ಶುಕ್ರವಾರ, ಮಾರ್ಚ್ 5, 2021
21 °C
ಆಹಾರ ಬೀದಿ

ದಶಕಗಳ ಕಥೆ ಹೇಳುವ ಆಹಾರ ಬೀದಿ

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

ದಶಕಗಳ ಕಥೆ ಹೇಳುವ ಆಹಾರ ಬೀದಿ

ನಗರದ ಆಹಾರ ಸಂಸ್ಕೃತಿಯ ಕವಲುಗಳೇ ಆಸಕ್ತಿಕರ. ಈಗ ಎಲ್ಲೆಂದರೆ ಅಲ್ಲಿ ಆಹಾರ ಬೀದಿಗಳು ಹುಟ್ಟಿಕೊಂಡಿವೆ. ಹೊಸರುಚಿಯ ಕಥೆಗಳ ಜೊತೆಗೆ ಹಲವು ನೆನಪುಗಳನ್ನೂ ಅಡಗಿಸಿಕೊಂಡ ಇಂಥ ಬೀದಿಗಳನ್ನು ಪರಿಚಯ ಮಾಡಿಕೊಡುವ ಮಾಲಿಕೆ ಇದು. ವಾರಕ್ಕೊಮ್ಮೆ ಒಂದು ಆಹಾರ ಬೀದಿಯಲ್ಲಿ ಅಡ್ಡಾಡೋಣ.ಬೆಂಗಳೂರಿನ ಆಹಾರ ಸಂಸ್ಕೃತಿಯ ಜೊತೆಜೊತೆಗೇ ಬೆಳೆಯುತ್ತ, ಏಳುಬೀಳುಗಳ ನಡುವೆಯೂ ಮಾರ್ಗ ಬದಲಿಸದೆ ಅದೇ ಕಾಯಕ ಪ್ರೀತಿಯಲ್ಲಿ ನಿಂತ ನಗರದ ಪ್ರಮುಖ ಆಹಾರ ಬೀದಿಗಳ ಸಾಲಿನಲ್ಲಿ ಎದ್ದು ಕಾಣುವುದು ವಿಜಯನಗರದ ಆಹಾರ ಬೀದಿ.

ವಿಜಯನಗರ ಬಸ್‌ ನಿಲ್ದಾಣದಿಂದ ಗೋವಿಂದರಾಜ ನಗರ, ಎಂ.ಸಿ. ಬಡಾವಣೆಗೆ ಸಾಗುವ ಮಾರ್ಗಮಧ್ಯ ಸಾಗುವವರನ್ನು ಕ್ಷಣ ತನ್ನತ್ತ ತಿರುಗಿ ನೋಡುವಂತೆ ಮಾಡುವ ಬಗೆಬಗೆಯ ಆಹಾರದ ಘಮ ಬೀರುವ ರಸ್ತೆ ಇದು. ಜೇಬಿಗೆ ಹೊರೆಯಾಗದ, ಬಾಯಿಗೆ ರುಚಿ, ಹೊಟ್ಟೆಗೆ ಹಿತವೆನ್ನಿಸುವ ತರಹೇವಾರಿ ತಿಂಡಿಗಳು ಇಲ್ಲಿನ ವಿಶೇಷತೆ.ವಿಜಯನಗರ, ಗೋವಿಂದರಾಜ ನಗರ, ಎಂ.ಸಿ. ಬಡಾವಣೆ, ಆರ್‌ಪಿಸಿ ಬಡಾವಣೆ, ಹಂಪಿನಗರ, ದೀಪಾಂಜಲಿನಗರ, ಬಸವೇಶ್ವರನಗರ, ನಂದಿನಿ ಬಡಾವಣೆ, ಚಂದ್ರಾ ಬಡಾವಣೆ ಸೇರಿದಂತೆ ಅನೇಕ ಭಾಗದ ಜನರ ಉದರ ಪೋಷಣೆಯ ಹೊಣೆ ಈ ಬೀದಿಯ ಮೇಲಿದೆ.ಪ್ರತಿದಿನ ಸಂಜೆಯ ತಂಗಾಳಿಗೆ ಸುಮ್ಮನೆ ನಾಲ್ಕಾರು ಹೆಜ್ಜೆ ಹಾಕಿದರೆ ಸಾಕು, ಎಲ್ಲಾ ಬಗೆಯ ಆಹಾರ ಪ್ರೇಮಿಗಳನ್ನೂ ತಣಿಸುವ ಬೀದಿಯಿದು. ಸುಮಾರು 30–35 ವರ್ಷಗಳಿಂದ ಇಲ್ಲಿಯೇ ನೆಲೆ ಕಂಡುಕೊಂಡವರೂ ಇದ್ದಾರೆ. ಕಳೆದ ಮೂರ್‍್ನಾಲ್ಕು ವರ್ಷಗಳ ಹಿಂದಷ್ಟೇ ಇಲ್ಲಿ ಬಂದು ಭವಿಷ್ಯ ಕಟ್ಟಿಕೊಂಡವರೂ ಇಲ್ಲಿದ್ದಾರೆ.‘ಮೊದಲೆಲ್ಲ ಇಡ್ಲಿ, ದೋಸೆ, ಪೂರಿ... ಇಂಥವೇ ತಿಂಡಿಗಳಿದ್ದವು. ಆಗ ಐದಾರು ಅಂಗಡಿಗಳಿದ್ದವಷ್ಟೇ. ತಿನ್ನುವವರ ಸಂಖ್ಯೆಯೂ ಇಷ್ಟಿರಲಿಲ್ಲ. ಅಂಗಡಿಗಳೂ ಇಷ್ಟಿರಲಿಲ್ಲ. ಜೀವನ ಸಾಗಿಸಲು ಸಾಕಾಗುವಷ್ಟು ಕಮಾಯಿ ಆಗುತ್ತಿತ್ತು’ ಎನ್ನುತ್ತಾರೆ 35 ವರ್ಷಗಳಿಂದ ಇದೇ ಬೀದಿಯಲ್ಲಿ ಘಮಘಮಿಸುವ ಚಾಟ್‌ ಮಾಡಿ ಗ್ರಾಹಕರ ನಾಲಿಗೆ ಹಾಗೂ ಮನಸ್ಸು ಎರಡನ್ನೂ ತಣಿಸುವ ಕಾಯಕದಲ್ಲಿರುವ ಶಂಕರ್.‘ಸುಮಾರು 15 ವರ್ಷಗಳ ಹಿಂದೆ, ಮೊಟ್ಟ ಮೊದಲ ಬಾರಿಗೆ ಈ ಬೀದಿಗೆ ಗೋಬಿ ಮಂಚೂರಿ ಪರಿಚಯಿಸಿದ್ದು ನಾನೇ. ದಿನಾ ಬೇಲ್‌ ಪುರಿ, ಪಾನಿ ಪುರಿ ಮಾಡಿ ಮಾಡಿ ಬೇಸರವಾಗಿತ್ತು. ಇನ್ನು ತಿನ್ನುವವರ ನಾಲಿಗೆಗೂ ಒಂದು ಹೊಸ ರುಚಿ ಕೊಟ್ಟು ನೋಡೋಣ ಎಂದು ಗೋಬಿ ಮಾಡಿದ್ದೆ. ವಾರದಲ್ಲಿ ಗೋಬಿ ಕೇಳಿಕೊಂಡು ದೂರದೂರದಿಂದ ಜನ ಬರಲು ಆರಂಭಿಸಿದರು. ವಾರಕ್ಕೊಮ್ಮೆ ಹೊಸ ಬಗೆಯ ತಿಂಡಿಗಾಗಿ ಅಡ್ಡಾಡುವ ವರ್ಗ ಆಗಲೂ ಇತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ಅವರು.‘ನಂತರ ಈ ಬೀದಿಯಲ್ಲಿ  ಅಂಗಡಿಗಳ ಸಂಖ್ಯೆ ಹೆಚ್ಚಿದರೂ ಹಳೆಯ ವ್ಯಾಪಾರಿಗಳ ತುತ್ತಿಗೆ ಕುತ್ತೇನೂ ಬರಲಿಲ್ಲಿ ಅನ್ನಿ...’ ಎನ್ನುವ ಇಡ್ಲಿ ವ್ಯಾಪಾರಿ ಉದಯ್‌ ಪೂಜಾರಿ, ಅಂದಿನ ಆಹಾರೋದ್ಯಮ ಹಾಗೂ ಆಹಾರ ಪ್ರೀತಿಯ ಸಂಸ್ಕೃತಿ ಒಟ್ಟೊಟ್ಟಿಗೇ ಬೆಳೆದು ಬಂದ ಬಗೆಯನ್ನು ವಿವರಿಸುತ್ತಾರೆ.‘ಅಂಗಡಿಗಳು ಹೆಚ್ಚಿದಂತೆ ತಿನ್ನುವವರ ಸಂಖ್ಯೆಯೂ ಅಧಿಕವಾಯಿತು. ವಿಜಯನಗರದಲ್ಲಿ ಓದಲಿಕ್ಕೆಂದು, ಕೆಲಸಕ್ಕೆಂದು ಬರುವವರ ಸಂಖ್ಯೆಯೂ ಹೆಚ್ಚಿತು. ಅಂಥವರಿಗೆಲ್ಲ ಸಂಜೆಯ ತಿಂಡಿಯೇ ರಾತ್ರಿಯ ಊಟವೂ ಆಗುವುದಿತ್ತು. ಜೇಬಿಗೂ ಹೊರೆಯಾದ ಕಾರಣ ಈ ಬೀದಿ ಅನೇಕರಿಗೆ ಆಪ್ತವಾಗುತ್ತ ಹೋಯಿತು.’‘ನಾವು ಈ ವ್ಯಾಪಾರಕ್ಕೆ ಬಂದಾಗ ಇಡ್ಲಿ–ವಡೆ, ರೈಸ್‌ ಭಾತ್‌ಗಳದ್ದೇ ಕಾಲವಿತ್ತು. ಆದರೆ ಅನಂತರದ ದಿನಗಳಲ್ಲಿ ಉತ್ತರ ಭಾಗದ ಜನರು ಹೆಚ್ಚಾಗಿ ಬರತೊಡಗಿದ ಮೇಲೆ ಹೊಸ ಬಗೆಯ ತಿಂಡಿಗಳೂ ಅಡಿ ಇಟ್ಟವು. ಯುವ ವರ್ಗ ಚೈನೀಸ್‌ ಫುಡ್‌ ತರಹದ ತಿಂಡಿಯನ್ನೇ ಇಷ್ಟಪಡುತ್ತಾರೆ. ಹಾಗೆಂದು ನಾವೇನೂ ನಿರಾಶರಾಗಬೇಕಿಲ್ಲ. ಹಳೆಯ ಗ್ರಾಹಕರಿಗೆ ಇಡ್ಲಿ–ವಡೆಯೇ ಪ್ರಪಂಚ’ ಎನ್ನುವ ಸಮಾಧಾನದ ನಿಟ್ಟುಸಿರು ಅವರದು.ಒಂದು ರಸ್ತೆಗೆ ಹತ್ತರಂತೆ ಹೋಟೆಲ್‌, ರೆಸ್ಟೊರೆಂಟ್‌, ಕೆಎಫ್‌ಸಿ, ಮ್ಯಾಕ್‌ಡೊನಾಲ್ಡ್‌, ಪಿಜ್ಜಾ ಕೇಂದ್ರಗಳಿವೆ. ಆದರೂ ಈ ಬೀದಿಯೊಂದಿಗೆ ಬೆಳೆದು ಬಂದ ಬಾಂಧವ್ಯಕ್ಕೆ ಸಾಟಿ ಇಲ್ಲ. ಅವೆಲ್ಲವುಗಳ ಆಕರ್ಷಣೆಯಿಂದ ಬಿಡಿಸಿಕೊಂಡು ಬಂದು ಇಲ್ಲಿ ಸಾಲುಗಟ್ಟಿ ನಿಲ್ಲುವವರಿದ್ದಾರೆ. ಅಪ್ಪನ ಕಿರುಬೆರಳು ಹಿಡಿದುಕೊಂಡು ಬಂದು ಇಲ್ಲಿನ ಘಮಕ್ಕೆ ಮಾರುಹೋದವರು ಆ ಘಮದ ಅನುಭವವನ್ನು ತಮ್ಮ ಮಕ್ಕಳಿಗೂ ಕಟ್ಟಿಕೊಡಲು ಬರುವವರಿದ್ದಾರೆ. ಏನಾದರೂ ವಿಜಯನಗರದ ಆಹಾರ ಬೀದಿಯ ಇತಿಹಾಸವೇ ಅಂಥದ್ದು.***

ನೆನಪಿಗಾಗಿ ಬರುವವರಿದ್ದಾರೆ

ನಾನು ಚಿಕ್ಕವನಾಗಿದ್ದಾಗಿನಿಂದಲೂ ಈ ಬೀದಿಯನ್ನು  ನೋಡುತ್ತಲೇ ಬೆಳೆದಿದ್ದೇನೆ. ಆಗ ಅಪ್ಪ ತಿಂಡಿ ವ್ಯಾಪಾರ ಮಾಡುತ್ತಿದ್ದರು. ನಾನು ಶಾಲೆ ಮುಗಿದ ಮೇಲೆ ಇಲ್ಲಿಗೆ ಬರುತ್ತಿದ್ದೆ. ನಂತರ ನನಗೂ ಈ ವಲಯವೇ ಆಪ್ತವಾಯಿತು. ನಾನೂ ಇದನ್ನೇ ಮುಂದುವರಿಸಿದೆ. ಈ ಬೀದಿಯಲ್ಲಿ ತಿಂಡಿ ತಿನ್ನುವುದಕ್ಕೆಂದು ಅಪ್ಪನ ಕೈ ಹಿಡಿದುಕೊಂಡು ಬರುತ್ತಿದ್ದವರೆಲ್ಲ ಈಗ ತಂತಮ್ಮ ಮಕ್ಕಳನ್ನು ಕಾರಿನಲ್ಲಿ ಕೂರಿಸಿಕೊಂಡು ಬಂದು ಇಲ್ಲಿಯೇ ತಿಂಡಿ ಕೊಡಿಸುತ್ತಾರೆ.

–ಭರತ್‌ ರೇವಣ್ಣ***


ಬದುಕು ಕಟ್ಟಿ ಕೊಟ್ಟ ಮಂಚೂರಿ

ಚಿಕ್ಕಂದಿನಿಂದ ಹೋಟೆಲ್‌ಗಳಲ್ಲಿಯೇ ಕೆಲಸ ಮಾಡುತ್ತಿದ್ದೆ. ಕಳೆದ ಮೂರು ವರ್ಷಗಳಿಂದ ಇಲ್ಲಿ ಚೈನೀಸ್‌ ಫುಡ್‌ ಆರಂಭಿಸಿದೆ. ವೆಜ್‌ ಮಂಚೂರಿ, ಪಾಲಾಕ್‌ ಮಂಚೂರಿ, ಮಶ್ರೂಮ್‌ ಮಂಚೂರಿಗೆ ಹೆಚ್ಚು ಬೇಡಿಕೆ ಇದೆ. ಈ ತಿಂಡಿಗಳಿಗೆಲ್ಲ ಹೋಟೆಲ್‌ಗಳಲ್ಲಿ ₹ 200ರಿಂದ ₹ 250ರ ವರೆಗೂ ಬೆಲೆ ಇದೆ. ನಮ್ಮಲ್ಲಿ ₹50–60 ರೂಪಾಯಿ ಮಾತ್ರ. ಹಾಗೆಂದು ಗುಣಮಟ್ಟದಲ್ಲೇನೂ ಮೋಸವಿಲ್ಲ.

–ಅಜಯ್‌***


ಎರಡು ದಶಕಗಳ ನಂಟು

ಸುಮಾರು 20 ವರ್ಷಗಳಿಂದ ಈ ಬೀದಿಯೊಂದಿಗೆ ನಂಟು ಬೆಳೆದುಕೊಂಡು ಬಂದಿದೆ. ಇಲ್ಲಿ ಆಹಾರ ತಯಾರಿಸಿಕೊಡುವವರೂ ಆಪ್ತವಾಗಿದ್ದಾರೆ. ವಾರಕ್ಕೊಮ್ಮೆ ಹೆಂಡತಿ–ಮಕ್ಕಳೊಂದಿಗೆ ಬಂದು ಇಲ್ಲಿನ ತಿಂಡಿ ಸವಿದು ಹೋಗದಿದ್ದರೆ ಸಮಾಧಾನವೇ ಇರೋಲ್ಲ.

–ಮಹಾದೇವ***


ಸಂಸಾರ ಬಂಡಿ ದಡ ಸೇರಿದ ತೃಪ್ತಿ

ಸುಮಾರು 35 ವರ್ಷಗಳ ಹಿಂದೆ ಜೀವನ ನಡೆಸಲು ಬೇರೆ ದಾರಿ ಇಲ್ಲದೆ ತಿಂಡಿ ವ್ಯಾಪಾರ ಆರಂಭಿಸಿದೆ. ಅದೆಷ್ಟೋ ವರ್ಷ ಪುರಿಗೆ ಉಪ್ಪು–ಖಾರ ಹಾಕಿ ಕಲಕಿದ್ದೇ ಆಯಿತು. ಕೆಲ ವರ್ಷಗಳ ನಂತರ ಏನಾದರೂ ಹೊಸತನ್ನು ಸೇರಿಸಬೇಕು ಎಂದುಕೊಂಡು ಬೇರೆ ಬೇರೆ ತಿಂಡಿಗಳನ್ನು ಮಾಡಲು ಆರಂಭಿಸಿದೆ. ಜನರಿಗೂ ರುಚಿಸಿತು. ಈಗ 12 ಪ್ರಕಾರದ ತಿಂಡಿಗಳನ್ನು ಮಾಡುತ್ತೇವೆ. 15 ಜನರಿಗೆ ಕೆಲಸ ಕೊಟ್ಟಿದ್ದೇನೆ. ಹಿರಿಯ ಮಗ ಐಎಎಸ್‌ ಮಾಡುತ್ತಿದ್ದಾನೆ. ಒಬ್ಬ ಮಗ ಹೆಚ್ಚು ಓದಲಿಲ್ಲ. ನನ್ನೊಂದಿಗೇ ನಿಂತ. ಇನ್ನೊಬ್ಬ ಈಗ ಎಸ್ಸೆಸೆಲ್ಸಿ ಓದುತ್ತಿದ್ದಾನೆ. ಹೆಂಡತಿಯೂ ನನ್ನ ಕೆಲಸಕ್ಕೆ ಬೆನ್ನೆಲುಬಾಗಿದ್ದಾಳೆ. ನನ್ನಿಡೀ ಸಂಸಾರ ಬಂಡಿಯನ್ನು ಇಷ್ಟು ಇರ್ಷ ಎಳೆದುಕೊಂಡು ಬಂದಿದೆ ಈ ವ್ಯಾಪಾರ.

–ಶಂಕರ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.