ಶನಿವಾರ, ಮೇ 21, 2022
22 °C

ದಿಢೀರ್ ದಾಳಿ: ಮರಳು ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೂವಿನಹಡಗಲಿ: ತಾಲ್ಲೂಕಿನ ಸೋವೆನಹಳ್ಳಿ ಗ್ರಾಮದ ಸುತ್ತಮುತ್ತ ಮರಳನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿಯ ಮೇರಿಗೆ ಸಹಾಯಕ ಆಯುಕ್ತ ಅಶೋಕ, ತಹಶೀಲ್ದಾರ್ ವೀರಮಲ್ಲಪ್ಪ ಪೂಜಾರ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಣ್ಣಪರಶುರಾಮಪ್ಪ ಮತ್ತು ಸಿಪಿಐ   ಶ್ರೀಕಾಂತ ಕಟ್ಟಿಮನಿ ದಾಳಿ ನಡೆಸಿ ವಶಕ್ಕೆ ತೆಗೆದುಕೊಂಡಿದ್ದಾರೆ.ಸಾರ್ವಜನಿಕ ದೂರಿನ ಮೇರೆಗೆ ಮಂಗಳವಾರ ರಾತ್ರಿ 10.30ರ ಸುಮಾರಿಗೆ ದಾಳಿಯನ್ನು ನಡೆಸಿ 18 ಸ್ಥಳಗಳಲ್ಲಿ ಸಂಗ್ರಹಿಸಿಡಲಾಗಿದ್ದ 1014 ಕ್ಯೂಬಿಕ್ ಮೀಟರ್‌ನಷ್ಟು ಮರಳನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 2 ಟ್ರಾಕ್ಟರ್‌ಗಳನ್ನು ಜಪ್ತಿ ಮಾಡಲಾಗಿದ್ದು 10 ಜನರನ್ನು ಬಂಧಿಸಲಾಗಿದೆ.ಲೋಕೋಪಯೋಗಿ ಇಲಾಖೆಯ ನಾಗರಾಜ, ಸುಧಾಕರ, ಮಾರುತ್ತೆಪ್ಪ, ಕಂದಾಯ ಇಲಾಖೆಯ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.ಮಂಗಳವಾರ ರಾತ್ರಿ ತಾಲ್ಲೂಕು ಆಡಳಿತದಿಂದ ವಶಪಡಿಸಿಕೊಂಡಿರುವ 1014 ಕ್ಯೂಬಿಕ್ ಮೀಟರ್‌ನಷ್ಟಿರುವ ಮರಳನ್ನು ಸರ್ಕಾರಿ ಕಾಮಗಾರಿಯನ್ನು ಮಾಡುತ್ತಿರುವ ಗುತ್ತಿಗೆದಾರರಿಗೆ ಬಳಸಿಕೊಳ್ಳಲು ಇಲಾಖೆ ನಿಗದಿಪಡಿಸಿದ ಬೆಲೆಗೆ ಕೊಡಲಾಗುತ್ತದೆ ಎಂದು ತಹಶೀಲ್ದಾರ್ ವೀರಮಲ್ಲಪ್ಪ ಪೂಜಾರ್ ತಿಳಿಸಿದ್ದಾರೆ.ತಾಲ್ಲೂಕಿನ ತುಂಗಭದ್ರಾ ನದಿ ತೀರದಲ್ಲಿ ರಾತ್ರಿಯಡೀ ಅಕ್ರಮ ಮರಳು ಸಾಗಾಣಿಕೆ ನಿರಂತರವಾಗಿ ನಡೆದಿದ್ದು ಕಾನೂನನ್ನು ಗಾಳಿಗೆ ತೂರಲಾಗುತ್ತಿದೆ ಎಂದು ಆರೋಪಿಸಲಾಗಿದೆ.ಈ ಬಗ್ಗೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಗಂಭೀರವಾಗಿ ಯೋಚಿಸಿ ನದಿ ತೀರದ ಹಳ್ಳಿಗಳನ್ನು ಅವರ ಬದುಕನ್ನು ರಕ್ಷಿಸಲು ಮುಂದಾಗಬೇಕು ಎನ್ನುವುದು ಗ್ರಾಮೀಣ ಜನರ ಅಳುಕಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.