ಶುಕ್ರವಾರ, ಜನವರಿ 24, 2020
21 °C

ದೇವಸ್ಥಾನ ಆಡಳಿತ ಸಮಿತಿ ರದ್ದು: ಸಭಾತ್ಯಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುವರ್ಣ ಸೌಧ (ಬೆಳಗಾವಿ): ರಾಜ್ಯದಲ್ಲಿ ದೇವಸ್ಥಾನಗಳ ಆಡಳಿತ ಸಮಿತಿಗಳನ್ನು ರದ್ದುಗೊಳಿಸಿದ ವಿಷಯದ ಕುರಿತು ಸರ್ಕಾರ ಸಮರ್ಪಕ ಉತ್ತರ ನೀಡಲಿಲ್ಲ ಎಂದು ಆರೋಪಿಸಿ ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದ ಪ್ರಸಂಗ ಸೋಮವಾರ ನಡೆಯಿತು.ದೇವಸ್ಥಾನಗಳ ಆಡಳಿತ ಸಮಿತಿಗಳನ್ನು ರದ್ದು ಮಾಡಿದ ಕಾರಣ ಆಡಳಿತಾತ್ಮಕ ತೊಂದರೆ ಉಂಟಾಗಿದ್ದು ದೇವಾಲಯಗಳು ನಡೆಸುವ ಶಾಲಾ ಕಾಲೇಜುಗಳ ಆಡಳಿತಕ್ಕೂ ಧಕ್ಕೆಯಾಗಿದೆ, ಜೀರ್ಣೋದ್ಧಾರ ಕಾರ್ಯಗಳಿಗೂ ಹಿನ್ನಡೆಯಾ­ಗಿದೆ ಎಂದು  ಬಿಜೆಪಿ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಸಿ.ಎಚ್.ವಿಜಯಶಂಕರ್, ಭಾರತಿ ಶೆಟ್ಟಿ, ಹಾಗೂ ದೊಡ್ಡರಂಗೇಗೌಡರು ಸರ್ಕಾರದ ಗಮನ ಸೆಳೆದರು.ವಿಷಯ ಪ್ರಸ್ತಾಪಿಸಿದ ಕೋಟ ಶ್ರೀನಿವಾಸ ಪೂಜಾರಿ ದೇವಸ್ಥಾನಗಳ ವ್ಯವಸ್ಥಾಪನಾ ಮಂಡಳಿಗಳನ್ನು ರದ್ದು ಮಾಡಿದ್ದರಿಂದ ರಾಜ್ಯ ಧಾರ್ಮಿಕ ಪರಿಷತ್ ಮತ್ತು ಜಿಲ್ಲಾ ಧಾರ್ಮಿಕ ಪರಿಷತ್ ಕಾರ್ಯನಿರ್ವಹಿಸುತ್ತಿಲ್ಲ, ಸರ್ಕಾರ ಈ ವಿಷಯದಲ್ಲಿ ಸ್ವೇಚ್ಛಾಚಾರದಿಂದ ವರ್ತಿಸಿದ್ದು ಇದರಿಂದ ದೇವಸ್ಥಾನಗಳ ಎಲ್ಲ ಕಾರ್ಯ ಚಟುವಟಿಕೆಗಳಿಗೆ ಧಕ್ಕೆಯಾಗಿದೆ ಎಂದರು. ಇದಕ್ಕೆ ದನಿಗೂಡಿಸಿದ ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ ಆಡಳಿತ ಸಮಿತಿಗಳನ್ನು  ರದ್ದು ಮಾಡಿದ್ದು  ಸರಿಯಲ್ಲ ಎಂದು ಹೈಕೋರ್ಟ್ ಕೂಡ ಅಭಿಪ್ರಾಯಪಟ್ಟಿದೆ, ಇದರಿಂದ ಸರ್ಕಾರಕ್ಕೆ ಮುಖಭಂಗ ಆಗಿದೆ. ಆದರೂ ಬುದ್ದಿ ಕಲಿಯದ ಸರ್ಕಾರ ಸುಪ್ರಿಂ ಕೋರ್ಟ್ ಮೆಟ್ಟಿಲೇರಲು ಮುಂದಾಗಿದೆ. ಈ ಯೋಚನೆಯನ್ನು ಕೈಬಿಟ್ಟು  ಆಡಳಿತ ಸಮಿತಿಗಳನ್ನು ರಚಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.ಜೆಡಿಎಸ್ ನ ಎಂ.ಸಿ.ನಾಣಯ್ಯ  ಈ ಸಂದರ್ಭದಲ್ಲಿ ಮಧ್ಯ  ಪ್ರವೇಶ ಮಾಡಿ ದೇವಸ್ಥಾನಗಳ ಆಡಳಿತ ಸಮಿತಿಯಲ್ಲಿ ರಾಜಕಾರಣಿಗಳನ್ನು ಸೇರಿಸಿದ ಕಾರಣ ಎಲ್ಲ ದೇವಸ್ಥಾನಗಳಲ್ಲೂ ರಾಜಕೀಯ ಬೆರೆತಿದ್ದು ಒಳ್ಳೆಯ ಕೆಲಸಗಳಿಗೆ ಅಡ್ಡಿಯಾಗಿದೆ. ಕೊಡಗು ಜಿಲ್ಲೆಯ ತಲಕಾವೇರಿ, ಓಂಕಾರೇಶ್ವರ ದೇವಸ್ಥಾನ ಮುಂತಾದ ಕಡೆಗಳಲ್ಲಿ ಇಂಥ ಅನುಭವಗಳಾಗಿವೆ ಎಂದು ಹೇಳಿ ಹಿಂದಿನ ಬಿಜೆಪಿ ಸರ್ಕಾರದ ಪ್ರತಿನಿಧಿಗಳಿಗೆ ಇರಿಸು ಮುರಿಸು ಉಂಟು ಮಾಡಿದರು.'ದೇವಸ್ಥಾನಗಳ ಆಡಳಿತ ಸಮಿತಿಗೆ ನೇಮಕ ಆಗುವವರು ಧಾರ್ಮಿಕ ಚಿಂತನೆ ಇರುವವರು, ವ್ಯಕ್ತಿತ್ವ ಶುಚಿ ಇರುವವರು ಆಗಿರಬೇಕು. ರಾಜಕೀಯವಾಗಿ ನೇಮಕಗಳನ್ನು ಮಾಡಿದರೆ ದೇವಸ್ಥಾನಗಳ ಪರಿಸರ ಹಾಳಾಗುತ್ತದೆ' ಎಂದು ಅವರು ಹೇಳಿದರು.ನಾಣಯ್ಯ ಅವರ ಅಭಿಪ್ರಾಯಕ್ಕೆ  ಅಸಮ್ಮತಿ ಸೂಚಿಸಿದ ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಸದಾನಂದಗೌಡ ದೇವಸ್ಥಾನಗಳ ಆಡಳಿತ ಸಮಿತಿಗೆ ಚುನಾಯಿತ ಪ್ರತಿನಿಧಿಗಳನ್ನು ನೇಮಕ ಮಾಡಬಹುದಾಗಿದೆ, ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳಾಗಿರಬಾರದು. ಜಿಲ್ಲಾಧಿಕಾರಿ ಮತ್ತು ಪೊಲೀಸರಿಂದ ವ್ಯಕ್ತಿಯ ಹಿನ್ನೆಲೆಯ ಕುರಿತ ವರದಿ ತರಿಸಿದ ನಂತರವೇ ಹಿಂದೆ ದೇವಸ್ಥಾನ ಮಂಡಳಿಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿತ್ತು ಎಂದು ಸ್ಪಷ್ಟಪಡಿಸಿದರು.ಹಿಂದೂ ಧರ್ಮದ ಮೇಲೆ, ನಮ್ಮ ದೇವಸ್ಥಾನಗಳ ಮೇಲೆ ಎಲ್ಲರಿಗೂ ಕಣ್ಣು. ಬೇರೆ ಯಾವ ಧರ್ಮದ ತಂಟೆಗೆ ಹೋಗುವ ಧೈರ್ಯ ಯಾರಿಗೂ ಇಲ್ಲ. ನಿರಂತರ ದಬ್ಬಾಳಿಕೆ ನಡೆಸಲು ನಾವೇನು ಬಿಕಾರಿಗಳಾ ಎಂದು ಪ್ರಶ್ನಿಸಿದ ಭಾರತಿ ಶೆಟ್ಟಿ  ಸ್ವಂತ ಧರ್ಮವನ್ನು ರಕ್ಷಿಸಲು ಸಾಧ್ಯವಾಗದ ಮುಜರಾಯಿ ಸಚಿವರು ಇತರ ಧರ್ಮವನ್ನು ಕಾಪಾಡುವರು ಎಂಬ ನಂಬಿಕೆ ನಮಗಿಲ್ಲ ಎಂದರು.ಚಂದ್ರಗುತ್ತಿ ದೇವಸ್ಥಾನದ ಆವರಣ ಹಾಳಾಗಿದೆ. ಸವದತ್ತಿ ಎಲ್ಲಮ್ಮ ದೇವಸ್ಥಾನದ ಆವರಣ ಗಬ್ಬೆದ್ದು ಹೋಗಿದೆ. ಅಲ್ಲಿ ನೀರು, ಬಸ್ ತಂಗುದಾಣ ಇಲ್ಲ. ಶುಚಿತ್ವವಂತೂ ಇಲ್ಲವೇ ಇಲ್ಲ ಎಂದು  ವಿವರಿಸಿದ ಅವರು ರದ್ದು ಮಾಡಿದ ಆಡಳಿತ ಮಂಡಳಿಗಳನ್ನು ಆದಷ್ಟು ಬೇಗ ರಚಿಸಿ, ಸುಪ್ರೀಂ ಕೋರ್ಟಿಗೆ ಹೋಗಿ ಛೀಮಾರಿ ಹಾಕಿಸಿ­ಕೊಳ್ಳಬೇಡಿ ಎಂದು ಸರ್ಕಾರಕ್ಕೆ  ಸಲಹೆ ನೀಡಿ­ದರು. ಅವರ ಮಾತಿಗೆ ದೊಡ್ಡರಂಗೇ­ಗೌಡರು ಕೂಡ ದನಿಗೂಡಿಸಿದರು.ಇದಕ್ಕೆ ಉತ್ತರಿಸಿದ ಮುಜರಾಯಿ ಸಚಿವ ಪ್ರಕಾಶ ಹುಕ್ಕೇರಿ ರಾಜ್ಯದ ಒಟ್ಟು ೧೦೩೪ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗಳ ಪೈಕಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ ೧೯೯೭ರ ಕಲಂ ೨೫ರ ಅಡಿ ೬೪೬ ಸಮಿತಿಗಳನ್ನು ಮಾತ್ರ ರದ್ದು ಮಾಡಲಾಗಿದೆ. ಆಡಳಿತಾಧಿ­ಕಾರಿಗಳನ್ನು ನೇಮಕ ಮಾಡಲಾಗಿದೆ. ಆದ್ದರಿಂದ ದೇವಾಲಯಗಳ ಆಡಳಿತಕ್ಕೆ ಯಾವುದೇ ಧಕ್ಕೆಯಾಗಲಿಲ್ಲ. ಹಾಗಿದ್ದೂ ಯಾವುದಾದರೂ ದೂರು ಬಂದರೆ ಕ್ರಮ ಕೈಗೊಳ್ಳಲು ಸರ್ಕಾರ ಸಿದ್ಧ  ಎಂದರು.ಸಚಿವರ ಉತ್ತರದಿಂದ ಸಮಾಧಾನಗೊಳ್ಳದ ವಿರೋಧ ಪಕ್ಷದ ನಾಯಕರು 'ಮಂತ್ರಿಗಳೇ ಈ ಬಗೆಯ ಸಪ್ಪೆ ಉತ್ತರ ನೀಡಿದರೆ ಹೇಗೆ? ಆಡಳಿತ ಮಂಡಳಿಗಳ ರದ್ದತಿ ಕುರಿತ ಆದೇಶವನ್ನು ಹಿಂಪಡೆಯಬೇಕು, ಹೈಕೋರ್ಟ್ ಆದೇಶವನ್ನು ಪಾಲಿಸಬೇಕು, ಸುಪ್ರೀಂಕೋರ್ಟ್ ಮೆಟ್ಟಿಲೇರುವ ನಿರ್ಧಾರ ಕೈಬಿಡಬೇಕು, ಮಂತ್ರಿಗಳ ಉತ್ತರದಿಂದ ನಮಗೆ ಸಮಾಧಾನವಾಗಲಿಲ್ಲ, ಮಾತ್ರವಲ್ಲ  ಇದರಿಂದ ಹಿಂದೂಗಳಿಗೆ ಅವಮಾನ ಆಗಿದೆ' ಎಂದು ಹೇಳಿ ಸಭಾತ್ಯಾಗ ಮಾಡಿದರು.

ಪ್ರತಿಕ್ರಿಯಿಸಿ (+)