ಗುರುವಾರ , ಏಪ್ರಿಲ್ 15, 2021
24 °C

ದೇವಾಲಯ ಪ್ರವೇಶಕ್ಕೆ ದಲಿತರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ತಾಲ್ಲೂಕಿನ ಅದಲಾಪುರದಲ್ಲಿ ದಲಿತರಿಗೆ ದೇವಾಲಯ ಒಳಪ್ರವೇಶ ನಿಷೇಧ ಹಾಗೂ ಜಾತ್ರೆಗೆ ಬಹಿಷ್ಕಾರ ಹಾಕಿರುವುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಖಂಡಿಸಿದರು.ಸ್ವತಂತ್ರ ಭಾರತದಲ್ಲಿ ಅಸ್ಪೃಶ್ಯತೆಗೆ ಇದು ಜೀವಂತ ಸಾಕ್ಷಿಯಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.ನೂರೈವತ್ತು ಕುಟುಂಬಗಳಿರುವ ಅದಲಾಪುರದಲ್ಲಿ ಗ್ರಾಮದೇವತೆ ದೇಗುಲಕ್ಕೆ ಸುಮಾರು 25 ವರ್ಷಗಳಿಂದಲೂ ಹೊರಭಾಗದಲ್ಲೇ ನಿಂತು ದಲಿತರು ಪೂಜೆ ಸಲ್ಲಿಸುವ ಪದ್ದತಿ ಇದೆ. ಹಿಂದೊಮ್ಮೆ ದಲಿತ ಸಮುದಾಯದ ಚಿಕ್ಕನರಸಯ್ಯ ಪೂಜೆ ಸಲ್ಲಿಸಲು ದೇವಾಲಯ ಪ್ರವೇಶ ಮಾಡಿದ್ದ ಸಮಯದಲ್ಲಿ ಸವರ್ಣೀಯ ಅರ್ಚಕರು ನಿಂದಿಸಿ ಹಲ್ಲೆ ಮಾಡಿದ್ದರು. ಆಗ ಪೊಲೀಸರ ಮಧ್ಯ ಪ್ರವೇಶದಿಂದ ಆತನಿಗೆ ದೇವಾಲಯ ಒಳಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಉಳಿದಂತೆ ಇಂದಿಗೂ ದಲಿತರಿಗೆ ದೇವಾಲಯ ಒಳಪ್ರವೇಶ ನಿಷಿದ್ಧ ಎಂದು ತಿಳಿಸಿದರು.ಊರಿನ ಸತ್ತ ಜಾನವಾರುಗಳನ್ನು ಹೂಳಲು, ಸವರ್ಣೀಯರ ಮದುವೆಗಳಿಗೆ ಚಪ್ಪರ ಹಾಕಲು ದಲಿತರು ಬೇಕು. ಜಾತ್ರೆ ವೇಳೆ ದಲಿತ ಜನಾಂಗವನ್ನು ತಮಟೆ ಬಡಿಸಲು, ಊರು ಸ್ವಚ್ಛಗೊಳಿಸಲು, ಕೋಣ ಕಡಿಯಲು ಬಳಸಿಕೊಳ್ಳಲಾಗುತ್ತದೆ, ಆದರೆ ಜಾತ್ರೆಗೆ ಅವರನ್ನು ಬಹಿಷ್ಕರಿಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತಿದರೆ ಘರ್ಷಣೆಗೆ ಕಾರಣವಾಗಬಹುದು ಎಂದು ದಲಿತರು ಅವಮಾನ ಸಹಿಸಿಕೊಂಡಿದ್ದಾರೆ. ಈ ಕುರಿತು ತುಮಕೂರು ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ಕಟ್ಟರೂ ಪ್ರಯೋಜನವಾಗಿಲ್ಲ ಎಂದು ಅವರು ಆರೋಪಿಸಿದರು.ಜಾತ್ರೆ ಸಂಬಂಧ ಸವರ್ಣೀಯ ಮುಖಂಡರು ದಲಿತರೊಂದಿಗೆ ಶಾಂತಿ ಸೌಹಾರ್ದ ಸಭೆ ನಡೆಸಿಲ್ಲ. ಕೂಡಲೆ ದಲಿತರಿಗೆ ಬಹಿಷ್ಕರಿಸಿರುವ ಜಾತ್ರೆಯನ್ನು ಜಿಲ್ಲಾಡಳಿತ ನಿಷೇಧಿಸಬೇಕು. ದೇವಸ್ಥಾನ ಒಳಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು. ಪ್ರಾಣಿ ಬಲಿ ನಿಷೇಧ ಕಾಯ್ದೆ ಅಡಿ ಕೋಣ ಕಡಿಯುವರು ಮತ್ತು ಕಾರಣವಾದವರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.ವಿಶೇಷವಾಗಿ ಜಿಲ್ಲಾಡಳಿತ ದಲಿತ ಜನಾಂಗದ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ನೇರ ಆರೋಪ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಅಪ್ಪಾಜಯ್ಯ, ದಲಿತ ಮುಖಂಡರಾದ ಆರ್.ರಾಮಕೃಷ್ಣಯ್ಯ, ಚಿಕ್ಕನರಸಯ್ಯ, ನರಸಿಂಹಮೂರ್ತಿ, ಕುಮಾರ್, ಮಂಜುನಾಥ್, ಎ.ಕೃಷ್ಣಮೂರ್ತಿ ಇನ್ನಿತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.