ಮಂಗಳವಾರ, ಜನವರಿ 21, 2020
28 °C
ರೆಸಾರ್ಟ್‌ ಖರೀದಿಗೆ ಮುಂದಾಗಿದ್ದ ಒಡೆಯರ್‌

ದಾವಣಗೆರೆ ಮೇಷ್ಟ್ರಿಗೆ ಒಡೆಯರ್‌ ಪ್ರೀತಿಯ ಶಿಷ್ಯ!

ಪ್ರಜಾವಾಣಿ ವಾರ್ತೆ/ ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

ದಾವಣಗೆರೆ: ‘ಬೆಣ್ಣೆದೋಸೆ’ ಖ್ಯಾತಿಯ ದಾವಣಗೆರೆಗೂ ಶ್ರೀಕಂಠದತ್ತ ಒಡೆಯರ್‌ಗೂ ಅವಿನಾಭಾವ ಸಂಬಂಧವಿದೆ. ಅದಕ್ಕೆ ಕಾರಣ ದಾವಣಗೆರೆಯ ಮೇಷ್ಟ್ರಿಗೆ ಒಡೆಯರ್‌ ಪ್ರೀತಿಯ ಶಿಷ್ಯರಾಗಿದ್ದರು.1969ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನ ವಿದ್ಯಾರ್ಥಿ ಆಗಿದ್ದ ಅವರಿಗೆ ರಾಜ್ಯಶಾಸ್ತ್ರ ಬೋಧನೆ ಮಾಡುತ್ತಿದ್ದವರು ದಾವಣಗೆರೆಯ ಪ್ರೊ.ಚಂಬಿ ಪುರಾಣಿಕ್‌.  ಪುರಾಣಿಕ್ ಅವರು ನಗರದ ಡಿಆರ್‌ಎಂ ಕಾಲೇಜಿನ ಪಿಯು ವಿದ್ಯಾರ್ಥಿಯೂ ಆಗಿದ್ದರು. ಆಗ ಅವರ ಮನೆ ಹಳೇ ದಾವಣಗೆರೆಯ ಬಿನ್ನಿ ಮಿಲ್‌ ಕಂಪೆನಿ ರಸ್ತೆಯಲ್ಲಿತ್ತು. ಬಳಿಕ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕರಾದರು. ಆಗ ಅಲ್ಲಿ ಶ್ರೀಕಂಠದತ್ತ ಒಡೆಯರ್‌ಗೆ ಮೂರು ವರ್ಷಗಳ ಕಾಲ ಬೋಧಕರಾಗಿದ್ದರು.ಬಳಿಕವೂ ಗುರು– ಶಿಷ್ಯರ ಸಂಬಂಧ ಹಾಗೆಯೇ ಮುಂದುವರಿದಿತ್ತು. ಗುರುಗಳನ್ನೇ ಶೈಕ್ಷಣಿಕ ಸಲಹೆಗಾರರಾಗಿ ನೇಮಕ ಮಾಡಿಕೊಂಡರು. ಒಡೆಯರ್‌ 2007ರಲ್ಲಿ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಚುನಾವಣೆಗೆ ಸ್ಪರ್ಧಿಸಿದ್ದರು. ಆಗ ಪುರಾಣಿಕ್‌ ಜತೆಗೆ ದಾವಣಗೆರೆಗೂ ಬಂದು ಪ್ರಚಾರ ಮಾಡಿ ಹೋಗಿದ್ದರು. ‘ಒಡೆಯರ್‌ಗೆ ಕ್ರಿಕೆಟ್‌ನಲ್ಲಿ ತುಂಬ ಆಸಕ್ತಿಯಿತ್ತು. ವಿ.ವಿ. ತಂಡದಲ್ಲಿದ್ದರು. ತರಗತಿಗಳಿಗೂ ಚಕ್ಕರ್‌ ಹೊಡೆಯುತ್ತಿದ್ದರು. ಬಳಿಕ ತರಗತಿಗೆ ಬಂದು ಕಾರಣ ಹೇಳಿ ಕ್ಷಮೆ ಕೇಳುತ್ತಿದ್ದರು. ಸಾಮಾನ್ಯ ವಿದ್ಯಾರ್ಥಿಯಂತೆ ಪಾಠ ಕೇಳುವ ಗುಣ ಅವರಲ್ಲಿತ್ತು. ಇತರ ಸ್ನೇಹಿತರೊಂದಿಗೆ ಬೆರೆಯುವ ಗುಣವೂ ಅವರಲ್ಲಿತ್ತು. ರಾಜ ಮನೆತನದಿಂದ ಬಂದಿದ್ದರೂ ಪ್ರಜಾಪ್ರಭುತ್ವದ ಬಗ್ಗೆ ಅಪಾರ ಗೌರವವಿತ್ತು. ಆತ ವಿಧೇಯ ವಿದ್ಯಾರ್ಥಿ ಕೂಡ’ ಎಂದು ಚಂಬಿ ಪುರಾಣಿಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.‘ಕಾಲೇಜಿನಲ್ಲಿ ಮಾತ್ರ ಪಾಠ ಹೇಳುತ್ತಿರಲಿಲ್ಲ. ಮನೆಗೂ ತೆರಳಿ ಪಾಠ ಮಾಡುತ್ತಿದ್ದೆ. ಆತ ಹೃದಯಶ್ರೀಮಂತಿಕೆಯ ವ್ಯಕ್ತಿ. ತಮ್ಮದೇ ಆದ ವಿಶ್ವವಿದ್ಯಾಲಯ ಪ್ರಾರಂಭಿಸಿ, ಸಾಂಪ್ರದಾಯಿಕ ಶಿಕ್ಷಣ ನೀಡಬೇಕು ಎಂದು ಕನಸು ಕಂಡಿದ್ದರು. ಅದಕ್ಕಾಗಿಯೇ ನನ್ನನ್ನು ಶೈಕ್ಷಣಿಕ ಸಲಹೆಗಾರ ಎಂದು ನೇಮಕ ಮಾಡಿಕೊಂಡು, ಎರಡು ದಿನಗಳ ಹಿಂದಷ್ಟೇ ಈ ಸಂಬಂಧ ಮಾತುಕತೆ ನಡೆಸಿದ್ದೆವು. ಅದು ಕೈಗೂಡಲಿಲ್ಲ’ ಎಂದು ಶಿಷ್ಯನ ಬಗ್ಗೆ ಹೇಳಿದರು.ರೆಸಾರ್ಟ್‌್ ಖರೀದಿಗೆ...!: ದಾವಣಗೆರೆಯಲ್ಲಿ ರೆಸಾರ್ಟ್‌ ಖರೀದಿಗೂ ಒಡೆಯರ್‌ ಚಿಂತನೆ ನಡೆಸಿದ್ದರು. ಕ್ರಿಕೆಟ್‌ ಸಂಸ್ಥೆಯ ಚುನಾವಣೆಗೆ ಸ್ಪರ್ಧಿಸಿದ್ದಾಗ ದಾವಣಗೆರೆ ಬಂದಿದ್ದ ಅವರು, ಜೆನೆಸಿಸ್‌ ರೆಸಾರ್ಟ್‌ನಲ್ಲಿ ಊಟಕ್ಕೆ ಹೋಗಿದ್ದರು. ಅಲ್ಲಿನ ಪರಿಸರ, ಆಹ್ಲಾದಕರ ವಾತಾವರಣ ಕಂಡು ರೆಸಾರ್ಟ್‌ ಖರೀದಿಗೂ ಮುಂದಾಗಿದ್ದರು ಎಂದು ರೆಸಾರ್ಟ್‌ ಮಾಲೀಕ ಮಂಜುನಾಥ್‌ಗೌಡ ತಿಳಿಸಿದರು.ದಾವಣಗೆರೆಯಲ್ಲೊಂದು ಹೆಲಿಪ್ಯಾಡ್‌ ನಿರ್ಮಿಸಿ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂಬ ಕನಸೂ ಅವರಿಗಿತ್ತು

ಪ್ರತಿಕ್ರಿಯಿಸಿ (+)