ಮಂಗಳವಾರ, ಮೇ 11, 2021
19 °C

ನಕಲಿ ರಸಗೊಬ್ಬರದ ಮೂಲ ತಮಿಳುನಾಡು

ಪ್ರಜಾವಾಣಿ ವಾರ್ತೆ/ ಜಾನೇಕೆರೆ ಆರ್. ಪರಮೇಶ್ Updated:

ಅಕ್ಷರ ಗಾತ್ರ : | |

ಸಕಲೇಶಪುರ: ರಾಜ್ಯದಲ್ಲಿ ನಕಲಿ ರಸಗೊಬ್ಬರ ಮಾರಾಟದ ಹಿಂದೆ ತಮಿಳುನಾಡಿನ ವ್ಯವಸ್ಥಿತ ಜಾಲ ಇರುವುದು ತನಿಖೆಯಿಂದ ದೃಢಪಟ್ಟಿದೆ.

ಹಾನುಬಾಳು ಪ್ರಾಥಮಿಕ ಸಹಕಾರ ಸಂಘದಲ್ಲಿ ನಕಲಿ ಪೊಟ್ಯಾಶ್ ಪತ್ತೆಯಾದ ನಂತರ, ಸದರಿ ಪ್ರಕರಣದ ಆರೋಪಿ ನಿಟ್ಟೂರಿನ ಮಲ್ಲಿಕಾರ್ಜುನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಮಿಳುನಾಡಿನಿಂದ ನಕಲಿ ರಸ ಗೊಬ್ಬರ ರಾಜ್ಯಕ್ಕೆ ಮಾರಾಟ ಆಗುತ್ತಿರುವುದು ಬೆಳಕಿಗೆ ಬಂದಿದೆ.ಹವಾಮಾನ ವೈಪರಿತ್ಯ, ಕಾಡಾನೆ ಸಮಸ್ಯೆಗೆ ಸುಳಿಗೆ ಸಿಲುಕಿರುವ ರೈತರನ್ನು ನಕಲಿ ರಸಗೊಬ್ಬರ ಮಾರಾಟ ಜಾಲ ನಿದ್ದೆಗೆಡಿಸುವಂತೆ ಮಾಡಿದೆ.

ತಾಲ್ಲೂಕಿನ ಹಾನುಬಾಳು ಕೃಷಿ ಪತ್ತಿನ ಸಹಕಾರ ಸಂಘ, ಚಂಗಡಿಹಳ್ಳಿ ರಸಗೊಬ್ಬರ ಮಾರಾಟದ ಅಂಗಡಿ, ಪಕ್ಕದ ಬೇಲೂರು ತಾಲ್ಲೂಕಿನ ಅನುಘಟ್ಟ ಹಾಗೂ ನಾರ್ವೆ ಗ್ರಾಮಗಳ ಸಹಕಾರ ಸಂಘಗಳಲ್ಲಿ ರೈತರಿಗೆ ನಕಲಿ ಪೊಟ್ಯಾಶ್ ರಸಗೊಬ್ಬರ ಮಾರಾಟ ಮಾಡಿರುವ ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನಲ್ಲಿ ನಾಲ್ವರು ಹಾಗೂ ಬೇಲೂರು ತಾಲ್ಲೂಕಿನಲ್ಲಿ ಮೂವರು ನ್ಯಾಯಾಂಗ ಬಂಧನದಲ್ಲಿದ್ದಾರೆ.`ತಮಿಳುನಾಡಿನಿಂದ ನಿಟ್ಟೂರಿನ ಮಲ್ಲಿಕಾರ್ಜುನ ಎಂಬ ವ್ಯಾಪಾರಿಗೆ, ಅಲ್ಲಿಂದ ಆಲೂರು ತಾಲ್ಲೂಕಿನ ಯಡೂರು ಗ್ರಾಮದ ನಾಗಣ್ಣ ಎಂಬಾತನಿಗೆ ಸರಬರಾಜು ಮಾಡಲಾಗುತ್ತಿತ್ತು. ಇವರಿಂದ ಸ್ಥಳೀಯ ವಿರೂಪಾಕ್ಷ ಹಾಗೂ ಮಿಲನ್‌ಗೌಡ ಮೂಲಕ ಸಹಕಾರ ಸಂಘಗಳಿಗೆ ಹಾಗೂ ಕೆಲವು ಗೊಬ್ಬರದ ಅಂಗಡಿಗಳಿಗೆ ಸರಬರಾಜಾಗಿ, ಅಲ್ಲಿಂದ ರೈತರಿಗೆ ವ್ಯಾಪಾರ ಆಗುತ್ತಿತ್ತು' ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಇಲ್ಲಿಯ ಸಹಾಯಕ ಕೃಷಿ ನಿರ್ದೇಶಕ ಜಿ.ಎಚ್. ಯೋಗೇಶ್ `ಪ್ರಜಾವಾಣಿ'ಗೆ ತಿಳಿಸಿದರು.ನಕಲಿ ರಸಗೊಬ್ಬರ ತಯಾರಿಸುತ್ತಿದ್ದ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ವಣಿಯಂಬಾಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಂದಿರುವ ಯೋಗೇಶ್ ಅವರು ಹೇಳುವ ಪ್ರಕಾರ, `ವಣಿಯಂಬಾಡಿ ಸುತ್ತಮುತ್ತ ಚರ್ಮ ಸಂಸ್ಕರಣಾ (ಲೆದರ್ ಫ್ಯಾಕ್ಟರಿ) ಘಟಕಗಳು ಹೆಚ್ಚಾಗಿವೆ. ಚರ್ಮ ಕೆಡದಂತೆ ಸಂರಕ್ಷಣೆ ಮಾಡಲು ಯತ್ತೇಚ್ಛವಾಗಿ ಉಪ್ಪು ಬಳಕೆ ಮಾಡಲಾಗುತ್ತದೆ. ಚರ್ಮ ಸಂಸ್ಕರಣೆ ನಂತರ, ತ್ಯಾಜ್ಯವಾಗಿ ಎಸೆಯುವ ಉಪ್ಪನ್ನು ಆರೋಪಿಗಳು ಜರಡಿ ಹಿಡಿದು, ಉಪ್ಪಿಗೆ ಕುಂಕುಮ ಅಥವಾ ರೆಡ್ ಆಕ್ಸೈಡ್ ಮಿಶ್ರಣ ಮಾಡಿ ನಕಲಿ ಪೊಟ್ಯಾಶ್ ತಯಾರು ಮಾಡುತ್ತಾರೆ. ಗುಜರಿ ಅಂಗಡಿಗಳಲ್ಲಿ ಸಿಗುವ ವಿವಿಧ ಕಂಪೆನಿಗಳ ಅಸಲಿ ಚೀಲಗಳನ್ನು ಖರೀದಿ ಮಾಡಿ ಅದರಲ್ಲಿ 50 ಕೆಜಿ ನಕಲಿ ಪೊಟ್ಯಾಶ್ ತುಂಬಿ ಮರು ಹೊಲಿಗೆ ಹಾಕುತ್ತಾರೆ' ಎಂದು ವಿವರಿಸಿದರು.`ನಕಲಿ ಪೊಟ್ಯಾಶ್ ತಯಾರು ಮಾಡುವುದಕ್ಕೆ ತಗಲುವ ಖರ್ಚು ಕೇವಲ 50 ರೂಪಾಯಿಗಳಾದರೆ, ಈ ಗೊಬ್ಬರವನ್ನು 160 ರೂಪಾಯಿಗಳಿಗೆ ರಾಜ್ಯದ ಏಜೆಂಟರುಗಳಿಗೆ ಮಾರಾಟ ಮಾಡುತ್ತಾರೆ. ಏಜೆಂಟರುಗಳು ಕೆಲವು ಸಹಕಾರ ಸಂಘಗಳಿಗೆ ಹಾಗೂ ಗೊಬ್ಬರದ ಅಂಗಡಿಗಳಿಗೆ 780 ರೂಪಾಯಿಗಳಿಗೆ ಮಾರಾಟ ಮಾಡುತ್ತಾರೆ. ಸಂಘಗಳು ಹಾಗೂ ಅಂಗಡಿಯ ವರು ರೈತರಿಗೆ 890 ರೂಪಾಯಿಗಳಿಗೆ ಈ ನಕಲಿ ಗೊಬ್ಬರ ಮಾರಾಟ ಮಾಡಿ ರೈತರನ್ನು ವಂಚಿಸಲಾಗುತ್ತಿದೆ' ಎಂದರು.ವೆಲ್ಲೂರು ಜಿಲ್ಲೆಯ ವಣಿಯಂಬಾಡಿ ತಾಲ್ಲೂಕಿನ ಪೆರುಮಾಳ್‌ಪೆಟ್‌ನಲ್ಲಿ ದೇವರಾಜ್, ಮಲನ್‌ಕುಪ್ಪಂ ಗ್ರಾಮದಲ್ಲಿ ವೆಂಕಟೇಶ್ ಮತ್ತು ಬಾಬು, ವಲಿಯಂಬೆಟ್ (ಅಂಬರ್‌ಪುರ್)ನಲ್ಲಿ ಮೂರ್ತಿ ಮತ್ತು ಕುಮಾರ ಈ ಜಾಲದ ಆರೋಪಿಗಳಾಗಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೆ ಪೆರುಮಾಳ್‌ಪೆಟ್‌ನ ದೇವರಾಜನನ್ನು ಬಂಧಿಸಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಹಾನುಬಾಳು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮೊದಲು ಪತ್ತೆ ಆದ ನಕಲಿ ಪೊಟ್ಯಾಶ್ ಪ್ರಕರಣ ಬೆನ್ನು ಹತ್ತಿದ ಪೊಲೀಸರು ಹಾಗೂ ಕೃಷಿ ಅಧಿಕಾರಿಗಳು ಕೇವಲ ಎರಡು ವಾರಗಳಲ್ಲಿ ಪ್ರಕರಣದ ಮೂಲ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೈತರಿಗೆ ನಕಲಿ ಪೊಟ್ಯಾಶ್ ಮಾರಾಟ ಪ್ರಕರಣ ವಿಧಾನಸಭೆಯಲ್ಲಿಯೂ ಕೂಡ ಚರ್ಚೆ ಆಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.