ಗುರುವಾರ , ಫೆಬ್ರವರಿ 25, 2021
17 °C
ರಂಗಭೂಮಿ

ದಿಟ್ಟ ಹೆಣ್ಣಿನ ಗಟ್ಟಿ ಕಥೆ ‘ರುಡಾಲಿ’

ವೈ.ಕೆ.ಸಂಧ್ಯಾಶರ್ಮ Updated:

ಅಕ್ಷರ ಗಾತ್ರ : | |

ದಿಟ್ಟ ಹೆಣ್ಣಿನ ಗಟ್ಟಿ ಕಥೆ ‘ರುಡಾಲಿ’

ಕರ್ನಾಟಕ ನಾಟಕ ಅಕಾಡೆಮಿಯ ‘ಮಾಸದ ನಾಟಕ’ವಾಗಿ ಇತ್ತೀಚೆಗೆ ನಯನ ರಂಗಮಂದಿರದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕಿ ಮಹಾಶ್ವೇತಾದೇವಿ ಕಥೆಯಾಧಾರಿತ ‘ರುಡಾಲಿ’ ನಾಟಕ ಪ್ರದರ್ಶಿತವಾಯಿತು. ಉಷಾ ಗಂಗೂಲಿ ಬರೆದ ಮೂಲ ಆಂಗ್ಲನಾಟಕವನ್ನು ಕನ್ನಡಕ್ಕೆ ಅನುವಾದಿಸಿದವರು ಎಸ್.ರಾಜಲಕ್ಷ್ಮಿ. ಮೈಸೂರಿನ ಪ್ರತಿಷ್ಠಿತ ರಂಗತಂಡ ‘ಸಮತೆಂತೋ’ ಅಭಿನಯಿಸಿದ ನಾಟಕವನ್ನು ಹಿರಿಯ ರಂಗಕರ್ಮಿ ರಾಮೇಶ್ವರಿ ವರ್ಮ ಹೊಸವಿನ್ಯಾಸದಿಂದ ನಿರ್ದೇಶಿಸಿದ್ದರು.ದೌರ್ಜನ್ಯ, ದಬ್ಬಾಳಿಕೆ ಮತ್ತು ಶೋಷಣೆಗಳ ವಿರುದ್ಧ ಪ್ರತಿಭಟನೆಯ ಧ್ವನಿಯಾಗಿ ಸಾಹಿತ್ಯ ರಚಿಸುವ ಮಹಾಶ್ವೇತಾದೇವಿ ಅವರ ‘ರುಡಾಲಿ’ಯಲ್ಲಿ ಆರಿಸಿಕೊಂಡಿರುವ ಕಥಾವಸ್ತುವೂ ಅದೇ. ಬಡ, ದಲಿತ ಹೆಣ್ಣುಮಗಳೊಬ್ಬಳು, ಉಳ್ಳವರ ದೌರ್ಜನ್ಯಕ್ಕೆ ಸಿಕ್ಕು ನೋವು ಅನುಭವಿಸುತ್ತ ಗಟ್ಟಿಯಾಗಿ, ತನ್ನ ವೈಯಕ್ತಿಕ ನೆಲೆಯಿಂದ ಸಾಮಾಜಿಕ ನೆಲೆಯತ್ತ ದಿಟ್ಟ ಹೆಜ್ಜೆಗಳನ್ನಿರಿಸಿ ಉಳಿದ ಶೋಷಿತ ಹೆಣ್ಣುಮಕ್ಕಳನ್ನು ಸಂಘಟಿಸಿ ಅವರಿಗೆ ಭರವಸೆಯ ಬೆಳಕಾದ ಗಾಥೆ. ನಾಟಕದ ಶೀರ್ಷಿಕೆ ಕಥೆಯ ಅಂತಃಸತ್ವವನ್ನು ಪರಿಣಾಮಕಾರಿಯಾಗಿ ಧ್ವನಿಸುತ್ತದೆ. ಮಾಲೀಕರು, ಒಡೆಯರು, ಶ್ರೀಮಂತವರ್ಗದವರು ಸತ್ತಾಗ ಅವರಿಗಾಗಿ ಅಳುವ ಬಾಡಿಗೆ ದುಃಖಿತರೇ ‘ರುಡಾಲಿ’. ಇದು ರಾಜಸ್ತಾನದಲ್ಲಿ ರೂಢಿಯಿರುವ ಪದ್ಧತಿ. ಕಾಸುನೀಡಿ ಅಳಿಸುವ ಅಣಕುವಾಡು ಅಥವಾ ನಾಟಕಾಂಕ. ಹೆಚ್ಚು ಜನ ಅತ್ತಷ್ಟೂ ಸತ್ತ ದೊಡ್ಡಮನುಷ್ಯನ ಪ್ರತಿಷ್ಠೆ-ಘನತೆ ಹೆಚ್ಚುತ್ತದೆಂಬ ನಂಬಿಕೆ. ಅವರ ಸಾವು ತುಂಬಲಾರದ ನಷ್ಟ, ಅವರಿಗಾಗಿ ಶೋಕಿಸುವವರಿದ್ದಾರೆಂಬ ಪ್ರದರ್ಶಕ ಆತ್ಮತೃಪ್ತಿ-ಸಮಾಧಾನ.‘ಶನಿಚರಿ’ ಎಂಬ ಬಡ, ದಲಿತ ಮಹಿಳೆಯೊಬ್ಬಳ ದುಃಖಾರ್ತ ಬದುಕಿನ ಸುತ್ತ ಪರಿಭ್ರಮಿಸುವ ಈ ನಾಟಕದಲ್ಲಿ ಅವಳಂತೆಯೇ ಕಷ್ಟಗಳ ಜಾಲದಲ್ಲಿ ಸಿಕ್ಕು ಶೋಷಿತರಾದ ಆ ಸಮಾಜದ ಇನ್ನಿತರ ಹೆಣ್ಣುಮಕ್ಕಳ ಬವಣೆಯನ್ನೂ ಆನುಷಂಗಿಕವಾಗಿ ಚಿತ್ರಿಸಲಾಗಿದೆ.

ದುರಂತಗಳ ಸರಮಾಲೆಯ ನಡುವೆ ಬದುಕು ದೂಡುತ್ತ ತನ್ನ ಅಸ್ತಿತ್ವಕ್ಕಾಗಿ, ಅರ್ಥಪೂರ್ಣತೆಗಾಗಿ ಹೋರಾಟ ನಡೆಸುವ ಶನಿಚರಿಯ ಪ್ರತಿಹೆಜ್ಜೆಯೂ ಮನವನ್ನು ಕಲಕುತ್ತದೆ. ಅವಳ ಕಣ್ಣೆದುರೇ ಅವಳವರೆನಿಸಿಕೊಂಡ ಬಂಧು-ಬಾಂಧವರು, ಕಡೆಗೆ ಗಂಡ, ಮಗನೂ ಮರಣಿಸುವ ಅನಿರೀಕ್ಷಿತ ಹೊಡೆತವನ್ನು ಸಹಿಸುತ್ತ ಜೀವನವನ್ನು ಎದುರಿಸುವ ದೃಢಸಂಕಲ್ಪ ಅವಳದು. ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯದಲ್ಲಿ ತನ್ನ ಕಣ್ಣೀರನ್ನು ಇಂಗಿಸಿಕೊಂಡು ಮುಂದಡಿಯಿಡುತ್ತಾಳೆ. ಈ ಸಂದರ್ಭದಲ್ಲಿ ಅವಳಿಗೆ, ಅವಳಷ್ಟೇ ಜೀವನದಲ್ಲಿ ಕಡುನೊಂದ ‘ಬಿಖ್‌ನಿ’ ಎಂಬ ಹೆಂಗಸೊಬ್ಬಳ ಪರಿಚಯವಾಗಿ ಅದು ಸಖ್ಯಕ್ಕೆ ತಿರುಗಿ, ಒಂದೇ ಮನೆಯಲ್ಲಿ ಇಬ್ಬರೂ ವಾಸಮಾಡುತ್ತ ಪರಸ್ಪರ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತ ಆಪ್ತಗೆಳತಿಯರಾಗಿ ಬಿಡುತ್ತಾರೆ.  ಜೀವನದಲ್ಲಿ ಯಾರನ್ನೂ ಇಷ್ಟು ಹಚ್ಚಿಕೊಳ್ಳದ ಶನಿಚರಿ, ಬಿಖ್‌ನಿಯ ಸಾಹಚರ್ಯದಲ್ಲಿ ಅತೀವ ಸಮಾಧಾನ ಪಡೆಯುತ್ತಾಳೆ.ಮೇಲ್ವರ್ಗದವರಿಂದ ಶೋಷಿತರಾದ ಇಬ್ಬರೂ ಸಮಾನ ದುಃಖಿಗಳಾದ್ದರಿಂದ ಅವರ ನಡುವೆ ಗಟ್ಟಿ ಸಂಬಂಧ ಬೆಸುಗೆಯಾಗಿ ಕೂಲಿನಾಲಿ ಮಾಡುತ್ತ ಜೀವನ ಸವೆಸುತ್ತಾರೆ. ಆದರೂ ಬಡತನ, ಹಸಿವೆ ಕಾಡಿದಾಗ ಹಣ ಸಂಪಾದನೆಯ ದಾರಿ ತಿಳಿಯದೆ ಹತಾಶರಾದಾಗ ಅವರಿಗೆ ನೆರವಾಗುವವನು ನೆರಮನೆಯ ‘ದುಲನ’. ಅವನ ಸಲಹೆಯಂತೆ ಅವರು ‘ರುಡಾಲಿ’ ವೃತ್ತಿ ಕೈಗೊಳ್ಳಲು ಸಿದ್ಧರಾಗುತ್ತಾರೆ. ಅವರ ಬದುಕು ಹೊಸದಾರಿಗೆ ಹೊರಳುತ್ತದೆ. ಎಂದೂ ತಮ್ಮ ಕಷ್ಟ-ನೋವುಗಳಿಗೆ ಕಣ್ಣೀರು ಹಾಕದವರು, ಈಗ ಹೊಟ್ಟೆಪಾಡಿಗಾಗಿ ಶ್ರೀಮಂತರ ಕೀರ್ತಿ-ಗೌರವ ಹೆಚ್ಚಿಸಲು ಅಳುವ ಅನಿವಾರ್ಯ ನಾಟಕಕ್ಕೆ ಮುಂದಾಗುವುದು ಆ ಸಮಾಜದ ವ್ಯಂಗ್ಯ ಕೂಡ. ಸ್ವಂತ ತಂದೆಯನ್ನೇ ಆಸ್ತಿಯ ಆಸೆಗಾಗಿ ಕೊಂದು, ಅವನ ಶವಸಂಸ್ಕಾರದ ಮುನ್ನ ಜನರನ್ನು ಒಗ್ಗೂಡಿಸಿ ಅಳುವ ಶಾಸ್ತ್ರ ನೆರವೇರಿಸುವ ಮುಖಂಡನೊಬ್ಬನ ಪ್ರಕರಣ, ಆ ಪ್ರಾದೇಶಿಕ ಪೊಳ್ಳುನಂಬಿಕೆ-ಪದ್ಧತಿಗಳ ಹುಂಬತನವನ್ನು ನಾಟಕದಲ್ಲಿ ಪರಿಣಾಮಕಾರಿಯಾಗಿ ಅನಾವರಣಗೊಳಿಸಲಾಗಿದೆ.ಎರಡು ದೇಹ ಒಂದು ಆತ್ಮದಂತೆ ಬಾಳುತ್ತಿದ್ದ ದಿನಗಳಲ್ಲಿ, ಒಮ್ಮೆ ಬಿಖ್‌ನಿ ಅನಾರೋಗ್ಯದಿಂದ ಮರಣವನ್ನಪ್ಪಿದಾಗ ಶನಿಚರಿಯ ಗೋಳು ಮುಗಿಲು ಮುಟ್ಟುತ್ತದೆ. ಈ ಸನ್ನಿವೇಶ ನಾಟಕದ ಪರಾಕಾಷ್ಠೆಯೂ ಹೌದು. ವೃತ್ತಿಗಾಗಿ ಅಳುವ ಹಾಗೂ ವೈಯಕ್ತಿಕ ನೋವಿನಿಂದ ದುಃಖಿಸುವ ಈ ಎರಡು ರೋದನಗಳ ನಡುವಿನ ದೊಡ್ಡ ಅಂತರವನ್ನು ಎತ್ತಿಹಿಡಿಯುವ ಈ     ಸನ್ನಿವೇಶ ಸಮಾಜದ ಕ್ರೂರವ್ಯವಸ್ಥೆಯ ಮುಖವಾಡಕ್ಕೆ ಹಿಡಿದ ಕನ್ನಡಿ. ಅಷ್ಟೇ ಮಾನವೀಯತೆಯ ಅನುರಣದ ಹೃದಯಸ್ಪರ್ಶಿ ಮಿಡಿತವೂ ಹೌದು.ನಾಟಕ ಇನ್ನೂ ಮುಂದುವರಿಯುತ್ತದೆ. ಶನಿಚರಿ ಗೆಳತಿಯ ಮರಣದಿಂದ ಕುಗ್ಗಿ ಮೆತ್ತಗಾಗುವುದಿಲ್ಲ, ಬದಲಾಗಿ ಬದುಕಿನ ನಿಷ್ಠುರತೆಯಿಂದ ಇನ್ನಷ್ಟು ಪಾಷಾಣವಾಗುತ್ತಾಳೆ. ಊರಿನ ಶ್ರೀಮಂತ ಠಾಕೂರ್ ಸತ್ತಾಗ, ಅಳುವ ಕೆಲಸಕ್ಕೆ ಅವಳಿಗೆ ಬುಲಾವ್ ಬಂದಾಗ, ಅವಳು ತನ್ನೊಡನೆ ಅಳಲು, ಸೀದಾ ಆ ಊರಿನ ಸೂಳೆಗೇರಿಗೆ ಹೋಗಿ, ಅವರೂ ರುಡಾಲಿಗಳಾಗಿ ತನ್ನೊಡನೆ ಕೆಲಸ ಮಾಡುವಂತೆ ಒಲಿಸಿ, ಅವರ ಬದುಕಿಗೊಂದು ಭರವಸೆ ಕಲ್ಪಿಸುತ್ತಾಳೆ. ಅಲ್ಲಿರುವ ನೊಂದ ಹೆಣ್ಣುಮಕ್ಕಳೆಲ್ಲ ಠಾಕೂರ್‌ಗಳಿಂದ ಹಾಳಾಗಿ ಸೂಳೆಗಾರಿಕೆಗೆ ತಳ್ಳಲಾದ ನತದೃಷ್ಟರೇ. ಈಗ ಶನಿಚರಿ ಶೋಷಣೆ-ದೌರ್ಜನ್ಯ, ದಬ್ಬಾಳಿಕೆಗಳ ವಿರುದ್ಧ ಸೆಣೆಸುವಷ್ಟರಮಟ್ಟಿಗೆ, ಊರಿನ ಶ್ರೀಮಂತರಿಂದ ನೆಲಸಮವಾದ ಈ ವೇಶ್ಯೆಯರನ್ನು ಸಂಘಟಿಸುವಷ್ಟು ಶಕ್ತಿಶಾಲಿಯಾಗಿದ್ದಾಳೆ.ನೊಂದವರ ದನಿಯಾಗಿ ಉಳ್ಳವರ ವಿರುದ್ಧ ಸಿಡಿದೆದ್ದು ಬದುಕಿನ ತನ್ನೆಲ್ಲ ಕಷ್ಟಗಳನ್ನೆದುರಿಸಿ ಸವಾಲುಗಳ ಅಗ್ನಿದಿವ್ಯವನ್ನು ಮೆಟ್ಟಿ ದೃಢತೆ ಸಾಧಿಸಿದ್ದಾಳೆ. ಜೀವನಾನುಭವದಲ್ಲಿ ಪಕ್ವತೆ ಪಡೆದು ಬಂಡಾಯದ ಬಾವುಟ ಹಿಡಿದು ಮುನ್ನುಗುವುದು ನಾಟಕದ ಒಟ್ಟು ಸಾರಾಂಶ.

ಗಹನವಸ್ತುವೇ ನಾಟಕದ ಜೀವಾಳ. ಪ್ರತಿ ಸನ್ನಿವೇಶವನ್ನೂ ನಿರ್ದೇಶಕಿ ದೃಶ್ಯಗಳ ನಾಟಕೀಯತೆಯಲ್ಲಿ ಹಿಡಿದಿಟ್ಟಿದ್ದಾರೆ. ಪ್ರಾರಂಭದ ಸಂತೆಯ ವ್ಯಾಪಾರದ ದೃಶ್ಯ ಇಡೀ ನಾಟಕದ ಹೂರಣವನ್ನು ಅರುಹುವಂತೆ, ಅಲ್ಲಿ ನೆರೆದ ಪ್ರತಿಯೊಬ್ಬ ಹೆಣ್ಣಮಕ್ಕಳೂ ತಂತಮ್ಮ ನೋವಿನ ಕಥೆಗಳನ್ನು  ವಿಕ್ರಯಿಸುವಂತೆ ದುಃಖ ತೋಡಿಕೊಳ್ಳುತ್ತಿದ್ದ ಪರಿ ಸಾಂಕೇತಿಕವಾಗಿತ್ತು. ರಾಜಸ್ತಾನದ ವೇಷಭೂಷಣಗಳಲ್ಲಿ ಒಡಮೂಡಿದ ಜಾನಪದರ ಸಮೂಹ, ಸಂತೆಯ ವಹಿವಾಟುಗಳ ಚಿತ್ರಣ ಸೆರೆಹಿಡಿದಿತ್ತು. ಠಾಕೂರ್ ಸತ್ತಾಗ ಅವನ ಮುಂದೆ ಕಪ್ಪುಉಡುಪಿನಲ್ಲಿ ತಲೆಗೂದಲು ಬಿರಿಹುಯ್ದುಕೊಂಡು ಬಗೆಬಗೆಯ ರಾಗ-ಆಲಾಪಗಳಲ್ಲಿ ಅಳುತ್ತಿದ್ದ ರುಡಾಲಿ ಹಿಂಡುಗಳ ದುಃಖದ ಆರ್ಭಟದ ದೃಶ್ಯ ಪರಿಣಾಮ ಬೀರಿತು. ಸಹಜತೆಗೆ ಒತ್ತುಕೊಡುವಂತೆ ಹೆಣೆದಿದ್ದ ಸನ್ನಿವೇಶಗಳಲ್ಲಿನ ರಂಗಸಜ್ಜಿಕೆ, ರಂಗಪರಿಕರಗಳು ನೈಜತೆಯನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದವು. ಹಿನ್ನಲೆಯಲ್ಲಿ ಮೂಡಿಬರುತ್ತಿದ್ದ ಸಾರಂಗಿ, ಶಹನಾಯಿ ಧ್ವನಿ ಸಂದರ್ಭಗಳ ಗಾಢತೆಯನ್ನು ಪೋಷಿಸುತ್ತ ಪ್ರಭಾವ ಬೀರಿತು. ವೇಶ್ಯಾಗೃಹದಲ್ಲಿ ಸಂಭ್ರಮ, ಸಹಜ ನಡವಳಿಕೆಗಳ ಉತ್ಸಾಹ ವಾತಾವರಣದ ಯಥಾವತ್ ಚಿತ್ರಣವನ್ನು ಪಡಿಮೂಡಿಸಲಾಗಿತ್ತು. ಅಲ್ಲಲ್ಲಿ ಹಾಸ್ಯದ ಮಿಂಚೂ ಇಣುಕದಿರಲಿಲ್ಲ.ಇಪ್ಪತ್ತೈದಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದ ನಾಟಕದಲ್ಲಿ ಸಡಗರವಿತ್ತು. ಕಣ್ಮನ ತಂಪುಗೊಳಿಸುವ ದಿರಿಸುಗಳು, ತೊಡುಗಗೆಗಳು ನಾಟಕವನ್ನು ವರ್ಣ ರಂಜಿತವಾಗಿಸುವಲ್ಲಿ ಶ್ರಮಿಸಿದ್ದು ನಿಜ. ಆದರೆ ‘ಫ್ಲ್ಯಾಷ್ ಬ್ಯಾಕ್’ ರೂಪಿಸಲು ಆಗಾಗ ಇಬ್ಬರು ಸೀರೆಯನ್ನು ಅಡ್ಡ ಹಿಡಿದುಕೊಂಡು ನಿಲ್ಲುತ್ತಿದ್ದುದು ಮಾತ್ರ ಸಮರ್ಪಕವೆನಿಸಲಿಲ್ಲ.ಶನಿಚರಿಯ ಪಾತ್ರವನ್ನು ಇಂದಿರಾ ನಾಯರ್ ತುಂಬ ಚೆನ್ನಾಗಿ ಅಭಿನಯಿಸಿದ್ದರೂ, ಪಾತ್ರದ ಗಾಂಭೀರ್ಯವನ್ನು ಖಾಚಿತ್ಯಗೊಳಿಸುವ ಚಲನೆ ಮತ್ತು ಆಂಗಿಕಾಭಿನಯ ಇಲ್ಲದುದಕ್ಕೆ ನಟಿಯ ಅತಿಯಾದ ಆತ್ಮವಿಶ್ವಾಸ ಕಾರಣವಿರಬಹುದೇ ಎನಿಸಿತು. ಬಿಖ್‌ನಿಯಾಗಿ ಶೈಲಜಾ ಪಾತ್ರಕ್ಕೆ ಜೀವತುಂಬಿ ಹುರುಪಿನಿಂದ ನಟಿಸಿದರು. ಇವರೊಡನೆ, ರವೀಶ್, ಶೀಲಾ ಗಂಗಾಧರಸ್ವಾಮಿ, ಶಿವಸ್ವಾಮಿ, ಪೂರ್ಣಿಮಾ, ನಾಗರತ್ನಾ ಮುಂತಾದ ಬಹುತೇಕ ಎಲ್ಲ ನಟ–ನಟಿಯರೂ ಹದವಾಗಿ ನಟಿಸಿದರು. ಕಲಾತ್ಮಕವಾಗಿ ದೃಶ್ಯಗಳನ್ನು ಹೆಣೆದು ಉತ್ತಮವಾಗಿ ನಿರ್ದೇಶಿಸಿರುವ ರಾಮೇಶ್ವರಿ ವರ್ಮ,  ಕೆಲವು ದೃಶ್ಯಗಳನ್ನು ಇನ್ನಷ್ಟು ಬಿಗಿಯಾಗಿ ರೂಹುಗೊಳಿಸಿದ್ದರೆ ಚೆನ್ನಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.