ಭಾನುವಾರ, 11 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋನಿ ಸಾಗಲಿ, ವಿಶ್ವ ಕಪ್ ಗೆಲ್ಲಲಿ

Last Updated 13 ಫೆಬ್ರವರಿ 2011, 19:30 IST
ಅಕ್ಷರ ಗಾತ್ರ

ಆತಿಥೇಯರು ಅತಿಥಿಗಳನ್ನು ಸತ್ಕರಿಸಿ, ಉಣಬಡಿಸಿ, ಕೊನೆಗೆ ತಾವು ಊಟ ಮಾಡುವುದು ರೂಢಿ . ಆದರೆ ಎಷ್ಟೋ ಸಲ ಅತಿಥೇಯರಿಗೇ ಏನೂ ಉಳಿದಿರುವುದಿಲ್ಲ. 36 ವರ್ಷಗಳ ವಿಶ್ವ ಕಪ್ ಇತಿಹಾಸದಲ್ಲಿ ಆತಿಥೇಯ ರಾಷ್ಟ್ರ ಎಲ್ಲರನ್ನೂ ಆಡಿಸಿ, ಸಂಭ್ರಮಿಸಿ, ಗೆಲ್ಲಿಸಿ ಕಳಿಸುವ ‘ಅತಿಥಿದೇವೋಭವ’ ಎಂಬ ಸಂಪ್ರದಾಯ ಕಂಡುಬರುತ್ತದೆ. ಒಮ್ಮೆ ಮಾತ್ರ, ಅದೂ 15 ವರ್ಷಗಳ ಹಿಂದೆ, ಭಾರತ ಮತ್ತು ಪಾಕಿಸ್ತಾನದ ಜೊತೆ ಜಂಟಿ ಆತಿಥ್ಯ
 
ವಹಿಸಿಕೊಂಡಿದ್ದ ಶ್ರೀಲಂಕಾ ಕಪ್ ಗೆದ್ದಿತ್ತು. ಆದರೆ ಆ ಫೈನಲ್ ಪಾಕಿಸ್ತಾನದಲ್ಲಿ ನಡೆದಿತ್ತೇ ವಿನಾ ಶ್ರೀಲಂಕಾದಲ್ಲಿ ಅಲ್ಲ. ಇದುವರೆಗೆ ನಾಲ್ಕು ಸಲ ವಿಶ್ವ ಚಾಂಪಿಯನ್ ಆಗಿರುವ ಆಸ್ಟ್ರೇಲಿಯ ಕೂಡ ತನ್ನ ನೆಲದ ಮೇಲೆ ಕಿರೀಟ ಧರಿಸಿಲ್ಲ. ವಿಶ್ವ ಕಪ್ ಟೂರ್ನಿಯನ್ನು ನಾಲ್ಕು ಸಲ ನಡೆಸಿರುವ ಇಂಗ್ಲೆಂಡ್ ಒಮ್ಮೆಯೂ ಚಾಂಪಿಯನ್ ಆಗಿಲ್ಲ. ಮೊದಲೆರಡು ವಿಶ್ವ ಕಪ್‌ಗಳಲ್ಲಿ ಜಯಭೇರಿ ಬಾರಿಸಿದ್ದ ವೆಸ್ಟ್ ಇಂಡೀಸ್ 2007 ರಲ್ಲಿ ಆತಿಥ್ಯ ವಹಿಸಿಕೊಂಡರೂ ಕಪ್ ಗೆಲ್ಲಲಾಗಲಿಲ್ಲ. 2003ರಲ್ಲಿ ದಕ್ಷಿಣ ಆಫ್ರಿಕದ ಕನಸೂ ನನಸಾಗಲಿಲ್ಲ.

ಇದು ಆತಿಥೇಯರಿಗೆ ಶಾಪವೋ ಅಥವಾ ತಂಡದ ದುರದೃಷ್ಟವೋ ಗೊತ್ತಿಲ್ಲ. ಇದೊಂದು ಮೂಢನಂಬಿಕೆಯೂ ಅಲ್ಲ. ಒಂದು ಕುತೂಹಲಕರ ಅಂಕಿ ಅಂಶ ಅಷ್ಟೇ. ಯಾವುದೇ ಆಟದಲ್ಲಿಯೂ ಪ್ರಯತ್ನದ ಬಲವಿಲ್ಲದೇ ಯಾವ ಅದೃಷ್ಟವೂ ಒಲಿಯುವುದಿಲ್ಲ. ಅದೃಷ್ಟ ಎನ್ನುವುದು ಲಾಟರಿ. ಯಾರಿಗೆ ಬೇಕಾದರೂ ಅದು ಹೊಡೆಯಬಹುದು.
 
ಆತಿಥೇಯ ತಂಡಕ್ಕೆ ಸಹಜವಾಗಿ ದೇಶವಾಸಿಗಳ ಪ್ರಚಂಡ ಬೆಂಬಲ ಇರುತ್ತದೆ. ಅತಿಥಿಗಳ ಉತ್ತಮ ಆಟವನ್ನು ಮೆಚ್ಚಿಕೊಳ್ಳಬಹುದು. ಆದರೆ ಎಲ್ಲರಿಗೂ ತಮ್ಮ ದೇಶದ ತಂಡವೇ ಗೆಲ್ಲಬೇಕೆಂಬ ಅಭಿಮಾನ ಇದ್ದೇ ಇರುತ್ತದೆ, ಇರಬೇಕು. ಅಂತಿಮವಾಗಿ ಚೆನ್ನಾಗಿ ಆಡಿ ಗೆಲ್ಲುವ ತಂಡವನ್ನು ಅಭಿನಂದಿಸುವುದು ಬೇರೆ ಮಾತು. ನಮ್ಮ ತಂಡವನ್ನು ಬೆಂಬಲಿಸುವುದರಿಂದ ಆಟಗಾರರಿಗೆ ಹುಮ್ಮಸ್ಸು, ಛಲ ಮೂಡುತ್ತದೆ, ಚೆನ್ನಾಗಿ ಆಡುತ್ತಾರೆ, ಆಡಬೇಕು.

ಆದರೆ ಜನರ ಅಂಧ ಅಭಿಮಾನವೂ ಮುಳುವಾಗುವ ಸಾಧ್ಯತೆ ಇರುತ್ತದೆ. ಮಂತ್ರದಿಂದ ಮಾವಿನಕಾಯಿ ಉದುರುವುದಿಲ್ಲ. ಪೂಜೆ ಪುನಸ್ಕಾರ, ಹೋಮ ಹವನಗಳಿಂದ ಸಚಿನ್ ತೆಂಡೂಲ್ಕರ್ ಆಗಲೀ ವೀರೇಂದ್ರ ಸೆಹ್ವಾಗ್ ಆಗಲೀ ನೂರು ಹೊಡೆಯಲು ಆಗುವುದಿಲ್ಲ. ಎಲ್ಲ ಬ್ಯಾಟ್ಸಮನ್ನರೂ ದೇವರಿಗೆ ಕೈಮುಗಿದೇ (ಸೂರ್ಯನಿಗೆ ನಮಸ್ಕರಿಸುತ್ತ. ಹೊನಲು ಬೆಳಕಿನಲ್ಲಿ ಇವರು ಆಕಾಶ ನೋಡುತ್ತಾರೋ ಅಥವಾ ಲೈಟಿನ ಬಲ್ಬುಗಳನ್ನು ನೋಡುತ್ತಾರೋ ಗೊತ್ತಿಲ್ಲ!) ಅಂಕಣಕ್ಕಿಳಿಯುತ್ತಾರೆ. ಆದರೆ ಎಲ್ಲರಿಗೂ ನೂರು ಹೊಡೆಯಲು ಆಗುವುದಿಲ್ಲ. ಬೌಲರ್ ಕೂಡ ಸೂರ್ಯನಿಗೆ ನಮಸ್ಕಾರ ಹಾಕಿರುತ್ತಾನಲ್ಲ! ಎಲ್ಲ ದೇಶಗಳಲ್ಲೂ ಅವರ ತಂಡಗಳಿಗೆ ಇಂಥ ಪೂಜೆ ಪುನಸ್ಕಾರ ನೆರವೇರಬಹುದು.
 
ಆ ಎಲ್ಲ ದೇವರುಗಳು ಪೈಪೋಟಿಗಿಳಿದು ತಮ್ಮ ತಂಡವನ್ನೇ ಗೆಲ್ಲಿಸಲು ಯತ್ನಿಸುತ್ತಾರೆಯೋ ಇಲ್ಲವೋ ಎಂಬುದನ್ನು ಮಂತ್ರವಾದಿಯೇ ಹೇಳಬೇಕು. 1999 ರಲ್ಲಿ ಮಹ್ಮದ್ ಅಜರುದ್ದೀನ್ ನಾಯಕತ್ವದ ತಂಡ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸುವ ಮೊದಲು ಎಷ್ಟೊಂದು ಪೂಜೆ, ಹೋಮಗಳು ನಡೆದಿದ್ದವು. ಆದರೆ ಭಾರತದ 33 ಲಕ್ಷ ದೇವರುಗಳು ವರ ಕೊಡಲಿಲ್ಲ. 1996, 2003ರಲ್ಲೂ ಹಾಗೇ ಆಗಿತ್ತು. ಶ್ರೀಲಂಕಾ, ಆಸ್ಟ್ರೇಲಿಯದ ದೇವರೇ ಸ್ಟ್ರಾಂಗ್ ಆಗಿದ್ದರು!

ಇವೆಲ್ಲ ಜನರ ಕ್ರಿಕೆಟ್ ಹುಚ್ಚಿನ ಪ್ರತೀಕ. ಆಟಗಾರರು ಅದರ ನಶೆಯಲ್ಲಿ ಅಂದರೆ ಜನರ ಅಂಧ ಮಹಾಪೂರದಲ್ಲಿ ಕೊಚ್ಚಿ ಹೋಗುವ ಸಾಧ್ಯತೆಗಳು ಇರುತ್ತವೆ. ಜೇಬು ತುಂಬಿಸುವ ಜಾಹೀರಾತಿನ ಷೂಟಿಂಗ್‌ನಲ್ಲಿ ಸಮಯ ವ್ಯರ್ಥವಾಗಿ ಪಂದ್ಯಗಳು ಆರಂಭವಾಗುವ ಹೊತ್ತಿಗೆ ತಲೆ ಭಾರವಾಗಿರುತ್ತದೆ. 1983 ರಲ್ಲಿ ಕಪಿಲ್‌ದೇವ್ ಅವರ ತಂಡಕ್ಕೆ ಇಂಥ ಸಮಸ್ಯೆಗಳು ಇನ್ನೂ ಎದುರಾಗಿರಲಿಲ್ಲ. ಈಗ ಹಾಗಲ್ಲ. ಚೆನ್ನಾಗಿ ಆಡಲು ಎಷ್ಟುಅವಕಾಶಗಳಿವೆಯೋ ಕೆಟ್ಟದಾಗಿ ಆಡಲೂ ಅಷ್ಟೇ ಅವಕಾಶಗಳಿವೆ.

ಅದೇನೇ ಇರಲಿ, ಈ ಸಲ ವಿಶ್ವ ಕಪ್ ಯಾರು ಗೆಲ್ಲುತ್ತಾರೆ ಎಂದು ಯಾರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲವಾದರೂಪಂಟರುಗಳಲೆಕ್ಕಾಚಾರದಂತೆ ಅಥವಾ ಕ್ರಿಕೆಟ್ ಪಂಡಿತರ ಲೆಕ್ಕಾಚಾರದಂತೆ ಭಾರತವೇ ನಂಬರ್-1 ಫೇವರಿಟ್ ಎಂದು ಹೇಳಬಹುದು. ಮಹೇಂದ್ರ ಸಿಂಗ್ ದೋನಿ ಹಾಗೂ ಅವರ ಸೈನಿಕರಿಗೆ (ವಿಶ್ವ ಕಪ್ ಕ್ರಿಕೆಟ್ ಎಂದರೆ ಮದ್ದುಗುಂಡಿಲ್ಲದ ಸಮರವೇ ಅಲ್ಲವೇ?) ತಾವು ಆತಿಥೇಯರು, ಆತಿಥೇಯರಿಗೆ ವಿಶ್ವ ಕಪ್ ಶಾಪ ಇದೆ ಎಂಬ ಅಳುಕೇನೂ ಇರಲಿಕ್ಕಿಲ್ಲ, ಇರಬಾರದು. ಜಾಹೀರಾತುಗಳಲ್ಲಿ ಆಟಗಾರರು ಬ್ಯೂಸಿಯಾಗಿದ್ದರೂ ಅವರ ತಯಾರಿಗೇನೂ ತಡೆಯುಂಟಾಗಿಲ್ಲ.
 
ದಕ್ಷಿಣ ಆಫ್ರಿಕದಲ್ಲಿ ಟೆಸ್ಟ್ ಮತ್ತು ಒಂದು ದಿನದ ಸರಣಿಯನ್ನಾಡಿ ಬಂದಿದ್ದಾರೆ. ಆನಂತರ ಉತ್ತಮ ವಿಶ್ರಾಂತಿಯೂ ದೊರಕಿದೆ. ಈಗೇನಿದ್ದರೂ ವಿಶ್ವ ಕಪ್ ಗೆಲ್ಲುವ ಮಂತ್ರ ಒಂದೇ. ಹಿಂದಿನ ತಂಡಗಳ ಜೊತೆ ಹೋಲಿಕೆ ಅನಗತ್ಯವಾದರೂ ದೋನಿಯ ತಂಡ ವಿಶ್ವ ಕಪ್ ಗೆಲ್ಲುವ ಎಲ್ಲ ಅರ್ಹತೆಗಳನ್ನೂ ಹೊಂದಿದೆ ಎನ್ನಬಹುದು. ಸೆಹ್ವಾಗ್, ಗಂಭೀರ್, ತೆಂಡೂಲ್ಕರ್, ಯುವರಾಜ್ ಸಿಂಗ್, ರೈನಾ, ದೋನಿ, ಯೂಸುಫ್ ಪಠಾಣ್, ಹರಭಜನ್, ಜಹೀರ್ ಖಾನ್, ಮುನಾಫ್ ಪಟೇಲ್, ನೆಹ್ರಾ ಮೊದಲ ಹನ್ನೊಂದರಲ್ಲಿ ನೇರವಾಗಿ ಸ್ಥಾನ ಪಡೆಯುವ ಆಟಗಾರರು.

ಪ್ರವೀಣಕುಮಾರ್ ಗಾಯಗೊಂಡು ತಂಡದಿಂದ ಹೊರಬಿದ್ದದ್ದು ತಂಡಕ್ಕೆ ಸಣ್ಣ ಪೆಟ್ಟಾದರೂ, ಬೌಲಿಂಗ್ ತೀರ ದುರ್ಬಲವೇನೂ ಅಲ್ಲ. ಕಪಿಲ್ ದೇವ್ ಮಾದರಿಯ ಆಲ್‌ರೌಂಡರ್ (ಮಧ್ಯಮವೇಗದ ಬೌಲರ್ ಮತ್ತು ಬ್ಯಾಟ್ಸಮನ್) ಒಬ್ಬ ಬೇಕಾಗಿತ್ತು. ಆದರೆ ಯುವರಾಜ್, ರೈನಾ, ಪಠಾಣ್ ಆ ಕೊರತೆಯನ್ನು ತುಂಬಬಲ್ಲವರಾದರೂ ಮಧ್ಯದ ಓವರುಗಳಲ್ಲಿ ಇನ್ನೊಬ್ಬ ಮಧ್ಯಮ ವೇಗದ ಬೌಲರ್ (ಮೊಹಿಂದರ್ ಅಮರನಾಥರಂಥ ಜೆಂಟಲ್ ಮೀಡಿಯಮ್ ಪೇಸರ್) ಬೇಕಿತ್ತು ಎನಿಸುತ್ತದೆ.

}ಭಾರತ ‘ಬಿ’ ಗುಂಪಿನಲ್ಲಿ ಬಾಂಗ್ಲಾದೇಶ (ಫೆ. 19), ಇಂಗ್ಲೆಂಡ್ (ಫೆ. 27), ಐರ್ಲೆಂಡ್ (ಮಾರ್ಚ್ 6), ಹಾಲೆಂಡ್ (ಮಾರ್ಚ್ 9), ದಕ್ಷಿಣ ಆಫ್ರಿಕ (ಮಾರ್ಚ್ 12), ವೆಸ್ಟ್ ಇಂಡೀಸ್ (ಮಾರ್ಚ್ 20) ತಂಡಗಳನ್ನು ಎದುರಿಸಲಿದೆ. ಭಾರತ ಕ್ವಾರ್ಟರ್‌ಫೈನಲ್ ತಲುಪಲು ಸಮಸ್ಯೆಯೇ ಆಗಬಾರದು. ‘ಎ’ ಗುಂಪಿನಲ್ಲಿರುವ ಆಸ್ಟ್ರೇಲಿಯ, ಪಾಕಿಸ್ತಾನ, ಶ್ರೀಲಂಕಾ, ನ್ಯೂಜಿಲೆಂಡ್, ಜಿಂಬಾಬ್ವೆ, ಕೆನಡಾ, ಕೆನ್ಯಾ ತಂಡಗಳಲ್ಲಿ ಮೊದಲ ನಾಲ್ಕು ತಂಡಗಳೇ ಕ್ವಾರ್ಟರ್‌ಫೈನಲ್‌ಗೆ ಮುನ್ನಡೆಯುವ ಸಾಧ್ಯತೆಗಳು ಹೆಚ್ಚಿವೆ. ‘ಬಿ’ ಗುಂಪಿನಿಂದ ಭಾರತದ ಜೊತೆ ಇಂಗ್ಲೆಂಡ್, ದಕ್ಷಿಣ ಆಫ್ರಿಕ ಮತ್ತು ವೆಸ್ಟ್‌ಇಂಡೀಸ್ ಅಥವಾ ಬಾಂಗ್ಲಾದೇಶ ಮುನ್ನಡೆಯಬಹುದು. ಆದರೆ ಕ್ವಾರ್ಟರ್ ಫೈನಲ್‌ನಲ್ಲಿ ಯಾರು ಯಾರನ್ನು ಎದುರಿಸುತ್ತಾರೆ ಎಂಬುದು ತಂಡಗಳು ಲೀಗ್‌ನಲ್ಲಿ ಪಡೆಯುವ ಸ್ಥಾನವನ್ನು ಅವಲಂಬಿಸಿರುತ್ತದೆ. ಅಲ್ಲಿಂದಲೇ ಟೂರ್ನಿ ರಂಗೇರುವುದು.

ತಂಡಗಳ ಬಲಾಬಲವನ್ನು ಲೆಕ್ಕಹಾಕಿದಾಗ ಭಾರತ, ಶ್ರೀಲಂಕಾ, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ ಅಥವಾ ಪಾಕಿಸ್ತಾನ ಕ್ವಾರ್ಟರ್‌ಫೈನಲ್ ಸವಾಲನ್ನು ಬದಿಗೊತ್ತಿ ಸೆಮಿಫೈನಲ್‌ಗೆ ಮುನ್ನಡೆಯುವ ಅವಕಾಶ ಹೊಂದಿವೆ. ಆಸ್ಟ್ರೇಲಿಯ ಆ್ಯಷಸ್ ಸರಣಿ ಸೋತರೂ ಒಂದು ದಿನದ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು 6-1 ರಿಂದ ಬಗ್ಗುಬಡಿಯಿತು. ಶ್ರೀಲಂಕಾ ತಂಡ ವೆಸ್ಟ್‌ಇಂಡೀಸ್ ತಂಡವನ್ನು ಮಣಿಸಿದೆ. ವಿವಾದಗಳ ಸುಳಿಯಲ್ಲಿಯೇ ಇರುವ ಪಾಕಿಸ್ತಾನ ನ್ಯೂಜಿಲೆಂಡ್ ವಿರುದ್ಧ ಸರಣಿ ಜಯಿಸಿತು. ದಕ್ಷಿಣ ಆಫ್ರಿಕವೂ ಉತ್ತಮ ತಯಾರಿ ಮಾಡಿಕೊಂಡೇ ಬಂದಿದೆ.

ಭಾರತ ಸೆಮಿಫೈನಲ್ ತಲುಪಿದರೆ 1987 ಮತ್ತು 1996 ರಲ್ಲಾದ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು ಖಚಿತ. ಹಾಗೆಯೇ ಫೈನಲ್ ತಲುಪಿದರೆ ಎದುರಾಳಿಗಳನ್ನು ಮಣಿಸುವುದೂ ಖಚಿತ ಎಂದೆನಿಸುತ್ತದೆ. ಆದರೆ ಹಾದಿ ಮೆತ್ತಗಿನ ಗಾದಿಯೇನೂ ಅಲ್ಲ. ಪಿಚ್ ಮೇಲೆ ಬಾಂಬ್ ಸಿಡಿಯುವುದೋ ಗೆಲುವಿನ ಹೂವು ಅರಳುವುದೋ ಎಂಬುದು ಚೆಂಡು ಬಿದ್ದ ಮೇಲೆಯೇ ಗೊತ್ತಾಗುತ್ತದೆ. ಆದರೆ ದೋನಿ ವಿಶ್ವ ಕಪ್ ಎತ್ತಿ ಹಿಡಿಯಬಹುದು, 

..
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT