ಭಾನುವಾರ, ಮೇ 9, 2021
25 °C

ದೂಳಿನ ಮಳೆಯಲ್ಲಿ ಮೀಯುವ ಮಂದಿ

ಶರತ್ ಹೆಗ್ಡೆ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೂಳಿನ ಮಳೆಯಲ್ಲಿ ಮೀಯುವ ಮಂದಿ

ಕೊಪ್ಪಳ: `ಏನು ದೂಳು. ಅಬ್ಬಬ್ಬಾ ಒಬ್ಬ ಗಿರಾಕಿಯೂ ಸುಳಿಯುತ್ತಿಲ್ಲ... ಏನಪ್ಪಾ ಮಾಡ್ಲಿ' ಎಂದು ನಗರದ ಬೇಕರಿಯವನು ಗೋಳಾಡುತ್ತಾನೆ. ಪಕ್ಕದ ಕ್ಯಾಂಟೀನ್‌ನಲ್ಲೇ ಇಡ್ಲಿ ತಿನ್ನುತ್ತಿದ್ದವನ ತಟ್ಟೆಗೆ ದೊಪ್ಪನೆ ದೂಳಿನ ಕಣಗಳು ಬಿದ್ದು `ಸಾಂಬಾರು' ಸೃಷ್ಟಿಸುತ್ತವೆ. ಅರ್ಧ ತಿಂದವನು ಅತ್ತ ತಿನ್ನಲಾಗದೆ ಇತ್ತ ಬಿಡಲಾಗದೆ ಒದ್ದಾಡುತ್ತಾನೆ.ಮುಖ್ಯರಸ್ತೆ ಬದಿಯಲ್ಲಿ ಸಾಗುತ್ತಿದ್ದ ಪಾದಚಾರಿಯ ಪಕ್ಕ ಡಾಂಬರು ರಸ್ತೆಯಿಂದಿಳಿದ ವಾಹನ ರೊಯ್ಯನೆ ಸಂಚರಿಸುತ್ತದೆ. ಚೆಂದನೆಯ ಬಟ್ಟೆಧರಿಸಿ ಎಲ್ಲಿಗೋ ಹೊರಟಿದ್ದವನಿಗೆ ಸಂಪೂರ್ಣ ದೂಳಿನ ಸ್ನಾನ. ದ್ವಿಚಕ್ರ ವಾಹನ ಸವಾರರ ಪಾಡಂತೂ ಕೇಳುವುದೇ ಬೇಡ. ನಗರದ ಅಶೋಕ ವೃತ್ತದ ಬಳಿ ನಿಂತ ಪೊಲೀಸರನ್ನೇ ಕೇಳಿ. `ನಮಗೆ ಟ್ರಾಫಿಕ್ ನಿರ್ವಹಣೆ ಅಂದರೆ ಅದು ಕರ್ತವ್ಯ ಅಲ್ಲ. ಈ ಸ್ಥಳದಲ್ಲಿ ವಿಧಿಸುವ ಶಿಕ್ಷೆ' ಎಂದೇ ವ್ಯಾಖ್ಯಾನಿಸುತ್ತಾರೆ. ಇಲ್ಲಿ ಮುಖ ಕವಚ ಧರಿಸದೇ ನಿಲ್ಲುವಂತಿಲ್ಲ. ಶಾಲಾ ಮಕ್ಕಳು, ನಾಗರಿಕರು ಬಹುತೇಕರು ಮೂಗಿಗೆ ಬಟ್ಟೆ ಕಟ್ಟಿಕೊಂಡೇ ಓಡಾಡುವುದು ಕೊಪ್ಪಳ ನಗರದಲ್ಲಿ ಸಾಮಾನ್ಯ.ಇದು ಇಡೀ ನಗರದಲ್ಲಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ದೂಳಿನ ಸಮಸ್ಯೆಯ ಚಿತ್ರ. ರಸ್ತೆಯಲ್ಲಿದ್ದ ದೂಳು ಮನೆಯೊಳಗೆಲ್ಲಾ ವ್ಯಾಪಿಸಿ ಎಷ್ಟೇ ಸ್ವಚ್ಛಗೊಳಿಸಿದರೂ ಅರ್ಧಗಂಟೆಯೊಳಗೆ ಮತ್ತದೇ ಸ್ಥಿತಿ ನಿರ್ಮಿಸುತ್ತದೆ. 

ಯಾಕೆ ಹೀಗೆ?: ನಗರದ ಮುಖ್ಯರಸ್ತೆ (ಗದಗ ರಸ್ತೆ) ಇಲ್ಲಿನ ಅಶೋಕ ವೃತ್ತದವರೆಗೆ ಪೂರ್ಣ ಪ್ರಮಾಣದಲ್ಲಿ ಡಾಂಬರು ಕಂಡಿದೆ. ಅಲ್ಲಿಂದ ನಗರದ ಹೊರವಲಯದವರೆಗೆ  ರಸ್ತೆಯ ಉಭಯ ಪಾರ್ಶ್ವಗಳಲ್ಲಿ ಡಾಂಬರೀಕರಣಕ್ಕಾಗಿ ರಸ್ತೆ ಅಗೆದುಹಾಕಲಾಗಿದೆ. ರಸ್ತೆ ವಿಸ್ತರಣೆಗಾಗಿ ಅಗೆದ ಚರಂಡಿ ಮಣ್ಣು ಹಾಗೇ ಇದೆ. ನಿರಂತರ ಬೀಸುವ ಗಾಳಿಯ ರಭಸಕ್ಕೆ ಮಣ್ಣು ಗಾಳಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡುತ್ತದೆ.ಇದಕ್ಕೆ ಭರ‌್ರನೆ ಸಂಚರಿಸುವ ವಾಹನಗಳ ಕೊಡುಗೆಯೂ ಇದೆ. ಮುಖ್ಯರಸ್ತೆಯ ಅಕ್ಕಪಕ್ಕ ಮಣ್ಣು ಇದೆ. ಅಲ್ಲಲ್ಲಿ ಅವೈಜ್ಞಾನಿಕವಾಗಿ ರಸ್ತೆ ಉಬ್ಬುಗಳಿವೆ. ಈ ಉಬ್ಬುಗಳನ್ನು ತಪ್ಪಿಸಲು ವಾಹನ ಚಾಲಕರು ರಸ್ತೆಯಿಂದ ವಾಹನ ಇಳಿಸಿ ಮಣ್ಣಿನ ದಾರಿಯಲ್ಲಿ ವೇಗವಾಗಿ ಸಾಗುತ್ತಾರೆ. ಮತ್ತಷ್ಟು ದೂಳು ರಾಚುತ್ತದೆ.

ನಗರದ ಒಳರಸ್ತೆಗಳು ಪೂರ್ಣ ಪ್ರಮಾಣದಲ್ಲಿ ಡಾಂಬರು ಕಾಣದಿರುವುದು. ಬೈಪಾಸ್ ರಸ್ತೆ ಇಲ್ಲದಿರುವುದು, ಅಸಮರ್ಪಕ ನಗರ ಯೋಜನೆ, ಸಾಕಷ್ಟು ಪ್ರಮಾಣದಲ್ಲಿ ಗಿಡಮರಗಳು ಇಲ್ಲದಿರುವುದು ಸಮಸ್ಯೆ ಉಲ್ಭಣಿಸಲು ಕಾರಣವಾಗಿದೆ. ಅಗೆದು ಹಾಕಿದ ರಸ್ತೆಯ ಉಭಯ ಪಾರ್ಶ್ವಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುವುದರಿಂದ ಸಂಚಾರ ವ್ಯವಸ್ಥೆಗೂ ತೊಡಕಾಗಿದೆ.ನಗರದ ಹೃದಯ ಭಾಗದಲ್ಲಿ ಕೆಲಸ ಮಾಡುವವರು ಒಂದಲ್ಲ ಒಂದು ರೀತಿಯ ಶ್ವಾಸಕೋಶ, ಚರ್ಮರೋಗದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಯಾವಾಗ ರಸ್ತೆ ಡಾಂಬರೀಕರಣ ಪೂರ್ಣವಾದೀತು? ದೂಳಿನ ಸಮಸ್ಯೆಗೆ ಮುಕ್ತಿ ಸಿಕ್ಕೀತು ಎಂದು ನಾಗರಿಕರು ನಿರೀಕ್ಷಿಸುತ್ತಿದ್ದಾರೆ.

ಈ ಬಗ್ಗೆ ನಗರಸಭೆ ಅಧಿಕಾರಿಗಳನ್ನು ಪ್ರಶ್ನಿಸಲು ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.