ಮಂಗಳವಾರ, ಮೇ 18, 2021
24 °C

ದಿಕ್ಕು ತಪ್ಪಿದ ಸರ್ಕಾರಿ ಐಟಿಐ ಆಡಳಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುರುವೇಕೆರೆ: ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಆಡಳಿತ ನಿಯಂತ್ರಣವಿಲ್ಲದೆ ದಿಕ್ಕು ತಪ್ಪಿದ್ದು, ಲಕ್ಷಾಂತರ ರೂಪಾಯಿಯನ್ನು ವಿವೇಚನೆ ಇಲ್ಲದೆ ಬಳಸಿರುವುದು ಸಂಶಯಕ್ಕೆಡೆ ಮಾಡಿಕೊಟ್ಟಿದೆ.ಈಚೆಗೆ ಸಂಸ್ಥೆಯ ಲೆಕ್ಕಪತ್ರಗಳ ತನಿಖೆ ನಡೆಸಿದ ಮಹಾಲೇಖಪಾಲಕರ ಕಚೇರಿ ಲೆಕ್ಕ ಪರಿಶೋಧನಾ ತಂಡ ಹಲವಾರು ಗುರುತರವಾದ ಆರೋಪಗಳ ಪಟ್ಟಿ ಮಾಡಿ ಸಂಸ್ಥೆಯ ಪ್ರಾಚಾರ್ಯರಿಂದ ವಿವರಣೆ ಕೇಳಿದೆ. ತರಬೇತಿ ಸಂಸ್ಥೆ ಒಂದು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದೆ. ಈ ಕಟ್ಟಡದ ಒಂದು ಭಾಗಕ್ಕೆ ಲೋಕೋಪಯೋಗಿ ಇಲಾಖೆ 3.2.2011ರಲ್ಲಿ ತಿಂಗಳಿಗೆ ರೂ. 11800 ಬಾಡಿಗೆ ನಿಗದಿ ಮಾಡಿದೆ. ಆದರೆ ಕಾಲೇಜಿನ ಆಡಳಿತ ಮಂಡಳಿ ಈ ಸೂಚನೆ ಧಿಕ್ಕರಿಸಿ ಪ್ರತಿ ತಿಂಗಳು ರೂ. 18 ಸಾವಿರ ಬಾಡಿಗೆ ಪಾವತಿ ಮಾಡಿದೆ. ಇದರಿಂದ ಒಟ್ಟಾರೆ ಸರ್ಕಾರಕ್ಕೆ ರೂ. 1,67,400 ನಷ್ಟವಾಗಿದೆ ಎಂದು ಆಕ್ಷೇಪಿಸಲಾಗಿದೆ.ಇನ್‌ಸ್ಟಿಟ್ಯುಟ್ ಮೇನೇಜ್‌ಮೆಂಟ್ ಕಮಿಟಿ (ಐಎಂಸಿ) ಸೊಸೈಟಿಗಳ ಕಾಯಿದೆಯಡಿ ನೋಂದಣಿಯಾಗಿದ್ದು, ಹಲ ವರ್ಷಗಳಿಂದ ನವೀಕರಣಗೊಂಡಿಲ್ಲ. ಐಎಂಸಿಗೆ ಕೇಂದ್ರದಿಂದ ರೂ. 2.5 ಕೋಟಿ  ಬಡ್ಡಿರಹಿತ ಸಾಲ ನೀಡಲಾಗಿದೆ. ಈ ಹಣದ ಶೇ 50ಭಾಗವನ್ನು ನಿಶ್ಚಿತ ಠೇವಣಿ ಇಡಬೇಕು. ಮಿಕ್ಕ ಹಣವನ್ನು ಉದ್ಯೋಗ ತರಬೇತಿ ಸಂಸ್ಥೆಯ ಅಭಿವೃದ್ಧಿ ಮತ್ತು ಉನ್ನತೀಕರಣಕ್ಕೆ ಬಳಸಬೇಕಿದೆ. ಆದರೆ ಇದರಲ್ಲಿ ರೂ. 2.17 ಕೋಟಿ ಹಣವನ್ನು ಕ್ರಮವಲ್ಲದ ರೀತಿಯಲ್ಲಿ ಪಟ್ಟಣದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಇದ್ದರೂ ತುಮಕೂರಿನಲ್ಲಿ ಠೇವಣಿಯಾಗಿಡಲಾಗಿದೆ.ಸಂಸ್ಥೆ ನಿರ್ವಹಣೆಗೆ ಈ ಹಣ ಬಳಸಬಾರದು ಎಂದು ಸ್ಪಷ್ಟ ನಿಯಮವಿದ್ದರೂ; ಲಕ್ಷಾಂತರ ರೂಪಾಯಿಗಳನ್ನು ಬಾಡಿಗೆ, ಟೆಲಿಫೋನ್ ಬಿಲ್, ವೇತನ ಮೊದಲಾದ ಬಾಬ್ತುಗಳಿಗೆ ಬಳಸಲಾಗಿದೆ. ಉದ್ಯೋಗ ತರಬೇತಿ ಕೇಂದ್ರಕ್ಕೆಂದು ಕೊಡಗೀಹಳ್ಳಿ ಸಮೀಪ ಐದು ಎಕರೆ ಜಮೀನು ಮಂಜೂರಾಗಿದೆ. ಐಎಂಸಿ ಇಷ್ಟೆಲ್ಲ ಹಣ ಇದ್ದರೂ ಕಟ್ಟಡ ನಿರ್ಮಾಣವಿರಲಿ, ನಿವೇಶನಕ್ಕೊಂದು ಬೇಲಿ ಹಾಕಿಸುವ ಪ್ರಯತ್ನವನ್ನೂ ಮಾಡಿಲ್ಲ. ಐಎಂಸಿ ಖಾತೆಯ ಹಣದ ನಿರ್ವಹಣೆಯನ್ನು ಗೋಪ್ಯವಾಗಿರಿಸಲಾಗಿದ್ದು, ಕಚೇರಿಯಲ್ಲಿ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಅಲ್ಲಿನ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.ಇಷ್ಟೆಲ್ಲ ಅವ್ಯವಸ್ಥೆಗಳಿದ್ದರೂ ಇಲ್ಲಿನ ಪ್ರಾಂಶುಪಾಲ ಕೃಷ್ಣಮೂರ್ತಿ ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ. ಕಾಲೇಜಿಗೆ ಚಕ್ಕರ್ ಹಾಕುವುದರಲ್ಲಿ ನಿಸ್ಸೀಮರು. ವಾರಕ್ಕೊಂದು ದಿನವೂ ಕಾಲೇಜಿಗೆ ಬರುವುದಿಲ್ಲ. ದಾಖಲೆಗಳಿಗೆ ಸಹಿ ಹಾಕಿಸಲು ಬೆಂಗಳೂರಿಗೇ ಬನ್ನಿ ಎಂದು ಒತ್ತಾಯಿಸುತ್ತಾರೆ ಎಂದು ಪೋಷಕರು ದೂರುತ್ತಾರೆ.ತಿಂಗಳಲ್ಲಿ ಒಂದು ದಿನ ಕಾಲೇಜಿಗೆ ಬಂದು ಇಡೀ ತಿಂಗಳ ಸಂಬಳ ಪಡೆದಿದ್ದಾರೆ ಎಂದು ದಾಖಲೆಗಳ ಸಮೇತ ಆರೋಪಿಸುತ್ತಾರೆ. ಪ್ರಾಂಶುಪಾಲರೇ ಏಕಾಂಗಿಯಾಗಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ಸ್ಪಷ್ಟ ನಿದರ್ಶನವೆಂಬಂತೆ ಐಎಂಸಿ ಕೋಟಾದಡಿ 21 ಸೀಟುಗಳಿಗೆ ತಲಾ ರೂ.15 ಸಾವಿರ ನಿಗದಿ ಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಆಡಳಿತ ಮಂಡಳಿ ಸಭೆಯೂ ನಡೆದಿಲ್ಲ. ಯಾವ ತೀರ್ಮಾನವೂ ಆಗಿಲ್ಲ. ವಾರ್ಷಿಕ ಸಾಮಾನ್ಯ ಸಭೆಯ ದಿನಾಂಕ ಹಾಕಿ ಸದಸ್ಯರ ಹೆಸರು ಬರೆದು ಖಾಲಿ ಬಿಡಲಾಗಿದೆ ಎಂದು ಪೋಷಕರೊಬ್ಬರು ಕಾಲಿ ಬಿಟ್ಟ ಸಭಾ ನಡವಳಿಕೆ ಪುಸ್ತಕದ ಪ್ರತಿಗಳನ್ನು `ಪ್ರಜಾವಾಣಿ'ಗೆ ನೀಡಿದ್ದಾರೆ.ಪ್ರಾಂಶುಪಾಲರು ಬಿಇ ಪದವಿ ಪಡೆದಿದ್ದರೂ; ಅದನ್ನು ಮುಚ್ಚಿಟ್ಟು ಡಿಪ್ಲೊಮೊ ಆಧಾರದಲ್ಲಿ ಸೇವೆಗೆ ಸೇರಿದ್ದು ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಉದ್ಯೋಗ ಮತ್ತು ತರಬೇತಿ ಇಲಾಖೆ ವಿಭಾಗೀಯ ಕಚೇರಿ ನಿಯಮಿತವಾಗಿ ಇಲ್ಲಿನ ವ್ಯವಹಾರ ಪರಿಶೀಲಿಸಬೇಕು. ಪ್ರಾಂಶುಪಾಲರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.