ಗುರುವಾರ , ಜನವರಿ 23, 2020
28 °C

ದೇವಯಾನಿ ಪ್ರಕರಣ: ಅಮೆರಿಕ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಪಿಟಿಐ): ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಅವರ ಬಂಧನ, ವಿವಸ್ತ್ರಗೊಳಿಸಿ ತಪಾಸಣೆ ನಡೆಸಿದ್ದರ ಬಗ್ಗೆ ಅಮೆರಿಕ ಬುಧವಾರ ವಿಷಾದ ವ್ಯಕ್ತಪಡಿಸಿದೆ.ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್‌ ಕೆರಿ ಅವರು ಭಾರತದ ಭದ್ರತಾ ಸಲಹೆಗಾರ ಶಿವಶಂಕರ್‌ ಮೆನನ್‌ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪ್ರಕರಣದ ಬಗ್ಗೆ ವಿಷಾದದ ಮಾತುಗಳನ್ನು ಆಡಿದರು.ಈ ದುರದೃಷ್ಟಕರ ಘಟನೆಯು ಉಭಯ ರಾಷ್ಟ್ರಗಳ ಆಪ್ತ ಹಾಗೂ ಸದೃಢ ಸಂಬಂಧವನ್ನು ಹಾಳುಗೆಡವಲು ಅವಕಾಶ ನೀಡುವುದಿಲ್ಲವೆಂದು ಕೆರಿ ಸ್ಪಷ್ಟಪಡಿಸಿದರು ಎಂದು ಅಮೆರಿಕ ವಿದೇಶಾಂಗ ಕಚೇರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.‘ಹೆಚ್ಚು ಕಡಿಮೆ ದೇವಯಾನಿಯಷ್ಟೇ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿರುವ ನನಗೆ ಭಾರತವು ಪ್ರಸ್ತಾಪಿಸುತ್ತಿರುವ ವಿಷಯಗಳು ಎಷ್ಟು ಸೂಕ್ಷ್ಮ ಎಂಬುದು ಅರ್ಥವಾಗುತ್ತದೆ’ ಎಂದು ಕೆರಿ ಅವರು ಮೆನನ್‌ ಬಳಿ ಹೇಳಿದರೆಂದೂ ಪತ್ರಿಕಾ ಹೇಳಿಕೆ ತಿಳಿಸಿದೆ.‘ವಿದೇಶಗಳಲ್ಲಿರುವ ನಮ್ಮ ರಾಜತಾಂತ್ರಿಕ ಅಧಿಕಾರಿಗಳಿಗೆ ಎಂತಹ ಗೌರವ ಹಾಗೂ ಘನತೆ ಲಭ್ಯವಾಗಬೇಕು ಎಂದು ಬಯಸುತ್ತೇವೋ ಅದೇ ರೀತಿಯಲ್ಲೇ ನಾವು ಕೂಡ ಅಮೆರಿಕದಲ್ಲಿರುವ ವಿದೇಶಿ ರಾಜತಾಂತ್ರಿಕರಿಗೆ ಗೌರವ ನೀಡುವುದು ಮುಖ್ಯ’ ಎಂದೂ ಕೆರಿ ಹೇಳಿದ್ದಾರೆ.ಬಿಕ್ಕಟ್ಟು ಶಮನಕ್ಕೆ ಯತ್ನ

ದೇವಯಾನಿ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧ ಬಿಗಡಾಯಿಸಿದ ಬೆನ್ನಲ್ಲೇ ಅಮೆರಿಕವು ಬುಧವಾರ ಅದನ್ನು ಶಮನಗೊಳಿಸುವ ಪ್ರಯತ್ನ ನಡೆಸಿದೆ.

‘ಈ ಒಂದು ಅಪರೂಪದ ಪ್ರಕರಣವು ಉಭಯ ರಾಷ್ಟ್ರಗಳ ಆಪ್ತ ಹಾಗೂ ಪರಸ್ಪರ ಗೌರವಪೂರ್ವಕವಾದ ಬಾಂಧವ್ಯಕ್ಕೆ ಅಪವಾದವೆಂಬಂತೆ ಘಟಿಸಿದೆ’ ಎಂದು ಅಮೆರಿಕ ಸ್ಪಷ್ಟನೆ ನೀಡಿದೆ.ಈ ಪ್ರಕರಣದ ಬಗ್ಗೆ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರಿಗೂ ತಿಳಿಸಲಾಗಿದೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೇ ಕಾರ್ನಿ ಸುದ್ದಿಗಾರರ ಬಳಿ ಹೇಳಿದರು.

ಪ್ರತಿಕ್ರಿಯಿಸಿ (+)