ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಎಟಿಎಂ ಕಾರ್ಡ್‌ ಬಳಸಿ ವಂಚನೆ: ಬಂಧನ

Last Updated 29 ನವೆಂಬರ್ 2013, 20:16 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ಡೆಬಿಟ್ ಕಾರ್ಡ್‌ಗಳನ್ನು ತಯಾರಿಸಿ ಲಕ್ಷಾಂತರ ರೂಪಾಯಿ ಹಣ ಡ್ರಾ ಮಾಡಿ ವಂಚಿಸಿದ್ದ ಆರೋಪಿಯನ್ನು ಜೆ.ಸಿ.ನಗರ ಪೊಲೀಸರು ಬಂಧಿಸಿದ್ದಾರೆ.

ಆರ್‌.ಟಿ.ನಗರ ಸಮೀಪದ ಸುಲ್ತಾನಪಾಳ್ಯ ನಿವಾಸಿ ಜಯದೀಪ್‌ ಚಟರ್ಜಿ (34) ಬಂಧಿತ ಆರೋಪಿ. ಎನ್‌.ಆರ್‌.ಚೌಕದ ಎಟಿಎಂ ಘಟಕ­ದಲ್ಲಿ ಜ್ಯೋತಿ ಅವರ ಮೇಲೆ ಹಲ್ಲೆ ನಡೆದ ನಂತರ, ಎಟಿಎಂ  ಘಟಕಗಳಿ­ರುವ ರಸ್ತೆಗಳ ಬಳಿ ಹೆಚ್ಚು ಗಸ್ತು ತಿರುಗುವಂತೆ ಸಿಬ್ಬಂದಿಗೆ ಸೂಚಿಸಲಾ­ಗಿತ್ತು. ಹೀಗಾಗಿ ಸಿಬ್ಬಂದಿ ಎಟಿಎಂ ಘಟಕಗಳ ಬಳಿ ಅನುಮಾನಾಸ್ಪದ ರೀತಿ­ಯಲ್ಲಿ ಓಡಾಡುವವರನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸುತ್ತಿದ್ದರು. ಜತೆಗೆ, ಅವರ ಬೆರಳಚ್ಚು ಮಾದರಿ­ಯನ್ನು ಸಂಗ್ರಹಿಸಿ ಕಳುಹಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಇತ್ತೀಚೆಗೆ ಜೆ.ಸಿ.ನಗರದ ಎಟಿಎಂ ಘಟಕದ ಬಳಿ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಜಯದೀಪ್‌ ಚಟರ್ಜಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಲಾಯಿತು. ಕ್ಷಣ ಕ್ಷಣಕ್ಕೆ ಹೇಳಿಕೆ ಬದಲಿಸುತ್ತಿದ್ದ ಆತನ ವರ್ತನೆ ಅನುಮಾನಕ್ಕೆ ಕಾರಣವಾಯಿತು. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ನಕಲಿ ಡೆಬಿಟ್ ಕಾರ್ಡ್‌ಗಳನ್ನು ತಯಾರಿಸಿ, ಹಣ ಡ್ರಾ ಮಾಡುತ್ತಿದ್ದುದಾಗಿ ಒಪ್ಪಿಕೊಂಡ. ಬಂಧಿತನಿಂದ ರೂ7.80 ಲಕ್ಷ ನಗದು, ₨ 8 ಲಕ್ಷ ಮೌಲ್ಯದ ಕಾರು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಮಷಿನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಪಶ್ಚಿಮ ಬಂಗಾಳ ಮೂಲದ ಜಯದೀಪ್‌,  1998ರಲ್ಲಿ ನಗರಕ್ಕೆ ಬಂದಿದ್ದ. ಇಲ್ಲಿನ ಪ್ರತಿಷ್ಠಿತ ಕಾಲೇಜಿನಲ್ಲೇ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವ್ಯಾಸಂಗ ಮಾಡಿದ ಆತ, ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ರಾಜ್ಯಕ್ಕೆ ಮರಳಿದ್ದ. ಇದೇ ನ.13ರಂದು ಪುನಃ ನಗರಕ್ಕೆ ಬಂದ ಆತ, ಸುಲ್ತಾನಪಾಳ್ಯದಲ್ಲಿ ಮನೆ ಬಾಡಿಗೆ ಪಡೆದು ನಕಲಿ ಡೆಬಿಟ್ ಕಾರ್ಡ್‌ ತಯಾರಿಸುವ ದಂಧೆಯಲ್ಲಿ ತೊಡಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ನ.26ರಂದು ದೂರು: ಜಯಕುಮಾರ್‌ ಎಂಬುವರ ಡೆಬಿಟ್‌ ಕಾರ್ಡನ್ನು ನಕಲು ಮಾಡಿದ್ದ ಆರೋಪಿ, ನ.25ಮತ್ತು ನ.26ರಂದು ಜೆ.ಸಿ.ನಗರದ ಎಸ್‌ಬಿಎಂ ಬ್ಯಾಂಕ್‌ನ ಎಟಿಎಂ ಘಟಕದಲ್ಲಿ ಹಣ ಡ್ರಾ ಮಾಡಿದ್ದ. ಈ ಬಗ್ಗೆ ಜಯಕುಮಾರ್‌ ಅವರ ಮೊಬೈಲ್‌ಗೆ ಸಂದೇಶ ರವಾನೆಯಾಗಿತ್ತು. ಹೀಗಾಗಿ ಅವರು ಜೆ.ಸಿ.ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜಯದೀಪ್‌ನನ್ನು ಬಂಧಿಸಿದ ನಂತರ ಘಟಕದ ಸಿ.ಸಿ ಟಿ.ವಿಯನ್ನು ಪರಿಶೀಲಿಸಿದಾಗ ಈತನೇ ಜಯಕುಮಾರ್‌ ಅವರ ಖಾತೆಯಿಂದ ಹಣ ಡ್ರಾ ಮಾಡಿದ್ದ ಎಂಬುದು ಗೊತ್ತಾಯಿತು. ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾಗಿ ಹೇಳಿಕೆ ಕೊಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಹೇಗೆ ವಂಚನೆ ಮಾಡುತ್ತಿದ್ದ?
ವಿವಿಧ ಬ್ಯಾಂಕ್‌ಗಳ ಎಟಿಎಂ ಕಾರ್ಡ್‌ಗಳನ್ನು ನಕಲಿ­ಯಾಗಿ ತಯಾರಿಸುತ್ತಿದ್ದ ಆರೋಪಿ, ನಂತರ ಅಂತರ್ಜಾಲ­ದಲ್ಲಿ ಸಾಫ್ಟ್‌ವೇರ್‌ವೊಂದನ್ನು ಬಳಸಿ ಗ್ರಾಹಕರ ಪಿನ್‌ಕೋಡ್‌ ಕಳವು ಮಾಡುತ್ತಿದ್ದ. ಬಳಿಕ ಮ್ಯಾಗ್ನಟಿಕ್‌ ಸ್ಕ್ರೈಪ್‌ ತಂತ್ರಜ್ಞಾನದ ಮೂಲಕ ಗ್ರಾಹಕರ ಮೂಲ ಕಾರ್ಡ್‌ನ ರಹಸ್ಯ ಸಂಖ್ಯೆಯನ್ನು ನಕಲಿ ಕಾರ್ಡ್‌ಗೆ ವರ್ಗಾ­ಯಿಸುತ್ತಿದ್ದ. ನಂತರ ರಾತ್ರಿ ವೇಳೆ ಎಟಿಎಂ ಘಟಕಗಳಿಗೆ ತೆರಳಿ ಆ ಕಾರ್ಡ್‌ಗಳಿಂದ ಹಣ ಡ್ರಾ ಮಾಡುತ್ತಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT