ಶನಿವಾರ, ಜುಲೈ 24, 2021
28 °C

ದೊಡ್ಡವರು ಜಾತಿಗೆ ಸೀಮಿತರಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು: ಮಹಾನ್ ವ್ಯಕ್ತಿಗಳ ಸಾಧನೆಯನ್ನು ಆ ವ್ಯಕ್ತಿಯ ಜಾತಿ ಹೆಸರಿನಲ್ಲಿ ಗುರುತಿಸುತ್ತಿರುವುದು ವಿಷಾದನೀಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಚಿಕ್ಕಮಾದು ಹೇಳಿದರು.ಪಟ್ಟಣದ ಮುನೇಶ್ವರ ಕಾವಲ್ ಮೈದಾನದಲ್ಲಿ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಹಾನ್ ವ್ಯಕ್ತಿಗಳು ನೀಡಿದ ಸಮಾಜಮುಖಿ ಕೊಡುಗೆ ಸ್ಮರಿಸುವ ಮೂಲಕ ಆ ವ್ಯಕ್ತಿಯನ್ನು ನೆನಪಿಸಿ ಕೊಳ್ಳಬೇಕು. ಜಾತಿ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಮಹಾನ್ ವ್ಯಕ್ತಿ ಗುರುತಿಸುವುದು ಮುಂದಿನ ಪೀಳಿಗೆ ಮೇಲೆ ಆಗಾಧ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.ಜಾತಿ ಹೆಸರಿನಲ್ಲಿ ದಿನಾಚರಣೆ ಮಾಡುವುದನ್ನು ತಪ್ಪಿಸಬೇಕು. ದೇಶಕ್ಕೆ ಕೊಡುಗೆ ನೀಡಿದ ವ್ಯಕ್ತಿಯನ್ನು ಪ್ರತಿಯೊಂದು ಸಮಾಜ ಒಗ್ಗೂಡಿ ಆಚರಿಸುವ ಸಂಸ್ಕೃತಿಗೆ ಆದ್ಯತೆ ನೀಡಬೇಕು. ಪ್ರತಿಯೊಂದು ವರ್ಗ ದಲ್ಲಿಯೂ ಅಂಬೇಡ್ಕರ್ ತತ್ವ- ಸಿದ್ಧಾಂತದ ಬಗ್ಗೆ ಅರಿವು ಮೂಡಿಸಿ ದಾಗ ಜಾತಿಯತೆ ಹೋಗಲಾಡಿಸಲು ಸಾಧ್ಯ.

 ಸರ್ಕಾರ ಪ್ರತಿ ತಾಲ್ಲೂಕು, ಹೋಬಳಿ ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಿಸುತ್ತಿದ್ದು, ಈ ಭವನದಲ್ಲಿ ಅಂಬೇಡ್ಕರ್ ತತ್ವ ಸಿದ್ಧಾಂತಗಳ ಚಿಂತನೆ ನಡೆಸಬೇಕು. ಈ ಹಿಂದೆ ದಲಿತ ಸಮಾಜವನ್ನು ಕಾಡುತ್ತಿದ್ದ ಅನೇಕ ಸಮಸ್ಯೆಗಳು ಇಂದು ಕಾಡುತ್ತಿಲ್ಲ. ದಲಿತ ಮತ್ತು ಸವರ್ಣೀಯರು ಇರುವ ಸ್ಥಳದಲ್ಲಿ ಜಾತಿಯತೆ ಹೆಚ್ಚಾಗಿ ಕಾಡುತ್ತಿದೆ. ನಗರ-ಪಟ್ಟಣದಲ್ಲಿ ಜಾತಿ ಭೇಧ ಒಂದಿಷ್ಟು ಕಡಿಮೆಯಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಪರಿಶಿಷ್ಟ ಸಮಾಜಕ್ಕೆ ಸೇರಿದವರು ಮಾತ್ರ ದಲಿತರಲ್ಲ. ಸಮಾಜದಲ್ಲಿ ಶೋಷಣೆಗೆ ಒಳಗಾದ ಪ್ರತಿ ಯೊಬ್ಬರೂ ದಲಿತರು. ಶೋಷಣೆ ತಪ್ಪಬೇಕಾದರೆ ದಲಿತ ವರ್ಗಕ್ಕೆ ಮೊದಲು ಶಿಕ್ಷಣ ಅಗತ್ಯವಿದೆ ಎಂದರು. ಪ್ರಾಂಶುಪಾಲ ಮನೋ ರಖ್ಖಿತ ಬಂತೇಜಿ, ಉಪನ್ಯಾಸಕ ಬಿಪಿನ್ ನಾಗರಾಜ್ ಮತ್ತು ಡಾ.ಮಾದಯ್ಯ  ಉಪನ್ಯಾಸ ನೀಡಿದರು.ಸನ್ಮಾನ:ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಲ್ಯಾಂಪ್ ಮಹಾ ಮಂಡಳದ ಅಧ್ಯಕ್ಷ ಕೃಷ್ಣಯ್ಯ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ರಾದ ಲಲಿತಾ ಜಿ.ಟಿ.ದೇವೇ ಗೌಡ, ಡಾ.ಪುಷ್ಪಾವತಿ, ಸಿ.ಟಿ. ರಾಜಣ್ಣ, ರಮೇಶ್, ತಾ.ಪಂ ಅಧ್ಯಕ್ಷೆ ಭಾಗ್ಯಮ್ಮ, ಉಪವಿಭಾಗಾಧಿಕಾರಿ ಲಿಂಗಮೂರ್ತಿ, ಪುರಸಭಾಧ್ಯಕ್ಷೆ ಮಂಜುಳ ಚೆನ್ನ ಬಸಪ್ಪ, ದಲಿತ ಮುಖಂಡರಾದ ಲಿಂಗರಾಜ್ ಮಲ್ಲಾಡಿ, ನಾಗರಾಜ್ ಮಲ್ಲಾಡಿ, ಡಿ.ಕುಮಾರ್, ಕೆಂಪರಾಜು, ಕಾಂತ ರಾಜು ಇತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.