ಭಾನುವಾರ, ಮೇ 16, 2021
24 °C

ದಶಕದಲ್ಲಿ 337 ಹುಲಿಗಳ ಸಾವು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅಪಾಯದ ಅಂಚಿನಲ್ಲಿರುವ ಹುಲಿಗಳ ಸಂತತಿ ದಿನೇ ದಿನೇ ಕ್ಷಿಣಿಸುತ್ತಿರುವ ಆತಂಕದ ನಡುವೆಯೇ, ದೇಶದ ವಿವಿಧೆಡೆ ಕಳೆದ ಒಂದು ದಶಕದಲ್ಲಿ ಸುಮಾರು 337ಕ್ಕೂ ಹೆಚ್ಚು ಹುಲಿಗಳು ವಿವಿಧ ಕಾರಣಗಳಿಂದ ಸಾವನ್ನಪ್ಪಿವೆ ಎಂಬ ಮತ್ತೊಂದು ಆಘಾತಕಾರಿ ಸುದ್ದಿ ಬಹಿರಂಗವಾಗಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಲಾದ ಪ್ರಶ್ನೆಗೆ ರಾಷ್ಟ್ರೀಯ ಹುಲಿ ಸಂತತಿ ಸಂರಕ್ಷಣಾ ಪ್ರಾಧಿಕಾರ ನೀಡಿದ ಅಂಕಿ, ಅಂಶಗಳಿಂದ ಈ ರಹಸ್ಯ  ಬಯಲಾಗಿದೆ. ವೃದ್ಧಾಪ್ಯದಿಂದ ಸಾವನ್ನಪ್ಪಿದ ಹುಲಿಗಳಿಗಿಂತ ರಸ್ತೆ- ರೈಲು ಅಪಘಾತ, ಹಸಿವು, ಆಂತರಿಕ ಕಚ್ಚಾಟ, ವಿದ್ಯುತ್ ಆಘಾತದಿಂದ ಸಾವನ್ನಪ್ಪಿದ ಮತ್ತು ಬೇಟೆಗಾರರಿಗೆ ಬಲಿಯಾದ ವ್ಯಾಘ್ರಗಳ ಸಂಖ್ಯೆಯೇ ಹೆಚ್ಚು ಎನ್ನುವುದು ಆತಂಕ ಹೆಚ್ಚಿಸಿದೆ.68 ಹುಲಿಗಳು ಬೇಟೆಗಾರರಿಗೆ ಬಲಿಯಾಗಿದ್ದು, ಉಳಿದವು ಇನ್ನಿತರ ಕಾರಣಗಳಿಂದಾಗಿ ಸಾವನ್ನಪ್ಪಿವೆ. ಹುಲಿಗಳ ಸಾವಿನ 12 ಪ್ರಕರಣಗಳನ್ನು ಹಲವಾರು ವರ್ಷಗಳ ನಂತರವೂ ಭೇದಿಸಲಾಗಿಲ್ಲ. 2003ರಲ್ಲಿ ನಡೆದ ಎರಡು ಹುಲಿಗಳ ಮರಣೋತ್ತರ ವೈದ್ಯಕೀಯ ಪರೀಕ್ಷೆಯ ವರದಿ ಇನ್ನೂ ಸಿದ್ಧಗೊಂಡಿಲ್ಲ ಎಂಬ ಆಶ್ಚರ್ಯಕರ ವಿಷಯವನ್ನೂ ಪ್ರಾಧಿಕಾರದ ಮಾಹಿತಿ ಬಹಿರಂಗಪಡಿಸಿದೆ.ರಾಜಸ್ತಾನದ ಸರಿಸ್ಕಾ, ಮಧ್ಯಪ್ರದೇಶದ ಪನ್ನಾ, ಉತ್ತರ ಪ್ರದೇಶದ ಕಾತರ‌್ನಿಯಾ, ಕೇರಳ ಮತ್ತು ಕರ್ನಾಟಕದ ವಿವಿಧ ಅರಣ್ಯ ಪ್ರದೇಶ, ಸಂರಕ್ಷಿತ ಪ್ರದೇಶ, ಹುಲಿಧಾಮಗಳಲ್ಲಿ ಈ ಹಿಂದೆ ನಡೆದ ಹುಲಿಗಳ ನಿಗೂಢ ಕಣ್ಮರೆ, ಸಾವುಗಳ ಪೈಕಿ ಐದು ಘಟನೆಗಳ ರಹಸ್ಯ ಭೇದಿಸಲು ಸಾಧ್ಯವಾಗದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಪ್ರಾಧಿಕಾರ ಕೋರಿದೆ.2010ರಲ್ಲಿ ನಡೆದ ಹುಲಿಗಳ ಗಣತಿ ಪ್ರಕಾರ ದೇಶದಲ್ಲಿ ಒಟ್ಟು 1,706 ಹುಲಿಗಳಿವೆ.ಕ್ಷಿಣಿಸುತ್ತಿರುವ ವ್ಯಾಘ್ರ ಸಂತತಿ ಸಂರಕ್ಷಣೆಯ ವಿವಿಧ ಯೋಜನೆಗಳಿಗೆ ಕೇಂದ್ರ ಸರ್ಕಾರ 17 ರಾಜ್ಯಗಳಿಗೆ ಈ ಅವಧಿಯಲ್ಲಿ ಒಟ್ಟು 145 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.  ಈ ಅಂಶವು ಪ್ರಾಧಿಕಾರ ನೀಡಿದ ಮಾಹಿತಿಯಲ್ಲಿ ಲಭ್ಯವಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.