ಸೋಮವಾರ, ಏಪ್ರಿಲ್ 12, 2021
31 °C

ದೌರ್ಜನ್ಯ ವಿರೋಧಿಸಿ ರಾಷ್ಟ್ರೀಯ ಆಂದೋಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಮಹಿಳೆಯರಿಗೆ  ಎಲ್ಲ ಕ್ಷೇತ್ರದಲ್ಲಿ ಸಮಾನ ಹಕ್ಕು ದೊರಕಬೇಕು, ಮಹಿಳೆಯರನ್ನು ಸರಾಯಿ ಮತ್ತು ಇನ್ನಿತರ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದೌರ್ಜನ್ಯಗಳಿಂದ ಮುಕ್ತಗೊಳಿಸುವುದು, ವರದಕ್ಷಿಣೆ ಕಿರುಕುಳ ಹೋಗಲಾಡಿಸುವ ದಿಶೆಯಲ್ಲಿ ಅಖಿಲ ಭಾರತ ಆಂದೋಲನವನ್ನು ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ ಕೇಂದ್ರ ಕಾರ್ಯದರ್ಶಿ ಶಮಿಸ್ತಾ  ಚೌಧರಿ ಹೇಳಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಆಂದೋಲವನ್ನು ಜುಲೈ 1ರಿಂದ ಆರಂಭಿಸಲಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಮಿತಿ ಮೀರಿದೆ. ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.ಬೀದಿಗಳಲ್ಲಿ, ಕೆಲಸ ಮಾಡುವ ಕಡೆಗಳಲ್ಲಿ ಲೈಂಗಿಕ ಕಿರುಕುಳಕ್ಕೆ ಗುರಿಯಾಗುತ್ತಿದ್ದಾರೆ. ಮನೆಯಲ್ಲಿ ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಪಡುತ್ತಿದ್ದಾರೆ ಎಂದು ಹೇಳಿದರು.ಹೆಣ್ಣು ಭ್ರೂಣ ಹತ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಳೆದ ಬಾರಿಯ ಜನಗಣತಿ ಪ್ರಕಾರ 0ದಿಂದ 6ವರ್ಷದೊಳಗಿನ ಹೆಣ್ಣುಮಕ್ಕಳ ಸಂಖ್ಯೆ ಕುಸಿತ ಕಂಡಿದೆ. 1991ರ ಜನಗಣತಿ ಪ್ರಕಾರ 1000 ಪುರುಷ, 945 ಮಹಿಳೆ, 2001ರಲ್ಲಿ 927ಕ್ಕೆ ತಗ್ಗಿತು. 2011ರಲ್ಲಿ 914ಕ್ಕೆ ತಗ್ಗಿದೆ. ಇದು ಕಳವಳಕಾರಿ ಸಂಗತಿ ಎಂದರು.ಸಮಾನ ಕೆಲಸಕ್ಕೆ ಸಮಾನ ವೇತನ ಎಂಬುದು ಕನಸಿನ ಮಾತಾಗುತ್ತಿದೆ. ಕೃಷಿಯೇತರ ಉದ್ಯೋಗದಲ್ಲಿ ಮಹಿಳೆಯರ ಪಾಲು ಕೇವಲ ಶೇ 17, ನಗರ ಪ್ರದೇಶದಲ್ಲಿ ಮಹಿಳೆಯರು ಕೆಲಸ ಮಾಡುವ ಪ್ರಮಾಣ ಕೇವಲ ಶೇ 13.9.ಗ್ರಾಮೀಣ ಪ್ರದೇಶದಲ್ಲಿ ಈ ಪ್ರಮಾಣ ಶೇ 29.9. ಮಹಿಳೆಯರ ವೇತನದ ಪ್ರಮಾಣವು ಪುರುಷರಿಗೆ ಹೋಲಿಸಿದರೆ ಕುಟುಂಬದ ಆದಾಯದ ಕೇವಲ 25ರಷ್ಟಿದೆ. ದೇಶದಲ್ಲಿ 245 ದಶಲಕ್ಷ ಮಹಿಳೆಯರು ಅನಕ್ಷರಸ್ಥರಾಗಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಸಮಾನ ವೇತನ ದೊರಕುತ್ತಿಲ್ಲ ಎಂದು ವಿವರಿಸಿದರು.ಉತ್ತರ ಪ್ರದೇಶದಲ್ಲಿ ಮರ್ಯಾದಾ ಹತ್ಯೆ ಪ್ರಕರಣ ಉಲ್ಬಣಗೊಂಡಿವೆ. ಇದರ ನಿಯಂತ್ರಣಕ್ಕೆ ಅಲ್ಲಿನ ಸರ್ಕಾರವಾಗಲಿ. ಕೇಂದ್ರ ಸರ್ಕಾರವಾಗಲಿ ಗಮನಹರಿಸಿಲ್ಲ. ಬದಲಾಗಿ ಅಲ್ಲಿನ ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳೇ ಮರ್ಯಾದಾ ಹತ್ಯೆ ಪ್ರಕರಣಗಳನ್ನು ಸಮರ್ಥಿಸಿಕೊಳ್ಳುವ ರೀತಿ ಹೇಳಿಕೆ ನೀಡಿದ್ದಾರೆ. ಅಂಥವರ ಬೇಜವಾಬ್ದಾರಿ ಹೇಳಿಕೆ ವಿರುದ್ಧವೂ ಕ್ರಮ ಕೈಗೊಂಡಿಲ್ಲದಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಅದೇ ರೀತಿ ಗ್ರಾ.ಪಂನಿಂದ ಎಲ್ಲ ಹಂತದಲ್ಲೂ ಮಹಿಳೆಯರಿಗೆ ರಾಜಕೀಯಕ್ಕೆ ಸಂಬಂಧಿಸಿದಂತೆ ಅನ್ಯಾಯ ಮುಂದುವರಿದಿದೆ. ಮೀಸಲಾತಿ ಪ್ರಕಾರ ಸ್ಥಾನ ಒಲಿದಿದ್ದರೂ ಮಹಿಳೆಯರ ಹುದ್ದೆ ನಿಭಾಯಿಸುವ ಬದಲು ಅವರ ಗಂಡದಿರು ಪರದೆಯ ಹಿಂದೆ( ಬಿಯಾಂಡ್ ದಿ ಸ್ಕ್ರೀನ್) ತಾವೇ ಅಧ್ಯಕ್ಷರು ಎಂಬಂತೆ ಕಾರ್ಯನಿರ್ವಹಿಸುತ್ತಾರೆ.  ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವಲ್ಲಿ ಅಲ್ಲಿನ ಮಮತಾ ಬ್ಯಾನರ್ಜಿ ಸರ್ಕಾರ ವಿಫಲಗೊಂಡಿದೆ. ಮಹಿಳೆಯೇ ಮುಖ್ಯಮಂತ್ರಿಯಾಗಿದ್ದರೂ ಆ ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಸಾಧ್ಯವಾಗಿಲ್ಲ ಎಂದು ಹೇಳಿದರು.ಈ ರೀತಿ ಅನೇಕ ಸಮಸ್ಯೆಗಳಿವೆ. ಇದಕ್ಕೆ ಪರಿಹಾರವೆಂದರೆ ಅಖಿಲ ಭಾರತ ಮಟ್ಟದಲ್ಲಿ ಜನಜಾಗೃತಿ ಆಂದೋಲನ ಆಯೋಜಿಸುವುದು ಎಂಬ ಉದ್ದೇಶದಿಂದ ಈ ಆಂದೋಲನ ಆಯೋಜಿಸಿದೆ. ಎಲ್ಲ ಮಹಿಳೆಯರು ಪ್ರಗತಿಪರ ಹಾಗೂ ಪ್ರಜಾಸತ್ತಾತ್ಮಕ ಶಕ್ತಿಯ ಈ ಆಂದೋಲನ ಯಶಸ್ಸುಗೊಳಿಸಬೇಕು ಎಂದು ತಿಳಿಸಿದರು.

ಸಂಘಟನೆ ರಾಜ್ಯ ಕಾರ್ಯದರ್ಶಿ ಕವಿತಾ, ಜಿಲ್ಲಾಧ್ಯಕ್ಷೆ ನೂರಜಹಾನ್, ಚನ್ನಮ್ಮ, ರುಕ್ಮಿಣಿ, ಬಸಮ್ಮ ಪತ್ರಿಕಾಗೋಷ್ಠಿಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.