ಬುಧವಾರ, ಮಾರ್ಚ್ 3, 2021
20 °C

ಧಾರಾವಾಹಿ ಲೋಕದ ಒಳಸುಳಿಗಳು...

ಪದ್ಮನಾಭ ಭಟ್‌ Updated:

ಅಕ್ಷರ ಗಾತ್ರ : | |

ಧಾರಾವಾಹಿ ಲೋಕದ ಒಳಸುಳಿಗಳು...

‘ಅಮ್ಮಾ ಧಾರಾವಾಹಿ ಬಂತು ಬಾರೇ...’ ಮಗಳು ಕೂಗಿದ್ದೇ ಅಡುಗೆ ಮನೆಯಲ್ಲಿ ಯಾವುದೋ ಕೆಲಸದಲ್ಲಿ ನಿರತರಾಗಿದ್ದ ಅಮ್ಮ ಕೆಲಸವನ್ನು ಅರ್ಧಕ್ಕೆ ಬಿಟ್ಟು ಓಡಿ ಬಂದು ಟೀವಿ ಮುಂದೆ ಕೂರುತ್ತಾರೆ. ‘ತಥ್‌ ಈ ಹೆಂಗಸರ ಧಾರಾವಾಹಿ ಹುಚ್ಚಿನಿಂದ ವಾರ್ತೆನೂ ನೋಡದಂಗಾಯ್ತು’ ಎಂದು ದೊಡ್ಡದಾಗಿಯೇ ಗೊಣಗುವ ಅಪ್ಪನೂ ಟೀವಿ ಮುಂದಿನಿಂದ ಏಳುವುದಿಲ್ಲ. ಇವರನ್ನೆಲ್ಲ ವ್ಯಂಗ್ಯಭರಿತ ತಾತ್ಸಾರದಿಂದಲೇ ನೋಡುತ್ತಾ ಮೊಬೈಲ್‌ ಹಿಡಿದು ರೂಮಿನತ್ತ ಹೊರಟ ಮಗನೂ ಟೀವಿಯಲ್ಲಿ ನಾಯಕ ನಾಯಕಿಯ ಕೆನ್ನೆಗೆ ಹೊಡೆದ ದೃಶ್ಯವನ್ನು ಬೇರೆ ಬೇರೆ ಆಯಾಮಗಳಲ್ಲಿ ತೋರಿಸುತ್ತಿದ್ದಂತೆಯೇ ಕ್ಷಣಹೊತ್ತು ನಿಂತು ನೋಡುತ್ತಾನೆ.ದೈನಿಕ ಧಾರಾವಾಹಿ ಮನೆಮಂದಿಯನ್ನು ಪ್ರಭಾವಿಸಿರುವ ಪರಿಗೆ ಇದೊಂದು ಸಣ್ಣ ನಿದರ್ಶನವಷ್ಟೇ. ಅದದೇ ಅತ್ತೆ ಸೊಸೆ ಜಗಳ, ನಾದಿನಿಯರ ಕಿತಾಪತಿ, ಮನೆಮನೆ ಕುತಂತ್ರಗಳೇ ಸುತ್ತುತ್ತಾರೆ ಎಂದು ಹಗಲಿಡೀ ಬೈಯುವವರೂ ಸಂಜೆಯಾಗುತ್ತಿದ್ದಂತೆಯೇ ಟೀವಿ ಮುಂದೆ ಕೂಡ್ರುವುದು ಬಹಿರಂಗ ಸತ್ಯ.ಇಂದು ಧಾರಾವಾಹಿ ಒಂದು ಕಲೆಯಾಗಿಯಷ್ಟೇ ಉಳಿದಿಲ್ಲ. ಅದು ಬಹುದೊಡ್ಡ  ವ್ಯಾಪಾರವೂ ಆಗಿದೆ. ಅಲ್ಲಿನ ಅಳತೆಯ ಮಾನದಂಡಗಳು ಹೆಚ್ಚು ವೈಜ್ಞಾನಿಕವಾಗಿವೆ. ಅಲ್ಲೊಂದು ಮಾರುಕಟ್ಟೆ ತಂಡವಿರುತ್ತದೆ. ಸಂಶೋಧನಾ ತಂಡ ಇರುತ್ತದೆ. ಅವುಗಳ ಫಲಿತಾಂಶ ಆಧರಿಸಿ ಕ್ರಿಯೇಟಿವ್‌‌‌ ತಂಡ ಕೆಲಸ ಮಾಡುತ್ತಿರುತ್ತದೆ. ಟೀವಿ ವಾಹಿನಿಗಳಲ್ಲಿ ‘ಕ್ರಿಯೇಟಿವ್‌‌ ಟೀಮ್’ಗಳು ಅಸ್ತಿತ್ವಕ್ಕೆ ಬಂದಾಗಿನಿಂದ ನಿರ್ದೇಶಕರ ಸ್ವಾತಂತ್ರ್ಯ ಕಡಿಮೆಯಾಗಿದೆ ಎಂಬ ಆರೋಪ ಒಂದೆಡೆ ಇದ್ದರೆ, ಇದರಿಂದ ಧಾರಾವಾಹಿಯ ಗುಣಮಟ್ಟ ಹೆಚ್ಚಿದೆ ಎಂಬ ವಾದವೂ ಇದೆ. ವಾದ ಪ್ರತಿವಾದಗಳೇನೇ ಇರಲಿ, ಟೀವಿ ವಾಹಿನಿಗಳ ಸ್ಪರ್ಧಾ ಕಣದಲ್ಲಿ ದೈನಿಕ ಧಾರಾವಾಹಿ ಎನ್ನುವುದು ಲಾಭ ನಷ್ಟಗಳನ್ನು ಆಧರಿಸಿ, ಸಿದ್ಧ ಸೂತ್ರಗಳ ನಡುವೆ ಸುರಕ್ಷಿತ ವಲಯದ ಸಂಚಾರವಾಗಿಬಿಟ್ಟಿದೆ ಎನ್ನುವುದಂತೂ ಸತ್ಯ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ.ಗುಣಾತ್ಮಕ ಪರಿಣಾಮ

ಕ್ರಿಯೇಟಿವ್‌‌ ಟೀಂನಿಂದ ಧಾರಾವಾಹಿಗಳ ಸದಭಿರುಚಿಯ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ ಎನ್ನುವುದನ್ನು ಸುವರ್ಣ ವಾಹಿನಿಯ ಪ್ರೋಗ್ರಾಮಿಂಗ್‌ ಹೆಡ್‌ ಸುಧೀಂದ್ರ ಭಾರದ್ವಾಜ್‌ ಬಿಲ್‌ಕುಲ್‌ ಒಪ್ಪುವುದಿಲ್ಲ. ಬದಲಾಗಿ ಧಾರಾವಾಹಿಗಳ ಗುಣಮಟ್ಟದ ದೃಷ್ಟಿಯಿಂದ ಒಳ್ಳೆಯದೇ ಆಗಿದೆ ಎಂದೇ ಪ್ರತಿಪಾದಿಸುವ ಅವರು ತಮ್ಮ ಮಾತಿಗೆ ಪೂರಕವಾಗಿ ಹಲವಾರು ಅಂಶಗಳನ್ನು ಮುಂದಿಡುತ್ತಾರೆ.ಧಾರಾವಾಹಿ ತಂಡ ಮತ್ತು ವೀಕ್ಷಕರ ನಡುವೆ ಕ್ರಿಯೇಟಿವ್‌‌ ಟೀಂ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ಅವರ ಅಭಿಪ್ರಾಯ. ‘ಕ್ರಿಯೇಟಿವ್‌‌ ಟೀಂನಲ್ಲಿ ಇರುವವರು ಸಾಮಾನ್ಯವಾಗಿ ಸಾಹಿತ್ಯ ಸಿನಿಮಾಗಳಲ್ಲಿ ಆಸಕ್ತಿ ಹೊಂದಿರುವ ಸೃಜನಶೀಲ ವ್ಯಕ್ತಿಗಳೇ ಆಗಿರುತ್ತಾರೆ. ಆದ್ದರಿಂದ ಅವರು ಧಾರಾವಾಹಿ ನಿರ್ದೇಶಕರಿಗೆ ಪೂರಕವಾಗಿಯೇ ಕೆಲಸ ನಿರ್ವಹಿಸುತ್ತಿರುತ್ತಾರೆ’ ಎಂಬ ಸಮರ್ಥನೆಯನ್ನೂ ಅವರು ನೀಡುತ್ತಾರೆ.‘ಪ್ರತಿದಿನ ಪ್ರಸಾರವಾಗುವ ಧಾರಾವಾಹಿಗಳನ್ನು ವಿಶ್ಲೇಷಿಸಿ ಅದರ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಕ್ರಿಯೇಟಿವ್‌‌ ಟೀಮ್‌ನ ಪಾತ್ರ ದೊಡ್ಡದು. ಆದ್ದರಿಂದಲೇ ಇಂದು ಧಾರಾವಾಹಿಗಳನ್ನು ನೋಡುವವರ ಸಂಖ್ಯೆ ಹಿಂದಿಗಿಂತಲೂ ಹೆಚ್ಚಿದೆ’ ಎನ್ನುತ್ತಾರೆ ಭಾರಾದ್ವಾಜ್‌.ಕ್ರಿಯೇಟಿವ್‌‌ ಟೀಮ್‌ಗಳು ಬಂದಾಗಿನಿಂದ ನಿರ್ದೇಶಕರ ಸ್ವಾತಂತ್ರ್ತ ಕುಂಠಿತಗೊಂಡಿದೆ ಎನ್ನುವುದನ್ನೂ ಅವರು ನಿರಾಕರಿಸುತ್ತಾರೆ. ‘ಮೊದಲು ಅವವೇ ನಿರ್ಮಾಣ ಸಂಸ್ಥೆಗಳು, ನಿರ್ದೇಶಕರು, ಬರಹಗಾರರು ಇದ್ದರು. ಈಗ ಮೊದಲಿಗಿಂತಲೂ ನಿರ್ದೇಶಕರಿಗೆ ಹೆಚ್ಚು ಪ್ರಾಮುಖ್ಯ ದೊರೆಯುತ್ತಿದೆ. ಹೊಸಬರಿಗೆ ಆದ್ಯತೆ ಸಿಗುತ್ತಿದೆ. ನಮ್ಮ ವಾಹಿನಿಯಲ್ಲಿಯೇ ರಘುಚರಣ್‌, ರಶ್ಮಿ ಅಭಯಸಿಂಹ ಅವರಂತಹ ಹಲವು ಹೊಸ ಬರಹಗಾರರನ್ನು ಬೆಳೆಸಿದ್ದೇವೆ’ ಎಂದು ನಿದರ್ಶನದ ಮೂಲಕ ವಿವರಿಸುತ್ತಾರೆ.ಲಾಭ–ನಷ್ಟದ ಲೆಕ್ಕಾಚಾರ

‘ಮೊದಲು ಶೇ 80ರಷ್ಟು ಧಾರಾವಾಹಿಯ ಕೆಲಸಗಳ ಮೇಲೆ ನಿರ್ಮಾಣ ಸಂಸ್ಥೆಯ ಪ್ರಾಬಲ್ಯವಿರುತ್ತಿತ್ತು. ಆದರೆ ಇಂದು ಅದು ಫಿಫ್ಟಿ ಫಿಫ್ಟಿ ಆಗಿದೆ’ ಎನ್ನುವ ಟೀವಿ ವಾಹಿನಿಯೊಂದರ ಕ್ರಿಯೇಟಿವ್‌‌ ಟೀಂ ಮುಖ್ಯಸ್ಥರೊಬ್ಬರು ತಮ್ಮ ಹೆಸರನ್ನು ಮಾತ್ರ ಬಹಿರಂಗಪಡಿಸಲು ಇಷ್ಟಪಡುವುದಿಲ್ಲ.‘ಇಂದು ಚಾನೆಲ್‌ಗಳಿಗೆ ತಮ್ಮ ಪ್ರೇಕ್ಷಕರಿಗೆ ಏನು ಬೇಕು, ಏನನ್ನು ಕೊಟ್ಟರೆ ಹೆಚ್ಚು ಜನ ನೋಡುತ್ತಾರೆ ಎಂಬುದರ ಬಗ್ಗೆ ತಿಳಿದಿದೆ. ಆದ್ದರಿಂದ ನಿರ್ದೇಶಕರು ಅದನ್ನೇ ಮಾಡಬೇಕು ಎಂದು ಬಯಸುತ್ತಾರೆ. ಕೊನೆಗೂ ಇದೊಂದು ಲಾಭ–ನಷ್ಟದ ಲೆಕ್ಕಾಚಾರ. ಹತ್ತು ವರ್ಷದ ಹಿಂದೆ ಇದ್ದಂತೆ ಈಗ ಇಲ್ಲ. ಒಂದು ಸಾಂಸ್ಕೃತಿಕ ಆಯಾಮಕ್ಕಿಂತಲೂ ಧಾರಾವಾಹಿಯನ್ನು ಒಂದು ಪ್ರಾಡಕ್ಟ್‌ ಥರ ನೋಡಲಾಗುತ್ತಿದೆ. ಸರಿ–ತಪ್ಪುಗಳ ವಿಶ್ಲೇಷಣೆ ಏನಿದ್ದರೂ ಈ ಬದಲಾವಣೆ ಆಗಿರುವುದು ವಾಸ್ತವ. ಆದ್ದರಿಂದಲೇ ಯಾವುದನ್ನು ಜಾಸ್ತಿ ಜನ ನೋಡುತ್ತಾರೋ ಅದನ್ನೇ ಚಾನೆಲ್‌ಗಳು ಪ್ರಸಾರ ಮಾಡುತ್ತವೆ’ ಎನ್ನುವ ಅವರು, ಈ ಬದಲಾವಣೆಗೆ ಕಾರಣವಾಗಿರುವ ಪ್ರಾದೇಶಿಕ ಅಂಶಗಳನ್ನೂ ಅವರು ವಿವರಿಸುತ್ತಾರೆ.‘ಇಂದು ಕನ್ನಡದ ಬಹುತೇಕ ಮನರಂಜನಾ ಟೀವಿ ವಾಹಿನಿಗಳ ಮುಖ್ಯ ಕಚೇರಿಗಳು ಬೇರೆ ರಾಜ್ಯದಲ್ಲಿವೆ. ಅವುಗಳ ಮಾಲೀಕತ್ವದ ಕಂಪೆನಿಗಳು ಬೇರೆ ರಾಜ್ಯದವು. ಆದ್ದರಿಂದ ಅವರಿಗೆ ಕನ್ನಡದ ಬಗ್ಗೆ, ಕರ್ನಾಟಕದ ಪರಿಸರದ ಬಗ್ಗೆ ಯಾವುದೇ ಅರಿವಾಗಲಿ ಕಾಳಜಿಯಾಗಲಿ ಇರುವುದಿಲ್ಲ. ಅದು ಅವರಿಗೆ ಮುಖ್ಯವೆಂದೂ ಅನಿಸುವುದಿಲ್ಲ. ಬಂಡವಾಳ ಹೂಡಿಕೆ ಮತ್ತು ಲಾಭ ಗಳಿಕೆ ಅಷ್ಟೇ ಅವರ ಗಮನದಲ್ಲಿರುವತ್ತದೆ. ವಾಹಿನಿಗಳ ಕಾರ್ಯಕ್ರಮದ ಮೇಲೆ ಈ ಅಂಶಗಳೂ ಪರೋಕ್ಷವಾಗಿ ಪ್ರಭಾವ ಬೀರುತ್ತವೆ’ ಎನ್ನುವುದು ಅವರ ಅನುಭವದ ಮಾತು.ಬೆಂಗಳೂರು ಕೇಂದ್ರಿತ ಕಥನಗಳು

ಇಂದಿನ ಬಹುತೇಕ ಧಾರಾವಾಹಿಗಳು ಬೆಂಗಳೂರು ಕೇಂದ್ರಿತ ಕಥನಗಳನ್ನು ಹೊಂದಿರುತ್ತವೆ. ಅವು ಬೆಂಗಳೂರಿನಲ್ಲಿಯೇ ನಡೆಯುತ್ತಿರುವಂಥವು. ಅಲ್ಲಲ್ಲಿ ಬೇರೆ ಊರಿನ ಕಥನಗಳ ಧಾರಾವಾಹಿಗಳು ಇದ್ದರೂ ಅವುಗಳಲ್ಲಿನ ಪರಿಸರ, ಪಾತ್ರಗಳು ಎಲ್ಲವೂ ಬೆಂಗಳೂರಿನವೇ ಆಗಿರುತ್ತವೆ. ಯಾಕೆ ಇಂಥ ಏಕಸ್ವಾಮ್ಯ ಎಂದು ಪ್ರಶ್ನಿಸಿದರೆ, ‘ಯಾಕೆ ಎಲ್ಲ ಕಡೆಗಳಿಂದ ಜನರು ಬೆಂಗಳೂರಿಗೆ ಬರುತ್ತಿದ್ದಾರೆ?’ ಎಂದು ಅವರು ಮರುಪ್ರಶ್ನಿಸುವುದರ ಜತೆಗೆ, ‘ಯಾಕೆಂದರೆ ಎಲ್ಲರೂ ಬೆಂಗಳೂರನ್ನು ಇಷ್ಟಪಡುತ್ತಾರೆ’ ಎಂಬ ಉತ್ತರವನ್ನೂ ಕೊಡುತ್ತಾರೆ.‘ಹೆಚ್ಚು ಜನರು ಯಾವುದನ್ನು ಇಷ್ಟಪಡುತ್ತಾರೋ ಅದು ಧಾರಾವಾಹಿಯಲ್ಲಿಯೂ ಬರುತ್ತದೆ. ಆದ್ದರಿಂದಲೇ ಧಾರಾವಾಹಿಗಳು ಬೆಂಗಳೂರು ಕೇಂದ್ರಿತವಾಗುತ್ತಿವೆ’ ಎನ್ನುವುದು ಅವರ ವಿವರಣೆ. ‘ಅಲ್ಲದೇ ಉಳಿದ ಭಾಷೆಯ ಕಿರುತೆರೆಗೆ ಹೋಲಿಸಿದರೆ  ಕನ್ನಡದ ಮಾರುಕಟ್ಟೆ ಚಿಕ್ಕದು. ಆದ್ದರಿಂದ ಬೇರೆ ಊರುಗಳಿಗೆ ಹೋಗಿ ಚಿತ್ರೀಕರಿಸಲೂ ಸಾಧ್ಯವಾಗುವುದಿಲ್ಲ’ ಎಂದು ಮಾರುಕಟ್ಟೆ ಸಮಸ್ಯೆಯತ್ತಲೂ ಅವರು ಗಮನ ಸೆಳೆಯುತ್ತಾರೆ.ಧಾರಾವಾಹಿಯ ಪ್ರೇಕ್ಷಕ ವರ್ಗ

‘ಸಾಮಾನ್ಯವಾಗಿ ಇಂದಿಗೂ ಧಾರಾವಾಹಿಯ ಪ್ರೇಕ್ಷಕರು ಮಹಿಳೆಯರು. ಅದರಲ್ಲಿಯೂ ಮೂವತ್ತು ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಅಷ್ಟೊಂದು ಶಿಕ್ಷಿತರಲ್ಲದ, ಆಧುನಿಕತೆಗೆ ಒಗ್ಗಿಕೊಂಡಿರದ ಹದಿನೈದು ವರ್ಷ ಮೇಲ್ಪಟ್ಟ ಹುಡುಗಿಯರು ಹೆಚ್ಚು ಧಾರಾವಾಹಿಗಳನ್ನು ನೋಡುತ್ತಾರೆ. ಅವರು ಏನನ್ನು ನೋಡಲು ಬಯಸುತ್ತಾರೆ ಎಂಬುದನ್ನು ಆಧರಿಸಿಯೇ ಇಂದಿನ ಧಾರಾವಾಹಿಗಳನ್ನು ರೂಪಿಸಲಾಗುತ್ತಿದೆ’ ಎಂದು ಪ್ರೇಕ್ಷಕಗಣದ ಲೆಕ್ಕಾಚಾರಗಳನ್ನು ಅವರು ಬಿಚ್ಚಿಡುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.