ಮಂಗಳವಾರ, ಮೇ 11, 2021
20 °C

ನಂದಿ ಗಿರಿಧಾಮ: ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ

ರಾಹುಲ ಬೆಳಗಲಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ದಕ್ಷಿಣ ಭಾರತದ ಪ್ರಸಿದ್ಧ ಗಿರಿಧಾಮವೆಂದೇ ಪರಿಗಣಿಸಲ್ಪಡುವ ಮತ್ತು ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿ ಎಂಬಂತಿರುವ ನಂದಿ ಗಿರಿಧಾಮಕ್ಕೆ ಕುತ್ತು ಎದುರಾಗಿದೆ. ಮುಂದಿನ ವರ್ಷಗಳಲ್ಲಿ ಗಿರಿಧಾಮವು ತನ್ನ ದಟ್ಟವಾದ ಹಸಿರು ವಾತಾವರಣ ಕಳೆದುಕೊಂಡು ಬರಡಾಗುವ ಭೀತಿಯಲ್ಲಿದೆ. ಗಿರಿಧಾಮದ ಸುತ್ತಮುತ್ತಲಿನ ಪರಿಸರಕ್ಕೆ ಈಗಾಗಲೇ ಧಕ್ಕೆಯಾಗಿದ್ದು, ಪ್ರವಾಸಿಗರು, ಪರಿಸರವಾದಿಗಳಲ್ಲಿ ಇನ್ನಷ್ಟು ಆತಂಕ ಹೆಚ್ಚಿಸಿದೆ.ಗಿರಿಧಾಮದ ಸುತ್ತಮುತ್ತಲೂ ಕಟ್ಟಡ, ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಹಸಿರು ಪ್ರದೇಶ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಗಿರಿಧಾಮದ ಸುತ್ತಲೂ ಆವರಿಸಿದ್ದ ಬೃಹತ್ ಹೆಮ್ಮರಗಳು, ಔಷಧೀಯ ಸಸ್ಯಗಳು, ಅಪರೂಪದ ಗಿಡಗಳು ಎಲ್ಲವೂ ನಶಿಸುತ್ತಿದ್ದು, ಇಡೀ ವಾತಾವರಣವೇ ಬದಲಾಗುತ್ತಿದೆ.

ಮಾಲಿನ್ಯ ಮುಕ್ತ, ಶುದ್ಧ ಹವೆ ಮತ್ತು ನಿಶ್ಯಬ್ಧ ಪರಿಸರ ಇರುತ್ತದೆ ಎಂಬ ಕಾರಣಕ್ಕೆ ಗಿರಿಧಾಮದೆಡೆಗೆ ಬರುತ್ತಿದ್ದ ಪಕ್ಷಿ ಸಂಕುಲಗಳು ಇತ್ತೀಚಿನ ದಿನಗಳಲ್ಲಿ ಕಾಣದಾಗಿವೆ.ರಿಯಲ್ ಎಸ್ಟೇಟ್: `ಕಟ್ಟಡಗಳು ತಲೆಯೆತ್ತುತ್ತಿರುವ ಕಾರಣ ಇಲ್ಲಿನ ರಿಯಲ್ ಎಸ್ಟೇಟ್ ವಹಿವಾಟಿಗೆ ಭಾರಿ ಬೇಡಿಕೆಯಿದೆ. ಭೂ ವಹಿವಾಟಿನಲ್ಲಿ ತೊಡಗಿಕೊಂಡವರು, ಕೆಲ ಉದ್ಯಮಿಗಳು ರೈತರ ಮನವೊಲಿಸಿ ಜಮೀನು ಖರೀದಿಸಲು ಪೈಪೋಟಿಗೆ ಇಳಿದಿದ್ದಾರೆ.

ಪೈಪೋಟಿಗೆ ಪೂರಕ ಎಂಬಂತೆ ರೈತರು ಲಾಭ ತರದ ಕೃಷಿ ಚಟುವಟಿಕೆಯತ್ತ ಆಸಕ್ತಿ ಕಳೆದುಕೊಂಡು ತಮ್ಮ ಜಮೀನುಗಳನ್ನು ಮಾರುತ್ತಿದ್ದಾರೆ. ಮಳೆ ಮತ್ತು ನೀರಾವರಿಯಿಲ್ಲದೆ ಕಂಗೆಟ್ಟಿರುವ ರೈತರು ಹಣವಾದರೂ ಬರಲಿ ಎಂದು ಜಮೀನು ಮಾರುತ್ತಿದ್ದಾರೆ~ ಎಂದು ಸ್ಥಳೀಯರು ಹೇಳುತ್ತಾರೆ.`ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಇಲ್ಲಿನ ಪ್ರದೇಶಕ್ಕೆ ಬೇಡಿಕೆ ಇರಲಿಲ್ಲ. ಜಮೀನು ಕೊಳ್ಳಲು ಯಾರೂ ಸಹ ಆಸಕ್ತಿ ತೋರುತ್ತಿರಲಿಲ್ಲ. ಆದರೆ ದೇವನಹಳ್ಳಿ ಬಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯಾದ ನಂತರ ಮತ್ತು ನಗರಪ್ರದೇಶದಲ್ಲಿ ಜನ, ವಾಹನದಟ್ಟಣೆ ಹೆಚ್ಚುತ್ತಿರುವ ಪರಿಣಾಮ ಕೆಲ ಸಿರಿವಂತರು ಬೆಟ್ಟದ ತಪ್ಪಲಿನಲ್ಲಿ ವಾಸಿಸಲು ಬಯಸಿ ಜಮೀನು ಖರೀದಿಗೆ ಮುಂದಾದರು.

ಅಂಥವರಿಗೆ ಅನುಕೂಲ ಕಲ್ಪಿಸಲು ಪ್ರತಿಷ್ಠಿತ ಕಟ್ಟಡ ನಿರ್ಮಾಣ ಸಂಸ್ಥೆಗಳು ಇಲ್ಲಿ ಅಷ್ಟೇ ವೇಗವಾಗಿ ಜಮೀನುಗಳನ್ನು ಖರೀದಿಸಿದವು. ನೋಡುನೋಡುತ್ತಿದ್ದಂತೆ ಮನೆಗಳು, ಕಟ್ಟಡಗಳು ಈಗ ತಲೆಯೆತ್ತುತ್ತಿವೆ~ ಎಂದು ಗ್ರಾಮಸ್ಥರು ಹೇಳುತ್ತಾರೆ.ಕೋಟಿಗೆ ಮನೆ: `ಕಾಮಗಾರಿ ಪೂರ್ಣ ಗೊಂಡ ನಂತರ ನಿರ್ಮಾಣ ಸಂಸ್ಥೆಯವರು ಒಂದೊಂದು ಮನೆಯನ್ನು ರೂ. 70 ಲಕ್ಷದಿಂದ 1 ಕೋಟಿ ವರೆಗೆ ಮಾರಾಟ ಮಾಡಲಿದ್ದಾರೆ. ಗಿರಿಧಾಮದ ಸುತ್ತಲೂ ಕಟ್ಟಡಗಳು ನಿರ್ಮಾಣವಾದರೆ, ನೈಸರ್ಗಿಕ ಸೌಂದರ್ಯ ಹಾಳಾಗುತ್ತದೆ. ಸದಾ ಮಂಜು ಮತ್ತು ತಂಪಾದ ಹವೆಯಿಂದ ಕೂಡಿರುವ ವಾತಾವರಣ ನಶಿಸುತ್ತದೆ. ಆಗ ಪ್ರವಾಸಿಗರು ಬರುವುದಿಲ್ಲ. ಅಪರೂಪದ ನೈಸರ್ಗಿಕ ಸಂಪನ್ಮೂಲವೂ ಇರುವುದಿಲ್ಲ~ ಎಂದು ಕುಡುವತ್ತಿ ಗ್ರಾಮದ ವೆಂಕಟೇಶ್ `ಪ್ರಜಾವಾಣಿ~ಗೆ ತಿಳಿಸಿದರು.`ಸಾಲ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿರುವ ರೈತರು ಜಮೀನುಗಳನ್ನು ಮಾರುತ್ತಿದ್ದಾರೆ. ಬದುಕಿರುವಷ್ಟು ದಿನ ನೆಮ್ಮದಿಯಾಗಿ ಬಾಳಲು ಬಯಸಿದ್ದಾರೆ. ಗಿರಿಧಾಮದ ತಪ್ಪಲಲ್ಲಿರುವ ಈರೇನಹಳ್ಳಿ, ಕುಡುವತ್ತಿ, ಅಂಗಟ್ಟ, ಕುಪ್ಪಹಳ್ಳಿ, ನಂದಿ ಮುಂತಾದ ಗ್ರಾಮಗಳ ರೈತರು ತಮ್ಮ ಜಮೀನುಗಳನ್ನು ಮಾರಿದ್ದಾರೆ.ಸುಮಾರು 300 ಎಕರೆಯಷ್ಟು ಭೂಪ್ರದೇಶದಲ್ಲಿ ಮನೆಗಳು, ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದು, ಕೃಷಿ ಚಟುವಟಿಕೆ ಕಣ್ಮರೆಯಾಗಿದೆ. ನಂದಿ ಗಿರಿಧಾಮಕ್ಕೆ ಅಷ್ಟೇ ಅಲ್ಲ, ಗೋಪಿನಾಥ ಬೆಟ್ಟ ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶಕ್ಕೂ ಧಕ್ಕೆಯಾಗಲಿದೆ~ ಎಂದು ರೈತ ಮುಖಂಡ ಯಲುವಹಳ್ಳಿ ಸೊಣ್ಣೇಗೌಡ ತಿಳಿಸಿದರು.ಹಸಿರು ವಲಯವಾಗಲಿ: `ಸ್ವಾತಂತ್ರ್ಯ ಹೋರಾಟದ ವೇಳೆ ಮಹಾತ್ಮಾ ಗಾಂಧೀಜಿ, ಜವಹರಲಾಲ್ ನೆಹರೂ ಮುಂತಾದ ಮಹನೀಯರು ನಂದಿ ಗಿರಿ ಧಾಮದಲ್ಲಿ ತಂಗಿದ್ದರು. ಮೈಸೂರು ಹುಲಿ ಟಿಪ್ಪು ಸುಲ್ತಾನ್ ಕಟ್ಟಿಸಿದ ಕೋಟೆಯಿದೆ. ಅಮೂಲ್ಯವಾದ ಸಸ್ಯ ಸಂಪತ್ತು ಇದೆ.

ಈ ಎಲ್ಲ ಕಾರಣಗಳಿಂದಾಗಿ ವಿಶೇಷ ಮಹತ್ವ ಹೊಂದಿರುವ ನಂದಿ ಗಿರಿಧಾಮ ಮತ್ತು ಸುತ್ತ ಮುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಇಡೀ ಪ್ರದೇಶವನ್ನು ಹಸಿರು ವಲಯ ಪ್ರದೇಶ ಎಂದು ಘೋಷಿಸಬೇಕು. ಕಟ್ಟಡ ಕಾಮಗಾರಿ ಸಂಪೂರ್ಣವಾಗಿ ನಿಷೇಧಿಸಬೇಕು~ ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.