ಬುಧವಾರ, ಏಪ್ರಿಲ್ 14, 2021
23 °C

ದಲಿತ ಕಲಾವಿದ ಆತ್ಮಹತ್ಯೆ ಪ್ರಕರಣ:ತಪ್ಪಿತಸ್ಥರ ಬಂಧನಕ್ಕೆ ಅರೆ ಕಲಾವಿದರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಪಟೂರು: ದೌರ್ಜನ್ಯ, ಅವಮಾನಕ್ಕೆ ಹೆದರಿ ಅವಿತು ಕುಳಿತಲ್ಲೇ ಅತ್ಮಹತ್ಯೆ ಮಾಡಿಕೊಂಡ ತಾಲ್ಲೂಕಿನ ದಸರೀಘಟ್ಟದ ದಲಿತ ಕಲಾವಿದ ರವಿಕುಮಾರ್ ಸಾವಿಗೆ ಕಾರಣರಾದವರನ್ನು ತಕ್ಷಣ ಬಂಧಿಸಬೇಕು ಎಂದು ಅರೆ ಮತ್ತು ತಮಟೆ ಕಲಾವಿದರು ಒತ್ತಾಯಿಸಿದ್ದಾರೆ.ದೌರ್ಜನ್ಯಕ್ಕೆ ಹೆದರಿ ದಸರೀಘಟ್ಟ ವಾಸಿ ರವಿಕುಮಾರ್ (38) ಸೋಮವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಘಾಸಿಗೊಂಡ ಅರೆ ಮತ್ತು ತಮಟೆ ಕಲಾವಿದರು ಬುಧವಾರ ಮಧ್ಯಾಹ್ನ ನಗರದಲ್ಲಿ ಸಭೆ ಸೇರಿ ಘಟನೆ ಖಂಡಿಸಿದರು. ರವಿ ಸಾವಿಗೆ ಕಾರಣರಾದವರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು. ಪೊಲೀಸರು ಪ್ರಕರಣ ದುರ್ಬಲಗೊಳಿಸಲು ಯತ್ನಿಸಿದರೆ ಮತ್ತು ಆರೋಪಿಗಳನ್ನು ಬಂಧಿಸದಿದ್ದರೆ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.ಕಲಾವಿದ ಅರೆ ಬಸವಯ್ಯ ಮಾತನಾಡಿ, ಗ್ರಾಮ ದೇವತೆಗಳ ಯಾವುದೇ ಆಚರಣೆಗೆ ಅರೆ ವಾದ್ಯ ಅನಿವಾರ‌್ಯ. ಪಾರಂಪರಿಕ ಜನಪದ ಕಲೆಗಳಲ್ಲಿ ಒಂದಾದ ಅರೆ, ತಮಟೆ ವಾದ್ಯ ಕಲಾವಿದರು ಇಂದಿಗೂ ಶೋಷಣೆ, ಅಸ್ಪಶ್ಯತೆ, ದೌರ್ಜನ್ಯ ಎದುರಿಸುತ್ತಿದ್ದಾರೆ. ಈ ಕಲಾವಿದರ ಮೇಲೆ ದಬ್ಬಾಳಿಕೆ ಸಾಮಾನ್ಯವಾಗಿದೆ. ನುರಿತ ಅರೆ ಕಲಾವಿದರಾಗಿದ್ದ ರವಿಕುಮಾರ್ ಸಾವು ಸಮುದಾಯವನ್ನು ತಲ್ಲಣಗೊಳಿಸಿದೆ. ತಪ್ಪಿತಸ್ಥರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.ಈ ಸಂಬಂಧ ಹೋರಾಟ ರೂಪಿಸುವ ಸಲುವಾಗಿ ಜುಲೈ 14ರ ಬೆಳಗ್ಗೆ 11ಕ್ಕೆ ಪ್ರವಾಸಿ ಮಂದಿರ ಆವರಣದಲ್ಲಿ ತಾಲ್ಲೂಕಿನ ಅರೆ ವಾದ್ಯ ಕಲಾವಿದರನ್ನು ಸಂಘಟಿಸಲಾಗುತ್ತಿದೆ ಎಂದು ತಿಳಿಸಿದರು. ಛಲವಾದಿ ಮಹಾಸಭಾದ ಬಜಗೂರು ಮಂಜುನಾಥ್, ದಲಿತ ಮುಖಂಡ ರಂಗಸ್ವಾಮಿ, ಶ್ರೀನಿವಾಸ್ ಕ್ರಿಯಾಶೀಲ ಜಾತಿಗಳ ಒಕ್ಕೂಟದ ಅಧ್ಯಕ್ಷ ಸೂರ್ಯಪ್ರಕಾಶ್ ಕೋಲಿ, ಹಿರಿಯ ತಮಟೆ ಕಲಾವಿದ ತಮಟೆ ತಿಮ್ಮಯ್ಯ ಮತ್ತಿತರರು ಸಭೆಯಲ್ಲಿದ್ದರು.ಸೌದೆಗೆ ಪರದಾಟ: ರವಿಕುಮಾರ್ ಶವಸಂಸ್ಕಾರಕ್ಕೆ ಸೌದೆಗಾಗಿ ಪರದಾಡಬೇಕಾದ ವಾತಾವರಣ ಗ್ರಾಮದಲ್ಲಿ ಸೃಷ್ಟಿಯಾಗಿತ್ತು. ಕೆಲವರು ಈ ಗಂಭೀರ ಪ್ರಕರಣವನ್ನು ರಾಜಿ ಪಂಚಾಯಿತಿ ಮೂಲಕ ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ. ಕುಟುಂಬದವರಿಗೆ ಪರೋಕ್ಷ ಬೆದರಿಕೆ ಹಾಕಲಾಗಿದೆ ಎಂದು ಅರೆವಾದ್ಯ ಕಲಾವಿದರು ಆರೋಪಿಸಿದ್ದಾರೆ.ದಲಿತ ಆತ್ಮಹತ್ಯೆ: ಗಡಿಪಾರಿಗೆ ಆಗ್ರಹ

ತುಮಕೂರು: ರವಿಕುಮಾರ್ ಆತ್ಮಹತ್ಯೆಗೆ ಮೇಲ್ವರ್ಗದ ಕೆಲವರು ನೀಡಿದ ಹಿಂಸೆ ಕಾರಣವಾಗಿದ್ದು, ಹಿಂಸೆ ನೀಡಿದವರನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಬಿ.ಶಾಂತಾರಾಜು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.