ಭಾನುವಾರ, ಜನವರಿ 26, 2020
18 °C

ನಂದಿಬೆಟ್ಟ ಅಭಿವೃದ್ಧಿ; ಟಿಪ್ಪು ವಸತಿಗೃಹ ಪಾಳು

ಪ್ರಜಾವಾಣಿ ವಾರ್ತೆ/ ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜನ್ಮದಿನ ಸಮೀಪಿಸದಾಗಲೆಲ್ಲ ಸರ್ಕಾರ    ಸೇರಿದಂತೆ ಸಂಘ ಸಂಸ್ಥೆಗಳು ಟಿಪ್ಪುವಿನ ಸ್ಮರಣೆಯಲ್ಲಿ ಹಲವು ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತವೆ. ಟಿಪ್ಪು ಕೊಡುಗೆ, ಹೋರಾಟದ ಕತೆಗಳನ್ನು ಸ್ಮರಿಸಲಾಗುತ್ತದೆ. ಆದರೆ ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಬೆಟ್ಟದಲ್ಲಿ ಟಿಪ್ಪು ತಂಗುತ್ತಿದ್ದ ಐತಿಹಾಸಿಕ ವಸತಿಗೃಹ ಪಾಳು ಬಿದ್ದು ದಶಕಗಳೇ ಕಳೆದಿದೆ.ಶಿಥಿಲಾವಸ್ಥೆಯಲ್ಲಿರುವ ವಸತಿಗೃಹದ ಸುತ್ತಮುತ್ತ ಹಸಿರುಪಾಚಿ, ಗಿಡಗಂಟಿಗಳು ಬೆಳೆದಿದ್ದು, ಯಾವುದೇ ಕ್ಷಣ ಉರುಳಿಬೀಳುವ ಸ್ಥಿತಿಯಲ್ಲಿದೆ. ಇಲ್ಲಿ ಭೇಟಿ ನೀಡುವ ಕಿಡಿಗೇಡಿಗಳು ಮನಬಂದಂತೆ ಗೋಡೆಗಳ ಮೇಲೆ ಗೀಚುತ್ತಾರೆ. ವಸತಿಗೃಹದ ಮಹತ್ವವನ್ನೂ ಅರಿಯದೇ ಅಲ್ಲಿರುವ ವೀರಗಲ್ಲುಗಳು, ಕಲಾಕೆತ್ತನೆಗೆ ಹಾನಿ ಉಂಟು ಮಾಡಲಾಗಿದೆ.ವಸತಿಗೃಹದ ಎದುರೇ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಫಲಕ ಅಳವಡಿಸಿದ್ದು, ವಸತಿಗೃಹವನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸಿದೆ. ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಪರಿಗಣಿಸಿದ್ದಾರೆ. `ಪ್ರಾಚೀನ ಸ್ಮಾರಕವನ್ನು ಹಾನಿ, ನಾಶಪಡಿಸಿದರೆ ಎರಡು ವರ್ಷ ಜೈಲು ಶಿಕ್ಷೆ, ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು~ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.ಸಮುದ್ರಮಟ್ಟದಿಂದ 4850 ಅಡಿಗಳಷ್ಟು ಎತ್ತರದ ನಂದಿ ಬೆಟ್ಟದ ಮೇಲಿರುವ ಈ ವಸತಿಗೃಹವನ್ನು ಮೊದಲು ಕೋಟೆಯೆಂದು ಕರೆಯಲಾಗುತಿತ್ತು. ಚೋಳರ ಸಂಸ್ಥಾನ ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ನಂದಿಬೆಟ್ಟ ಎಂಬುದು ನಂದಿ ದುರ್ಗವಾಗಿತ್ತು.

 

ಬಳಿಕ ಅದು ನಂದಿಗಿರಿ ಎಂದು ಕರೆಯಲ್ಪಟ್ಟಿತು. ಚಿಕ್ಕಬಳ್ಳಾಪುರದ ಪ್ರಧಾನ ಅಧಿಕಾರಿಗಳು ನಿರ್ಮಿಸಿದ್ದ ಈ ಕೋಟೆಯು ಮರಾಠಾ ಮಾಧವರಾವ್ ವಶದಲ್ಲಿತ್ತು. 1770ರಲ್ಲಿ ಯುದ್ಧದಲ್ಲಿ ಹೈದರಾಲಿ, ಟಿಪ್ಪು ಸುಲ್ತಾನ್ ಈ ಕೋಟೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು. 1791ರಲ್ಲಿ ಬ್ರಿಟಿಷ್ ಅಧಿಕಾರಿ ಲಾರ್ಡ್ ಕಾರ್ನ್‌ವಾಲಿಸ್ ಕೋಟೆಯನ್ನು ವಶಪಡಿಸಿಕೊಳ್ಳುವ ಮುನ್ನ ಟಿಪ್ಪು ಸುಲ್ತಾನ್ ಕೋಟೆಯನ್ನು ವಿಶ್ರಾಂತಿಗೃಹವಾಗಿ ಬಳಸುತ್ತಿದ್ದ.ಇಟ್ಟಿಗೆ, ಗಾರೆಯಿಂದ ನಿರ್ಮಿಸಲಾಗಿರುವ ಕೋಟೆಯ ಗೋಡೆಗಳ ಮೇಲೆ ವರ್ಣಚಿತ್ರಗಳನ್ನು ಬಿಡಿಸಲಾಗಿದೆ. ಬೇಟೆಗೆ ಬಂದಾಗಲೆಲ್ಲ ಟಿಪ್ಪು ಸುಲ್ತಾನ್ ಇಲ್ಲಿ ಉಳಿದುಕೊಳ್ಳುತ್ತಿದ್ದರು ಎಂದು ಚರಿತ್ರೆಯ ಪುಟಗಳು ಹೇಳುತ್ತವೆ.`17 ಕೋಟಿ ವೆಚ್ಚದಲ್ಲಿ ಇಡೀ ನಂದಿ ಬೆಟ್ಟವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಮಹಾತ್ಮಾಗಾಂಧಿ ವಸತಿಗೃಹ, ಜವಹರಲಾಲ್ ನೆಹರೂ ವಸತಿಗೃಹದ ನವೀಕರಣ ಕಾರ್ಯದ ಜತೆಗೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ ನಂದಿ ಬೆಟ್ಟದ ಪ್ರವೇಶದ್ವಾರದಲ್ಲೇ ಕಾಣಸಿಗುವ ಟಿಪ್ಪು ಸುಲ್ತಾನ್ ಐತಿಹಾಸಿಕ ವಸತಿಗೃಹದತ್ತ ಯಾಕೆ ನಿರ್ಲಕ್ಷ್ಯ ತೋರಲಾಗಿದೆ? ಎಂಬುದು ಸ್ಪಷ್ಟವಾಗಿಲ್ಲ~ ಎಂದು ಉಪನ್ಯಾಸಕ ಅಜಿತ್ ಕೌಂಡಿನ್ಯ `ಪ್ರಜಾವಾಣಿ~ಗೆ ತಿಳಿಸಿದರು.`ವಸತಿಗೃಹವು ಪುರಾತತ್ವ ಸರ್ವೇಕ್ಷಣ ಇಲಾಖೆ ವ್ಯಾಪ್ತಿಯಲ್ಲಿದ್ದರೂ ರಾಜ್ಯ ಸರ್ಕಾರವು ಕೇಂದ್ರದೊಂದಿಗೆ ಚರ್ಚಿಸಿ, ರಕ್ಷಣೆಗಾಗಿ ಅಗತ್ಯ ಕ್ರಮ ತೆಗೆದುಕೊಳ್ಳಬಹುದು. ವಸತಿಗೃಹದ ನವೀಕರಣಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಬೇಕಿಲ್ಲ. ವಸತಿಗೃಹದ ಮೇಲೆ ನಿಗಾ ವಹಿಸಲು ಕಾವಲುಗಾರನನ್ನು ನೇಮಿಸಿದರೆ ಕಿಡಿಗೇಡಿಗಳ ಹಾವಳಿತಪ್ಪಿಸಿ ಸಂರಕ್ಷಿಸಲು ಸಹಕಾರಿಯಾಗುತ್ತದೆ~ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)