ಗುರುವಾರ , ಫೆಬ್ರವರಿ 25, 2021
31 °C
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಬೃಹತ್‌ ಪ್ರತಿಭಟನೆ

ದೇಶದ್ರೋಹಿ ಹೇಳಿಕೆ: ಬಂಧನಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದ್ರೋಹಿ ಹೇಳಿಕೆ: ಬಂಧನಕ್ಕೆ ಆಗ್ರಹ

ಹಾವೇರಿ: ಬೆಂಗಳೂರಿನ ಥಿಯಾಲಾಜಿಕಲ್‌ ಕಾಲೇಜಿನಲ್ಲಿ ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶದ್ರೋಹಿ ಘೋಷಣೆ ಕೂಗಿದವರನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಕಾರ್ಯಕರ್ತರು ಬುಧವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.ಇದಕ್ಕೂ ಮೊದಲು ಇಲ್ಲಿನ ಜಿ.ಎಚ್‌. ಕಾಲೇಜು ಆವರಣದಿಂದ ಆರಂಭಿಸಿ, ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ಮಾಡಿ, ಪ್ರತಿಭಟಿಸಿದರು. ಪ್ರತಿಭಟನಾಕಾರರು ಭಾರತದ ತ್ರಿವರ್ಣ ಧ್ವಜ ಹಿಡಿದುಕೊಂಡಿದ್ದರು, ಎಬಿವಿಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಮಂಜುನಾಥ ಮಿಸಿ ಮಾತನಾಡಿ, ‘ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ಎಂಬ ಸಂಸ್ಥೆ ಬೆಂಗಳೂರಿನ ಜೆ.ಸಿ. ನಗರದ ಮಿಲ್ಲರ್‌ ರಸ್ತೆಯ ಥಿಯಾಲಾಜಿಕ್‌ ಕಾಲೇಜಿನಲ್ಲಿ ಇದೇ (13) ಶನಿವಾರ ‘ಬ್ರೋಕನ್‌ ಫ್ಯಾಮಿಲೀಸ್‌’ ಹೆಸರಿನ ಕಾರ್ಯಕ್ರಮ ಆಯೋಜಿಸಿತ್ತು.ಅಲ್ಲಿ ಭಾರತೀಯ ಸೇನೆಯ ವಿರುದ್ಧ ಸುಳ್ಳು ಆರೋಪ ಮಾಡಿ, ಘೋಷಣೆ ಕೂಗಿದ್ದಾರೆ. ಸೇನೆಯು ಅಲ್ಲಿಯ ಮುಗ್ಧರನ್ನು ಬಲಿ ತೆಗೆದುಕೊಳ್ಳುತ್ತಿದೆ. ಅಲ್ಲಿಯ ಜನರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದೆ ಎಂದು ಕೆಲವರು ಹೇಳಿದ್ದಾರೆ. ಇದು ಭಯೋತ್ಪಾದನೆಯನ್ನು ಬೆಂಬಲಿಸಿದಂತೆ’ ಎಂದು ದೂರಿದರು.‘ಈ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಹಾಗೂ ಐಸಿಎಸ್‌ ಉಗ್ರ ಸಂಘಟನೆಗಳಿಗೆ ನೈತಿಕ ಬೆಂಬಲ ನೀಡುವ ಮೂಲಕ ಭಾರತೀಯ ಸೈನಿಕರಿಗೆ ಧಿಕ್ಕಾರ ಕೂಗಿದ್ದಾರೆ. ಅಲ್ಲದೇ, ಭಯೋತ್ಪಾದನೆಯಲ್ಲಿ ತೊಡಗಿದ ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿ ಸೈನ್ಯದಿಂದ ಹತ್ಯೆಗೀಡಾದ ಹಾಗೂ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾದವರನ್ನು ಹುತಾತ್ಮರ ರೀತಿಯಲ್ಲಿ ಬಿಂಬಿಸಿದ್ದಾರೆ’ ಎಂದು ಆರೋಪಿಸಿದರು.‘ಅಲ್ಲಿದ್ದ ಕೆಲವು ದೇಶಾಭಿಮಾನಿಗಳು ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದು, ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಘಟನೆಯ ವೀಡಿಯೊ ಪೊಲೀಸರ ಕೈ ಸೇರಿದೆ. ಆದ್ದರಿಂದ ತಪ್ಪಿತಸ್ಥರನ್ನು ಬಂಧಿಸಬೇಕು’ ಎಂದ ಅವರು, ‘ಕಾರ್ಯಕ್ರಮಕ್ಕೆ ಸ್ಥಳಾವಕಾಶ ನೀಡಿದ ಸಂಸ್ಥೆ ಬಗ್ಗೆಯೂ ತನಿಖೆ ನಡೆಸಬೇಕು. ಕಾರ್ಯಕ್ರಮದ ಆಯೋಜಕರನ್ನು ಕೂಡಲೇ ಬಂಧಿಸಬೇಕು’ ಎಂದು ಆಗ್ರಹಿಸಿದರು.ಎಬಿವಿಪಿ ಜಿಲ್ಲಾ ಘಟಕದ ಸಂಚಾಲಕ ಕಿರಣ ಕೊಣನವರ, ಕಿರಣ ಬೇವಿನಹಳ್ಳಿ, ಆನಂದ ದೇಶಿ, ದೇವೇಂದ್ರ ಮಾಗನೂರ, ಮನೋರೆಡ್ಡಿ, ವೀಣಾ ಪಾಟೀಲ್‌, ರೂಪಾ ಕೆ.ಕೆ., ಚೇತನ ಎಂ.ಕೆ., ಸಾಗರ್‌ ಪಾಟೀಲ್‌, ವೀರೇಶ ಪಾಟೀಲ್‌, ಪ್ರಜ್ವಲ್‌ ತಡಸ, ಪ್ರವೀಣ ರಾಥೋಡ್‌, ನಾಗರಾಜ ಕಳ್ಳಿಮನೆ, ಧೀರೇಂದ್ರ ಕರ್ಣಂ, ಸಿದ್ದು,                          ಸುರೇಶ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.