ಶನಿವಾರ, ಮೇ 8, 2021
26 °C

ದೂರಶಿಕ್ಷಣ ಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: `ಕನ್ನಡ ಭಾಷೆಯನ್ನು ಎಲ್ಲ ಹಂತದಲ್ಲಿ ಶಿಸ್ತು ಬದ್ಧವಾಗಿ ಅಭಿವೃದ್ಧಿಪಡಿಸುವುದು, ಸಶಕ್ತಗೊಳಿಸುವುದು ಹಂಪಿ ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ಕೋರ್ಸ್‌ಗಳ ಬಹುಮುಖ್ಯ ಉದ್ದೇಶ. ಹೊರತು ರಾಜ್ಯದ ಯಾವುದೇ ವಿಶ್ವವಿದ್ಯಾಲಯಗಳ ಜೊತೆಗೆ ಯಾವುದೇ ರೀತಿಯ ಸ್ಪರ್ಧೆಗಲ್ಲ' ಎಂದು ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಕರೀಗೌಡ ಬೀಚನಹಳ್ಳಿ ತಿಳಿಸಿದರು.ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ಸೋಮವಾರ ದೂರಶಿಕ್ಷಣ ನಿರ್ದೇಶನಾಲಯದ ಸ್ನಾತಕೋತ್ತರ ಕನ್ನಡ, ಸಮಾಜಶಾಸ್ತ್ರ, ಕನ್ನಡ ಸಾಹಿತ್ಯ ಡಿಪ್ಲೊಮಾ ದೂರಶಿಕ್ಷಣ ಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕನ್ನಡ ವಿಶ್ವವಿದ್ಯಾಲಯ ಅರಿವನ್ನು ವಿಸ್ತರಿಸಿಕೊಳ್ಳುವ ಒಂದು ಪ್ರಯೋಗಶಾಲೆಯಾಗಿ ಮುಂಚೂಣಿಯಲ್ಲಿ ಸಾಗುತ್ತಿದೆ. ಕನ್ನಡದಲ್ಲೇ ಕಲಿಕಾ ಸಾಮಗ್ರಿಗಳನ್ನು ಒದಗಿಸುವ ಮೂಲಕ ಎಲ್ಲಾ ಅಧ್ಯಯನ ಶಿಸ್ತುಗಳಲ್ಲಿ ಸಶಕ್ತವಾಗಿ, ಸರಳವಾಗಿ ಕನ್ನಡದ ಚಿಂತನೆ ಹುಟ್ಟುಹಾಕಿದೆ. ನಮ್ಮ ಕಲಿಕಾ ಸಾಮಗ್ರಿಗಳು ಅನುವಾದಗಳಲ್ಲ. ಸಂಪನ್ಮೂಲ ವ್ಯಕ್ತಿಗಳ ಮತ್ತು ವಿದ್ವಾಂಸರ ಅನುಭವ ಮತ್ತು ಆಲೋಚನೆಗಳ ತಳಹದಿಯನ್ನು ಹೊಂದಿವೆ ಎಂದು ತಿಳಿಸಿದರು.ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ  ಡಾ. ಎ. ರಾಮೇಗೌಡ,  ನಾಲ್ಕು ದಶಕಗಳ ಹಿಂದೆ ಈ ಯಾವ ಶಿಕ್ಷಣದ ಸೌಲಭ್ಯಗಳೂ ಜ್ಞಾನಾಕಾಂಕ್ಷಿಗಳಿಗೆ ಇರಲಿಲ್ಲ. ಶಿಕ್ಷಣ ಅತ್ಯಂತ ದುಬಾರಿಯಾಗಿತ್ತು. ಕನ್ನಡ ವಿಶ್ವವಿದ್ಯಾಲಯ ಮತ್ತು ಕುವೆಂಪು ವಿಶ್ವವಿದ್ಯಾಲಯಗಳು ಜಾಗತಿಕ ಮಟ್ಟಕ್ಕೆ ಸಮನಾದ ಕಲಿಕಾ ಸಾಮಗ್ರಿಗಳನ್ನು ತಂದಿವೆ. ಮಾನ್ಯತಾ (ಅಕ್ರಿಡೇಶನ್) ಸಮಿತಿಗಳಿಂದ ಮಾನ್ಯತೆಯನ್ನು ಪಡೆದಿವೆ. ಜ್ಞಾನಲೋಕದಲ್ಲಿ ಪ್ರಕಟಣೆಗಳು ಮಾತ್ರ ಉಳಿಯುತ್ತವೆ. ಪ್ರಕಟಣೆಗಳ ಶಕ್ತಿಯನ್ನು ವಿದ್ಯಾರ್ಥಿಗಳು ಏಕಾಗ್ರತೆಯಿಂದ ಪಡೆಯಬೇಕು. ಸಚ್ಚಾರಿತ್ರ್ಯದಿಂದ ಜ್ಞಾನಾರ್ಜನೆಗೆ ತೊಡಗಿ ಶಿಕ್ಷಣವನ್ನು ಕೇವಲ ಉದ್ಯೋಗಕ್ಕೆ ಸೀಮಿತಗೊಳಿಸದಿರುವಂತೆ ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ, ಇಂದಿನ ವ್ಯವಸ್ಥೆಯು ಹಣ ಮತ್ತು ಅಧಿಕಾರದ ಬಲದ ಮೇಲೆ ಅವಲಂಬಿತವಾಗಿದೆ. ಈ ವಿಷಮ ಪರಿಸ್ಥಿತಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅಧ್ಯಯನ ನಿರತರಾಗಬೇಕು ಎಂದು ಹೇಳಿ, ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಒದಗಿಸುವ ಗುಣಮಟ್ಟದ ಕಲಿಕಾ ಸಾಮಗ್ರಿಗಳಿಗೆ ಮಾತ್ರ ಸೀಮಿತರಾಗದೆ ಪೂರಕವಾಗಿ ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವ ವಿವಿಧ ಶಿಸ್ತುಗಳ ಪ್ರಕಟಣೆಗಳನ್ನು ಅಧ್ಯಯನ ಮಾಡಲು ಸಲಹೆ ನೀಡಿದರು.ಎಲ್ಲಾ ವಿಭಾಗಗಳ ಸಂಪರ್ಕ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಹಾಜರಿದ್ದರು. ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ. ವಿಠಲರಾವ್ ಗಾಯಕ್ವಾಡ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪ ನಿರ್ದೇಶಕ ಡಾ.ಎಸ್.ಆರ್.ಚನ್ನವೀರಪ್ಪ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.