ಭಾನುವಾರ, ಮೇ 9, 2021
27 °C

ದಲಿತ ಮಕ್ಕಳ ಶೈಕ್ಷಣಿಕ ಸವಾಲುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಲಿತ ಮಕ್ಕಳ ಶೈಕ್ಷಣಿಕ ಅವಕಾಶವನ್ನು ಸಮಾನತೆಯ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಬೇಕು. ಶತಮಾನಗಳಿಂದ ಶಿಕ್ಷಣದಿಂದ ವಂಚಿತರಾದ ತಳ ಸಮುದಾಯದವರ ಹಕ್ಕುಗಳನ್ನು ರಕ್ಷಿಸಲು, ಪ್ರೋತ್ಸಾಹಿಸಲು ಸಂವಿಧಾನದಲ್ಲಿ ಹಲವಾರು ಕಲಂಗಳನ್ನು ರೂಪಿಸಲಾಗಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಪರಿಚ್ಫೇದ 46 ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲಿತರ ಹಾಗೂ ಇತರ ಹಿಂದುಳಿದ ವರ್ಗದವರ ಶೈಕ್ಷಣಿಕ ಹಾಗೂ ಆರ್ಥಿಕ ಅಗತ್ಯಗಳನ್ನು ಪೂರೈಸಲು ನಿರ್ದೇಶಿಸಲಾಗಿದೆ. ಹೀಗೆ ರೂಪುಗೊಂಡ ಕಾನೂನುಗಳು ಹಾಗೂ ಶಿಕ್ಷಣದ ಅವಶ್ಯಕತೆಯನ್ನು ಎತ್ತಿಹಿಡಿದ ಅವಕಾಶಗಳು ಸ್ವಾತಂತ್ರ್ಯಾನಂತರದ ಭಾರತದ ತಳಸಮುದಾಯಗಳಲ್ಲಿ ಒಂದು ಬಗೆಯ ಆತ್ಮವಿಶ್ವಾಸವನ್ನೂ, ಆರ್ಥಿಕ ಚೇತರಿಕೆಯನ್ನೂ ತಂದುಕೊಟ್ಟಿವೆ.ದಲಿತ ಸಮುದಾಯಕ್ಕೆ ಶಿಕ್ಷಣವು, ಅವರು ಅದುವರೆಗೆ ಮಾಡಿಕೊಂಡು ಬಂದಿದ್ದ ಕುಲ ಕಸುಬುಗಳ ಕುರಿತು `ಜಾಗೃತಿ~ಯನ್ನು ಮೂಡಿಸುವುದರ ಜೊತೆಗೆ ಅವುಗಳ ಮಿತಿಯನ್ನೂ ಗೋಚರಿಸುವಂತೆ ಮಾಡಿತು. ಜೊತೆಗೆ ವೈವಿಧ್ಯಮಯವಾದ, ಆರ್ಥಿಕ ಸ್ವಾವಲಂಬನೆಯನ್ನು ನೀಡುವ ಇನ್ನಿತರ ಕೆಲಸಗಳ ಕುರಿತು ಕೌಶಲ್ಯ ವೃದ್ಧಿಸಿಕೊಳ್ಳಲು ಅವಕಾಶಗಳ ಬಾಗಿಲನ್ನೂ ತೆರೆಯಿತು. ಇದು ಅವರಿಗೆ ಸಾಮಾಜಿಕ ಸ್ಥಾನವನ್ನು ಕಲ್ಪಿಸಿತು. ಈ ವಿಸ್ತಾರವಾದ ಸಾಂಸ್ಕೃತಿಕ ವಾಸ್ತವದ ನೆಲೆಯಲ್ಲಿ ಶಿಕ್ಷಣವು ದಲಿತರ ಜೀವನದಲ್ಲಿ ತರುವ ಮೂಲಭೂತ ಬದಲಾವಣೆಗಳ ಜೊತೆಗೆ, ದಲಿತ ಮಕ್ಕಳ ಶಾಲಾ ಭಾಗವಹಿಸುವಿಕೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.ತಳಸಮುದಾಯದ ಮಕ್ಕಳ ಶಾಲಾ ಭಾಗವಹಿಸುವಿಕೆಯ ಪ್ರಮಾಣ, ದಲಿತೇತರ ಮಕ್ಕಳಿಗೆ ಹೋಲಿಸಿದರೆ ಕಡಿಮೆ. ಶಾಲಾ ಹಾಜರಾತಿಯನ್ನು ನೋಡಿದರೆ, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಶೇ 90 ರಷ್ಟು ದಲಿತರಲ್ಲಿ ಶೇ 64.30 ರಷ್ಟು ಮಕ್ಕಳು ಸರ್ಕಾರಿ ಶಾಲೆಗಳಲ್ಲಿದ್ದಾರೆ. ಹಾಗೆಯೇ ಇತರ ಬುಡಕಟ್ಟೇತರ ಮಕ್ಕಳು ಶೇ 74.90ರಷ್ಟು ಇದ್ದರೂ ಪಟ್ಟಣ ಪ್ರದೇಶಗಳಲ್ಲಿ ದಲಿತ ಮಕ್ಕಳ ಹಾಜರಾತಿ ಶೇ 77.50ರಷ್ಟು ಹೆಚ್ಚಿದೆ. ಇದು ಇತರ ಜಾತಿಗಳಿಗೆ ಹೋಲಿಸಿದರೆ ಶೇ 10 ರಷ್ಟು ಕಡಿಮೆ. ದಲಿತರಲ್ಲಿ ಹೆಣ್ಣು ಮಕ್ಕಳ ಹಾಜರಾತಿ ಸಂಖ್ಯೆ ಗಂಡುಮಕ್ಕಳ ಪ್ರಮಾಣಕ್ಕಿಂತ ಬಹಳ ಕಡಿಮೆ. ಕರ್ನಾಟಕದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ 2005-06ರಲ್ಲಿ  ಮಕ್ಕಳ ಗಣತಿಯನ್ನು ನಡೆಸಿತು. ಅದರ ಪ್ರಕಾರ 6-14 ವರ್ಷಗಳ ವಯೋಗುಂಪಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಪ್ರಮಾಣ ಪರಿಶಿಷ್ಟ ಪಂಗಡದಲ್ಲಿ ಅತ್ಯಧಿಕವಾಗಿದ್ದರೆ (ಶೇಕಡ 2.42), ಪರಿಶಿಷ್ಟ ಜಾತಿಗಳಲ್ಲಿ ಸ್ವಲ್ಪ ಕಡಿಮೆ (ಶೇಕಡ 2.22) ಇದೆ. ಈ ಎರಡು ಸಾಮಾಜಿಕ ಗುಂಪುಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳಲ್ಲಿ ಹೆಣ್ಣುಮಕ್ಕಳ ಪ್ರಮಾಣ ಅಧಿಕ. ಈ ಅಂಕಿ ಅಂಶಗಳು ಒಂದು ರೀತಿಯ ಅಂತರವನ್ನು ಸೂಚಿಸಿದರೂ ಸಾಮಾಜಿಕ ವಾಸ್ತವಗಳನ್ನು ಕಟ್ಟಿಕೊಡುವುದಿಲ್ಲ.ತಳಸಮುದಾಯದ ಮಕ್ಕಳು ಮಧ್ಯದಲ್ಲಿ  ಶಾಲೆ ಬಿಡುವುದಕ್ಕೆ ಅವರು ಅನುಭವಿಸುತ್ತಿರುವ ಸಾಮಾಜಿಕ ಅಸಮಾನತೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ನಮ್ಮ ಸಮೀಕ್ಷೆಯ ಪ್ರಕಾರ, ನಡುವೆ ಶಾಲೆ ಬಿಟ್ಟ ಮಕ್ಕಳಲ್ಲಿ ಶೇ 36 ರಷ್ಟು ಮಕ್ಕಳ ಪೋಷಕರು ಸರ್ಕಾರಿ ಶಾಲೆಯಲ್ಲಿನ  ಶಿಕ್ಷಣದಲ್ಲೂ ಹೊತ್ತುಕೊಳ್ಳಬೇಕಾದ ಖಾಸಗಿ ವೆಚ್ಚವನ್ನು ಭರಿಸಲಾಗದೇ ಶಾಲೆ ಬಿಡಿಸಿರುತ್ತಾರೆ. ಹಾಗೆಯೇ, ಶೇ 32ರಷ್ಟು ಮಕ್ಕಳು ಪೋಷಕರಿಗೆ ಮನೆ ಕೆಲಸಗಳಲ್ಲಿ ನೆರವಾಗಲು ಶಾಲೆ ಬಿಟ್ಟವರಾಗಿದ್ದಾರೆ. ಪರಿಶಿಷ್ಟ ಜಾತಿಗಳಲ್ಲಿ ಶಾಲೆ ಬಿಟ್ಟ ಒಟ್ಟು ಮಕ್ಕಳಲ್ಲಿ ಶೇ 26ರಷ್ಟು ಮಕ್ಕಳು `ಶಾಲೆ ಸಂತಸದಾಯಕವಾಗಿಲ್ಲ, ಆಕರ್ಷಣೀಯವಾಗಿಲ್ಲ~ ಎಂಬ ಕಾರಣ ನೀಡಿದ್ದಾರೆ. ಇದು ಮೇಲುನೋಟಕ್ಕೆ ಕಾಣುವ ಕಾರಣವಲ್ಲ. ನಮ್ಮ ಗುಣಾತ್ಮಕ ಶಿಕ್ಷಣದ ಚಟುವಟಿಕೆಗಳು ದಲಿತ ಮಕ್ಕಳನ್ನು ಒಳಮಾಡಿಕೊಳ್ಳುವಂತೆ ರೂಪುಗೊಳ್ಳಬೇಕಾಗಿರುವುದನ್ನು ಸೂಚಿಸುತ್ತದೆ.ನಮ್ಮ ಸರ್ಕಾರ ಮಕ್ಕಳ ಸಂಖ್ಯೆಯ ಕಾರಣ ನೀಡಿ, ಹತ್ತು ಮಕ್ಕಳಿಗಿಂತ ಕಡಿಮೆ ಇರುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಕ್ರಿಯೆಗೆ ವೇಗದ ಚಾಲನೆ ನೀಡಿದೆ. ಈ ಪ್ರಕ್ರಿಯೆಯನ್ನು ಆರ್ಥಿಕ ದೃಷ್ಟಿಯಿಂದ ಸರಿ ತಪ್ಪು ಎಂದು ಚರ್ಚೆ ಮಾಡುವುದಕ್ಕಿಂತಲೂ ಸಾಮಾಜಿಕವಾಗಿ ಜನರ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯದ ದೃಷ್ಟಿಯಿಂದ ನೋಡುವುದು ಬಹಳ ಮುಖ್ಯ. ಅಮರ್ತ್ಯಸೇನ್ `ಶಿಕ್ಷಣವೇ ಅಭಿವೃದ್ಧಿ~ ಎಂದಿದ್ದಾರೆ. ಅವರ ಪ್ರಕಾರ ಶಿಕ್ಷಣ ಇಲ್ಲದಿರುವುದು ಯಾವುದನ್ನೂ `ಪಡೆದುಕೊಳ್ಳಲು ಶಕ್ತಿ ಇಲ್ಲದಿರುವ~ ದುಸ್ಥಿತಿಯ ಸೂಚಕ. ಅಕ್ಷರಜ್ಞಾನ ಇಲ್ಲದಿರುವ ಸ್ಥಿತಿಯೇ ಬಡತನ. ಶಿಕ್ಷಣ ಜನರಿಗೆ ಸ್ವಾತಂತ್ರ್ಯವನ್ನು, ಬದುಕುವ ಅವಕಾಶಗಳನ್ನು ವೃದ್ಧಿಸುವ ಗುಣವೆಂದು ವಾದಿಸುತ್ತಾರೆ.

ಇದನ್ನು ಮೊದಲೇ ತಿಳಿದಿದ್ದ ಡಾ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಶಾಲಾ ಶಿಕ್ಷಣದ ಅಭಿವೃದ್ಧಿಗೆ ಕಾಲಮಿತಿಯನ್ನು ನಿಗದಿಪಡಿಸಿದ್ದರು. ಮಾತ್ರವಲ್ಲ, ಉಚಿತ ಮತ್ತು ಕಡ್ಡಾಯ ಶಾಲಾ ಶಿಕ್ಷಣವನ್ನು ಸಾರ್ವತ್ರಿಕವಾಗಿ ಅಭಿವೃದ್ಧಿ ಪಡಿಸಲು ಹೆಚ್ಚಿನ ಆದ್ಯತೆ ನೀಡಲು ಒತ್ತಾಯಿಸಿದ್ದರು. ಆದರೆ ಇಂದಿಗೂ ಗ್ರಾಮೀಣ ಹಾಗೂ ದಲಿತ ಮಕ್ಕಳ, ಅದರಲ್ಲೂ, ಮುಖ್ಯವಾಗಿ ಹೆಣ್ಣುಮಕ್ಕಳ ಶಿಕ್ಷಣ ಇನ್ನೂ ಶೋಚನೀಯ ಸ್ಥಿತಿಯಲ್ಲೇ ಇದೆ. ಹಾಗಾಗಿಯೇ ಸರ್ಕಾರಿ ಶಾಲೆ ಮುಚ್ಚುವ ಪ್ರಕ್ರಿಯೆ ನಮ್ಮ ಸಂವಿಧಾನದ ಆಶಯಕ್ಕೆ ವಿರುದ್ಧವಾದುದು.

 

ಇದನ್ನು ಕೇವಲ ಆರ್ಥಿಕ ದೃಷ್ಟಿಯಿಂದ ಮಾತ್ರ ನೋಡದೇ ಶತಮಾನಗಳಿಂದ ಅಸಮಾನತೆಯನ್ನು ಅನುಭವಿಸುತ್ತಾ, ಸಾಮಾಜಿಕವಾಗಿ ವಂಚಿತರಾದ ತಳಸಮುದಾಯಗಳ ಮಕ್ಕಳ ಶಿಕ್ಷಣ ಹಾಗೂ ಅವರನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಒಳಮಾಡಿಕೊಳ್ಳುವ ದೃಷ್ಟಿಯಿಂದ ನೋಡಬೇಕು.ಇಂದು ಸರ್ಕಾರಿ ಶಾಲೆಗಳಲ್ಲಿ ಶೇ 90 ರಷ್ಟು ದಲಿತರ ಮತ್ತು ಬಡವರ ಮಕ್ಕಳಿದ್ದಾರೆ. ಸಂಖ್ಯೆಯ ನೆಪ ಹೇಳಿ ಸರ್ಕಾರಿ ಶಾಲೆಗಳನ್ನು ಮುಚ್ಚಿದರೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪ್ರಬಲವಾದವರಿಗೆ ತೊಂದರೆ ಇಲ್ಲ. ಅವರಿಗೆ ಖಾಸಗಿ ಶಾಲೆಗಳನ್ನು ಸರ್ಕಾರವೇ ಖುದ್ದಾಗಿ ರೂಪಿಸುತ್ತಿದೆ! ಸರ್ಕಾರಿ ಶಾಲೆಗಳನ್ನು ಏಕಾಏಕಿ ಮುಚ್ಚಿದರೆ, ಇಂತಹ ಶಾಲೆಗೆ ಹೋಗಲು ಶಕ್ತರಲ್ಲದ ದಲಿತ ಮಕ್ಕಳಿಗೆ ದುಡಿಯುವುದೊಂದೇ ಉಳಿಯುವ ಮಾರ್ಗ. ಯಾಕೆಂದರೆ ಕುಟುಂಬದ ಹಸಿವನ್ನು ನೀಗಿಸಲು ಬಹುತೇಕ ಬಡಕುಟುಂಬಗಳು ಮಕ್ಕಳ ದುಡಿಮೆಯನ್ನು ಆಶ್ರಯಿಸಿರುವುದು ವಾಸ್ತವ. ಈ ಮಾರುಕಟ್ಟೆ ಜಗತ್ತಿನಲ್ಲಿ ಪ್ರತಿ ದುಡಿಮೆಗೂ ಕುಶಲತೆ, ಕನಿಷ್ಠ ಮಟ್ಟದ ಶಿಕ್ಷಣ ಅತ್ಯಗತ್ಯ. ಅವು ಇಲ್ಲದೇ ಇರುವ ದುಡಿಮೆಯೆಂದರೆ ಶೋಷಣೆ, ದೌರ್ಜನ್ಯದೊಂದಿಗೆ ಅಪಾಯಗಳ ಜೊತೆ ಸೆಣಸಾಟ ಎಂದೇ ಅರ್ಥ.ಜೊತೆಗೆ ಗಂಡು ಮತ್ತು ಹೆಣ್ಣು ಮಕ್ಕಳ ದುಡಿಮೆಯ ಪರಿಸರ ಮತ್ತು ಪರಿಸ್ಥಿತಿ ಬೇರೆ ಬೇರೆಯೇ ಆಗಿರುವುದರಿಂದ, ಇವರ ದುಡಿಮೆಯನ್ನು ವಿಭಿನ್ನ ನೆಲೆಗಳಲ್ಲಿ ನೋಡಬೇಕಿದೆ. ಶಾಲೆ ಮುಚ್ಚಿದ ನಂತರ, ಶಿಕ್ಷಣವಿಲ್ಲದೆ ದುಡಿಮೆ ಅರಸಿ ಹೋಗುವ ಅನಕ್ಷರಸ್ಥ-ಶ್ರಮಿಕ ದಲಿತ ಹೆಣ್ಣು ಮಕ್ಕಳ ಸ್ಥಿತಿ ದಿನದಿಂದ ದಿನಕ್ಕೆ ಸಂಕೀರ್ಣವಾಗುತ್ತಿದೆ. ಇತ್ತ ಸ್ವಾತಂತ್ರ್ಯವೂ ಇಲ್ಲದೆ, ತನ್ನ ದೇಹದ ಮೇಲೆ ಅಧಿಕಾರವೂ ಇಲ್ಲದೆ ಅಡ್ಡದಾರಿಗಳನ್ನು ಹಿಡಿಯಬೇಕಾದ, ಅನ್ಯರ ಬದುಕಿಗಾಗಿ ತ್ಯಾಗ ಮಾಡುವ ಶ್ರಮಜೀವಿಯಾಗಷ್ಟೆ ಇರಬೇಕಾಗುತ್ತದೆ. ಜೊತೆಗೆ ತನ್ನ ಅಸಹಾಯಕತೆಯಿಂದಾಗಿ ಮಾರಣಾಂತಿಕ ರೋಗಗಳಿಗೆ ಬಲಿಯಾಗುವಂತೆ ಮಾಡಿದೆ.ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವುದರಿಂದ ಹೆಣ್ಣು ಮಕ್ಕಳ ಸಂವಿಧಾನಬದ್ಧ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ. ಮೇಲ್ನೋಟಕ್ಕೆ ಶಾಲೆಗಳನ್ನು ಮುಚ್ಚುವುದು ಆರ್ಥಿಕ ನೆಪ. ಆದರೆ ಅಸಮಾನತೆಯನ್ನು ಅನೂಚಾನವಾಗಿ ಮುಂದುವರೆಸುವ ನೆಪಗಳು ಖಾಸಗೀಕರಣ-ನವ ಉದಾರವಾದ-ನವ ಮೂಲಭೂತವಾದದ ರೂಪದಲ್ಲಿ ಬಡವರ-ದಲಿತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯನ್ನು ಹೊಸಕಿ ಹಾಕಲು ಪ್ರಯತ್ನಿಸುತ್ತಿವೆ.ನವ ಉದಾರವಾದಿ ರೂಪದ ಶಿಕ್ಷಣ ನೀತಿಗಳು ಗುಣಮಟ್ಟದ ಕಲಿಕೆಯ ನೆಪ ಹೇಳಿ ಉಚಿತ ಕಡ್ಡಾಯ ಶಿಕ್ಷಣ ನೀತಿಯ ವೈಫಲ್ಯವನ್ನು ಎತ್ತಿ ತೋರಿಸುತ್ತಿವೆ. ಈ ಮೂಲಕ ಪ್ರಾಥಮಿಕ ಹಂತದಲ್ಲಿಯೂ ಖಾಸಗಿ ಶಿಕ್ಷಣ ದೃಢವಾಗಿ ವ್ಯಾಪಿಸುವಂತೆ ಮಾಡುತ್ತಿದೆ. ವಿಶೇಷವಾಗಿ ಬಡಕುಟುಂಬಗಳು, ನಿರ್ದಿಷ್ಟವಾಗಿ ದಲಿತ ಕುಟುಂಬಗಳು ತಮ್ಮ ಮಕ್ಕಳಿಗೆ ಉತ್ತಮ ಕಲಿಕೆಯ ಶಿಕ್ಷಣ ನೀಡಲು ತವಕಿಸುತ್ತಿವೆ. ಅದಕ್ಕಾಗಿ ಅವು ಖಾಸಗಿ ಶಾಲೆಗಳೆಡೆ ಮುಖ ಮಾಡುತ್ತಿರುವ ಲಕ್ಷಣಗಳು ಕಾಣುತ್ತಿವೆ. ಏಕೆಂದರೆ ಸಾರ್ವಜನಿಕವಾಗಿ ನೀಡುವ ಶಿಕ್ಷಣವು ತನ್ನ ಗುರಿ ಸಾಧಿಸುವಲ್ಲಿ ವಿಫಲವಾಗಿದೆ. ಇದಕ್ಕೆ ಪರಿಹಾರ `ಖಾಸಗಿರಂಗ~ ಎಂಬ ಅಭಿಪ್ರಾಯಗಳನ್ನು ರೂಪಿಸುತ್ತಿರುವ ರಾಜಕೀಯ ಆರ್ಥಿಕತೆ. ಇದು ನಮ್ಮ ಸಮಾಜ ಮತ್ತು ಶೈಕ್ಷಣಿಕ ವ್ಯವಸ್ಥೆಯ ಅಪಾಯಕಾರಿ ಹೆಜ್ಜೆಗಳ ಮುನ್ಸೂಚನೆ. ಇದಕ್ಕೆ ಮೊದಲು ಬಲಿಯಾಗುವವರು ತಳಸಮುದಾಯದ ಮಕ್ಕಳು ಎನ್ನುವುದರಲ್ಲಿ ಅನುಮಾನ ಬೇಡ.    

ಈ  ಸವಾಲುಗಳ ನಡುವೆ ಇಪ್ಪತ್ತನೇ ಶತಮಾನದ ಕೊನೆ ಭಾಗದಿಂದ ಸಂವಿಧಾನಿಕವಾಗಿ 6-14 ವರ್ಷದ ಎಲ್ಲಾ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣ ಒದಗಿಸುವ ಉದ್ದೇಶಗಳು ಬೇರೆ ಬೇರೆ ರೂಪದಲ್ಲಿ ಜಾರಿಗೆ ಬರುತ್ತಿವೆ. ಇವು ಸಮಾನತೆಯ ನೆಪವನ್ನು ಮಾತ್ರ ಹೇಳಿವೆ.ಆದರೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ತಂದಿದ್ದು ನಮ್ಮ ಸಂವಿಧಾನ ಆಶಯಗಳಿಗೆ ವಿರುದ್ಧವಾದ ಆಶಯಗಳನ್ನು. ಶಾಲೆಗೆ ಸೇರದೇ ಶಿಕ್ಷಣದಿಂದ ಹೊರಗೇ ಉಳಿದಿರುವ ಲಕ್ಷಾಂತರ ಮಕ್ಕಳ ಸ್ಥಿತಿ ಒಂದು ರೀತಿ ಶೋಚನೀಯವಾದರೆ, ಶಾಲೆಗೆ ಸೇರಿರುವ ಮಕ್ಕಳ ನಡುವೆಯೇ ಕಲಿಕೆಯ ಹೆಸರಿನಲ್ಲಿ, ಭಾಷೆಯ ಹೆಸರಿನಲ್ಲಿ, ಪಠ್ಯಕ್ರಮದ ಹೆಸರಿನಲ್ಲಿ, ಶಾಲೆಯ ವಿಧಾನದ ಹೆಸರಿನಲ್ಲಿ, ಬೋಧನೆಯ ವಿಧಾನದ ಹೆಸರಿನಲ್ಲಿ ಅಸಮಾನತೆಗಳನ್ನು ಹೆಚ್ಚಿಸುವ ಪ್ರಕ್ರಿಯೆಗಳು ಭರದಿಂದ ನಡೆಯುತ್ತಿದೆ. ಇದರಿಂದ ತಳಸಮುದಾಯದ ಮಕ್ಕಳ ಶಿಕ್ಷಣ ಮತ್ತು ತನ್ಮೂಲಕ ಒಟ್ಟು ಅವರ ಸಾಮಾಜಿಕ, ಆರ್ಥಿಕ, ರಾಜಕೀಯ ಬೆಳವಣಿಗೆಯ ಮೇಲೆ ಗಂಭೀರ ಸ್ವರೂಪದ ಪರಿಣಾಮಗಳು ಉಂಟಾಗುತ್ತವೆ. ಈ ಕುರಿತು ಹೆಚ್ಚಿನ ಚರ್ಚೆಗಳು, ಅಧ್ಯಯನಗಳು ಸಮಾನ ಅವಕಾಶ ಮತ್ತು ಸಮಾನತೆಯ ನೆಲೆಯಲ್ಲಿ ನಡೆಯಬೇಕಾಗಿದೆ. ಆ ಮೂಲಕ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆ ರೂಪಿಸಲು ಪ್ರಯತ್ನಿಸಬೇಕಾಗಿದೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.