ಮಂಗಳವಾರ, ಜೂನ್ 22, 2021
27 °C

ದೇವನಹಳ್ಳಿ ಪುರಸಭೆಗೆ ಜಿಲ್ಲಾಧಿಕಾರಿ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ ಪುರಸಭೆಗೆ ಜಿಲ್ಲಾಧಿಕಾರಿ ಭೇಟಿ

ದೇವನಹಳ್ಳಿ:  ಅಧಿಕಾರಿಗಳು ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಅವುಗಳನ್ನು ಶೀಘ್ರವಾಗಿ ಪರಿಹಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಂಕರ್ ನಾರಾಯಣ ಸೂಚಿಸಿದರು.

ಇಲ್ಲಿನ ಪುರಸಭೆ ಶುಕ್ರವಾರ ಭೇಟಿ ನೀಡಿದ್ದ ಅವರು ಅಧಿಕಾರಿಗಳು ಮತ್ತು ಸದಸ್ಯರ ಸಭೆ ನಡೆಸಿದರು.

ಕಾರ್ಯಯೋಜನೆಗಳು ಸಾರ್ವಜನಿಕ ಹಿತಕ್ಕಾಗಿ ಎಂಬುದನ್ನು ಅಧಿಕಾರಿಗಳು ಹಾಗೂ ಸದಸ್ಯರು ಅರ್ಥಮಾಡಿಕೊಳ್ಳಬೇಕು. ತಾಲ್ಲೂಕಿನ ಸಮಸ್ಯೆಗಳ ನಿವಾರಣೆಗೆ ಸಂಬಂಧಿಸಿದಂತೆ ಜಿಲ್ಲಾ ಯೋಜನಾ ನಿರ್ದೇಶಕರಿಂದ ಪರಿಶೀಲನೆ ನಡೆಸಿ  ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕುಡಿಯುವ ನೀರಿನ ಸಮಸ್ಯೆ ನಿವಾರಿಸುವಂತೆ ಈ ವೇಳೆ  ಪುರಸಭೆ ಸದಸ್ಯರು ಜಿಲ್ಲಾಧಿಕಾರಿಗಳನ್ನು ಕೋರಿದರು.

ಪುರಸಭೆ ಸದಸ್ಯರಾದ ಜಿ.ಎನ್.ವೇಣುಗೋಪಾಲ್, ಜಿ.ಎ ರವೀಂದ್ರ ,  ಕುಮಾರ್ ಮಾತನಾಡಿ, ಪ್ರತಿವಾರ್ಡಿನಲ್ಲಿ ಕೊರೆಯಿಸಲಾಗಿರುವ ಕೊಳವೆಬಾವಿಗಳಿಗೆ ಕಳೆದ ಎರಡು ವರ್ಷದಿಂದ ಸಂಪರ್ಕ ಕಲ್ಪಿಸಿಲ್ಲ. ಪೈಪ್‌ಲೈನ್, ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲಾ ಸಿದ್ಧತೆಯಾಗಿದ್ದರೂ ಇದುವರೆಗೂ ನೀರು ಪೂರೈಕೆ ಮಾಡಲು ಅಧಿಕಾರಿಗಳು ಮುಂದಾಗಿಲ್ಲ ಎಂದು ದೂರಿದರು.

2008-09 ಸಾಲಿನ ಪರಿಶಿಷ್ಟರ ಶೇ 22.75 ಅನುದಾನ ಸದ್ಬಳಕೆಯಾಗಿಲ್ಲ. ನೈರ್ಮಲ್ಯ ತ್ಯಾಜ್ಯ ನಿರ್ವಹಣೆ ಅಸಮರ್ಪಕವಾಗಿದ್ದೆ ಎಂದರು.

ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ಸರ್ಕಾರ  ಪಟ್ಟಣದ ಅಭಿವೃದ್ಧಿಗೆ ವಿವಿಧ ಯೋಜನೆಯಡಿಯಲ್ಲಿ ಸುಮಾರು 2 ರಿಂದ 3 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆದರೆ ಕಳೆದ ಒಂದು ವರ್ಷದಿಂದ ಯಾವುದೇ ಟೆಂಡರ್ ಪ್ರಕ್ರಿಯೆ ನಡೆದಿಲ್ಲ  ಎಂದರು. ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಪರಿಹಾರದ ಭರವಸೆ ನೀಡಿದರು.  ಸಭೆಗೂ ಮುನ್ನ  ಶ್ರಿ ಆಂಜನೇಯ ದೇವಾಲಯ ಸಮಿತಿ ಸದಸ್ಯ ಸಿ.ಮುನಿರಾಜ್, ಪಾರಿವಾಳ ಗುಡ್ಡದ ಸಾರ್ವಜನಿಕ ಜಮೀನಿನಲ್ಲಿ ಅಕ್ರಮವಾಗಿ  ರಸ್ತೆ ನಿರ್ಮಿಸಲು ಮರಗಳನ್ನು ಕಡಿಯಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು  ಮನವಿ ಸಲ್ಲಿಸಿದರು.

ಶಾಸಕ ಕೆ.ವೆಂಕಟಸ್ವಾಮಿ, ತಹಶೀಲ್ದಾರ್ ಎಲ್.ಸಿ ನಾಗರಾಜ್, ಪುರಸಭೆ ಮುಖ್ಯಾಧಿಕಾರಿ ಸುಮಾ, ಪುರಸಭೆ ಅಧ್ಯಕ್ಷ ರತ್ನಮ್ಮ, ಸದಸ್ಯ ಜಯರಾಮ್, ನಾರಾಯಣಸ್ವಾಮಿ ಹಂಸರಾಜಣ್ಣ ಸೇರಿದಂತೆ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.