ಭಾನುವಾರ, ಫೆಬ್ರವರಿ 28, 2021
23 °C

ನಕ್ಷೆ ಉಲ್ಲಂಘಿಸಿದ ಕಟ್ಟಡಗಳ ಪ್ರಮಾಣಪತ್ರ ವಾಪಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಕ್ಷೆ ಉಲ್ಲಂಘಿಸಿದ ಕಟ್ಟಡಗಳ ಪ್ರಮಾಣಪತ್ರ ವಾಪಸ್‌

ಬೆಂಗಳೂರು: ನಕ್ಷೆ ಉಲ್ಲಂಘನೆ ಮಾಡಿದ ಮತ್ತು ಅಗ್ನಿ ಸುರಕ್ಷತಾ ವ್ಯವಸ್ಥೆ ಅಳವಡಿಸಿಕೊಳ್ಳದ ಬಹುಮಹಡಿ ಕಟ್ಟಡಗಳ ಪೂರ್ಣಗೊಂಡ ಪ್ರಮಾಣಪತ್ರ (ಸಿ.ಸಿ) ಹಾಗೂ ವಾಸಯೋಗ್ಯ ಪ್ರಮಾಣ ಪತ್ರ (ಒ.ಸಿ) ಎರಡನ್ನೂ ಹಿಂಪಡೆಯಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಧರಿಸಿದೆ.ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಗುರುವಾರ ಈ ಸಂಬಂಧ ಚರ್ಚೆ ನಡೆದ ಬಳಿಕ ಮೇಯರ್‌ ಬಿ.ಎನ್‌. ಮಂಜುನಾಥ್‌ ರೆಡ್ಡಿ ಈ ನಿರ್ಧಾರ ಪ್ರಕಟಿಸಿದರು.

‘ನಿಯಮಾವಳಿ ಉಲ್ಲಂಘನೆ ಮಾಡಿ ನಿರ್ಮಿಸಿದ ಬಹುಮಹಡಿ ಕಟ್ಟಡಗಳಿಗೆ ಸಿ.ಸಿ ಮತ್ತು ಒ.ಸಿ ನೀಡಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದೂ ಅವರು ತಿಳಿಸಿದರು. ‘ಬಹುಮಹಡಿ ಕಟ್ಟಡಗಳ ಸಮೀಕ್ಷಾ ವರದಿ ನೀಡಬೇಕು’ ಎಂದೂ ಸೂಚಿಸಿದರು.ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಉಮೇಶ್‌ ಶೆಟ್ಟಿ, ‘ನಗರದ ಬಹುತೇಕ ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಇಲ್ಲ. ಈ ವಿಷಯವಾಗಿ ಪತ್ರ ಬರೆದಿರುವ ಅಗ್ನಿಶಾಮಕ ದಳದ ಡಿಜಿಪಿ ಅವರು 152 ಕಟ್ಟಡಗಳ ಒ.ಸಿ ಹಿಂಪಡೆಯುವಂತೆ ಶಿಫಾರಸು ಮಾಡಿದ್ದಾರೆ. ನಮ್ಮ ಅಧಿಕಾರಿಗಳು ಏನು ಕ್ರಮ ಕೈಗೊಂಡಿದ್ದಾರೆ’ ಎಂದು ಪ್ರಶ್ನಿಸಿದರು.‘ಕಟ್ಟಡದ ಸುತ್ತ ಅಗ್ನಿನಂದಕ ವಾಹನ ಓಡಾಡುವಷ್ಟು ಜಾಗ ಇರಬೇಕು. ಛಾವಣಿ–ನೆಲ ಅಂತಸ್ತಿನಲ್ಲಿ ನೀರಿನ ಟ್ಯಾಂಕ್ ಇಡಬೇಕು. ನೆಲ ಅಂತಸ್ತನ್ನು ವಾಹನ ನಿಲುಗಡೆಗೆ ಮಾತ್ರ ಬಳಸಬೇಕು ಎಂಬ ನಿಯಮ ಇದೆ. ಆದರೆ. ಮಂತ್ರಿ, ಒರಾಯನ್‌ ಸೇರಿದಂತೆ ಬಹುತೇಕ ಮಾಲ್‌ಗಳಲ್ಲಿ ಈ ನಿಯಮಗಳ ಪಾಲನೆ ಆಗಿಲ್ಲ. ಪಾರ್ಕಿಂಗ್‌ ಪ್ರದೇಶವನ್ನೂ ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡಲಾಗಿದೆ’ ಎಂದು ದೂರಿದರು.‘ಕಟ್ಟಡಗಳ ಮಾಲೀಕರು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಹಾಗೂ ಸಿ.ಸಿ ಪಡೆದ ಮೇಲೆ ಕ್ರಮೇಣ ತಮ್ಮ ಇಚ್ಛೆಗೆ ತಕ್ಕಂತೆ ಕಟ್ಟಡದ ವಿನ್ಯಾಸ ಬದಲಿಸುತ್ತಾ ಹೋಗುತ್ತಾರೆ. ನಮ್ಮ ಅಧಿಕಾರಿಗಳು ಅವುಗಳನ್ನು ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಧ್ಯೆ ಪ್ರವೇಶಿಸಿದ ಮೇಯರ್‌ ಅವರು, ‘ಅಗ್ನಿಶಾಮಕ ದಳದ ಡಿಜಿಪಿ ಅವರ ಶಿಫಾರಸಿನಂತೆ ಸಿ.ಸಿ ಹಾಗೂ ಒ.ಸಿ ಹಿಂಪಡೆಯಲು ಕ್ರಮ ಕೈಗೊಳ್ಳಬೇಕು’ ಎಂದು ಆಯುಕ್ತರಿಗೆ ಸೂಚನೆ ನೀಡಿದರು.ನಾಲ್ಕು ವರ್ಷಗಳ ವಿಳಂಬ: 50 ಮೀಟರ್‌ಗಿಂತ ಎತ್ತರದ ಹಾಗೂ ನಾಲ್ಕಕ್ಕಿಂತ ಹೆಚ್ಚು ಅಂತಸ್ತಿನ ಕಟ್ಟಡಗಳನ್ನು ಬಹುಮಹಡಿ ಕಟ್ಟಡಗಳು ಎಂದು 2005ರ ರಾಷ್ಟ್ರೀಯ ಕಟ್ಟಡ ನೀತಿ (ಎನ್‌ಬಿಸಿ) ಹೇಳಿದೆ. 1982ರಿಂದ ಇಲ್ಲಿಯವರೆಗೆ ನಗರದಲ್ಲಿ ಅಂಥ 2,850 ಕಟ್ಟಡಗಳಿಗೆ ಎನ್‌ಒಸಿ ಹಾಗೂ ಸಿ.ಸಿ ನೀಡಲಾಗಿದೆ.

ಕಾರ್ಲ್‌ಟನ್‌ ಟವರ್ ದುರಂತ ಸಂಭವಿಸಿದಾಗ ‘ಕಟ್ಟಡದಲ್ಲಿ ಅಗ್ನಿ ಸುರಕ್ಷತೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ’ ಎಂದು ಮೃತರ  ಕುಟುಂಬಗಳ ಸದಸ್ಯರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.