ಗುರುವಾರ , ಜನವರಿ 23, 2020
27 °C
ಗ್ರಾಮಾಯಣ

ದೊಡ್ಡ ಹಳ್ಳಿಖೇಡ (ಬಿ)ದಲ್ಲಿ ಸಮಸ್ಯೆ ದೊಡ್ಡವು

ಪ್ರಜಾವಾಣಿ ವಾರ್ತೆ/ ಶಶಿಕಾಂತ ಭಗೋಜಿ Updated:

ಅಕ್ಷರ ಗಾತ್ರ : | |

ಹುಮನಾಬಾದ್: ಅತಿ ಹೆಚ್ಚು ಸದಸ್ಯರನ್ನು ಹೊಂದಿದ ರಾಜ್ಯದ 3ನೇ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬೀದರ್‌ ಜಿಲ್ಲೆಯ ಹುಮನಾಬಾದ್‌ ತಾಲ್ಲೂಕು ಹಳ್ಳಿಖೇಡ(ಬಿ) ಗ್ರಾಮ ಅಷ್ಟೇ ಪ್ರಮಾಣದ ಮೂಲ ಸೌಕರ್ಯ ಕೊರತೆ­ಯನ್ನು ಎದುರಿಸುತ್ತಿದೆ. 43 ಸದಸ್ಯ ಬಲ ಹೊಂದಿರುವ ಹಳ್ಳಿಖೇಡ(ಬಿ) ಗ್ರಾಮ ಇಬ್ಬರು ತಾಲ್ಲೂಕು ಹಾಗೂ ಒಬ್ಬ ಜಿಲ್ಲಾ ಪಂಚಾಯಿತಿ ಸದಸ್ಯರ ಕೇಂದ್ರ ಸ್ಥಾನವೂ ಆಗಿದೆ. ಇಷ್ಟೊಂದು ಸಂಖ್ಯೆಯ ಚುನಾಯಿತ ಪ್ರತಿನಿಧಿಗಳನ್ನು ಹೊಂದಿ­ರುವ ಈ ಗ್ರಾಮದಲ್ಲಿ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೈಗೊಳ್ಳದಿರುವುದು ಅಭಿವೃದ್ಧಿ ಬಗೆಗಿನ ಅವರ ನಿರಾಸಕ್ತಿ­ಯನ್ನು ಸೂಚಿಸುತ್ತದೆ ಎನ್ನುವುದು ಗ್ರಾಮಸ್ಥರ ಆರೋಪ.ಗ್ರಾಮದ ಬಹುತೇಕ ವಾರ್ಡ್‌­ಗಳಲ್ಲಿ ರಸ್ತೆ, ಚರಂಡಿ ಮೊದಲಾದ ಮೂಲ ಸೌಕರ್ಯ ಅಭಿವೃದ್ಧಿ ಕೈಗೆತ್ತಿಕೊಳ್ಳದೇ ಇರುವುದಕ್ಕೆ ಗ್ರಾಮದ ವಾರ್ಡ್‌ ಸಂಖ್ಯೆ 1 ಮತ್ತು 2 ರಲ್ಲಿನ ವಸ್ತುಸ್ಥಿತಿ ನಿದರ್ಶನ.ಅಗತ್ಯ ಇರುವ ಕಡೆಗಳಲ್ಲಿ ಚರಂಡಿ ನಿರ್ಮಿಸದೇ ಇರುವ ಕಾರಣ ತ್ಯಾಜ್ಯ ರಸ್ತೆತುಂಬಾ ಹರಡಿ ದುರ್ವಾಸನೆ ಬೀರುತ್ತದೆ. ಗ್ರಾಮದ ಬಹುತೇಕ ಪ್ರಮುಖ ರಸ್ತೆಯ ಪ್ರಮುಖ ಸ್ಥಳಗಳು ಕಸದಗುಂಡಿಯಾಗಿ ಪರಿವರ್ತನೆ­ಗೊಂಡಿವೆ. ಗ್ರಾಮದ ಬಹುತೇಕ ವಾರ್ಡ್‌ಗಳಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೆ ಅವುಗಳ ಜೊತೆಗೆ ಅವಶ್ಯವಾದ ಚರಂಡಿಗಳನ್ನು ನಿರ್ಮಿಸಿಲ್ಲ.ಗ್ರಾಮದಲ್ಲಿ ಶೌಚಾಲಯವಿಲ್ಲ. ಎಲ್ಲೆಂದರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ಕಾರಣ ಮಹಿಳೆಯರು ಮಕ್ಕಳು ಮುಖ್ಯ ರಸ್ತೆ ಮೂಲಕ ಸಂಚರಿಸುವುದು ದುಸ್ತರವಾಗಿದೆ. ಗ್ರಾಮದಲ್ಲಿ ವಾರ್ಡ್‌­ವಾರು ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು. ಮಹಿಳೆಯರಿಗಾಗಿ ಪ್ರತ್ಯೇಕ ಮೂತ್ರಾಲಯಗಳನ್ನು ನಿರ್ಮಿಸಬೇಕು. ರಸ್ತೆ ಅಭಿವೃದ್ಧಿ ಜೊತೆಗೆ ಚರಂಡಿ ನಿರ್ಮಿಸಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯ. ಗ್ರಾಮದಲ್ಲಿ ಚರಂಡಿ ಮೊದಲಾದ ಸಮಸ್ಯೆಗಳಿವೆ ಎಂಬ ಸಾರ್ವಜನಿಕರ ಆರೋಪ ತಳ್ಳಿ ಹಾಕುವಂತಿಲ್ಲ. ಅದನ್ನು ವಿನಮ್ರವಾಗಿ ಸ್ವೀಕರಿಸುತ್ತೇವೆ.‘ತ್ಯಾಜ್ಯ ಸಂಗ್ರಹಣೆ ಕ್ರಮ ಕೈಗೊಳ್ಳಬೇಕು’

‘ಚರಂಡಿ ಇಲ್ಲದ ಕಾರಣ ಗ್ರಾಮದ ಬಹುತೇಕ ರಸ್ತೆಗಳಲ್ಲಿ ಕೊಳಚೆ ತುಂಬಿ ಗಬ್ಬೇರಿ ನಾರುತ್ತಿದ್ದು, ಚರಂಡಿ ನಿರ್ಮಿಸುವುದರ ಜೊತೆಗೆ ಅವುಗಳ ಸೂಕ್ತ ನಿರ್ವಹಣೆ ಕೈಗೊಳ್ಳಬೇಕು. ಕಸ ಸಂಗ್ರಹಕ್ಕೆ ಅಗತ್ಯ ವ್ಯವಸ್ಥೆ ಇಲ್ಲದ ಕಾರಣ ಸಾರ್ವಜನಿಕರು ರಸ್ತೆ ಮಧ್ಯದಲ್ಲೆ ಕಸ ಎಸೆಯುತ್ತಿದ್ದಾರೆ. ಗ್ರಾಮದ ಪ್ರತಿ ವಾರ್ಡ್‌ಗಳಲ್ಲಿ ತ್ಯಾಜ್ಯ ಸಂಗ್ರಹ ಸಂಬಂಧ ಕಸದ ತೊಟ್ಟಿಗಳ ವ್ಯವಸ್ಥೆ ಮಾಡಬೇಕು’.

– ವೀರೇಶರೆಡ್ಡಿ,  ಗ್ರಾಮಸ್ಥ‘ಸಮಸ್ಯೆ ಬಗೆಹರಿಸಲು ಪ್ರಯತ್ನ’

‘ಸಮಸ್ಯೆ ರಹಿತ ಗ್ರಾಮವಾಗಿಸಲು ಗ್ರಾಮ ಪಂಚಾಯಿತಿಗೆ ಅಗತ್ಯ ಅನುದಾನವಿಲ್ಲ. ಚರಂಡಿ ಹಾಗೂ ರಸ್ತೆ ನಿರ್ಮಾಣ ಕಾರ್ಯಗಳನ್ನು ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಕೈಗೊಳ್ಳುವ ಸಂಬಂಧ ₨3.34ಕೋಟಿ ನಿಗದಿ ಮಾಡಲಾಗಿದೆ. ಕಾಮಗಾರಿ ಕೈಗೊಳ್ಳಲು ಯಾರಾದರೂ ಮುಂದೆ ಬಂದಲ್ಲಿ ಸಾಧ್ಯವಾದಷ್ಟು ಶೀಘ್ರ ಕೈಗೆತ್ತಿಕೊಳ್ಳಲಾಗುವುದು. ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’.

–ಶ್ರೀಧರರಾಜ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

 

ಪ್ರತಿಕ್ರಿಯಿಸಿ (+)