ಶನಿವಾರ, ಮೇ 8, 2021
25 °C

ದಿಗ್ವಿಜಯ ಸಿಂಗ್‌ಗೆ ರಾಜ್ಯ ಕಾಂಗ್ರೆಸ್ ಹೊಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಿಗ್ವಿಜಯ ಸಿಂಗ್‌ಗೆ ರಾಜ್ಯ ಕಾಂಗ್ರೆಸ್ ಹೊಣೆ

ನವದೆಹಲಿ:  ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ)ಯು ಭಾನುವಾರ ಪಕ್ಷದ ಕರ್ನಾಟಕ ವ್ಯವಹಾರಗಳ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರನ್ನು ಮಧುಸೂದನ್ ಮಿಸ್ತ್ರಿ ಅವರ ಬದಲಿಗೆ ನೇಮಿಸಿದೆ.ಸಿಂಗ್ ಅವರಿಗೆ ಸಹಾಯಕರಾಗಿ ಎಐಸಿಸಿ ಕಾರ್ಯದರ್ಶಿಗಳಾದ ಎ. ಚೆಲ್ಲಕುಮಾರ್, ಆರ್.ಸಿ. ಕುಂಟಿಯಾ ಹಾಗೂ ಶಾಂತಾರಾಮ್ ನಾಯ್ಕ ನೆರವಾಗಲಿದ್ದಾರೆ. ಸಿಂಗ್ ಅವರಿಗೆ ಪಕ್ಷದ ಆಂಧ್ರಪ್ರದೇಶ ಮತ್ತು ಗೋವಾ ವ್ಯವಹಾರಗಳ ಹೊಣೆಯನ್ನೂ ವಹಿಸಲಾಗಿದೆ. ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿರುವ ಮಿಸ್ತ್ರಿ ಅವರಿಗೆ ಹೆಚ್ಚಿನ ಹೊಣೆಯಾಗಿ ಸಿಂಗ್ ನೋಡಿಕೊಂಡಿದ್ದ ಉತ್ತರ ಪ್ರದೇಶದ ಜವಾಬ್ದಾರಿಯನ್ನು ನೀಡಲಾಗಿದೆ.ಆದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ಕರ್ನಾಟಕದಲ್ಲಿ ಗೆಲ್ಲಿಸಿಕೊಡುವ ಮಹತ್ವದ ಜವಾಬ್ದಾರಿ ಈಗ ಸಿಂಗ್ ಅವರ ಹೆಗಲಿಗೆ ಬಿದ್ದಿದೆ. ಆಂಧ್ರಪ್ರದೇಶದಲ್ಲಿ ಜಗನ್‌ಮೋಹನ್ ರೆಡ್ಡಿ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಪ್ರಬಲವಾಗುತ್ತಿರುವುದರಿಂದ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳು ಲಭಿಸುವ ಭರವಸೆ ಕಡಿಮೆ ಇದೆ.

ಹೀಗಾಗಿ ಕರ್ನಾಟಕದಲ್ಲಿ ಪ್ರಸ್ತುತ ಇರುವ ಪಕ್ಷದ ಏಳು ಲೋಕಸಭಾ ಸ್ಥಾನಗಳನ್ನು ಕನಿಷ್ಠ ಪಕ್ಷ 18ರಿಂದ 20ಕ್ಕೆ ಹೆಚ್ಚಿಸುವ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾದ ಹೊಣೆ ಸಿಂಗ್ ಮೇಲಿದೆ.ಪಕ್ಷದ ಸಂಘಟನೆಯ ಪುನರ್‌ರಚನೆಯಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಸ್ಥಾನ ಲಭಿಸಿದೆ. ಮಾಜಿ ಕೇಂದ್ರ ಸಚಿವರಾದ ಎಸ್.ಎಂ. ಕೃಷ್ಣ ಮತ್ತು ಎಂ.ವಿ. ರಾಜಶೇಖರನ್ ಅವರನ್ನು ಕಾಯಂ ಆಹ್ವಾನಿತ ಸದಸ್ಯರಾಗಿ ಉಳಿಸಿಕೊಳ್ಳಲಾಗಿದೆ.

ಆದರೆ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಅವರನ್ನು ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೈಬಿಡಲಾಗಿದೆ. ಆಸ್ಕರ್ ಪಕ್ಷದ ಉನ್ನತ ನಿರ್ಧಾರ ಕೈಗೊಳ್ಳುವ ಘಟಕವಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ)ಯ ಕಾಯಂ ಆಹ್ವಾನಿತರಾಗಿ ಸ್ಥಾನ ಪಡೆದಿದ್ದಾರೆ.ಇನ್ನೊಬ್ಬ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಸ್ಥಾನವನ್ನು ಉನ್ನತೀಕರಿಸಿ, ಸಿಡಬ್ಲ್ಯುಸಿ ಸದಸ್ಯರಾಗಿ ನೇಮಿಸಿರುವುದಲ್ಲದೆ, ಪ್ರಧಾನ ಕಾರ್ಯದರ್ಶಿಯಾಗಿ ಈಗಿನ ಛತ್ತೀಸಗಡದೊಂದಿಗೆ ಹೆಚ್ಚುವರಿಯಾಗಿ ಜಾರ್ಖಂಡ್ ಮತ್ತು ಒಡಿಶಾ ರಾಜ್ಯಗಳ ಉಸ್ತುವಾರಿಯನ್ನೂ ವಹಿಸಲಾಗಿದೆ. ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ದ್ವಿತೀಯ ಪುತ್ರಿ ಡಿ. ನಾಗರತ್ನ ಮತ್ತು ಎಂ.ಡಿ. ನಟರಾಜ್ ದಂಪತಿಯ ಪುತ್ರ ಸೂರಜ್ ಹೆಗ್ಡೆ ಹಾಗೂ ಯುವಮುಖಂಡ ಪ್ರಭಾ ಕಿಶೋರ್ ತಾವಿಯದ್ ಅವರನ್ನು ರಾಹುಲ್ ಗಾಂಧಿಯವರಿಗೆ ಸಹಾಯಕರಾಗಿ ಪಕ್ಷದ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.ಪಕ್ಷವು ಕಾರ್ಯಭಾರವನ್ನು ಹಂಚಿಕೆ ಮಾಡಿರುವ ಪ್ರಕಾರ, ಸೋನಿಯಾ ಗಾಂಧಿಯವರು ಎನ್‌ಎಸ್‌ಯುಐ ಮತ್ತು ಸೇವಾದಳ ಸೇರಿದಂತೆ ಕಾಂಗ್ರೆಸ್ ಮುಂಚೂಣಿ ಘಟಕಗಳ ಉಸ್ತುವಾರಿಯನ್ನೂ ನೋಡಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.