ಭಾನುವಾರ, ಮೇ 9, 2021
25 °C
ಮತ್ತೆ ಬಂದ ಲೋಕಸಭಾ ಚುನಾವಣೆ

ದಶಕಗಳೇ ಕಳೆದರೂ ಪರಿಹಾರ ಕಾಣದ ಸಮಸ್ಯೆಗಳು!

ಪ್ರಜಾವಾಣಿ ವಾರ್ತೆ/ ಕೆ.ವಿ.ನಾಗರಾಜ್ Updated:

ಅಕ್ಷರ ಗಾತ್ರ : | |

ದಶಕಗಳೇ ಕಳೆದರೂ ಪರಿಹಾರ ಕಾಣದ ಸಮಸ್ಯೆಗಳು!

ನರಸಿಂಹರಾಜಪುರ: ಪ್ರಸ್ತುತ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ಪ್ರಚಾರ ಬರದಿಂದ ಸಾಗಿದೆ. ತಾಲ್ಲೂಕಿನಲ್ಲಿನ ಪ್ರಮುಖ ಸಮಸ್ಯೆಗಳು ಉದ್ಭವಾಗಿರುವುದಕ್ಕೆ ಯಾರು ಮತ್ತು ಯಾವ ಪಕ್ಷ ಕಾರಣ ಎಂಬುದಕ್ಕೆ ಸಂಬಂಧಿಸಿದಂತೆ ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿಸಿ ಕೊಂಡಿವೆ. ಆದರೆ ಸಮಸ್ಯೆಗೆ ಪರಿಹಾರ ವೇನು ಎಂಬುದು ಯಾವುದೇ ರಾಜಕೀಯ ಪಕ್ಷದ ಬಳಿ ಸ್ಪಷ್ಟ ಉತ್ತರವಿಲ್ಲವಾಗಿದೆ ಎಂಬ ಮಾತು ಪ್ರಜ್ಞಾ ವಂತ ಮತದಾರರಲ್ಲಿ ಕೇಳಿಬರುತ್ತಿದೆ.ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿರುವ ತಾಲ್ಲೂಕು ಕೇಂದ್ರ ಎನ್.ಆರ್.ಪುರವಾಗಿದೆ. ಈ ಕ್ಷೇತ್ರವನ್ನು ರಾಷ್ಟ್ರರಾಜಕಾರಣದಲ್ಲಿ ಹೆಸರು ಮಾಡಿದ ಘಟಾನುಘಟಿ ನಾಯಕರಾದ ಮಾಜಿ ಪ್ರಧಾನಿ ಇಂದಿರಾಗಾಂಧಿ, ಡಿ.ಕೆ.ತಾರಾದೇವಿ, ಪುಟ್ಟೇ­ಗೌಡ, ಬಿ.ಎಲ್.ಶಂಕರ್, ಡಿ.ಸಿ.ಶ್ರೀಕಂಠಪ್ಪ, ಸದಾನಂದಗೌಡ, ಜಯಪ್ರಕಾಶ್ ಹೆಗ್ಡೆ ಪ್ರತಿನಿಧಿಸಿದ್ದಾರೆ. ಆದರೂ ಸಹ ತಾಲ್ಲೂಕು ಕೇಂದ್ರದ ಸಮಸ್ಯೆಗಳಿಗೆ ಪರಿಹಾರವೇ ದೊರಕಿಲ್ಲ ಎಂಬ ಅಭಿಪ್ರಾಯ ವ್ಯಾಪಕವಾಗಿದೆ.ಪ್ರಮುಖವಾಗಿ ತಾಲ್ಲೂಕು ಕೇಂದ್ರ 1960­ಕ್ಕೂ ಮೊದಲು ಸುಸಜ್ಜಿತವಾದ ರೈಲು ಸಾರಿಗೆ ಸೌಲಭ್ಯ, ಬೇರೆಬೇರೆ ಪ್ರದೇಶಗಳಿಗೆ ಹತ್ತಿರದ ರಸ್ತೆ ಸಂಪರ್ಕ ಸೌಲಭ್ಯ ಹೊಂದಿತ್ತು. ಯಥೇಚ್ಛವಾಗಿ ಭತ್ತವನ್ನು ಬೆಳೆಯುತ್ತಿದ್ದುದರಿಂದ ಭತ್ತದ ಕಣಜವೆಂದೇ ಹೆಸರು ಪಡೆದಿತ್ತು. ಆದರೆ ಭದ್ರಾ ಅಣೆಕಟ್ಟನ್ನು ನಿರ್ಮಾಣ ಮಾಡಿದಾಗಿನಿಂದ ಈ ಸೌಲಭ್ಯಗಳನ್ನು ಕಳೆದು ಕೊಂಡಿತು.ಭದ್ರಾ ಅಣೆಕಟ್ಟನ್ನು ನಿರ್ಮಾಣ ಮಾಡಿದ ಪರಿಣಾಮ ಜಿಲ್ಲಾ ಕೇಂದ್ರಕ್ಕೆ ಕೇವಲ 55 ಕಿಲೋಮೀಟರ್ ದೂರಕ್ಕೆ ಬದಲಾಗಿ 96 ಕಿಲೋಮೀಟರ್ ಸುತ್ತುವರಿದು ಹೋಗುವ ಸ್ಥಿತಿ ನಿರ್ಮಾಣವಾಯಿತು. ಚಿಕ್ಕಮಗಳೂರು ತಾಲ್ಲೂ­ಕಿನ ಕೂಸಗಲ್ ಗ್ರಾಮದ ಮಾರ್ಗವಾಗಿ ತೆರಳುವ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಆ ಕಾಲ ದಲ್ಲಿಯೇ ಜಿಲ್ಲೆಯನ್ನು ಪ್ರತಿನಿಧಿಸಿ ಲೋಕಸಭಾ ಚುನಾವಣೆ ಎದುರಿಸಿದ್ದ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರಿಗೂ ಮನವಿ ಸಲ್ಲಿಸಲಾಗಿತ್ತು.1978–79ರಲ್ಲಿ ಸುಮಾರು ₨33.70ಲಕ್ಷ ಮುಳುಗಡೆ ಪ್ರದೇಶದ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿತ್ತು. ಈ ರಸ್ತೆ ಅಭಿವೃದ್ಧಿಗಾಗಿ ₨ 22.50 ಲಕ್ಷ ವೆಚ್ಚವಾಯಿತು. ಉಳಿಕೆ ಹಣ ಹಾಗೆಯೇ ಉಳಿಯಿತು. ಜಿಲ್ಲಾ ಕೇಂದ್ರಕ್ಕೆ  ಹತ್ತಿರದ ಸಂಪರ್ಕದ ಕನಸು ನನಸಾಗಲಿಲ್ಲ. ನಂತರ ಆಡಳಿತ ನಡೆಸಿದ ಯಾವುದೇ ಸರ್ಕಾರ ಇದರತ್ತ ಗಮನಹರಿಸಲಿಲ್ಲ ಎನ್ನುತ್ತಾರೆ ಹಿರಿಯರು.ಸ್ವಾತಂತ್ರ್ಯ ಪೂರ್ವದಲ್ಲೇ ರೈಲು ಸಾರಿಗೆ ಸಂಪರ್ಕ ಹೊಂದಿದ್ದ ತಾಲ್ಲೂಕು ಕೇಂದ್ರಕ್ಕೆ ಪುನಃ ರೈಲು ಸಾರಿಗೆ ಆರಂಭಿಸುವ ಬಗ್ಗೆ ಕೇಂದ್ರ ಸರ್ಕಾ­ರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಇದು­ವರೆಗೂ ಕ್ಷೇತ್ರವನ್ನು ಪ್ರತಿನಿಧಿಸಿದ ಸಂಸ­ದರು ಪ್ರಾಮಾಣಿಕ ಪ್ರಯತ್ನ ಮಾಡದ ಪರಿಣಾ­ಮವಾಗಿ  ಅದು ಭರವಸೆಯಾಗಿಯೇ ಉಳಿದಿದೆ ಎಂಬ ಮಾತು ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.ಭದ್ರಾ ಅಣೆಕಟ್ಟು ನಿರ್ಮಾಣದಿಂದಾಗಿ ಫಲವತ್ತಾದ ಜಮೀನು ಕಳೆದು ಕೊಂಡು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿ­ಕೊಂಡವರಲ್ಲಿ ಮೂಲನಿವಾಸಿಗಳೇ ಹೆಚ್ಚಾಗಿ­ದ್ದಾರೆ. ಇವರು ಜೀವನಕ್ಕಾಗಿ ಕೃಷಿ ಅಭಿವೃದ್ಧಿ ಪಡಿಸಿಕೊಂಡು ಅಕ್ರಮ ಜಮೀನನ್ನು ಸಕ್ರಮಗೊಳಿಸಲು ಫಾರಂ ನಂ 50,53ಯಲ್ಲಿ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನ­ವಾಗಿಲ್ಲ. ಬದಲಾಗಿ ಬ್ರಿಟಿಷರ ಕಾಲದ ಆದೇಶಗಳನ್ನು ಜಾರಿಗೆ ತಂದು ಅರಣ್ಯ ಎಂದು ಘೋಷಿಸಿ ಗಾಯದ ಮೇಲೆ ಬರೆ ಎಳೆಯು­ವಂತಹ ಕೆಲಸವನ್ನು ಸರ್ಕಾರ ಮಾಡಿತು. ಸರ್ಕಾರಿ ಆದೇಶದ ಮುಖಾಂತರ ಜಾರಿಗೆ ಬಂದ ಫಾರಂ 50, 53 ಸಮಸ್ಯೆ ಬಗೆಹರಿಸಲಾರದ ಸರ್ಕಾರಗಳು ಅರಣ್ಯ ಸಮಸ್ಯೆ ಬಗೆಹರಿಸುವ ಬಗ್ಗೆ ಕೈಬರಹದ ಅರ್ಜಿಗಳನ್ನು ಪಡೆದು ಕಣ್ಣೊರೆಸುವ ತಂತ್ರ ಮಾಡಿದವು ಎಂಬ ಮಾತು ಗ್ರಾಮೀಣ ಪ್ರದೇಶಗಳಲ್ಲಿ ಕೇಳಿಬರುತ್ತಿದೆ.ಭದ್ರಾ ಅಣೆಕಟ್ಟಿನ ನಿರ್ಮಾಣದಿಂದ ನಿರಾಶ್ರಿತರಾದವರಿಗೆ ಇದು­ವರೆಗೂ ಸರ್ಕಾರ ಸೂಕ್ತ ಪರಿಹಾರ ಹಾಗೂ ಪುನರ್ ವಸತಿ ಕಲ್ಪಿಸುವಲ್ಲಿ ವಿಫಲವಾಗಿದೆ. ಈ ಬಗ್ಗೆ ನಿರಾಶ್ರಿತರು ತಮಗೆ ಸೂಕ್ತ ಪರಿಹಾರವನ್ನು ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡಲು ಇದಕ್ಕೆ ಸಂಬಂಧಪಟ್ಟ ಇಲಾಖೆ ಎಲ್ಲಿದೆ ? ಎಂಬ ಮಾಹಿತಿ ಲಭ್ಯವಾಗುತ್ತಿಲ್ಲ. ಆಶ್ಚರ್ಯಕರ ಸಂಗತಿ ಎಂದರೆ ಮಾಹಿತಿ ಹಕ್ಕಿನಲ್ಲಿ ಕೇಳಿದರೂ ಇದರ ಬಗ್ಗೆ ಸೂಕ್ತ ಉತ್ತರ ದೊರಕದಾಗಿದೆ ಎಂಬುದು ನಿರಾಶ್ರಿತರ ಅಳಲಾಗಿದೆ.ಹುಲಿಯೋಜನೆಯ ಅನುಷ್ಠಾನ, ಕಸ್ತೂರಿ ರಂಗನ್ ವರದಿ ಜಾರಿ, ಒತ್ತುವರಿ ತೆರವು ಈ ಸಮಸ್ಯೆಗಳ ಉಗಮಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಒಂದಲ್ಲ ಒಂದು ರೀತಿಯಲ್ಲಿ ಕಾರಣವಾಗಿದ್ದು ಇದರ ಬಗ್ಗೆ ಯಾವುದೇ ರಾಜಕೀಯ ಪಕ್ಷಗಳು ವಾಸ್ತವಾಂಶವನ್ನು ತಿಳಿಸದೆ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದವು ಎಂಬ ದೂರುಗಳು ಗ್ರಾಮಸ್ಥರಲ್ಲಿ ಕೇಳಿಬರುತ್ತಿದೆ.ಮಲೆನಾಡಿನ ಭಾಗದಲ್ಲಿನ ಯುವಕರು ಪಟ್ಟಣಕ್ಕೆ ವಲಸೆ ಹೋಗುತ್ತಿದ್ದು ಕೃಷಿ ಕುಟುಂಬಗಳು ವೃದ್ಧಾ ಶ್ರಮ ಗಳಾಗುತ್ತಿವೆ ಎಂಬ ಮಾತು ವ್ಯಾಪಕವಾಗಿ ಕೇಳಿಬರುತ್ತಿದೆ. ಇದು­ವರೆಗೆ ಆಡಳಿತ ರಾಜಕೀಯಪಕ್ಷಗಳು ಯುವ ಜನಾಂಗಕ್ಕೆ ಸ್ಥಳೀಯವಾಗಿ ಉದ್ಯೋಗ ಒದಗಿಸಿ ವಲಸೆ ತಡೆಗಟ್ಟುವಂತಹ ಪ್ರಯತ್ನವನ್ನೇ ಮಾಡಲಿಲ್ಲ. ಕೈಗಾರಿಕಾ ವಸಾಹತು ಪ್ರದೇಶ ಸ್ಥಾಪಿಸಿದರೂ ಯಾರು ಸುಳಿದಿಲ್ಲ.ಈ ಎಲ್ಲಾ ಸಮಸ್ಯೆಗಳ ನಡುವೆ ಮತ್ತೆ ಲೋಕಸಭಾ ಚುನಾವಣೆ ಬಂದಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದೂ ಯಾವುದೇ ಸಮಸ್ಯೆ ಬಗೆಹರಿ­ಸಲಿಲ್ಲ ಎಂದು ವಿರೋಧಪಕ್ಷಗಳು ಆರೋಪಿ­ಸುತ್ತಿವೆ. ಬಿಜೆಪಿಯವರು ದಶಕ್ಕೂ ಹೆಚ್ಚು ಕಾಲ ಕ್ಷೇತ್ರವನ್ನು ಪ್ರತಿನಿಧಿಸಿದರೂ ಸಮಸ್ಯೆ ಬಗೆ­ಹರಿಸಲು ಪ್ರಯತ್ನಿಸಲಿಲ್ಲ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಈ ಭಾಗದ ಜನಪ್ರತಿನಿಧಿಗಳ ದೂರದೃಷ್ಟಿಯ ಕೊರತೆ, ನಿರ್ಲಕ್ಷ್ಯ ಧೋರಣೆ, ಜನಪರಕಾಳಜಿ ಇಲ್ಲದೆ ಇರುವುದೇ ಸಮಸ್ಯೆ ಹಾಗೆಯೇ ಉಳಿಯಲು ಕಾರಣ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.