ಮಂಗಳವಾರ, ಜನವರಿ 21, 2020
28 °C

ದೂರು, ಮಾಹಿತಿ ಘಟಕ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ದೂರು ಮತ್ತು ಮಾಹಿತಿ ಘಟಕ ಆರಂಭಿಸಲು ಬೆಂಗಳೂರು ವಿಶ್ವವಿದ್ಯಾಲಯ ನಿರ್ಧರಿಸಿದೆ. ಶನಿವಾರ ನಡೆದ ವಿ.ವಿ.ಯ ಸಿಂಡಿಕೇಟ್ ಸಭೆಯಲ್ಲಿ ಸದಸ್ಯರು ಈ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದರು.ಜ್ಞಾನಭಾರತಿ ಮತ್ತು ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ಈ ಘಟಕ ಆರಂಭಿಸಲಾಗುತ್ತದೆ. ಈ ಬಗ್ಗೆ ಡಾ. ಮಾನಸ ನಾಗಭೂಷಣಂ ಅವರ ನೇತೃತ್ವದ ಸಮಿತಿ ವರದಿ ಮತ್ತು ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಿತ್ತು.ವಿದ್ಯಾರ್ಥಿಗಳು ಶೈಕ್ಷಣಿಕ ಸಮಸ್ಯೆಗಳ ದೂರುಗಳನ್ನು ಈ ಘಟಕಕ್ಕೆ ನೀಡಿ ಪರಿಹಾರ ಪಡೆದುಕೊಳ್ಳಬಹುದು. ಪರೀಕ್ಷಾ ಅದಾಲತ್ ಸಹ ಮುಂದುವರೆಯಲಿದೆ.ಮರುಮೌಲ್ಯ ಮಾಪನ: ಕನಕಪುರ, ರಾಮನಗರ, ಚಿಕ್ಕಬಳ್ಳಾಪುರ, ಚಿಂತಾಮಣಿ, ಬೆಂಗಳೂರಿನ ವಿ.ವಿ.ಪುರ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ರಸಾಯನಶಾಸ್ತ್ರ ಉತ್ತರ ಪತ್ರಿಕೆಗಳನ್ನು ಶುಲ್ಕ ಪಡೆಯದೆ ಮರು ಮೌಲ್ಯಮಾಪನ ಮಾಡಲು ಸಿಂಡಿಕೇಟ್ ಒಪ್ಪಿಗೆ ನೀಡಿತು. ಈ ಕಾಲೇಜುಗಳ ನೂರಾರು ವಿದ್ಯಾರ್ಥಿಗಳಿಗೆ ರಸಾಯನವಿಜ್ಞಾನದ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ನೀಡಲಾಗಿತ್ತು. ಅಷ್ಟೊಂದು ಕಡಿಮೆ ಅಂಕ ಬರಲು ಸಾಧ್ಯವೇ ಇಲ್ಲ ಎಂದು ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಒತ್ತಾಯಿಸಿದ್ದರು. ಹದಿಮೂರು ಕಾಲೇಜುಗಳಲ್ಲಿ ಅಧ್ಯಯನ ಕೇಂದ್ರ ಮುಂದುವರೆಸುವ, ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸ್ಥಳೀಯ ಪರಿಶೀಲನಾ ಸಮಿತಿ ರಚಿಸಲೂ ಒಪ್ಪಿಗೆ ಸೂಚಿಸಲಾಯಿತು.ನಕಲು ಮಾಡಿದವರಿಗೆ ಶಿಕ್ಷೆ: ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. 2008ರಿಂದ 2010ರ ವರೆಗೆ ನಡೆದ ಪರೀಕ್ಷೆಗಳಲ್ಲಿ ನಕಲು ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಪರೀಕ್ಷೆ ನಕಲು ವಿಚಾರಣಾ ಸಮಿತಿ ವರದಿ ನೀಡಿದೆ ಎಂದು ಸಿಂಡಿಕೇಟ್ ಸದಸ್ಯ ಡಾ. ಟಿ.ಎಚ್. ಶ್ರೀನಿವಾಸಯ್ಯ ತಿಳಿಸಿದರು.ಹೊರ ನಡೆದ ಆಚಾರ್ಯ:
ಸಿಂಡಿಕೇಟ್ ಸಭೆ ಆರಂಭವಾಗುತ್ತಿದ್ದಂತೆ ಮಾತನಾಡಿದ ಸದಸ್ಯ ಡಾ. ಕೆ.ವಿ. ಆಚಾರ್ಯ, ಕುಲಪತಿ ಪ್ರಭುದೇವ್ ಅವರು ಸರ್ಕಾರದ ಯಾವುದೇ ಆದೇಶಗಳನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿದರು. ವಿವಿಧ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ಅವರು ಕಡ್ಡಾಯ ರಜೆ ಮೇಲೆ ಹೋಗಬೇಕೆಂದು ಒತ್ತಾಯಿಸಿದರು. ಇದಕ್ಕೆ ಕುಲಪತಿಗಳು ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ, ಆಚಾರ್ಯ ಅವರೇ ಸಭೆಯಿಂದ ಹೊರ ನಡೆದರು.ಮರು ಮೌಲ್ಯಮಾಪನ ಶುಲ್ಕ ಇಳಿಕೆ: ಮರುಮೌಲ್ಯ ಮಾಪನದ ಶುಲ್ಕ ಕಡಿಮೆ ಮಾಡುವಂತೆಯೂ ವಿದ್ಯಾರ್ಥಿಗಳು ಕುಲಪತಿ ಡಾ. ಎನ್. ಪ್ರಭುದೇವ್ ಅವರನ್ನು ಒತ್ತಾಯಿಸಿದರು. ಈ ಬಗ್ಗೆ ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಿದ ಪ್ರಭುದೇವ್ ಅವರು 1500 ರೂಪಾಯಿ ಶುಲ್ಕವನ್ನು 750 ರೂಪಾಯಿಗೆ ಇಳಿಸುವುದಾಗಿ ಭರವಸೆ ನೀಡಿದರು.ಶುಲ್ಕ ಏರಿಕೆ ಇಲ್ಲ: ಪಿಎಚ್.ಡಿ ಪ್ರವೇಶ ಶುಲ್ಕವನ್ನು ವಿ.ವಿ. ಹೆಚ್ಚಳ ಮಾಡಿದ್ದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳ ಅಹವಾಲು ಆಲಿಸಿದ ಆಡಳಿತ ವಿಭಾಗದ ಕುಲಸಚಿವ ಪ್ರೊ.ಬಿ.ಸಿ.ಮೈಲಾರಪ್ಪ ಅವರು ಶುಲ್ಕ ಕಡಿಮೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. 2009ರಲ್ಲಿ ಪಿಎಚ್.ಡಿ ಪ್ರವೇಶಕ್ಕೆ ಒಟ್ಟು 1340 ರೂಪಾಯಿ ಶುಲ್ಕವಿತ್ತು. ಇದನ್ನು ಪರಿಷ್ಕರಿಸಿದ್ದ ವಿ.ವಿ ನೋಂದಣಿ ಶುಲ್ಕ 3000, ಟ್ಯೂಷನ್ ಶುಲ್ಕ 5000 ಮತ್ತು ಪ್ರಯೋಗಾಲಯ ಶುಲ್ಕವನ್ನು 4500 ರೂಪಾಯಿ ಭರಿಸಬೇಕು ಎಂದು ಸೂಚಿಸಿತ್ತು.

ಪ್ರತಿಕ್ರಿಯಿಸಿ (+)