ಸೋಮವಾರ, ಮೇ 17, 2021
21 °C

ದೇವಲೋಕ (ಚಿತ್ರ: ದೇವ್ ಸನ್ನಾಫ್ ಮುದ್ದೇಗೌಡ)

ಡಿ.ಕೆ.ರಮೇಶ್ Updated:

ಅಕ್ಷರ ಗಾತ್ರ : | |

ವಿಭಿನ್ನ ಬಗೆಯ ಪೋಸ್ಟರ್‌ಗಳನ್ನು ಹೊತ್ತು, ವಿವಾದವನ್ನೂ ಹೆಗಲಿಗೇರಿಸಿಕೊಂಡು ಸುದ್ದಿಗೆ ಗ್ರಾಸವಾದ ಚಿತ್ರ `ದೇವ್...~. ವಿವಾದಕ್ಕೂ ಶೀರ್ಷಿಕೆಗೂ ಬಾದರಾಯಣ ಸಂಬಂಧವೂ ಇಲ್ಲ ಎಂಬುದು ತೆರೆಯ ಮೇಲೆ ವೇದ್ಯ. ಹಿಂದಿಯ `ವೇಕಪ್ ಸಿದ್~ನಿಂದ ಕತೆ ಪ್ರಭಾವಿತ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಅದ್ದೂರಿತನದಲ್ಲಿ ಧಾರಾಳಿ. ಹಾಗಾಗಿ ಚಿತ್ರಕ್ಕೆ ಭರ್ತಿ ವೈಭವದ ಸ್ಪರ್ಶ.ಮುದ್ದೇಗೌಡ ಬಡತನದಿಂದ ಮೇಲೆ ಬಂದವನು. ಆದರೆ ತನ್ನ ಮಗ ದೇವ್ ಮಾತ್ರ ಕಷ್ಟಪಡುವಂತಿಲ್ಲ. ಐಶಾರಾಮಿ ಬದುಕಿನ ದೇವ್ ಸದಾ ಸುಖಾಸೀನ. ಆತ ಕಾಲೇಜಿನ ಸಮಾರಂಭಕ್ಕಾಗಿ ನೃತ್ಯ ನಿರ್ದೇಶಕಿಯೊಬ್ಬಳನ್ನು ಆಹ್ವಾನಿಸುತ್ತಾನೆ. ಪರಿಚಯ ಗಾಢ ಸ್ನೇಹಕ್ಕೆ ತಿರುಗುತ್ತದೆ. ಪರೀಕ್ಷೆಯಲ್ಲಿ ಪಾಸಾಗದೇ ಹೋದದ್ದು ನೆಪವಾಗಿ ಮನೆ ಬಿಟ್ಟು ಹೊರಡುತ್ತಾನೆ. ಅಪ್ಪನ ಹಾದಿಯಲ್ಲಿ ಸಾಗದೇ ಹೊಸ ಕನಸೊಂದನ್ನು ಕಾಣುತ್ತಾನೆ.ಸಿನಿಮಾದಲ್ಲಿ ನಟಿಸುವ ಆಸೆಗೆ ನೀರೆರೆಯುವುದು ಅವನ ಗೆಳತಿ  ಕಾವ್ಯ. ಆದರೆ ಚಿತ್ರರಂಗ ಹೊಸಬರನ್ನು ಒಪ್ಪಿಕೊಳ್ಳಬೇಕಲ್ಲ? ಅನೇಕ ಕಹಿ ಅನುಭವಗಳು ದೇವ್ ಪಾಲಿಗೆ. ಕೊನೆಗೂ ಆತ ಅವನ್ನೆಲ್ಲಾ ಹೇಗೆ ಗೆಲ್ಲುತ್ತಾನೆ ಎಂಬುದು ಚಿತ್ರದ ತಿರುಳು.

ದೇವ್ ಪಾತ್ರದಲ್ಲಿ ದಿಗಂತ್ ಗೆದ್ದಿದ್ದಾರೆ. ಅವರ ಸಿಕ್ಸ್‌ಪ್ಯಾಕ್ ದರ್ಶನವೂ ಪ್ರೇಕ್ಷಕರಿಗೆ ಲಭ್ಯ. ಕಾವ್ಯ ಪಾತ್ರದಲ್ಲಿ ಆಮದು ನಟಿ (ತೆಲುಗಿನ) ಚಾರ್ಮಿ ಸೈ ಎನಿಸಿಕೊಂಡಿದ್ದಾರೆ.

ಅವರಿಗೆ ಅಭಿನಯ ಗೊತ್ತು. ಆದರೆ ಒಂದೊಳ್ಳೆ ಜೋಡಿಯಾಗುವಲ್ಲಿ ಇಬ್ಬರೂ ವಿಫಲ. ನಾಯಕನಿಗೆ ತಕ್ಕ ನಾಯಕಿಯನ್ನು ಆಯ್ಕೆ ಮಾಡುವಲ್ಲಿ ನಿರ್ದೇಶಕರು ಯಶ ಕಂಡಿಲ್ಲ.ಇಂದ್ರಜಿತ್ ಸೂತ್ರಧಾರಿಯಾಗಿರುವಂತೆ ಪಾತ್ರಧಾರಿ ಕೂಡ. ಚಿತ್ರ ತಾರೆ ದೀಪು ಆಗಿ ನೆಗೆಟಿವ್ ಪಾತ್ರವೊಂದರಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಪಾತ್ರದ ಪರಿಕಲ್ಪನೆ ಉತ್ತಮವಾಗಿದೆ.ಚಿತ್ರರಂಗದ ಸದ್ಯದ ಸ್ಥಿತಿಯನ್ನು ವಿಮರ್ಶಿಸುವ ಯತ್ನ ಈ ಮೂಲಕ ನಡೆದಿದೆ. ಆದರೆ ಪಾತ್ರ ಇನ್ನಷ್ಟು ಸ್ಫುಟವಾಗಿ ಬೆಳಗಬಹುದಿತ್ತು. ಶುಷ್ಕತೆಯನ್ನು ಮೀರಬಹುದಿತ್ತು. ನಿರ್ದೇಶನದತ್ತ ಗಮನ ಹರಿಸುವ ಭರದಲ್ಲಿ ಅವರು ತಮ್ಮ ಪಾತ್ರವನ್ನೇ ಮರೆತಂತಿದೆ.

 

ಚಿತ್ರಕ್ಕೆ ಮಾದಕತೆ ತಂದಿರುವವರು ರೂಪದರ್ಶಿ ನತಾಲಿಯಾ ಕೌರ್. ದೇಹಸಿರಿಯೇ ಅವರ ಬಂಡವಾಳ. ಮುದ್ದೇಗೌಡನಾಗಿ ನಟಿಸಿರುವ ಅನಂತ್‌ನಾಗ್ ಅವರದು ಪ್ರಬುದ್ಧ ನಟನೆ. ದೇವ್ ತಾಯಿಯಾಗಿರುವ ಸುಧಾ ಬೆಳವಾಡಿ ಅವರ ನಟನೆಗೆ ಹೆಚ್ಚು ಅವಕಾಶಗಳಿಲ್ಲ. ರಾಜು ತಾಳಿಕೋಟೆ, ತಬಲ ನಾಣಿ ಹಾಗೂ ಮಿತ್ರ ಹಾಸ್ಯದ ಸ್ಪರ್ಶ ನೀಡಿದ್ದಾರೆ. ಪುಟ್ಟ ಪಾತ್ರಗಳಲ್ಲಿ ಬ್ಯಾಂಕ್ ಜನಾರ್ದನ್, ಸುಚೇಂದ್ರ ಪ್ರಸಾದ್, ಅಚ್ಯುತ್‌ಕುಮಾರ್ ಬಂದು ಹೋಗುತ್ತಾರೆ.ಚಿತ್ರಕ್ಕೆ ಸಂತೋಷ್ ಪಾತಾಜೆ ಅವರ ಸಮೃದ್ಧ ಛಾಯಾಗ್ರಹಣ ಇದೆ. ನಾದ-ಪದಕ್ಕಿಂತಲೂ ಹಾಡುಗಳು ಸೆಳೆಯುವುದು ವೈಭವದ ದೃಶ್ಯಗಳಿಂದಾಗಿ. ಪ್ರತಿ ದೃಶ್ಯದಲ್ಲೂ ಆಡಂಬರವಿರುವಂತೆ ಅಚ್ಚುಕಟ್ಟುತನವಿದೆ. ಕಲಾ ನಿರ್ದೇಶಕ ಮೋಹನ್ ಬಿ. ಕೆರೆ ಅವರ ಶ್ರಮ ಗಮನಾರ್ಹ. ಮಂಜು ಮಾಂಡವ್ಯ ಹಾಗೂ ಬಿ.ಎ.ಮಧು ಅವರ ಸಂಭಾಷಣೆ ಚೇತೋಹಾರಿ. ನೃತ್ಯ ನಿರ್ದೇಶನದಲ್ಲಿ ಹರ್ಷ ಅವರದ್ದು ಎತ್ತಿದ ಕೈ.ತಾಂತ್ರಿಕವಾಗಿ ಇಂದ್ರಜಿತ್ ಬೆಳೆದಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕತೆ ಕಟ್ಟುವ ಕ್ರಮದಲ್ಲಿ ಇನ್ನಷ್ಟು ಬೆಳೆಯಬೇಕಿದೆ. ದ್ವಿತೀಯಾರ್ಧದವರೆಗೂ ಚಿತ್ರದಲ್ಲಿ ಯಾವುದೇ ಏರಿಳಿತಗಳಿಲ್ಲ. ಆ ನಂತರ ಬೆಳೆಯುವ ಕತೆ ಗೊಂದಲದ ಗೂಡು.

 

ದೇವ್ ಕತೆಯೊಂದಿಗೆ ದೀಪು ಪಾತ್ರ ಹದವಾಗಿ ಬೆರೆತಿಲ್ಲ. ಕತೆಯಲ್ಲಿ ಆಮದು ನಟಿಯರನ್ನು ವಿಮರ್ಶಿಸುವ ನಿರ್ದೇಶಕರು ಸ್ವತಃ ಆಮದು ನಟಿಯರಿಗೇ ಶರಣಾಗಿರುವುದು ಚಿತ್ರರಂಗದ ಚೋದ್ಯ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.