ಬುಧವಾರ, ಜೂನ್ 16, 2021
28 °C

ದುಗ್ಗಮ್ಮನಿಗೆ ಕರಿಯ ಕೋಣನ ರಕ್ತದಾನ ಪ್ರಸಂಗ

ಶರತ್ ಹೆಗ್ಡೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ದೈತ್ಯಗಾತ್ರದ ಮಹಿಷನ (ಕೋಣ)ನ್ನು ಸವಿನಿದ್ದೆಯಿಂದೆಬ್ಬಿಸಿ ದುರ್ಗಾಂಬಿಕಾ ದೇವಿಗೆ ಅರ್ಪಿಸಲು ರಕ್ತದಾನ ಪಡೆದ ಪ್ರಸಂಗ ಬುಧವಾರ ಬೆಳಗಿನ ಜಾವ ನಡೆಯಿತು.ಕೋಣವನ್ನು ಬಲಿ ಹಾಕುವ ಬದಲು ಅದರ ರಕ್ತ ಮಾತ್ರ ಅರ್ಪಿಸಿದರೆ ಉತ್ತಮ ಎಂಬ ಉದ್ದೇಶದಿಂದ ಜಿಲ್ಲಾಡಳಿತ ಆವರಗೆರೆ ಗೋಶಾಲೆಯಲ್ಲಿ ಕಟ್ಟಿ ಹಾಕಲಾಗಿದ್ದ ಬಲಿಗಾಗಿ ಮೀಸಲಿದ್ದ ಕೋಣದ ರಕ್ತ ತೆಗೆಯಲು ಮುಂದಾಯಿತು.ತಹಶೀಲ್ದಾರ್ ಡಾ.ಬಿ.ಆರ್. ಹರೀಶ್, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಶಿವಪ್ರಕಾಶ್, ಪಶುವೈದ್ಯ ಡಾ.ಮಂಜಾನಾಯ್ಕ ನೇತೃತ್ವದಲ್ಲಿ ಬೆಳಗಿನ ಜಾವ 2.15ರ ವೇಳೆಗೆ ಪೊಲೀಸರು, ಪತ್ರಕರ್ತರನ್ನು ಒಳಗೊಂಡ ತಂಡ ತೆರಳಿತು.ಗುರುವೇ, ಸ್ವಲ್ಪ ರಕ್ತದಾನ ಮಾಡು ಎಂದು ಬೇಡಿಕೊಂಡು ನಿಧಾನಕ್ಕೆ ಕುತ್ತಿಗೆಯ ನರ ಹುಡುಕಲಾಯಿತು. ಎಷ್ಟುಬಾರಿ ಸೂಜಿ ಚುಚ್ಚಿದರೂ ನರವೇ ಸಿಗಲಿಲ್ಲ. ಅಷ್ಟರಲ್ಲೇ ಭಯಗ್ರಸ್ತ ಕೋಣ  ಕೊಸರಿಕೊಳ್ಳಲು ಆರಂಭಿಸಿತು. ವಿದ್ಯುತ್ ಬೆಳಕು ಇಲ್ಲದ ಕತ್ತಲ ಜಾಗದಲ್ಲಿ ಕೇವಲ ಮೊಬೈಲ್, ಪೆನ್ ಟಾರ್ಚ್, ಕ್ಯಾಮೆರಾ ಬೆಳಕಿನಲ್ಲಿ ಸುಮಾರು ಒಂದು ಗಂಟೆ ಕಾಲ `ರಕ್ತ ಹೀರುವ~ ಕೆಲಸ ನಡೆಯಿತು.ಲಾಗ ಹಾಕಿದ ಕೋಣ

ಕೋಣ ಒಮ್ಮೆ ನೀರಿನ ಬಾನಿಯ ಮೇಲೆ ಜಿಗಿಯಿತು. ಹಗ್ಗ ಕಡಿದುಕೊಂಡು ಕೊಸರಾಡಿತು. ಲಾಗ ಹಾಕಿತು. ಕೆಲವರು ಕೋಡು ಹಿಡಿದು ಬಗ್ಗಿಸಿದರು. ಕಾಲಿಗೆ ಹಗ್ಗ ಬಿಗಿದರು. ಇಷ್ಟರಲ್ಲಿ ಇಬ್ಬರು ಪಶುವೈದ್ಯರು ಕೋಣಕ್ಕಿಂತಲೂ ಹೆಚ್ಚು ಗಾಬರಿಯಾಗಿದ್ದರು.ಕೊನೆಗೆ ಬಂದಿದ್ದ ಪೊಲೀಸರ ಜತೆಗೆ ಕಂದಾಯ ಇಲಾಖೆ ಸಿಬ್ಬಂದಿ ಕೈಜೋಡಿಸಿದರು. ಹೋಗಿದ್ದ ಪತ್ರಕರ್ತರೂ ಕೋಣನ ಕೊಂಬು, ಕಾಲಿಗೆ ಹಗ್ಗ ಬಿಗಿದು ಹಿಡಿದರು. ಕೋಣನಿಗೇಕೋ ಶಂಕೆ. ಇವರೇನೋ ಮಾಡುತ್ತಿದ್ದಾರೆ ಎಂಬ ಭಯ ಆ ಸಾಧು ಪ್ರಾಣಿಯದ್ದು. ಕೋಣನ ಕೊಸರಾಟದಲ್ಲಿ ಗೋಶಾಲೆಯ ಹಸಿ ಸೆಗಣಿ, ಕೊಳೆ ಗರಿಗರಿ ಇಸ್ತ್ರಿ ಮಾಡಿದ ಬಟ್ಟೆಗಳನ್ನು ಪವಿತ್ರ ಮಾಡಿತು.ದಪ್ಪ ಚರ್ಮದ ಕೋಣ. ಒಂದು ಕೋನದಲ್ಲಿ ಬಾಗಿಸಿ ಎಷ್ಟು ಪ್ರಯತ್ನಿಸಿದರೂ ರಕ್ತ ಬರಲಿಲ್ಲ. ಮತ್ತೆ ಇನ್ನೊಂದು ಮಗ್ಗುಲಿಗೆ ಮಲಗಿಸಲಾಯಿತು. ಅಗಲೂ ಅದೇ ಪರಿಸ್ಥಿತಿ. ಈ ಮಧ್ಯೆ ಕಟ್ಟಿ ಹಾಕಿದಲ್ಲಿಂದ ಕೋಣದ ಜಿಗಿದಾಟ ನೆಗೆದಾಟ ನಡೆದೇ ಇತ್ತು. ಹಾಗೆಂದು ಅದು ಯಾರನ್ನೂ ಘಾಸಿಕೊಳಿಸಲಿಲ್ಲ ಎಂಬುದೇ ಸಮಾಧಾನದ ವಿಷಯ.ಶರಣಾದ ಕೋಣ

ಎಲ್ಲ ದೇವರುಗಳ ಸ್ಮರಣೆ ಮಾಡಿ ಮತ್ತೊಮ್ಮೆ ಪ್ರಯತ್ನಿಸಲಾಯಿತು. ಕೊನೆಗೂ ಸುಸ್ತಾಗಿ ತಲೆ ಬಾಗಿದ ಕೋಣ ಉದ್ದಕ್ಕೆ ಮಲಗಿ ಏನಾದ್ರೂ ಮಾಡ್ಕಳ್ರಪ್ಪಾ ಎಂದು ತೆಪ್ಪಗಾಯಿತು. ಆಗ ತಹಶೀಲ್ದಾರ್ ಡಾ.ಬಿ.ಆರ್. ಹರೀಶ್ ಅವರ ಸರದಿ. ನಿಧಾನಕ್ಕೆ ಕೋಣದ ಕಿವಿಯ ರಕ್ತನಾಳಕ್ಕೆ ಸೂಜಿಚುಚ್ಚಿ ಸುಮಾರು 25ರಿಂದ 30 ಮಿಲಿ ಲೀಟರ್ ರಕ್ತ ಹೊರತೆಗೆದರು. ನಗರದಾದ್ಯಂತ ಅದೇ ವೇಳೆಗೆ ವಿದ್ಯುತ್ ಕೈಕೊಟ್ಟಿತು.

 

ರಕ್ತಪಡೆದು ಮುಗಿಸಿದ ತಹಶೀಲ್ದಾರ್ ಅಂತೂ ಈ ಬಾರಿ ಕೋಣ ಬಲಿ ತಪ್ಪಿತು ಎಂದು ಮಂದಹಾಸ ಬೀರಿದರು. ಎಲ್ಲರ ಮನಸ್ಸಿನಲ್ಲಿಯೂ ಇದೇ ಸಂತೋಷ ಇತ್ತು. ಆದರೆ, ಅದು ಬಹುಕಾಲ ಉಳಿಯಲಿಲ್ಲ. ಶಿವಾಲಿ ಚಿತ್ರಮಂದಿರದ ಸಮೀಪ ಕೋಣ ಬಲಿ ನಡೆಯಿತು. ಕೇವಲ ಎರಡೇ ಏಟು ಬಿದ್ದಿದೆ ಎಂಬ ವಾರ್ತೆ ಪೊಲೀಸರ ಮೊಬೈಲ್‌ಗಳಲ್ಲಿ ಹರಿದಾಡಿತು. ಆದರೆ, ದೇವಿಯ ಚರಗಕ್ಕೆ ಅರ್ಪಣೆಯಾದದ್ದು ಇದೇ ಕೋಣನಿಂದ ತೆಗೆದ ರಕ್ತ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.