ಗುರುವಾರ , ಜೂಲೈ 2, 2020
28 °C
ಕೆರೆ ಉಳಿಸಿ

ದುರಾಸೆಗೆ ಮಾಯವಾಯ್ತು ಜಲಜಾಲ

ಪ್ರಜಾವಾಣಿ ವಿಶೇಷ ವರದಿ/ -ಜಿ.ಧನಂಜಯ Updated:

ಅಕ್ಷರ ಗಾತ್ರ : | |

ದುರಾಸೆಗೆ ಮಾಯವಾಯ್ತು ಜಲಜಾಲ

ಚಿಕ್ಕನಾಯಕನಹಳ್ಳಿ: ತಾಲ್ಲೂಕು ಅಂತರ್ಜಲ ಕುಸಿತದಿಂದ ಕಪ್ಪುಪಟ್ಟಿಗೆ ಸೇರಿದೆ. ಮಳೆಗಾಲದಲ್ಲೂ ಬರ ಬೆಂಬಿಡದೆ ಕಾಡುತ್ತಿದೆ. ಈ ಜಲಕ್ಷಾಮಕ್ಕೆ ಕಾರಣವೇನು? ಎಂದು ಕೇಳಿದರೆ `ಇದು ನೀರಿನ ಬ್ಯಾಂಕ್‌ಗಳಾದ ಕೆರೆ ಕಟ್ಟೆ ಮತ್ತು ನೀರ ದಾರಿಗಳಾದ ಹಳ್ಳ ಕೊಳ್ಳಗಳು ನಾಪತ್ತೆಯಾದ ಫಲ' ಎನ್ನುತ್ತಾರೆ ಸಾವಯವ ಕೃಷಿಕ ಬಾಳೆಕಾಯಿ ಶಿವನಂಜಯ್ಯ.ಕೆರೆ ನಿರ್ವಹಣೆ ವಿಚಾರದಲ್ಲಿ ಭೂ ವಿಜ್ಞಾನ, ಕಂದಾಯ, ಕೃಷಿ, ಮೀನುಗಾರಿಕೆ, ತೋಟಗಾರಿಕೆ, ಅರಣ್ಯ, ಜಲ ಸಂವರ್ಧನೆ, ಸಣ್ಣ ನೀರಾವರಿ ಹೀಗೆ ಹಲ ಇಲಾಖೆಗಳ ಹೊಂದಾಣಿಕೆ ಕೊರತೆ ಎದ್ದು ಕಾಣುತ್ತಿದೆ. ಇವುಗಳೊಟ್ಟಿಗೆ ಒತ್ತುವರಿ, ರಾಜಕೀಯ ತಿಕ್ಕಾಟ, ಸಮುದಾಯ ಸಹಭಾಗಿತ್ವದ ಕೊರತೆ, ಕೆರೆಗಳು ಭವಿಷ್ಯದ ಸಂಪತ್ತು ಎಂಬ ಜಾಗೃತಿ ಮೂಡದಿರುವುದು, ಅಂತರ್ಜಲ ಬಳಕೆಗೆ ಸ್ವಷ್ಟ ರೂಪುರೇಷೆ ಇಲ್ಲದಿರುವುದು ಕೆರೆಗಳ ಅವಸ್ಥೆಯನ್ನು ಮತ್ತಷ್ಟು ಹದಗೆಡಿಸಿದೆ.ತಾಲ್ಲೂಕಿನಲ್ಲಿ ಒಟ್ಟು 151 ಕೆರೆಗಳಿವೆ. ಅದರಲ್ಲಿ 113 ಕೆರೆಗಳು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ, 38 ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರುತ್ತವೆ. ಬಹುತೇಕ ಕೆರೆಗಳು ಕೃಷ್ಣ ಜಲಾನಯನ ಪ್ರದೇಶದಲ್ಲಿವೆ. ತಾಲ್ಲೂಕಿನ ಎಲ್ಲ ಕೆರೆಗಳನ್ನು ಸುವರ್ಣಮುಖಿ, ವೇದವತಿ ನದಿಗಳ ಜಲಜಾಲಗಳು ವ್ಯವಸ್ಥಿತವಾಗಿ ಬೆಸೆದಿವೆ. ಈ ಎಲ್ಲ ಜಾಲಗಳು ಬೋರನಕಣಿವೆಯಲ್ಲಿ ಸಮಾಗಮವಾಗುತ್ತವೆ. ಈ ಜಾಲ ಇಲ್ಲಿಂದ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಸೇರುತ್ತದೆ.`ನಾವು ಸಣ್ಣುಡುಗ್ರಾಗೆ ಹಾಲ್ಕುರಿಕೆ ದೊಡ್ಡ ಕೆರೆ ಕೋಡಿ ಬಿತ್ತಂದ್ರೆ ದಿನ ಬೆಳಗಾಗೋದ್ರಾಗೆ ಕೆರೆಗಳು ಸಾಲುಕ್ಕೆ ಕೋಡಿ ಹೊಡೆದು ಕಾರೆಹಳ್ಳಿ ರಂಗನಾಥ ಸ್ವಾಮಿ ದೇವಸ್ಥಾನ ಮುಳಿಗೋಕ್ತಿತ್ತು. ಅವಾಗ ಬ್ಯಾಸಿಗೆನಾಗೆ ಸಸಿ ಗುಂಡಿ ತೋಡಿದ್ರೂ ನೀರು ಬಂದ್ ಬುಡವು ಅಂಥ ದಿನಗುಳ್ನ ಈಗೆಲ್ಲಿ ಕಾಣಾನ? ಈಗ ಅಂಥ ಮಳೇನೂ ಬರಲ್ಲ, ಬಂದ್ರೂ ಉಕ್ಕಾಕೆ ಹಳ್ಳಗುಳೂ ಇಲ್ಲ' ಎನ್ನುವ ಎಂಬತ್ತರ ಹರೆಯದ ಕರಿಯಪ್ಪ ಅವರ ಮಾತಿನಲ್ಲಿ ಕೆರೆಗಳ ಕರುಳುಬಳ್ಳಿಗಳಾದ ಹಳ್ಳಕೊಳ್ಳಗಳು ಕಳೆದು ಹೋದ ವಿಷಾದದ ಛಾಯೆ ಇಣುಕುತ್ತದೆ.ತಾಲ್ಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ಈ ಭಾಗದಲ್ಲಿ ಸುವರ್ಣಮುಖಿ, ವೇದಾವತಿ ನದಿಗಳು ಹರಿಯುತ್ತಿದ್ದವು ಎಂಬ ಕುರುಹನ್ನೇ ಹೊಸಕಿ ಹಾಕಿವೆ. ಸಾಲು ಕೆರೆಗಳು ನೀರು ಸಂಗ್ರಹಣಾ ಸಾಮರ್ಥ್ಯ ಕಳೆದುಕೊಂಡಿವೆ. ಕಣಿವೆ ತಪ್ಪಲಿನ ಕೆರೆಗಳು ಗಣಿಗಾರಿಕೆಯಿಂದ ಗಾಯಗೊಂಡಿವೆ. ಕರಿಕಲ್ಲು ಸಾಲುಕೆರೆಗಳು ಒತ್ತುವರಿಗೆ ತುತ್ತಾಗಿವೆ. ಜಲಸಂವರ್ಧನೆ ಅಧಿಕಾರಿಯೊಬ್ಬರು ಹೇಳುವಂತೆ ಗೌರಸಾಗರ, ಸಾದರಹಳ್ಳಿ ಕೆರೆಗಳ ಶೇ 80ರಷ್ಟು ನೀರು ನಿಲ್ಲುವ ಪ್ರದೇಶ ಒತ್ತುವರಿಯಾಗಿದೆ. ದೇವರಹಳ್ಳಿ ಕೆರೆ ತನ್ನ ಕುರುಹನ್ನೇ ಕಳೆದುಕೊಂಡು, ತೋಟವಾಗಿದೆ. ಹಾಳುಬಿದ್ದ ತೂಬು, ಕೆರೆ ಏರಿ ಮತ್ತು ಹಿರಿಯರ ನೆನಪುಗಳು ಕಳೆದು ಹೋದ ಕೆರೆಯ ಬಗ್ಗೆ ಸಾಕ್ಷಿ ಹೇಳುತ್ತಿವೆ.ಸಣ್ಣ ನೀರಾವರಿ ಇಲಾಖೆ ದಾಖಲೆಗಳು ಹೇಳುವಂತೆ ಬೋರನಕಣಿವೆ ತಾಲ್ಲೂಕಿನಲ್ಲಿಯೇ ದೊಡ್ಡ ಕೆರೆ. ಕ್ಷಾಮ ಪರಿಹಾರದ ಕಾರ್ಯ ಯೋಜನೆಯಾಗಿ ಬೋರನ ಕಣಿವೆ ಜಲಾಶಯ ಕಾಮಗಾರಿಯನ್ನು ಮೈಸೂರು ಮಹಾರಾಜ ಚಾಮರಾಜ ಒಡೆಯರ್ 1888ರಲ್ಲಿ ಕೈಗೆತ್ತಿಕೊಂಡರು. ಕಾಮಗಾರಿ 1892ರಲ್ಲಿ ಪೂರ್ಣಗೊಂಡಿತು. ಅಣೆಕಟ್ಟೆಯನ್ನು ಸುವರ್ಣಮುಖಿ ನದಿಗೆ ಅಡ್ಡಲಾಗಿ ಎರಡು ಗುಡ್ಡಗಳ ಮಧ್ಯೆ ಕಟ್ಟಲಾಗಿದೆ. ಒಟ್ಟು 3682 ಕ್ಯುಸೆಕ್ಸ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, 8000 ಹೆಕ್ಟೇರ್‌ಗೆ ನೀರುಣಿಸುವ ಸಾಮರ್ಥ್ಯ ಹೊಂದಿದೆ. ಆದರೆ ಕೇವಲ 675.22 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿದೆ.ಬೋರನಕಣಿವೆ, ಬೆಳ್ಳಾರ, ಮುತ್ತುಗದಹಳ್ಳಿ, ಅಂಬಾರಪುರ, ಹೊಯ್ಸಳಕಟ್ಟೆ, ದಬ್ಬಗುಂಟೆ ಮತ್ತು ಮರೆನಡು ಗ್ರಾಮಗಳು ಇದರ ಲಾಭ ಪಡೆಯುತ್ತಿವೆ. ಹುಳಿಯಾರು ಪಟ್ಟಣ ಕುಡಿಯುವ ನೀರಿಗಾಗಿ ಈ ಜಲಾಶಯವನ್ನೇ ಅವಲಂಬಿಸಿದೆ. ಕಂದಿಕೆರೆ, ಹುಳಿಯಾರು ಹೋಬಳಿಗಳ ಅಂತರ್ಜಲ ಮಟ್ಟವನ್ನು ಈ ಜಲಾಶಯ ನಿರ್ಧರಿಸುತ್ತದೆ.ರಾಜ್ಯ ಸರ್ಕಾರದ ಜಲ ಸಂವರ್ಧನೆ ಯೋಜನೆಗೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 47 ಕೆರೆಗಳು ಆಯ್ಕೆಯಾಗಿದ್ದವು. ಆದರೆ 40 ಕೆರೆಗಳಲ್ಲಿ ಯೋಜನೆ ಅನುಷ್ಠಾನಗೊಂಡಿತು. ಯೋಜನೆಗೆ ಒಳಪಟ್ಟಿರುವ ಕೆರೆಗಳ ಅಭಿವೃದ್ಧಿ ಕಾಮಗಾರಿ ಉದ್ದೇಶಿತ ರೀತಿಯಲ್ಲಿ ನಡೆಯಲಿಲ್ಲ ಎಂಬ ಆರೋಪಗಳು ವ್ಯಾಪಕವಾಗಿವೆ.ಯೋಜನೆ ಅನುಷ್ಠಾನದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಧಿಕಾರಿಯೊಬ್ಬರು ಹೇಳುವಂತೆ, `ಒತ್ತುವರಿದಾರರು ಪ್ರಭಾವಿಗಳಾಗಿದ್ದು, ಸರ್ವೇ ಸಿಬ್ಬಂದಿಯನ್ನು ಮೊದಲೇ ಬುಕ್ ಮಾಡಿಕೊಂಡು ದಿಕ್ಕು ತಪ್ಪಿಸಿದ್ದಾರೆ. ಇದರಿಂದ ಗ್ರಾಮ ಸಭೆಯಲ್ಲಿ ಕಚ್ಚಾಟವಾಗಿರುವ ಉದಾಹರಣೆಗಳನ್ನು ಅವರು ನೆನಪಿಸಿಕೊಳ್ಳುತ್ತಾರೆ. ಗ್ರಾಮ ಸಮಿತಿ ರಚನೆ ಹಂತದಲ್ಲಿಯೂ ರಾಜಕೀಯ ನುಸುಳಿದೆ'.ವಿಸ್ತೀರ್ಣದ ದೃಷ್ಟಿಯಿಂದ ಬೋರನಕಣಿವೆ, ಗಂಟೇನಹಳ್ಳಿ, ಸಿಂಗದಹಳ್ಳಿ, ದೇವರಮಡಿಕೆ ಕೆರೆಗಳು ದೊಡ್ಡ ಕೆರೆಗಳಾಗಿವೆ. ಸಿಂಗದಹಳ್ಳಿ ಮತ್ತು ಗಂಟೇನಹಳ್ಳಿ ಕೆರೆ ಒತ್ತುವರಿ ಸಮೀಕ್ಷೆ ಕೆಲಸವೇ ಇಲ್ಲಿವರೆಗೆ ನಡೆದಿಲ್ಲ.ನಿಲ್ಲದ ಅಕ್ರಮ ಮರಳು ಗಣಿಗಾಗಿಕೆ ದಂಧೆ

ತಾಲ್ಲೂಕಿನಲ್ಲಿ ಅಂತರ್ಜಲ ಕುಸಿತಕ್ಕೆ ಹಳ್ಳಗಳು ಮತ್ತು ಕೆರೆಗಳಲ್ಲಿ ನಿರಂತರವಾಗಿ ನಡೆಯುತಿರುವ ಮರಳು ದಂಧೆ ಮುಖ್ಯ ಕಾರಣ. ಕೆರೆಗೆ ನೀರು ಹರಿಯುವ ಕಾಲುವೆಗಳು ಮುಚ್ಚಿ ಹೋಗಿರುವುದರಿಂದ ಮಳೆಯಾದರೂ ಕೆರೆಗಳಿಗೆ ನೀರು ಹರಿಯುತ್ತಿಲ್ಲ. ಹೇಮಾವತಿ ಹರಿಸುವ ಭರವಸೆ ನೀಡುವ ರಾಜಕಾರಣಿಗಳು ಮರಳು ಕಳ್ಳರಿಂದ ಕೆರೆಗಳನ್ನು ಉಳಿಸುವ ಮಾತನ್ನೇ ಮರೆತಿದ್ದಾರೆ.

`ಅಕ್ರಮ ಮರಳು ಸಾಗಣೆ ಕುರಿತು ಪೊಲೀಸ್, ತಹಶೀಲ್ದಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳಿಗೆ ದೂರು ಕೊಟ್ಟಿದ್ದರೂ; ಯಾವುದೇ ಪ್ರಯೋಜನವಾಗಿಲ್ಲ. ಪೊಲೀಸರು ಲೋಡ್‌ಗೆ ರೂ. 500ರಂತೆ ಹಪ್ತಾ ಫಿಕ್ಸ್ ಮಾಡಿದ್ದಾರೆ. ನಾವು ಎದ್ದು ತ್ವಾಟುಕ್ಕೋದಂಗೆ ಹಳ್ಳಕ್ಕೆ ಬರ್ತಾರೆ ಕಮಾಯಿಗೆ' ಎಂದು ಮರಳು ಗಣಿಗಾರಿಕೆಯಿಂದ ರೋಸಿ ಹೋಗಿರುವ ಸುವರ್ಣಮುಖಿ ಪಾತ್ರದ ರೈತರು ದೂರುತ್ತಾರೆ.

ಮರಳು ದಂಧೆಗೆ ಈಗಾಗಲೆ ಐದು ಜೀವಗಳು ಬಲಿಯಾಗಿವೆ. ಕೈ ಕಾಲು ಕಳೆದುಕೊಂಡವರ ಸಂಖ್ಯೆಯೂ ಸಾಕಷ್ಟು ಪ್ರಮಾಣದಲ್ಲಿದೆ. ಶೆಟ್ಟಿಕೆರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವಿಜಯಕುಮಾರ್ ಸಾವಿನ ಪ್ರಕರಣ ಬಿಟ್ಟರೆ ಬೇರೆ ಯಾವ ಪ್ರಕರಣಗಳೂ ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.