ಬುಧವಾರ, ಮೇ 19, 2021
22 °C

ದೊನ್ನೆ ಊರಿನ ಅಭಿವೃದ್ಧಿ ಸೊನ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂತೇಮರಹಳ್ಳಿ: ಮನೆಗಳ ಸುತ್ತಮುತ್ತ ಜಾಲಿ ಮುಳ್ಳಿನಗಿಡ. ತೆಂಗಿನ ಗರಿಗಳೇ ಮನೆಗೆ ಆಧಾರ. ಚರಂಡಿಯ ದುರ್ನಾತ. ಸೊಳ್ಳೆ ಕಾಟ ಲೆಕ್ಕಿಸದೆ ಮನೆಯ ಪಡಸಾಲೆಯಲ್ಲಿ ಕುಳಿತು ದೊನ್ನೆ ಕಟ್ಟುತ್ತಿರುವ ಮಹಿಳೆಯರು.-ಇದು ಸಮೀಪದ ಹ್ಲ್ಲುಲೇಪುರ ಗ್ರಾಮದ ಚಿತ್ರಣ. ಆಧುನಿಕ ಯುಗದಲ್ಲಿ ಪ್ಲಾಸ್ಟಿಕ್ ಎ್ಲ್ಲಲೆಡೆ ಕಬಂಧಬಾಹು ಚಾಚಿದ್ದರೂ ಈ ಗ್ರಾಮದಲ್ಲಿ ಇಂದಿಗೂ ಸಾಂಪ್ರದಾಯಿಕವಾಗಿ ಬಾಳೆಎಲೆಯ `ದೊನ್ನೆ~ ಕಟ್ಟಿ ಜೀವನ ನಡೆಸುವ ಸಾಕಷ್ಟು ಕುಟುಂಬಗಳಿವೆ. ಗ್ರಾಮದ ಮುಕ್ಕಾಲು ಭಾಗದಷ್ಟು ಕುಟುಂಬಗಳಿಗೆ ಈ ದೊನ್ನೆಗಳೇ ಜೀವನಾಧಾರ.ಆದರೆ, ಗ್ರಾಮಕ್ಕೆ ಮಾತ್ರ ಮೂಲ ಸೌಕರ್ಯ ಕಲ್ಪಿಸಲು ಗ್ರಾಮ ಪಂಚಾಯಿತಿ ಆಡಳಿತ ಮುಂದಾಗಿಲ್ಲ.

ಈ ಗ್ರಾಮದಲ್ಲಿ ಒಟ್ಟು 450 ಕುಟುಂಬಗಳಿವೆ. ಸುಮಾರು 2 ಸಾವಿರದಷ್ಟು ಜನಸಂಖ್ಯೆ ಇದೆ. ಯಾವುದೇ, ಬದಲಾವಣೆ ಕಾಣದೆ ಮೂಲ ಸೌಕರ್ಯಗಳಿಂದ ಸೊರಗಿರುವ ಈ ಗ್ರಾಮ ತೀರಾ ಹಿಂದುಳಿದಿದೆ. ಗ್ರಾಮದ ಅರ್ಧದಷ್ಟು ಜನರು ಗುಡಿಸಲು ವಾಸಿಗಳಾಗಿದ್ದಾರೆ. ಹಲವು ದಶಕಗಳಿಂದಲೂ ದೊನ್ನೆ ಕಟ್ಟಿ ಮಾರಾಟ ಮಾಡುವುದು ಇವರ ಕಾಯಕ. ಉಳಿದ ಕೆಲವರು ಪರ ಊರುಗಳಿಗೆ ಕೂಲಿ ಕೆಲಸಕ್ಕೆ ಹೋಗುತ್ತಾರೆ.ಪ್ರತಿನಿತ್ಯವೂ ಬಾಳೆ ತೋಟಗಳಿಗೆ ಹೋಗಿ ಒಣಗಿದ ಬಾಳೆಎಲೆಗಳನ್ನು ಖರೀದಿಸಿ ತಂದು ದೊನ್ನೆ ಕಟ್ಟುತ್ತಾರೆ. 100 ದೊನ್ನೆಗಳಿಗೆ 10ರೂನಂತೆ ಮಾರಾಟ ಮಾಡಿ ಜೀವನ ನಡೆಸುತ್ತಾರೆ. ಪ್ರತಿದಿನವೂ ಈ ಗ್ರಾಮದಲ್ಲಿ ಸಾವಿರಾರು ದೊನ್ನೆಗಳು ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಗೆ ರವಾನೆಯಾಗುತ್ತವೆ. ಮಧ್ಯವರ್ತಿಗಳ ಮೂಲಕವೇ ಪಟ್ಟಣ ಪ್ರದೇಶಗಳಿಗೆ ದೊನ್ನೆ ಪೂರೈಕೆಯಾಗುವ ಪರಿಣಾಮ ಕಟ್ಟುವವರಿಗೆ ಆದಾಯ ಲಭಿಸುತ್ತಿಲ್ಲ.`ರಾಜ್ಯ ಸರ್ಕಾರ ಕೂಡ ಗ್ರಾಮಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲು ಮುಂದಾಗಿಲ್ಲ. ಈ ಉಪಕಸುಬಿಗೆ ಪ್ರೋತ್ಸಾಹ ನೀಡಲು ವಿಶೇಷ ಕಾರ್ಯಕ್ರಮ ಕೂಡ ಅನುಷ್ಠಾನಗೊಳಿಸಿಲ್ಲ. ದೊನ್ನೆ ಕಟ್ಟಿ ಮಾರಾಟ ಮಾಡಿದರಷ್ಟೇ ಒಪ್ಪೊತ್ತಿನ ಗಂಜಿ ಸಿಗುತ್ತದೆ. ಇಲ್ಲವಾದರೆ ಉಪವಾಸವೇ ಗತಿ~ ಎನ್ನುತ್ತಾರೆ ಗೌರಮ್ಮ.ಗ್ರಾಮದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಕೂಡ ಕಾಳಜಿ ವಹಿಸುತ್ತಿಲ್ಲ. ಬಹಳಷ್ಟು ಜನರಿಗೆ ಸರ್ಕಾರದ ಸವಲತ್ತುಗಳ ಬಗ್ಗೆ ಅರಿವು ಇಲ್ಲ. ಬಾಳೆಎಲೆ ಖರೀದಿಸಲು ಕೂಡ ಜನರು ಸಾಲ ಮಾಡಬೇಕಿದೆ.ಸಹಾಯಧನದಡಿ ದೊನ್ನೆ ಕಟ್ಟುವ ಮಂದಿಗೆ ಸಾಲ ಸೌಲಭ್ಯ ದಕ್ಕುತ್ತಿಲ್ಲ. ಇದರ ಪರಿಣಾಮ ಆರ್ಥಿಕ ಸ್ವಾವಲಂಬನೆ ಸಾಧಿಸಲು ತೊಡಕಾಗಿದೆ. ಮಧ್ಯವರ್ತಿಗಳ ಮೂಲಕವೇ ವಹಿವಾಟು ನಡೆಸುವುದರಿಂದ ಈ ವೃತ್ತಿಯಲ್ಲಿ ಜನರಿಗೆ ಹೆಚ್ಚಿನ ಲಾಭ ಕೂಡ ಸಿಗುತ್ತಿಲ್ಲ.ಚರಂಡಿ ಅವ್ಯವಸ್ಥೆ: ಜಿ.ಪಂ.ನಿಂದ ರಂಗಮಂದಿರ ನಿರ್ಮಿಸಲು 5 ವರ್ಷದ ಹಿಂದೆ ಕಾಮಗಾರಿ ಆರಂಭಿಸಲಾಗಿದೆ. ಆದರೆ, ಕಟ್ಟಡ ಅಪೂರ್ಣಗೊಂಡಿದೆ. ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಗ್ರಾಮ ಪಂಚಾಯಿತಿ ಆಡಳಿತ ಚರಂಡಿ ನಿರ್ಮಾಣಕ್ಕೆ ಮುಂದಾಗಿಲ್ಲ. ಹೀಗಾಗಿ, ಕೊಚ್ಚೆ ಗುಂಡಿಗಳು ನಿರ್ಮಾಣವಾಗಿ ರಾತ್ರಿ ವೇಳೆ ಸೊಳ್ಳೆ ಕಾಟ ಹೆಚ್ಚಿದೆ. ಸಾಂಕ್ರಾ ಮಿಕ ರೋಗದ ಭೀತಿ ಕಾಡುತ್ತಿದೆ ಎಂಬುದು ಗ್ರಾಮಸ್ಥರ ದೂರು.20 ವರ್ಷದ ಹಿಂದೆ ಸಂತೇಮರಹಳ್ಳಿಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಿಂದ ಈ ಗ್ರಾಮವನ್ನು ದತ್ತು ಪಡೆದು ಗ್ರಾಮಸ್ಥರಿಗೆ ಸಾಲ ಸೌಲಭ್ಯ ಕಲ್ಪಿಸಲಾಗಿತ್ತು. ಪ್ರಸ್ತುತ ದತ್ತು ಯೋಜನೆ ಮುಗಿದಿದೆ. ಸಾಲ ಕೂಡ ಮರುಪಾವತಿ ಮಾಡಲಾಗಿದೆ. ಪುನಃ ಉಪಕಸುಬು ಮಾಡಲು ಸಾಲ ಕೇಳಿದರೆ ಬ್ಯಾಂಕ್‌ನಿಂದ ಸಿಗುತ್ತಿಲ್ಲ. ಆರ್ಥಿಕ ನೆರವು ಸಿಕ್ಕಿದರೆ ದೊನ್ನೆ ಕಟ್ಟುವ ವೃತ್ತಿಯನ್ನೇ ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕಿದೆ ಎಂಬುದು ಗ್ರಾಮಸ್ಥರ ಒತ್ತಾಯ.`ಗ್ರಾಮ ಪಂಚಾಯಿತಿಯಿಂದ ಪ್ರತಿವರ್ಷ 2 ಮನೆ ಮಂಜೂರು ಮಾಡಲಾಗುತ್ತಿದೆ. ಆದರೆ, ಕಳೆದ 2 ವರ್ಷಗಳಿಂದ ಒಂದು ಮನೆ ಕೂಡ ಮಂಜೂರಾಗಿಲ್ಲ. ಬಸವ ವಸತಿ ಯೋಜನೆಯಡಿ ಗುಡಿಸಲುವಾಸಿಗಳಿಗೆ ಮನೆ ಕೊಟ್ಟಿಲ್ಲ~ ಎಂಬುದು ಶಂಕರ ಅವರ ದೂರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.