ಬುಧವಾರ, ಮೇ 12, 2021
20 °C

ದ್ವಿತೀಯ ಪಿಯು ಪ್ರಶ್ನೆಪತ್ರಿಕೆ ಬಹಿರಂಗ ಪ್ರಕರಣ:ಖಜಾನೆ ಅಧಿಕಾರಿಗಳೇ ಹೊಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಬಹಿರಂಗವಾಗಲು ಖಜಾನೆ ಇಲಾಖೆ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.ಪ್ರಶ್ನೆಪತ್ರಿಕೆಗಳನ್ನು ಆಯಾ ತಾಲ್ಲೂಕುಗಳ ಖಜಾನೆಯಲ್ಲಿ ಸಂಗ್ರಹ ಮಾಡಿದ ನಂತರ, ಖಜಾನೆಯ ಒಂದು ಕೀಲಿಕೈ ಅನ್ನು ಉಪಖಜಾನೆ ಅಧಿಕಾರಿ, ಮತ್ತೊಂದನ್ನು `ಕೇಸ್ ವರ್ಕರ್~ ಹೊಂದಿರುತ್ತಾರೆ. ಮೂರನೇ ಕೀಲಿಕೈ ಬ್ಯಾಂಕ್‌ನ ಸ್ಟ್ರಾಂಗ್ ರೂಂನಲ್ಲಿ ಇರುತ್ತದೆ.ನಿಯಮಾವಳಿ ಪ್ರಕಾರ ಪ್ರಶ್ನೆಪತ್ರಿಕೆಗಳನ್ನು ಖಜಾನೆಯಿಂದ ಹೊರಗೆ ತೆಗೆಯುವಾಗ ಕ್ಷೇತ್ರಶಿಕ್ಷಣಾಧಿಕಾರಿ, ತಹಶೀಲ್ದಾರ್ ಮತ್ತು ಉಪಖಜಾನೆ ಅಧಿಕಾರಿ ಹಾಜರಿರಬೇಕು. ಈ ಮೂವರೂ ಮುದ್ರೆಯನ್ನು ಪರಿಶೀಲಿಸಿದ ನಂತರ ಪ್ರಶ್ನೆಪತ್ರಿಕೆಗಳನ್ನು ಹೊರತೆಗೆದು ಸೂಕ್ತ ಭದ್ರತೆಯಲ್ಲಿ ಸಂಬಂಧಪಟ್ಟ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿಕೊಡಬೇಕು.ಆದರೆ ಬಹುತೇಕ ಕಡೆ ಉಪಖಜಾನೆ ಅಧಿಕಾರಿಗಳು, ತಹಶೀಲ್ದಾರ್‌ಗಳು ಪ್ರಶ್ನೆಪತ್ರಿಕೆಗಳನ್ನು ಹೊರ ತೆಗೆಯುವಾಗ ಹಾಜರಿರುವುದಿಲ್ಲ. ಕೇಸ್ ವರ್ಕರ್ ಬಳಿ ಇರುವ ಕೀಲಿಕೈಯಿಂದಲೇ ಖಜಾನೆಯನ್ನು ತೆರೆದು ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿಕೊಡಲಾಗುತ್ತಿದೆ.

 

ಈ ವಿಷಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಗೊತ್ತಿದ್ದರೂ, ಕೆಳ ಹಂತದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಥವಾ ಎಚ್ಚರಿಕೆ ನೀಡುವ ಕೆಲಸವನ್ನು ಮಾಡಲಿಲ್ಲ ಎಂದು ಖಜಾನೆ ಇಲಾಖೆಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.ಕೆಲವೆಡೆ ಉಪ ಖಜಾನೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ ಮಾಡುವುದಿಲ್ಲ. ಹೀಗಾಗಿ ಪ್ರತಿದಿನ ಬೆಳಿಗ್ಗೆ 7.30ಕ್ಕೆ ಕಚೇರಿಗೆ ಹಾಜರಾಗಿ ಖಜಾನೆ ತೆರೆದು ಪ್ರಶ್ನೆಪತ್ರಿಕೆಗಳನ್ನು ನೀಡುವುದು ಕಷ್ಟ ಎಂಬ ಕಾರಣಕ್ಕಾಗಿ ಕೆಳ ಹಂತದ ಸಿಬ್ಬಂದಿಯಾದ `ಕೇಸ್ ವರ್ಕರ್~ಗೆ ಈ ಜವಾಬ್ದಾರಿ ವಹಿಸಿರುತ್ತಾರೆ. ಈ ರೀತಿಯ ಬೇಜವಾಬ್ದಾರಿ ವರ್ತನೆಯಿಂದಲೇ ಇಲಾಖೆಗೆ ಕೆಟ್ಟ ಹೆಸರು ಬಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಹಣದ ಆಸೆಗಾಗಿ ಖಜಾನೆಯ ಕೆಳ ಹಂತದ ಸಿಬ್ಬಂದಿ ಮಧ್ಯವರ್ತಿಗಳೊಂದಿಗೆ ಕೈಜೋಡಿಸುತ್ತಾರೆ. ಖಜಾನೆ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿ ಕಡ್ಡಾಯವಾಗಿ ಉಪಖಜಾನೆ ಅಧಿಕಾರಿಗಳೇ ಪ್ರತಿದಿನ ಖಜಾನೆಯನ್ನು ತೆರೆದು ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ನೀಡುವಂತೆ ಸೂಚಿಸಿದ್ದರೆ ಪ್ರಶ್ನೆಪತ್ರಿಕೆಗಳು ಬಹಿರಂಗವಾಗುವುದನ್ನು ತಡೆಯಬಹುದಿತ್ತು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.