ಭಾನುವಾರ, ಏಪ್ರಿಲ್ 18, 2021
31 °C

ದೊಡ್ಡನೆಕ್ಕುಂದಿಯ ಅನಾಹುತಕಾರಿ ಗುಂಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹದೇವಪುರ ಕ್ಷೇತ್ರದ ದೊಡ್ಡನೆಕ್ಕುಂದಿಯ ವಾರ್ಡ್ ವ್ಯಾಪ್ತಿಯ ಎಲ್‌ಆರ್‌ಡಿಇ ಬಡಾವಣೆಯ ಪಕ್ಕದಲ್ಲಿ ಹಾದು ಹೋಗಿರುವ ರಿಂಗ್ ರಸ್ತೆ ಹಾಗೂ ಸರ್ವಿಸ್ ರಸ್ತೆ ನಡುವೆ ಎರಡು ದೊಡ್ಡ ಕಂದಕಗಳಿವೆ. ಒಂದು ವರ್ಷದಿಂದ ಬಾಯಿ ತೆರೆದುಕೊಂಡೇ ಇರುವ ಈ ಕಂದಕಗಳು ಸಾಕಷ್ಟು ಅಪಘಾತಗಳಿಗೆ ಕಾರಣವಾಗಿವೆ.

ಇವಕ್ಕೆ ಹೊಂದಿಕೊಂಡು ತಗ್ಗು ಪ್ರದೇಶದಲ್ಲಿ ರಿಂಗ್ ರಸ್ತೆ, ಇನ್ನೊಂದೆಡೆ ದೊಡ್ಡನೆಕ್ಕಂದಿ ಸರ್ವಿಸ್ ರಸ್ತೆ ಇದೆ.  ಆದರೆ ಇವುಗಳ ನಡುವೆ ತಡೆಗೋಡೆಯೇ ಇಲ್ಲ. ಇದರಿಂದಾಗಿ ನಿತ್ಯವೂ ವಾಹನ ಸವಾರರಿಗೆ ತಡೆಗೋಡೆ ಇಲ್ಲದ ಕೆರೆಯ ದಡದಲ್ಲಿ ಸಂಚರಿಸುವಂತಹ ಅನುಭವ ಆಗುತ್ತಿದೆ. ಚಾಲನೆ ಮಾಡುವಾಗ ಏನಾದರೂ ಕ್ಷಣ ಹೊತ್ತು ಮೈಮರೆತರೂ ಅಪಾಯ ತಪ್ಪಿದ್ದಲ್ಲ.

ಸ್ಥಳೀಯರು ಹೇಳುವಂತೆ ಒಂದು ಕಂದಕವನ್ನು ಬಿಬಿಎಂಪಿ ಕಾರ್ಮಿಕರು ಅಗೆದಿದ್ದರೆ, ಮತ್ತೊಂದು ಕಂದಕವನ್ನು ನೆಲದೊಳಗೆ ಕೇಬಲ್ ಹಾಕುವ ಕಾರ್ಮಿಕರು ಕಳೆದ ವರ್ಷ ಅಗೆದು ಹಾಗೆಯೇ ಬಿಟ್ಟು ಹೋಗಿದ್ದಾರೆ. ಅಲ್ಲದೆ ಆ ಕಂದಕದಲ್ಲಿ ಕೇಬಲ್ ವೈರ್‌ಗಳು ಹಾಗೆಯೇ ಬಿದ್ದಿವೆ.

ಅನೇಕ ಅಪಘಾತಗಳಿಗೆ ಕಾರಣವಾಗಿರುವ ಎರಡು ಕಂದಕಗಳನ್ನು ಮುಚ್ಚುವಂತೆ ಹಲವು ಬಾರಿ ಸ್ಥಳೀಯ ಜನತೆ ಬಿಬಿಎಂಪಿಗೆ ದೂರು ಸಲ್ಲಿಸಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ.

ಈ ಎರಡು ಕಂದಕಗಳಿಂದ ಸುಮಾರು ಇನ್ನೂರು ಮೀಟರ್ ದೂರದಲ್ಲಿ ದೊಡ್ಡನೆಕ್ಕುಂದಿ ವಾರ್ಡ್‌ನ ಪಾಲಿಕೆ ಸದಸ್ಯರ ಮನೆಯಿದೆ. ಅವರು ಸಹ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಆದರೆ ಈ ಕಂದಕಗಳ ಕುರಿತು ಗಮನಹರಿಸಿಲ್ಲ.

ಇನ್ನೂ ದೊಡ್ಡನೆಕ್ಕುಂದಿ ಬಳಿಯಲ್ಲಿ ರೈಲ್ವೆ ಹಳಿ ಹಾದು ಹೋಗಿದೆ. ಅದರ ಕೆಳಗೆ ಇರುವ ಸಿಲ್ಕ್‌ಬೋರ್ಡ್ - ಹೆಬ್ಬಾಳ ಮುಖ್ಯ ರಿಂಗ್ ರಸ್ತೆಗೆ ವ್ಯವಸ್ಥಿತ ರಕ್ಷಣಾ ಗೋಡೆ ಇಲ್ಲ. ಅಷ್ಟೇ ಅಲ್ಲ, ಈ ರಿಂಗ್ ರಸ್ತೆಯ ಇಕ್ಕೆಲಗಳಲ್ಲಿರುವ ದೊಡ್ಡನೆಕ್ಕುಂದಿ ಹಾಗೂ ಚಿನ್ನಪ್ಪನಹಳ್ಳಿಗಳ ಎರಡು ಸರ್ವಿಸ್ ರಸ್ತೆಗಳ ಮಧ್ಯೆ ಸೂಕ್ತ ರಕ್ಷಣಾ ತಡೆ ಗೋಡೆ ಇಲ್ಲ. ಹೀಗಾಗಿ ಎಲ್ಲಾ ವಾಹನ ಚಾಲಕರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ. ಈಗಾಗಲೇ ಅನೇಕ ವಾಹನಗಳು ಸರ್ವಿಸ್ ರಸ್ತೆಯಲ್ಲಿ ಚಲಿಸುವಾಗ ಆಯ ತಪ್ಪಿ ರಿಂಗ್ ರಸ್ತೆಯಲ್ಲಿ ಬಿದ್ದು ಅವಘಡಗಳು ಸಂಭವಿಸಿವೆ.

ಅಧಿಕಾರಿಗಳು ಎಚ್ಚೆತ್ತುಕೊಳ್ಳಲು ಇನ್ನೂ ಎಂಥ ಅನಾಹುತ ಆಗಬೇಕು? 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.