ಮಂಗಳವಾರ, ಮೇ 18, 2021
31 °C

ದೈಹಿಕ ಸಾಮರ್ಥ್ಯಕ್ಕೆ ಮಹತ್ವ: ವಾಸೀಮ್ ಅಕ್ರಮ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಐದನೇ ಆವೃತ್ತಿಯಲ್ಲಿ ಆಟಗಾರರ ದೈಹಿಕ ಸಾಮರ್ಥ್ಯ ಪ್ರಮುಖ ಪಾತ್ರ ವಹಿಸಲಿದೆ ಎಂದು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಬೌಲಿಂಗ್ ಸಲಹೆಗಾರ ವಾಸೀಮ್ ಅಕ್ರಮ್ ನುಡಿದಿದ್ದಾರೆ.`ಈ ಟೂರ್ನಿಯಲ್ಲಿ ಆಟಗಾರರು ಹೆಚ್ಚು ಪ್ರಯಾಣ ಮಾಡುತ್ತಿರಬೇಕಾಗುತ್ತದೆ. ಜೊತೆಗೆ ಬೇಸಿಗೆ ಕಾಲ. ಇದು ಆಟಗಾರರಿಗೆ ಸವಾಲಾಗಿ ಪರಿಣಮಿಸಿದೆ. ಈ ಕಾರಣ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಜೊತೆಗೆ ಹೆಚ್ಚುವರಿ ಆಟಗಾರರು ಪ್ರಮುಖ ಪಾತ್ರ ವಹಿಸಿಲಿದ್ದಾರೆ~ ಎಂದು ಅವರು ಹೇಳಿದ್ದಾರೆ.`ಹಿರಿಯ ಆಟಗಾರರಾದ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಹಾಗೂ ಜಹೀರ್ ಖಾನ್ ಅವರಂತಹ ಆಟಗಾರರು ಈ ಸಮಸ್ಯೆಯನ್ನು ಯಾವ ರೀತಿ ಮೆಟ್ಟಿ ನಿಲ್ಲುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಅವರು ತಮ್ಮ ತಮ್ಮ ತಂಡದ ಪ್ರಮುಖ ಆಟಗಾರರು ಕೂಡ~ ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕರೂ ಆಗಿರುವ ವಾಸೀಮ್ ತಿಳಿಸಿದ್ದಾರೆ.ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿರುವ ರವೀಂದ್ರ ಜಡೇಜಾ ಅವರ ಮೇಲೆ ಹೆಚ್ಚಿನ ಒತ್ತಡವಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.`ಜಡೇಜಾ ಯಾವ ರೀತಿ ಬದಲಾಗಿದ್ದಾರೆ ಎಂಬುದನ್ನು ಈ ಬಾರಿ ಟೂರ್ನಿ ಸಾಬೀತುಪಡಿಸಲಿದೆ. ಆಸ್ಟ್ರೇಲಿಯಾ ಪ್ರವಾಸದ ಆರಂಭದಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಆಮೇಲೆ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರಲಿಲ್ಲ. ಅವರು ಪ್ರತಿಭಾವಂತ ಆಟಗಾರನಾಗಿರಬಹುದು. ಆದರೆ ಹರಾಜಿನಲ್ಲಿ ತಮಗೆ ನೀಡಿದ ಹಣಕ್ಕೆ ತಕ್ಕ ಆಟ ಆಡುತ್ತಾರೆಯೇ ಎಂಬುದು ಈಗ ಎಲ್ಲರ ಮುಂದಿರುವ ಪ್ರಶ್ನೆ~ ಎಂದು ಅಕ್ರಮ್ ವಿವರಿಸಿದ್ದಾರೆ.`ಅತ್ಯುತ್ತಮ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಕೂಡ ಸ್ಥಿರ ಪ್ರದರ್ಶನ ಮುಂದುವರಿಸಿಕೊಂಡು ಹೋಗಬೇಕಾಗಿದೆ. ಹಾಗಾಗಿ ಅವರ ಮೇಲೂ ಒತ್ತಡವಿದೆ. ಆದರೆ ಅವರೀಗ ಭಾರತ ತಂಡದ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಎಲ್ಲಾ ಗೌರವಕ್ಕೆ ಅವರು ಅರ್ಹರು. ಆದರೆ ಅಹಂ ಅನ್ನು ಮೀರಿ ನಿಲ್ಲಬೇಕು~ ಎಂದಿದ್ದಾರೆ.ಕೋಲ್ಕತ್ತ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳು ಎಂದು ಮಾಜಿ ಎಡಗೈ ವೇಗಿ ವಾಸೀಮ್ ನುಡಿದಿದ್ದಾರೆ.`ಯಾವ ತಂಡಗಳು ಮೊದಲ ನಾಲ್ಕು ಸ್ಥಾನ ಪಡೆಯುತ್ತವೆ ಎಂದು ಭವಿಷ್ಯ ಹೇಳುವುದು ಕಷ್ಟ. ಏಕೆಂದರೆ ಪ್ರತಿ ಭಾರಿಯೂ ಅಚ್ಚರಿ ಪ್ರದರ್ಶನ ಹೊರಹೊಮ್ಮುತ್ತಿರುತ್ತದೆ. ಆದರೆ ತಂಡದ ಸಂಯೋಜನೆಯನ್ನು ಗಮನಿಸಿದರೆ ಚೆನ್ನೈ, ಕೋಲ್ಕತ್ತ, ಮುಂಬೈ ಹಾಗೂ ಬೆಂಗಳೂರು ತಂಡದಿಂದ ಉತ್ತಮ ಪ್ರದರ್ಶನ ಹೊರಹೊಮ್ಮಲಿದೆ~ ಎಂದು ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.