`ದಲಿತ ಮಹಿಳೆ~ ಎನ್ನುವ ವಿಭಿನ್ನ ಸಾಮಾಜಿಕ ಘಟಕವಿದೆಯೇ ಎನ್ನುವುದೇ ಒಂದು ಮುಖ್ಯ ಪ್ರಶ್ನೆ. ಮಹಿಳೆಯರು ಯಾವುದೇ ಜಾತಿಯವರಾದರೂ, ದ್ವಿತೀಯ ದರ್ಜೆಯ ಪ್ರಜೆಗಳೇ ಆಗಿರುವುದರಿಂದ, `ದಲಿತ ಮಹಿಳೆ~ ಎನ್ನುವ ಇನ್ನೊಂದು ಪ್ರತ್ಯೇಕತೆಯ ಅಗತ್ಯವಿಲ್ಲ ಎನ್ನುವುದು ಬಹಳಷ್ಟು ಸ್ತ್ರೀ ವಾದಿ ಚಿಂತಕಿಯರ ಅಭಿಪ್ರಾಯ. ಆದರೆ ದಲಿತರ ಬದುಕಿನ ಸಾಮಾಜಿಕ- ಆರ್ಥಿಕ ವಿನ್ಯಾಸಗಳು ಹಾಗೂ ಅದನ್ನು ಹಾಗೆಯೇ ಉಳಿಸುವಲ್ಲಿ ಸದಾ ಜಾಗೃತವಾಗಿರುವ ರಾಜಕೀಯ ಹುನ್ನಾರಗಳಿಂದಾಗಿ `ದಲಿತ ಮಹಿಳೆ~ಯರ ಬದುಕು ನಿಸ್ಸಂದೇಹವಾಗಿ, ಬೇರೆಲ್ಲಾ ಸ್ತರದ, ಜಾತಿಯ, ಧರ್ಮದ ಮಹಿಳೆಯರ ಬದುಕಿಗಿಂತ ವಿಭಿನ್ನವಾಗುತ್ತದೆ. ಈ ಕಾರಣಕ್ಕಾಗಿ ದಲಿತ ಮಹಿಳೆಯರ ಬದುಕಿಗೆ ಸಾಮಾನ್ಯವಾಗಿ ಅನ್ವಯಿಸಬಹುದಾದ ಸರಳ ಗ್ರಹೀತಗಳನ್ನು ಅನ್ವಯಿಸಲಾಗುವುದಿಲ್ಲ. ಹಾಗೆಯೇ, `ದಲಿತ ಮಹಿಳೆ~ಯರನ್ನು ಒಂದು ಏಕರೂಪಿ ವಿನ್ಯಾಸದಲ್ಲಿಟ್ಟು ನೋಡಲು ಕೂಡ ಸಾಧ್ಯವಿಲ್ಲ. ದಲಿತ ಮಹಿಳೆಯರನ್ನು ಇಂದು ಎಲ್ಲಾ ಕ್ಷೇತ್ರಗಳಲ್ಲಿ ನೋಡಬಹುದು. ಆದರೆ, ಈ ಸಂಖ್ಯೆ ಇತರ ಜಾತಿಯ ಮಹಿಳೆಯರ ಸಂಖ್ಯೆಗೆ ಹೋಲಿಸಿದರೆ ತುಂಬಾ ಕಡಿಮೆ.

19ನೇ ಶತಮಾನದಲ್ಲಿ ಉಂಟಾದ ಭಾರತೀಯ ಪುನರುಜ್ಜೀವನದ ತಾತ್ವಿಕತೆಯ ಕಾರಣದಿಂದ ಇಲ್ಲಿನ ಉದಾರವಾದಿ ಧೋರಣೆಗಳು ರೂಪಿಸಿದ ಬಾಲ್ಯವಿವಾಹ ನಿಷೇಧ, ವಿಧವಾ ಪುನರ್ವಿವಾಹ, ಹೆಣ್ಣುಮಕ್ಕಳಿಗೆ ಶಿಕ್ಷಣದಂಥ ಸಾಮಾಜಿಕ ಪುನರುತ್ಥಾನದ ಕಾರ್ಯಕ್ರಮಗಳು ತಳಸ್ತರದ ಮಹಿಳೆಯರನ್ನು ಒಳಗೊಳ್ಳಲೇ ಇಲ್ಲ. ನಂತರ, ಆಧುನಿಕತೆಯ ಸವಲತ್ತು, ಸೌಲಭ್ಯಗಳು ಕೂಡ ಮೊದಲು ತಲುಪಿದ್ದು ದೇಶದ ಮೇಲುಜಾತಿಗಳಿಗೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅಂಬೇಡ್ಕರ್ರ ಹೋರಾಟದ ಫಲಿತಗಳು, ತಳಸ್ತರದ ವಿಮೋಚನೆಗಾಗಿ ಅವರು ಕಟ್ಟಿಕೊಟ್ಟ ತತ್ವ, ಸಂವಿಧಾನ ನೀಡಿದ ಸಾಮಾಜಿಕ ನ್ಯಾಯದ ಸೌಲಭ್ಯ ತಳಸ್ತರಗಳಿಗೆ, ಅದೂ ಆಂಶಿಕವಾಗಿ ದಕ್ಕಲಾರಂಭಿಸಿದ್ದು ಕೆಲವು ದಶಕಗಳಿಂದೀಚೆಗೆ ಮಾತ್ರ. ಇಲ್ಲಿಯೂ, ಮೊದಲು ಈ ಸವಲತ್ತು ಸಿಕ್ಕಿದ್ದು ಪುರುಷರಿಗೆ. ಆದ್ದರಿಂದ ದಲಿತ ಹೆಣ್ಣುಮಕ್ಕಳು ತೀರಾ ಇತ್ತೀಚೆಗಷೇ ಸಾರ್ವಜನಿಕ ವಲಯಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಹೀಗೆ ಕಾಣಿಸಿಕೊಳ್ಳುತ್ತಿರುವ ಯಾವುದೋ ಒಂದು ವರ್ಗದ ದಲಿತ ಹೆಣ್ಣುಮಕ್ಕಳ ಕಥನಗಳೇ ಅಂತಿಮ ವಾಸ್ತವವಲ್ಲ. ಇವರ ಬದುಕಿಗೆ ಸಂಬಂಧಿಸಿದ ಅನೇಕ ನಿಷ್ಠುರ ವಾಸ್ತವಗಳಿವೆ. ಅವುಗಳನ್ನು ಅರ್ಥಮಾಡಿಕೊಂಡಾಗ ಈ ಹೆಣ್ಣು ಮಕ್ಕಳ ಬದುಕನ್ನು ಏಕೆ ವಿಭಿನ್ನವಾಗಿ ನೋಡಬೇಕೆಂಬ ಅಂಶ ಸ್ಪಷ್ಟವಾಗುತ್ತದೆ.

2001ರ ಜನಗಣತಿಯ ಪ್ರಕಾರ, ಒಟ್ಟು 20 ಕೋಟಿ ದಲಿತರಲ್ಲಿ ಶೇ 49.96ರಷ್ಟು ದಲಿತ ಮಹಿಳೆಯರಿದ್ದಾರೆ. ಇದು ಇಡೀ ಭಾರತದ ಮಹಿಳಾ ಜನಸಂಖ್ಯೆಯಲ್ಲಿ ಶೇ16.3ರಷ್ಟಾಗುತ್ತದೆ. ಇವರಲ್ಲಿ ಶೇ 4 ರಷ್ಟು ಜನರು ಕುಗ್ರಾಮಗಳಲ್ಲಿ ವಾಸಿಸುತ್ತಾರೆ. ಈ ಹೆಣ್ಣು ಮಕ್ಕಳು ಅವರ ಸಾಂಪ್ರದಾಯಿಕ ವೃತ್ತಿಗಳಾದ ಕಸಗುಡಿಸುವ, ಮಲಹೊರುವ, ಚಪ್ಪಲಿ ಹೊಲೆಯುವ, ದೇವದಾಸಿ, ಕೂಲಿಯಾಳು ಅಥವಾ ಜೀತದಾಳುಗಳಾಗಿ ದುಡಿಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಮನೆ ಕಟ್ಟುವ ಕೆಲಸಗಳಲ್ಲಿ, ಗಣಿಗಳಲ್ಲಿ ಮತ್ತು ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪಾರಂಪರಿಕ ವೃತ್ತಿಗಳು ಹೊಸ ರೂಪದಲ್ಲಿ ಕಾಣಿಸಿಕೊಂಡಾಗಲೂ (ಉದಾ: ನಿರ್ಮಲ್ ಶೌಚಾಲಯವನ್ನು ಸ್ವಚ್ಛ ಮಾಡುವ ಕೆಲಸ) ಆ ಕೆಲಸವನ್ನು ಆಯಾ ವೃತ್ತಿಯವರು ಬಿಟ್ಟರೆ ಬೇರೆ ಯಾರೂ ಅದನ್ನು ಮಾಡುವುದಕ್ಕೆ ಒಪ್ಪುವುದಿಲ್ಲ.

ಇಲ್ಲಿ ಮೇಲ್ನೋಟಕ್ಕೆ ಸ್ಪಷ್ಟವಾಗುವ ಸಂಗತಿ ಏನೆಂದರೆ, ಇವು ತೀರಾ ನಿಕೃಷ್ಟ ಎಂದು ಭಾವಿಸಲಾಗಿರುವ ಮತ್ತು ಯಾರು ಬೇಕಾದರೂ ಇವರ ಮೇಲೆ ಅಧಿಕಾರ ಸಾಧಿಸಲು ಸಾಧ್ಯವಾಗುವಂಥ ವೃತ್ತಿಗಳು. ಆದ್ದರಿಂದ ಇವರು ಕೆಲಸ ಮಾಡುವ ಕಡೆಯಲ್ಲಿ ಇವರ ಮೇಲೆ ಅತ್ಯಾಚಾರ, ದೌರ್ಜನ್ಯ, ದೈಹಿಕ ಹಾಗೂ ಮಾನಸಿಕ ಹಿಂಸೆ ತುಂಬಾ ಸುಲಭಸಾಧ್ಯವಾಗಿ ಬಿಡುತ್ತವೆ. ಇವೆಲ್ಲಾ ಅಸಂಘಟಿತ ಕ್ಷೇತ್ರಗಳು; ಆದ್ದರಿಂದ ಇವರ ಕೆಲಸದ ವೇತನಕ್ಕೆ ಯಾವ ರಕ್ಷಣೆಯೂ ಇರುವುದಿಲ್ಲ. ಕೆಲಸ ಇಲ್ಲದೆ ಹೋದರೆ, ದೈನಂದಿನ ಬದುಕನ್ನು ನಿರ್ವಹಿಸುವುದೂ ಕಷ್ಟವಾಗಿರುವುದರಿಂದ ತಮ್ಮ ಮೇಲಾಗುವ ಯಾವುದೇ ದೌರ್ಜನ್ಯವನ್ನೂ ಇವರು ಪ್ರತಿಭಟಿಸಲು ಸಾಧ್ಯವಾಗುವುದಿಲ್ಲ. ಹಾಗೆ ಪ್ರತಿಭಟಿಸಿದಾಗಲೂ ಇತರ ಜಾತಿ, ಸರ್ಕಾರದ ಸಂಸ್ಥೆಗಳು ಮತ್ತು ಪಿತೃಪ್ರಧಾನ ಮೌಲ್ಯಗಳು ಬಹಳ ಸುಲಭವಾಗಿ ದಲಿತ ಹೆಣ್ಣು ಮಕ್ಕಳ ದನಿಯನ್ನು ಇಲ್ಲವಾಗಿಸಿ ಬಿಡುತ್ತವೆ. ಈ ಅಸಂಘಟಿತ ಕ್ಷೇತ್ರಗಳಲ್ಲಿ ದುಡಿಯುವ ಹೆಣ್ಣುಮಕ್ಕಳಿಗೆ ಬೆಂಬಲವನ್ನು ನೀಡುವ ವ್ಯವಸ್ಥೆಗಳು ಅಲ್ಲಲ್ಲಿ ರೂಪುಗೊಂಡಿದ್ದರೂ, ಅವು ಸಫ
ಲವಾಗುವುದಕ್ಕಿಂತ ಹೆಚ್ಚಾಗಿ ವಿಫಲವಾಗಿರುವ,
ಸಾಮಾಜಿಕ ಅಧಿಕಾರ ಮತ್ತು ಜಾತೀಯ ಯಜಮಾನಿಕೆಯಿಂದ ದುರ್ಬಲವಾಗಿರುವ ಉದಾಹರಣೆಗಳೇ ಹೆಚ್ಚು.

ಈ ದಲಿತ ಹೆಣ್ಣು ಮಕ್ಕಳೆಲ್ಲಾ ಬಡತನದ ರೇಖೆಯ ಕೆಳಗೆ ಬರುವಂಥವರು. ಇವರ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಮೂಲ ಸೌಕರ್ಯ, ಶಿಕ್ಷಣ, ವೈದ್ಯಕೀಯ ಸೌಲಭ್ಯ ಎಲ್ಲದರಿಂದ ವಂಚಿತರಾದವರು. ಇಂಥ ವರ್ಗಗಳಲ್ಲೇ ಪಿತೃಪ್ರಾಧಾನ್ಯ ಪ್ರಬಲವಾಗಿರುವುದರಿಂದ, ತಮ್ಮ ಮನೆಯ ಪುರುಷರ ದೌರ್ಜನ್ಯ ಮತ್ತು ದಬ್ಬಾಳಿಕೆಗೆ ಕೂಡ ದಲಿತ ಹೆಣ್ಣುಮಕ್ಕಳು ನಿರಂತರವಾಗಿ ತುತ್ತಾಗುತ್ತಾರೆ.

ದಲಿತ ಮಹಿಳೆಯರ ಈ ಸ್ಥಿತಿ ಇನ್ನೂ ಶೋಚನೀಯವಾಗಿರುವ ಬೆಳವಣಿಗೆಗಳು ಇತ್ತೀಚಿನ ಎರಡು ದಶಕಗಳಿಂದೀಚೆಗೆ ಅವ್ಯಾಹತವಾಗಿ ಘಟಿಸುತ್ತಿವೆ. ಪ್ರಬಲವಾಗುತ್ತಿರುವ ಹಿಂದುತ್ವದ ರಾಜಕಾರಣ, ಅಲ್ಪಸಂಖ್ಯಾತರನ್ನು ಅಂಚಿಗೆ ಸರಿಸುವ ಪ್ರಯತ್ನ ಮಾಡುತ್ತಿರುವ ಹಾಗೆಯೇ, ಮನುವಾದವನ್ನು ಪುನರ್ ಸ್ಥಾಪಿಸುವ ಹಠವನ್ನೂ ತೊಟ್ಟುಬಿಟ್ಟಿವೆ. ಕೋಮು ದಳ್ಳುರಿ ಮತ್ತು ಜಾತೀಯ ಹಿಂಸೆಗಳು ತಲೆ ಎತ್ತಿದಾಗಲೆಲ್ಲಾ ಅದು ಹಿಂಸಾಕೃತ್ಯಗಳನ್ನು ಎಸಗುವುದೇ ಮಹಿಳೆಯರ ಮೇಲೆ. ಯುರೋಪಿಯನ್ ಪಾರ್ಲಿಮೆಂಟ್ 2006ರ ಡಿಸೆಂಬರ್ನಲ್ಲಿ ದಲಿತರ ಮಾನವ ಹಕ್ಕುಗಳನ್ನು ಕುರಿತು ಭಾರತದಲ್ಲಿ ಒಂದು ಠರಾವನ್ನು ಮಂಡಿಸಿತು. ಭಾರತದ ಹನ್ನೊಂದು ರಾಜ್ಯಗಳಲ್ಲಿ ಸಮೀಕ್ಷೆಯನ್ನು ನಡೆಸಿ ನೀಡಿದ ಈ ವರದಿಯಲ್ಲಿ ದಲಿತ ಹೆಣ್ಣು ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯದ ಅಂಕಿ ಅಂಶಗಳು ಆತಂಕ ಹುಟ್ಟಿಸುತ್ತವೆ. ಪ್ರತಿದಿನ ಮೂವರು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಮಾಡಲಾಗುತ್ತದೆ. ಹದಿನೆಂಟು ಜನರನ್ನು ನಗ್ನಗೊಳಿಸಿ ಮೆರವಣಿಗೆ ಮಾಡಲಾಗುತ್ತದೆ.

ಪ್ರತಿ ಹದಿನೆಂಟು ನಿಮಿಷಕ್ಕೊಮ್ಮೆ ದಲಿತರ ಮೇಲೆ ಆಕ್ರಮಣಗಳು ನಡೆಯುತ್ತವೆ. ಇದರಲ್ಲಿ ಕೂಲಿ ಸಂಬಳಕ್ಕೆಂದು ಹೋದ ಮಹಿಳೆಯರ ಮೇಲಿನ ಆಕ್ರಮಣಗಳೇ ಹೆಚ್ಚಾಗಿರುತ್ತವೆ... ಹೀಗೆ ಸುದೀರ್ಘವಾದ ವಿವರವನ್ನು ನೀಡುವ ಈ ಸಮೀಕ್ಷೆ, 2006ರಲ್ಲಿ ಒಟ್ಟು 35,208 ದಲಿತರ ಮೇಲೆ ನಡೆಸಿದ ಆಕ್ರಮಣಗಳ ವಿರುದ್ಧ ಮೊಕದ್ದಮೆಗಳನ್ನು ದಾಖಲು ಮಾಡಿದ್ದರೂ, ಇವುಗಳಲ್ಲಿ ಶಿಕ್ಷೆಗೊಳಗಾದವರ ಸಂಖ್ಯೆ ಮಾತ್ರ ಶೇಕಡ 5ಕ್ಕಿಂತ ಕಡಿಮೆ ಎಂದೂ ಹೇಳುತ್ತದೆ.

ಈ ವಿವರಗಳು ದಲಿತ ಸಮುದಾಯಗಳಲ್ಲಿ ಪ್ರಾರಂಭವಾದ ಸಣ್ಣ ಸಂಚಲನದಿಂದ ಜಾತೀಯ ವ್ಯವಸ್ಥೆ ದಿಗ್ಭ್ರಮೆಗೊಂಡು ಈ ಸಂಚಲನದ ಹುಟ್ಟನ್ನಡಗಿಸುವ ಪ್ರಯತ್ನವಾಗಿರುವುದನ್ನು ಹೇಳುತ್ತದೆ. ಇದಕ್ಕೆ ಪೂರಕವಾಗಿ ಜಾಗತಿಕ ಆರ್ಥಿಕ ನೀತಿ ಕೂಡ ನೇರವಾಗಿ ದಲಿತ ಸಮುದಾಯಗಳ ಮೇಲೆಯೇ ತನ್ನ ಕರಾಳ ಪ್ರಭಾವವನ್ನುಂಟು ಮಾಡುತ್ತಿದೆ. ಬದಲಾಗುತ್ತಿರುವ ಕೃಷಿ ನೀತಿಗಳು ಮತ್ತು ಸಮಾಜ ಸೇವೆಯಲ್ಲಿ ಕಡಿಮೆಯಾಗುತ್ತಿರುವ ಸರ್ಕಾರದ ವೆಚ್ಚವು ನೇರವಾಗಿ ದಲಿತ ಮಹಿಳೆಯರ ಆರೋಗ್ಯ, ಶಿಕ್ಷಣ, ರಕ್ಷಣೆ ಅಭಿವೃದ್ಧಿ ಮತ್ತು ಜೀವನಾಧಾರದ ಮೇಲೆ ನೇತ್ಯಾತ್ಮಕ ಪರಿಣಾಮವನ್ನುಂಟು ಮಾಡುತ್ತಿದೆ. ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳನ್ನು ಖಾಸಗಿ ವಲಯಗಳು ಆಕ್ರಮಿಸಿಕೊಳ್ಳುತ್ತಿರುವುದರಿಂದ, ಅವು ಹೆಚ್ಚು ದುಬಾರಿಯಾಗುತ್ತಿವೆ. ಇನ್ನು ಮುಂದೆ ದಲಿತ ಕುಟುಂಬಗಳು ಈ ವೆಚ್ಚಗಳನ್ನು ಭರಿಸಲಾರದೆ, ಗಂಡು ಮಕ್ಕಳನ್ನು ಮಾತ್ರ ಶಾಲೆಗೆ ಕಳಿಸಿ, ಹೆಣ್ಣು ಮಕ್ಕಳನ್ನು ಮನೆಯಲ್ಲೇ ಉಳಿಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಹಾಗೆಯೇ ಔದ್ಯೋಗಿಕ ಕ್ಷೇತ್ರಗಳಿಗೆ ಅಗತ್ಯವಾಗಿರುವ ತರಬೇತಿಗಳನ್ನೂ ಗಂಡು ಮಕ್ಕಳ ಪಾಲಿಗೆ ಈ ಕುಟುಂಬಗಳು ಮೀಸಲಾಗಿಡಲಾರಂಭಿಸಿವೆ.

ಹೀಗೆ, ಆಧುನಿಕೋತ್ತರ ಕಾಲಘಟ್ಟದ ಸಾಮಾಜಿಕ, ಆರ್ಥಿಕ ನೀತಿಗಳು ದಲಿತ ಮಹಿಳೆಯರ ಬದುಕಿಗೆ ಕಂಟಕಪ್ರಾಯ ಆಗಲಾರಂಭಿಸಿವೆ.

ದಲಿತರ ಮೇಲೆ ಉಂಟಾಗುವ ದೌರ್ಜನ್ಯವನ್ನು ತಡೆಗಟ್ಟುವುದಕ್ಕಾಗಿ ಭಾರತ ಸರ್ಕಾರದ 1955ರಲ್ಲಿ `ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆ~ಯಾಗಲಿ, 1989ರ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗಗಳ ಮೇಲಿನ `ದೌರ್ಜನ್ಯ ತಡೆ ಕಾಯ್ದೆ~ಯಾಗಲಿ ಹೆಚ್ಚು ಉಪಯೋಗಕ್ಕೆ ಬರುವುದಿಲ್ಲ. ಏಕೆಂದರೆ, ದಲಿತ ಮಹಿಳೆಯರು ಮತ್ತು ಅವರ ಕುಟುಂಬದವರು ಕಾನೂನಿನ ನೆರವನ್ನು ಪಡೆಯಲು ಅಂಜುತ್ತಾರೆ. ಇನ್ನೊಂದು ಮೊಕದ್ದಮೆ ಹೂಡಿದಾಗಲೂ ಅದು ಪ್ರಬಲ ಜಾತಿಗಳ ರಾಜಕೀಯದಲ್ಲಿ ಪ್ರಯೋಜನವಾಗದೆ ಹೋಗುತ್ತದೆ. ಹಾಗೆಯೇ ದಲಿತರ ಅಭಿವೃದ್ಧಿಗೆಂದು `ಸ್ಪೆಷಲ್ ಕಾಂಪೋನೆಂಟ್ ಪ್ಲಾನ್~ ಅಡಿಯಲ್ಲಿ ಸರ್ಕಾರ ಬಿಡುಗಡೆ ಮಾಡುವ ಹಣ ಕೂಡ ಫಲಾನುಭವಿಗಳಿಗೆ ದೊರಕದೆ ಹೋಗಿರುವ ಉದಾಹರಣೆಗಳೇ ಹೆಚ್ಚು.

ಸರ್ಕಾರದ ಕಾರ್ಯಕ್ರಮಗಳು ನಿಷ್ಕ್ರಿಯೆಯಾಗುತ್ತಿರುವ ಈ ಹಿನ್ನೆಲೆಯಲ್ಲಿ ದಲಿತ ಮಹಿಳೆಯರು ಯಾರತ್ತ ಮುಖ ಮಾಡಬೇಕೆಂಬ ಪ್ರಶ್ನೆ ಹುಟ್ಟುತ್ತದೆ. ದಲಿತ ಮಹಿಳೆಯರ ಹಕ್ಕುಗಳು, ಲಭ್ಯತೆಗಳು ಮತ್ತು ಅವುಗಳ ಸಾಧ್ಯತೆಗಳ ಬಗ್ಗೆ ಅರಿವನ್ನು ಸೃಷ್ಟಿಸುವ ಕಾರ್ಯಕ್ರಮಗಳನ್ನು ಅನೇಕ ಸ್ವಯಂಸೇವಾ ಸಂಘಗಳು (ಎನ್ಜಿಒ) ಹಮ್ಮಿಕೊಳ್ಳುತ್ತಿವೆ.

ಆದರೆ, ಈ ಸಂಸ್ಥೆಗಳ ಮಿತಿಯಲ್ಲಿ ಹೆಚ್ಚು ಶಕ್ತಿಯುತವಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ದಲಿತ ಸಂಘಟನೆಗಳಲ್ಲಿ ಉಂಟಾಗಿರುವ ಒಡಕುಗಳು ಕೂಡ ಈ ಚಳವಳಿಯ ಉಗ್ರ ಹೋರಾಟವನ್ನು ಒಂದು ಸೀಮಿತ ಅರ್ಥಕ್ಕೆ ಇಳಿಸಿಬಿಟ್ಟಿವೆ. ಆದ್ದರಿಂದ ದಲಿತ ಮಹಿಳೆಯರ ಸ್ಥಿತಿ ಇಂದು `ಅಭಿವೃದ್ಧಿ~ ಮತ್ತು `ನಾಗರಿಕ ಸಮಾಜ~ದ ಪರಿಕಲ್ಪನೆಗಳ ದ್ವಿಮುಖ ನೀತಿಯನ್ನು ತೋರಿಸುತ್ತಲೇ, ಅವರು ದೊಡ್ಡದೊಂದು ಸಾಮಾಜಿಕ ಸಂಘರ್ಷಕ್ಕೆ ಸಿದ್ಧರಾಗಬೇಕಾದ ಅಗತ್ಯವನ್ನೂ ಸೂಚಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.