ಮಂಗಳವಾರ, ಮೇ 11, 2021
24 °C

ದೂರು ಪ್ರಾಧಿಕಾರ ರಚನೆಯಾಗಲಿ

ಎಂ.ಸಿ. ಮಂಜುನಾಥ . Updated:

ಅಕ್ಷರ ಗಾತ್ರ : | |

ತ್ತೀಚೆಗೆ ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕ (ಎನ್‌ಸಿಆರ್‌ಬಿ) ಬಹಿರಂಗಪಡಿಸಿದ ಅಧಿಕೃತ ಅಂಕಿಸಂಖ್ಯೆ ಪ್ರಕಾರ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗುತ್ತಿರುವ ಮಹಾನಗರಗಳ ಪಟ್ಟಿಯಲ್ಲಿ ನವದೆಹಲಿ (47,982 ಪ್ರಕರಣ) ಮೊದಲ ಸ್ಥಾನದಲ್ಲಿದ್ದರೆ, ಮುಂಬೈ (30,508 ಪ್ರಕರಣ) ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನ ಬೆಂಗಳೂರಿನದ್ದು ( 29,297 ಪ್ರಕರಣ). ಇದು ಸಹಜವಾಗಿಯೇ ನಾಗರಿಕರ ಆತಂಕಕ್ಕೆ ಕಾರಣವಾಗಿದೆ.ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ನಿವೃತ್ತ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಎಸ್.ಟಿ.ರಮೇಶ್, `ಬರಿ ಅಂಕಿ ಸಂಖ್ಯೆಗಳನ್ನು ಆಧಾರವಾಗಿ ಇಟ್ಟುಕೊಂಡು ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಎಂದು ಹೇಳುವುದು ಸರಿಯಲ್ಲ. ಕಾರಣ, ಬೆಂಗಳೂರು ನಗರ ಮಿತಿ ಇಲ್ಲದೆ ಬೆಳೆಯುತ್ತಿದೆ. ಜನಸಂಖ್ಯೆ ಕೋಟಿ ದಾಟಿದೆ. ಇದರ ಜತೆ ಜತೆಗೆ ಅಪರಾಧ ಚಟುವಟಿಕೆಗಳೂ ಹೆಚ್ಚಳವಾಗಿವೆ. ಆದರೆ, ಸಾರ್ವಜನಿಕರು ಪ್ರಜ್ಞಾವಂತರಾಗಿ ದೂರು ನೀಡಲು ಮುಂದೆ ಬರುತ್ತಿರುವುದು ಸಂತಸದ ಸಂಗತಿ' ಎನ್ನುತ್ತಾರೆ.ಮಹಿಳೆಯರಿಗಿಲ್ಲ ರಕ್ಷಣೆ: ಎನ್‌ಸಿಆರ್‌ಬಿ ವರದಿ ಪ್ರಕಾರ ಬೆಂಗಳೂರಿನಲ್ಲಿ ಮಹಿಳೆಯರು ಸುರಕ್ಷಿತರಲ್ಲ. 2011ರಲ್ಲಿ ಮಹಿಳೆಯರ ಮೇಲೆ ಅಪರಾಧ ಕೃತ್ಯ ಎಸಗಿದವರ ವಿರುದ್ಧ 1,890 ಪ್ರಕರಣಗಳು ದಾಖಲಾಗಿದ್ದರೆ, 2012ಕ್ಕೆ ಈ ಸಂಖ್ಯೆ 2,263ಕ್ಕೆ ಏರಿಕೆಯಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್, `ಮಹಿಳೆಯರ ಮೇಲೆ ನಡೆಯುವ ಹಲ್ಲೆ, ದೌರ್ಜನ್ಯಗಳ ಬಗ್ಗೆ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ ಎಂದರೆ ಮಹಿಳೆ ಜಾಗೃತವಾಗಿದ್ದಾಳೆ ಎಂದರ್ಥ. ಆಕೆ, ಠಾಣೆಗೆ ಬಂದು ದೂರು ನೀಡುವಷ್ಟು ಪ್ರಜ್ಞಾವಂತಳಾಗಿದ್ದಾಳೆ'  ಎಂದರು.ನಗರದಲ್ಲಿ 2004ರಲ್ಲಿ ಹಲಸೂರು ಗೇಟ್ ಮತ್ತು ಬಸವನಗುಡಿಯಲ್ಲಿ ಮಹಿಳಾ ಠಾಣೆಗಳನ್ನು ಸ್ಥಾಪಿಸಲಾಗಿದೆ. ಆದರೆ, ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದರೂ ಬಸವನಗುಡಿ ಮಹಿಳಾ ಠಾಣೆಯಲ್ಲಿ ಕಳೆದ ಆರು ತಿಂಗಳಿಂದ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳನ್ನು ವಿಚಾರಿಸಿದಾಗ `ಠಾಣೆಯಲ್ಲಿ ಮೂಲಸೌಕರ್ಯದ ಸಮಸ್ಯೆ, ಸಿಬ್ಬಂದಿ ಕೊರತೆಯಿದೆ. ಆ ಕಾರಣದಿಂದ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ಸಲ್ಲಿಸುವಂತೆ ತಿಳಿಸಲಾಗುತ್ತಿದೆ' ಎಂಬ ಉತ್ತರ ಬರುತ್ತದೆ.ಲಿಂಗ ಸಂವೇದನೆ ಕಾರ್ಯಕ್ರಮ: `ಮಹಿಳೆಯರ ಮೇಲಿನ ಅಪರಾಧ ಚಟುವಟಿಕೆಗಳನ್ನು ತಡೆಯಲು ಯೂನಿಸೆಫ್ ಸಹಯೋಗದೊಂದಿಗೆ ದೇಶದಲ್ಲೇ ಮೊದಲ ಬಾರಿಗೆ `ಲಿಂಗ ಸಂವೇದನೆ ಕಾರ್ಯಕ್ರಮ'ವನ್ನು ಆರಂಭಿಸಲಾಗಿದೆ. ಹತ್ತು ವರ್ಷಗಳಿಂದ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಪೊಲೀಸರಿಗೆ ವಿವರಿಸಲಾಗುತ್ತಿದೆ.

ಮಹಿಳೆಯರು ದೂರು ನೀಡಲು ಬಂದರೆ, ಪ್ರಕರಣ ದಾಖಲಿಸಿಕೊಳ್ಳಬೇಕೆ ಹೊರತು ನಿರ್ಲಕ್ಷ್ಯ ಧೋರಣೆ ಅನುಸರಿಸಬಾರದು ಎಂದು ಸಿಬ್ಬಂದಿಗೆ ಕಿವಿಮಾತು ಹೇಳಲಾಗುತ್ತದೆ. ಜತೆಗೆ, ದೂರುದಾರ ಮಹಿಳೆಯೊಂದಿಗೆ ಯಾವ ರೀತಿ ಸಮಾಲೋಚನೆ ನಡೆಸಬೇಕು ಎಂಬ ಬಗ್ಗೆಯೂ ಪೊಲೀಸರಿಗೆ ಅರಿವು ಮೂಡಿಸಲಾಗುತ್ತಿದೆ' ಎಂದು ರಮೇಶ್ ಮಾಹಿತಿ ನೀಡಿದರು.ಬದಲಾವಣೆ ತರಬೇಕಿದೆ: `ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತರಬೇಕಿದೆ.  ಸಾರ್ವಜನಿಕರು ಮುಕ್ತವಾಗಿ ದೂರು ನೀಡಲು ವಿವಿಧ `ದೂರು ಪ್ರಾಧಿಕಾರ'ಗಳನ್ನು ಸ್ಥಾಪಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಆದರೆ, ಸರ್ಕಾರ ಆ ನಿರ್ದೇಶಿತ ಪ್ರಾಧಿಕಾರಗಳನ್ನು ಈವರೆಗೆ ಸ್ಥಾಪನೆ ಮಾಡಿಲ್ಲ' ಎನ್ನುತ್ತಾರೆ ಬೆಂಗಳೂರಿನ ನಿವೃತ್ತ ಪೊಲೀಸ್ ಕಮಿಷನರ್ ಪಿ. ಕೋದಂಡರಾಮಯ್ಯ.

-ಎಂ.ಸಿ. ಮಂಜುನಾಥ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.