಜ್, ರಾಜ್‌ಕುಮಾರ್ ಭಾರತಿ, ಪಳನಿರಾಜ್, ಸುರೇಶ್, ಪ್ರಕಾಶ್, ಯೋಗೇಶ್ವರನಾಯ್ಕ, ಈಶ್ವರಪ್ಪ, ಕಮಲಮ್ಮ, ಕೃಷ್ಣಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅದ್ದೂರಿ ಮೆರವಣಿಗೆ ನಡೆಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.