ಗುರುವಾರ , ಜನವರಿ 23, 2020
29 °C

ದೇವರಮನೆಗೆ ಬಸ್‌ ಸೌಕರ್ಯಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಿಗೆರೆ: ತಾಲ್ಲೂಕಿನ ಪ್ರವಾಸಿ ತಾಣವಾದ ದೇವರಮನೆ ಗ್ರಾಮಕ್ಕೆ ಬಸ್‌ ಸೌಲಭ್ಯ ಕಲ್ಪಿಸುವಂತೆ ತಾಲ್ಲೂಕು ಕನ್ನಡ ಸಾಹಿತ್ಯ ಪರೀಷತ್‌ ಅಧ್ಯಕ್ಷ ಎಂ.ಎಸ್‌. ಅಶೋಕ್‌ ಒತ್ತಾಯಿ ಸಿದ್ದಾರೆ.ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇವರಮನೆ ಗ್ರಾಮದಲ್ಲಿರುವ  ಕಾಲಭೈರವೇಶ್ವರ ದೇವಾಲಯವು ಇತಿಹಾಸ ಪ್ರಸಿದ್ಧವಾಗಿತ್ತು, ತಾಲ್ಲೂಕಿನ ಜನತೆ ಮಾತ್ರವಲ್ಲದೇ, ನಾನಾ ಜಿಲ್ಲೆಗಳ ಪ್ರವಾಸಿಗರು ಪ್ರತಿನಿತ್ಯ ಭೇಟಿ ನೀಡುತ್ತಾರೆ.ಅಲ್ಲದೆ ಮಲೆನಾಡಿನಲ್ಲಿ ಸುಗ್ಗಿ ಕಾಲದಲ್ಲಿ ಪ್ರತಿಯೊಬ್ಬ ರೈತರೂ ದೇವರಮನೆ ದೇವಾಲಯಕ್ಕೆ ತಮ್ಮ ಕೃಷಿ ವಸ್ತು ನೀಡುವ ಪದ್ಧತಿಯಿದ್ದು, ಈ ವೇಳೆಯೆಲ್ಲಾ ಖಾಸಗೀ ವಾಹನಗಳನ್ನೇ ಆಶ್ರಯಿಸ ಬೇಕಾಗಿದೆ ಎಂದು ಹೇಳಿದ್ದಾರೆ.ಹಲವು ಬಾರಿ ಬಸ್‌ ಸೌಕರ್ಯವನ್ನು ಒದಗಿಸುವಂತೆ ಮನವಿ ಮಾಡಿದ್ದರೂ, ದುರಸ್ತಿಗೊಂಡ ರಸ್ತೆಯ ಕಾರಣ ನೀಡಿ ಬಸ್‌ ಸೌಲಭ್ಯವನ್ನು ನಿರಾಕರಿಸಲಾಗುತ್ತಿತ್ತು. ಆದರೆ ಪ್ರಸಕ್ತ ದೇವರಮನೆ ರಸ್ತೆ ದುರಸ್ತಿಗೊಂಡಿದ್ದು, ದೇವಾಲಯದ ಸಮೀಪದವರೆಗೂ ಬಸ್‌ ಸಾಗಬಹುದಾಗಿದ್ದು, ಕೂಡಲೇ ಸ್ಥಳೀಯ ಘಟಕದಿಂದ ಬೆಳಗ್ಗೆ ಮತ್ತು ಸಂಜೆಯ ವೇಳೆಗೆ ಬಸ್‌ಸೌಕರ್ಯವನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.‘ಶಾಸಕರ  ಯತ್ನದಿಂದ ಹಣ ಬಿಡುಗಡೆ’

ನರಸಿಂಹರಾಜಪುರ: ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 2012–13 ನೇ ಸಾಲಿನ 2ನೇ ಹಂತದ ನಗರೋತ್ಥಾನ ಯೋಜನೆಯಡಿ ಶಾಸಕ ಡಿ.ಎನ್.ಜೀವರಾಜ್ ಅವರ ಪ್ರಯತ್ನದ ಫಲವಾಗಿ ₨5ಕೋಟಿ ಬಿಡುಗಡೆಯಾಗಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಆರ್.ಜಯರಾಮ್ ತಿಳಿಸಿದ್ದಾರೆ.ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಪಟ್ಟಣ ಪಂಚಾಯಿತಿಯ ಹಿಂದಿನ ಸದಸ್ಯರ ಅವಧಿಯ ಸಾಮಾನ್ಯ ಸಭೆಯ ನಿರ್ಣಯದಂತೆ ಹಾಗೂ ಶಾಸಕರ ಪ್ರಯತ್ನದ ಫಲವಾಗಿ ಕ್ರಿಯಾ ಯೋಜನೆಗೆ ಜಿಲ್ಲಾಧಿಕಾರಿಗಳಿಂದ ಅನುಮೋದನೆಗೊಂಡಿದೆ. ಈ ಹಿಂದೆಯೇ ಟೆಂಡರ್ ಸಹಾ ಆಗಿತ್ತು. ಈ ನಡುವೆ ಪಟ್ಟಣ ಪಂಚಾಯಿತಿ ಹಾಗೂ ವಿಧಾನ ಸಭೆ ಚುನಾವಣೆ ಘೋಷಣೆಯಾಗಿದ್ದರಿಂದ ಕಾಮಗಾರಿಗೆ ಪ್ರಾರಂಭಕ್ಕೆ ವಿಳಂಬವಾಗಿತ್ತು ಎಂದು ಹೇಳಿದರು.ಶಾಸಕರು ಪಟ್ಟಣದ ಅಭಿವೃದ್ಧಿ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಒತ್ತಡ ತಂದ ಪರಿಣಾಮ ಪಟ್ಟಣದ ವ್ಯಾಪ್ತಿಯ ಬಹುತೇಕ ರಸ್ತೆಗಳು ಕಾಂಕ್ರಿಟ್ ರಸ್ತೆಗಳಾಗಿ ಪರಿವರ್ತನೆಯಾಗಿವೆ. ಅಲ್ಲದೆ ಹೊಸದಾಗಿ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.ಪಟ್ಟಣದ ಅಭಿವೃದ್ಧಿಗೆ ಕಾರಣರಾದ ಶಾಸಕರು ಹಾಗೂ ಹಿಂದಿನ ಪಟ್ಟಣ ಪಂಚಾಯಿತಿ ಸದಸ್ಯರಿಗೂ ಪಕ್ಷ ಅಭಿನಂದಿಸುತ್ತದೆ. ಪ್ರಸ್ತುತ ಪಟ್ಟಣ ಪಂಚಾಯಿತಿ ಯಲ್ಲಿ ಆಡಳಿತಾಧಿಕಾರಿಗಳು ಅಧಿಕಾರದಲ್ಲಿದ್ದು, ಕಾಮಗಾರಿ ಉತ್ತಮ ಗುಣಮಟ್ಟದಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಪಕ್ಷವು ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)