ಮಂಗಳವಾರ, ಮೇ 24, 2022
26 °C

ದಾಸ, ವಚನ ಸಾಹಿತ್ಯದ ಪ್ರಭಾವ ದೊಡ್ಡದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಒಳಗಣ್ಣನ್ನು ತೆರೆದು ದಾಸ ಸಾಹಿತ್ಯವನ್ನು ಓದಬೇಕು ಎಂದು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ಅಭಿಪ್ರಾಯಪಟ್ಟರು. ಬೆಂಗಳೂರಿನ ಭಕ್ತಿ ಭಾರತಿ ಪ್ರತಿಷ್ಠಾನ ಮತ್ತು ಮೈಸೂರಿನ ಹರಿದಾಸೋತ್ಸವ ಸಂಘಟನಾ ಸಮಿತಿ ಸಂಯುಕ್ತಾಶ್ರಯದಲ್ಲಿ ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಆಯೋಜಿಸಿರುವ ‘ಶ್ರೀಪುರಂದರೋತ್ಸವ’ ಭಕ್ತಿಮೇಳದ ಅಂಗವಾಗಿ ಶನಿವಾರ ನಡೆದ ‘ಹರಿದಾಸರ ಹಾಡು- ಪಾಡು’ ಕುರಿತ ವಿಚಾರ ಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.‘ಸಮಾಜದಲ್ಲಿ ಪ್ರಭಾವ ಬೀರಿದ ಎರಡು ಸಾಹಿತ್ಯಗಳೆಂದರೆ ಅದು ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯ. ಇವುಗಳಲ್ಲಿ ವಚನ ಸಾಹಿತ್ಯ ಮೊದಲು ಬಂತು. ನಂತರ ಈ ಸಾಹಿತ್ಯವನ್ನೇ ದಾಸರು ಗಾನದ ರೂಪಕ್ಕೆ ತಂದರು. ಹಾಡು ಮನಸ್ಸನ್ನು ಪ್ರತಿಧ್ವನಿಸುತ್ತದೆ. ಹೀಗೆ ದಾಸ ಸಾಹಿತ್ಯ ನಾದ ಹಾಗೂ ಸಾಹಿತ್ಯದ ಪ್ರಭಾವವನ್ನು ಹೊಂದಿ ಕನ್ನಡದಲ್ಲಿ ಬೆಳೆದು ಬಂದಿದೆ’ ಎಂದು ನುಡಿದರು.‘ಪುರಂದರ ದಾಸರು ತಮ್ಮ ನುಡಿಗಟ್ಟುಗಳಲ್ಲಿ ಹಾಗೂ ಸಣ್ಣ ಸಣ್ಣ ಮಾತುಗಳ ಮೂಲಕ ಏನೋ ಒಂದು ರೀತಿಯ ಚಿಂತನೆಯನ್ನು ಹುಟ್ಟುಹಾಕಿದರು ಹಾಗೂ ಹೃದಯವನ್ನು ತಟ್ಟುವ ಹಾಗೆ ಚಲನೆಯನ್ನು ಮೂಡಿಸಿದರು. ಎಲ್ಲರ ಜೀವನದಲ್ಲಿ ನಡೆಯುವ ಹಾಗೆ ಪುರಂದರ ದಾಸರ ಜೀವನದಲ್ಲೂ ಕೆಲವು ಘಟನೆಗಳು ನಡೆದಿವೆ. ಆದರೆ ದಾಸರು ಅದನ್ನು ಗ್ರಹಿಸಿದ ಬಗೆ, ಪ್ರತಿಕ್ರಿಯಿಸಿದ ಬಗೆ ಮಾತ್ರ ಭಿನ್ನವಾದುದು’ ಎಂದರು.‘ಮನುಷ್ಯನ ಚಿಂತನಾ ಕ್ರಮ ಬೇರೆ ಆದಂತೆ ಒಂದೇ ಮಾತು ಬೇರೆ ಬೇರೆ ಅರ್ಥ ಕೊಡುತ್ತದೆ. ದಾಸರು ಯಾವ ಅನುಭೂತಿಯಿಂದ ಹಾಡಿದರೋ ಅವುಗಳು ನಮ್ಮ ಅನುಭೂತಿಗೆ ಮಾತ್ರ ಸೀಮಿತವಾಗಿಬಿಟ್ಟಿದೆ. ದಾಸರ ಅನುಭೂತಿಯ ಎತ್ತರಕ್ಕೆ ಏರುವ ಪ್ರಯತ್ನ ಯಾರು ಮಾಡಲಿಲ್ಲ. ಅದು ಸುಲಭವೂ ಅಲ್ಲ’ ಎಂದರು. ‘ದಾಸ ಸಾಹಿತ್ಯ, ವಚನ ಸಾಹಿತ್ಯ, ಉಪನಿಷತ್ ಸಾಹಿತ್ಯ ಎಲ್ಲವೂ ಅನುಭಾವ ಸಾಹಿತ್ಯಗಳಾಗಿವೆ. ಎಲ್ಲರೂ ಬಹಿರ್ಮುಖಿಗಳಾಗಿ ಮುಖವಾಡ ಧರಿಸಿ ಬದುಕುತ್ತಿದ್ದೇವೆ. ದಾಸ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವ ಮೂಲಕ ಅಂತರ್ಮುಖಿಗಳಾಗ  ಬೇಕಿದೆ’ ಎಂದರು.ಖ್ಯಾತ ಚಿಂತಕ ಎಸ್.ಲಕ್ಷ್ಮೀಶ ತೋಲ್ಪಾಡಿ ಮಾತನಾಡಿ, ‘ನಾಲ್ಕೈದು ಶತಮಾನಗಳಿಂದ ಪುರಂದರದಾಸರ ಹಾಡುಗಳನ್ನು ಕೇಳುತ್ತಿದ್ದೇವೆ. ಆ ಹಾಡಿನ ಹಿಂದೆ ಒಂದು ಪಾಡು ಇದೆ. ದಾಸರು ಸಾವಿರಾರು ಹಾಡು ಬರೆಯುವುದಕ್ಕೆ ಮುಂಚೆ ಅವರು ಏನಾಗಿದ್ದರೂ ಎಂದು ನಮಗೆ ಕುತೂಹಲ ಮೂಡುತ್ತದೆ.’ ಎಂದರು. ‘ದಾಸರು ಸೋಲುವುದರ ಒಂದು ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಲೋಕದಲ್ಲಿ ಮನುಷ್ಯರು ಅಹಂಕಾರವನ್ನು ಹೊಂದಿದ್ದಾರೆ. ಅವುಗಳನ್ನು ಕರಗಿಸುವುದು ದಾಸರ ಹಾಡುಗಳ ಏಕಮೇವ ಉದ್ದೇಶವಾಗಿದೆ’ ಎಂದರು. ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ ಹಾಗೂ ಖ್ಯಾತ ಸಾಹಿತಿ ಅಬ್ದುಲ್ ರಷೀದ್ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.ಇದಕ್ಕೂ ಮುನ್ನ ಸಂಗೀತ ವಿದ್ಯಾನಿಧಿ ಡಾ.ವಿದ್ಯಾಭೂಷಣ ಅವರ ವಿರಚಿತ ‘ತಾಳ ಬೇಕು, ತಕ್ಕ ಮೇಳ ಬೇಕು’ ಎನ್ನುವ ಕೃತಿಯನ್ನು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ಬಿಡುಗಡೆ ಮಾಡಿದರು. ವಿದ್ಯಭೂಷಣ ಅವರ ಮಕ್ಕಳಾದ ಅನಿರುದ್ಧ ವಿದ್ಯಾಭೂಷಣ ಮತ್ತು ಮೇಧಾ ವಿದ್ಯಾಭೂಷಣ ಪುರಂದರ ಹಾಡುಗಳನ್ನು ಹಾಡುವ ಮೂಲಕ ಪ್ರಾರ್ಥನೆ ಮಾಡಿ ನೆರೆದಿದ್ದವರ ಗಮನ ಸೆಳೆದರು. ಹಿರಿಯ ಚಿತ್ರನಟ ಶಿವರಾಂ ನಿರೂಪಣೆ ಮಾಡಿದರು.ಕಾರ್ಯಕ್ರಮದಲ್ಲಿ ಚಿತ್ರನಟಿ ಭಾರತೀ ವಿಷ್ಣುವರ್ಧನ್ ಕೂಡ  ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.