ಮಂಗಳವಾರ, ಮೇ 24, 2022
25 °C

`ಧರ್ಮ ಬೇರೆಯಾದರೂ ಮೌಲ್ಯ ಒಂದೇ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಿರಿಯಾಪುರ (ಕಡೂರು): ಮಾನವ ಅನುಸರಿಸುವ ಧರ್ಮಗಳು ಹಲವು ಇದ್ದರೂ ಇವುಗಳ ಮೌಲ್ಯ ಮಾತ್ರ ಒಂದೇ ಆಗಿದೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಗುರು ಸಿದ್ದರಾಜ ಯೋಗೀಂದ್ರ ತಿಳಿಸಿದರು.ಕಡೂರು ತಾಲ್ಲೂಕು ಗಿರಿಯಾಪುರದ ಶಿವಾದ್ವೈತ ತತ್ವ ಪ್ರಚಾರ ಕೇಂದ್ರ,ಯುವಜನ ಕೂಟ ಮತ್ತು ಮಲ್ಲಿಕಾಂಬಾ ಮಂಡಳಿಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ಕೆ.ಬಿದರೆ ದೊಡ್ಡಮಠದ ಪ್ರಭುಕುಮಾರ ಪಟ್ಟಾಧ್ಯಕ್ಷರ 82ನೇ ಸ್ಮರಣಾರಾಧನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಧರ್ಮವನ್ನು ಪ್ರತಿಷ್ಠಾನ, ಪುನರುತ್ಥಾನ ಮತ್ತು ಪ್ರಸಾರದ ಮೂಲಕ ಪಸರಿಸಬೇಕೆಂಬುದೇ ಗುರುಪೀಠಗಳ ಆಶಯ. ಧರ್ಮದಲ್ಲಿ ಪರಿಪೂರ್ಣತೆ ಕಾಣಲು ಯೋಗದ ಅಗತ್ಯವಿದೆ. ವ್ಯಕ್ತಿ ಮತ್ತು ಸಮಷ್ಠಿಯ ಏಕೀಭವವೇ ಯೋಗ. ಧರ್ಮದಲ್ಲಿ ಯೋಗ ಮತ್ತು ಯೋಗದಲ್ಲಿ ಧರ್ಮ ಬೆರೆತಾಗಲೇ ಪರಿಪೂರ್ಣತೆ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.`ವೀರಶೈವ ಧರ್ಮದ ಪುನರುತ್ಥಾನಕ್ಕೆ ಹಾನಗಲ್ ಕುಮಾರಸ್ವಾಮಿ ಸ್ಥಾಪಿಸಿದ ಶಿವಯೋಗ ಮಂದಿರ ನಿರಂತರ ಶ್ರಮಿಸುತ್ತಿದೆ. ದೂರದೃಷ್ಟಿ ಮತ್ತು ಕಲ್ಪನೆ ಇದ್ದವರಿಂದ ಮಾತ್ರ ಇಂತಹ ಸಂಸ್ಥೆಗಳ ಸ್ಥಾಪನೆ ಸಾಧ್ಯ. ಇಂದು ಗೋಸಂರಕ್ಷಣೆ ಮತ್ತು ಯೋಗದ ಕುರಿತು ಆಂದೋಲನಗಳು ನಡೆಯುತ್ತಿವೆ ಆದರೆ ಶತಮಾನದ ಹಿಂದೆಯೇ ಕುಮಾರಸ್ವಾಮಿ ಇದನ್ನು ಸಾಧಿಸಿ ತೋರಿಸಿದ್ದರು.

ಅವರ ಶಿಷ್ಯ ಯೋಗಿರಾಜ ಪ್ರಭುಕುಮಾರ ಪಟ್ಟಾಧ್ಯಕ್ಷರು ಯೋಗಸಾಧನೆಯ ಮಹತ್ವವನ್ನು ತೋರಿಸಿ ನಾವು ಬಾಗಿಸಬೇಕಿರುವುದು ದೇಹವಲ್ಲ, ದೇಹದ ಒಳಗಿನ ಮನಸ್ಸನ್ನು ನಿಗ್ರಹಿಸಿ ಬಾಗಿಸಿದಾಗಲೇ ಇಂದ್ರಿಯಗಳ `ಪ್ರಭು'ವಾಗುತ್ತೇವೆ ಎಂದು ಸಾರಿದ್ದಾರೆ. ಒತ್ತಡದ ಜೀವನ ನಡೆಸುತ್ತಿರುವ ನಮಗೆ ನಮ್ಮನ್ನು ಎಲ್ಲ ವ್ಯಸನಗಳಿಂದ ಮುಕ್ತಿ ನೀಡುವ ಯೋಗಾಭ್ಯಾಸ ಅಗತ್ಯವಾಗಿದೆ. ಇದರಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗಲಿದೆ' ಎಂದು ನುಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀಗುರು ಕುಮಾರಾಶ್ರಮದ ಜಿ.ಸಿ.ಸಿದ್ದಪ್ಪ, `ನಾಡಿನ ನಡೆ-ನುಡಿಗೆ ಮಹೋನ್ನತ ಸಂಸ್ಕಾರ ನೀಡಿದ ಹಾನಗಲ್ ಶ್ರೀಗಳ ಆಶಯವನ್ನು ಅಕ್ಷರಶಃ ಪೂರೈಸಿದವರು ಪ್ರಭುಕುಮಾರ ಶ್ರೀಗಳು. ಭವರೋಗ ವೈದ್ಯರೆಂದೇ ಜನಸಾಮಾನ್ಯರಲ್ಲಿ ಹೆಸರು ಗಳಿಸಿ, ಯೋಗದ ಮೂಲಕವೇ ರೋಗದಿಂದ ಗುಣ ಹೊಂದಲು ಜನರನ್ನು ಪ್ರೇರೇಪಿಸಿದವರು. ಇಂತಹ ಪುರಾತನರ ಬದುಕು ನಮಗೆ ಆದರ್ಶವಾಗಬೇಕು. ತ್ಯಾಗಮಯಿ ಮತ್ತು ಸರಳ ಜೀವನದಿಂದ ನಮ್ಮ ಬದುಕು ನಡೆಯುವಂತಾದರೆ ನಾವು ಹುಟ್ಟಿದ್ದು ಸಾರ್ಥಕ' ಎಂದರು.ಕಡೂರು ತಹಶೀಲ್ದಾರ್ ಶಾರದಾಂಬ ಮಾತನಾಡಿ, `ಆಸೆ ಇರಬೇಕು. ಆದರೆ ದುರಾಸೆ ಇರಬಾರದು. ಸಾಮಾಜಿಕ ಜೀವನದ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದ ವಚನಕಾರರ ಬದುಕು ನಮಗೆ ಆದರ್ಶವಾಗಬೇಕು ಮತ್ತು ನಮ್ಮ ನಡೆ ಮುಂದಿನ ಪೀಳಿಗೆಗೆ ಮಾರ್ಗದರ್ಶನದಂತೆ ಇರಬೇಕು' ಎಂದು ಆಶಿಸಿದರು.ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಬಹುಮಾನ ವಿತರಿಸಿದರು. ಕಡೂರಿನ ರಾಘವೇಂದ್ರ ಯೋಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಕ್ಲಿಷ್ಟ ಯೋಗಾಸನಗಳ ಪ್ರದರ್ಶನ ನೀಡಿದರು.

ಕೆ.ಬಿದರೆ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಸದಸ್ಯೆ ಪದ್ಮಾ ಚಂದ್ರಪ್ಪ, ಕುಮಾರಾಶ್ರಮದ ಗುರುಶಾಂತಪ್ಪ, ಶಿವಲಿಂಗಪ್ಪ, ವಿರೂಪಾಕ್ಷಪ್ಪ ಮತ್ತಿತರ ಪದಾಧಿಕಾರಿಗಳು, ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಯುವಜನ ಕೂಟ ಮತ್ತು ಮಲ್ಲಿಕಾಂಬಾ ಮಂಡಳಿಯ ಸದಸ್ಯರು, ಗ್ರಾಮಸ್ಥರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.